
ದಾವಣಗೆರೆ, ಮಾರ್ಚ್ 23: ದಾವಣಗೆರೆ ಇಂದು ರಾಜಕೀಯ ಹೈಡ್ರಾಮಾ ನಡೆಯುವ ಸಾಧ್ಯತೆ ತೀವ್ರವಾಗಿದೆ. ದಾವಣಗೆರೆ (ದಾವಣಗೆರೆ) ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ನಡೆಯಲಿರುವ ಉಪಚುನಾವಣೆಗೆ ಕಾಂಗ್ರೆಸ್ (ಕಾಂಗ್ರೆಸ್) ಟಿಕೆಟ್ ಅಲ್ಪಸಂಖ್ಯಾತರಿಗೆ ಸಿಗದ ಹಿನ್ನೆಲೆ ಅಸಮಾಧಾನ ಭುಗಿಲೆದ್ದಿದ್ದು, ಹಲವು ಅಭ್ಯರ್ಥಿಗಳು ಸ್ವತಂತ್ರವಾಗಿ ಮತ್ತು ಬೇರೆ ಪಕ್ಷಗಳಿಂದ ಕಣಕ್ಕಿಳಿಯಲು ತಯಾರಿ. ಅಲ್ಪಸಂಖ್ಯಾತ ಸಮುದಾಯದ ಕಾಂಗ್ರೆಸ್ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಐಎಂಐಎಂ, ಎಸ್ ಡಿಪಿಐ, ಆಮ್ ಆದ್ಮಿ ಪಕ್ಷ ಹಾಗೂ ಪಕ್ಷೇತರ ಅಭ್ಯರ್ಥಿಗಳ ನಾಮಪತ್ರ ಸಲ್ಲಿಸಲು ನಿರ್ಧರಿಸಲಾಗಿದೆ. ವಿಶೇಷವಾಗಿ ಸಮಾಜದ ಮುಖಂಡ ಸಾದಿಕ್ ಪೈಲ್ವಾನ್ ಪಕ್ಷೇತರರಾಗಿ ಕಾಣಿಸಿಕೊಂಡಿರುವುದು ಗಮನ ಸೆಳೆದಿದೆ.
ನಾಮಪತ್ರ ಸಲ್ಲಿಕೆ ಕೊನೆಯ ದಿನ
ಇಂದು (ಮಾರ್ಚ್ 23) ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿರುವುದರಿಂದ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಕಾಂಗ್ರೆಸ್ ಹಾಗೂ ಬಿಜೆಪಿಯಿಂದ ಭಾರೀ ಮೆರವಣಿಗೆಗಳು ನಡೆಯಲಿವೆ, ಅದೇ ವೇಳೆ ಅಲ್ಪಸಂಖ್ಯಾತ ಅಭ್ಯರ್ಥಿಗಳಿಂದಲೂ ನಾಮಪತ್ರ ಸಲ್ಲಿಕೆ. ಮಾರ್ಚ್ 22 ರಂದು ಅಲ್ಪಸಂಖ್ಯಾತ ಯುವಕರು ಕಾಂಗ್ರೆಸ್ ವಿರುದ್ಧ ಪ್ರತಿಭಟನೆ ನಡೆಸಿ, ದಾವಣಗೆರೆ ಹಾಗೂ ಬಾಗಲಕೋಟೆಯಲ್ಲಿ ‘ಪಾಠ ಕಲಿಸುತ್ತೇವೆ’ ಎಂದು ಎಚ್ಚರಿಕೆ ನೀಡಿದ್ದರು.
ದಾವಣಗೆರೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್
ರಾಜಕೀಯ ಹೈಡ್ರಾಮಾ ನಡೆಯಬಹುದಾದ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಶಿವಮೊಗ್ಗ, ಚಿತ್ರದುರ್ಗ ಹಾವೇರಿ ಜಿಲ್ಲೆಗಳಿಂದ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ಕರೆಯಲಾಗಿದೆ. ನಗರದ ಪ್ರಮುಖ ಪ್ರದೇಶಗಳಲ್ಲಿ ಕಟ್ಟುನಿಟ್ಟಿನ ನಿಗಾವಹಿಸಿದ್ದಾರೆ.
ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಪ್ರಮುಖ ಸಚಿವರು ದಾವಣಗೆರೆ
ದಾವಣಗೆರೆ ದಕ್ಷಿಣ ಕ್ಷೇತ್ರದಿಂದ ಸಮರ್ಥ್ ಶಾಮನೂರು ಇಂದು ನಾಮಪತ್ರ ಸಲ್ಲಿಸಲಿದ್ದಾರೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಕೆಲವು ಮಂದಿ ಸಚಿವರು ಉಪಸ್ಥಿತರಿರಲಿದ್ದಾರೆ. ಬೆಳಗ್ಗೆ 10 ಗಂಟೆಗೆ ಸಿಎಂ, ಡಿಸಿಎಂ ಹಾಗೂ ಸಚಿವರು ಬೆಂಗಳೂರಿನ ಹೆಚ್ಎಎಲ್ ನಿಲ್ದಾಣದಿಂದ ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸಲಿದ್ದಾರೆ. ಬಳಿಕ ಸಮರ್ಥ್ ಶಾಮನೂರು ನಾಮಪತ್ರ ಸಲ್ಲಿಕೆ ವೇಳೆ ಜತೆಗಿರಲಿದ್ದಾರೆ.
ದಾವಣಗೆರೆ ದಕ್ಷಿಣ ಟಿಕೆಟ್ ಅಂತಿಮಗೊಳಿಸುವ ಮುನ್ನ ಅಲ್ಪಸಂಖ್ಯಾತ ಸಚಿವರು, ಶಾಸಕರನ್ನು ಕರೆದು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ, ಸುರ್ಜೇವಾಲ ಮನವೊಲಿಸಿದ್ದರು. ಹೀಗಾಗಿ, ಕೊನೆ ಕ್ಷಣದಲ್ಲಿ ಕಣದಿಂದ ಬಂಡಾಯ ಅಭ್ಯರ್ಥಿ ಹಿಂದೆ ಸರಿಯುತ್ತಾರೆ, ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುತ್ತಾರೆಂಬ ವಿಶ್ವಾಸದಲ್ಲಿ ನಾಯಕರಿದ್ದಾರೆ. ಆದರೆ, ಸ್ವಪಕ್ಷದ ವಿರುದ್ಧವೇ ತೊಡೆತಟ್ಟಿರುವ ಸಾದಿಕ್ ಪೈಲ್ವಾನ್, ಯಾವುದೇ ಕಾರಣಕ್ಕೂ ಸ್ಪರ್ಧೆಯಿಂದ ಹಿಂದೆ ಸರಿಯಲ್ಲ. ನೂರಾರು ಬೆಂಬಲಿಗರ ಜೊತೆ ತೆರಳಿ ನಾಮಪತ್ರ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ದಾವಣಗೆರೆ ಕಾಂಗ್ರೆಸ್ ನಲ್ಲಿ ಭುಗಿಲೆದ್ದ ಬಂಡಾಯ: ಹೈಕಮಾಂಡ್ ಗೆ ಪೈಲ್ವಾನ್ ಸವಾಲ್
ಒಟ್ಟಿನಲ್ಲಿ ದಾವಣಗೆರೆ ದಕ್ಷಿಣ ಉಪಚುನಾವಣೆ ಅಖಾಡ ರಂಗೇರಿದ್ದು, ಬಹಳಷ್ಟು ಕುತೂಹಲ ಸೃಷ್ಟಿಸಿದೆ.
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ