
ಅಸ್ಸಾಂ ವಿಧಾನಸಭಾ ಚುನಾವಣೆಗೆ ಮುನ್ನ, ಬಿಜೆಪಿ ಟಿಕೆಟ್ ನಿರಾಕರಿಸಿದ್ದರಿಂದ ಸಚಿವೆ ನಂದಿತಾ ಗೊರ್ಲೋಸಾ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಈ ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ, ಅವರು ಈಗ ಹಾಫ್ಲಾಂಗ್ (ಎಸ್ಟಿ) ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ.
ಮುಂದಿನ ತಿಂಗಳು ನಡೆಯಲಿರುವ ಅಸ್ಸಾಂ ವಿಧಾನಸಭಾ ಚುನಾವಣೆಗೆ ಮುನ್ನ ಮಹತ್ವದ ರಾಜಕೀಯ ಬೆಳವಣಿಗೆ ನಡೆದಿದೆ. ಪಕ್ಷದ ಸಚಿವೆ ನಂದಿತಾ ಗೊರ್ಲೋಸಾ ಅವರಿಗೆ ಬಿಜೆಪಿ ಟಿಕೆಟ್ ನಿರಾಕರಿಸಿರುವ ಹಿನ್ನೆಲೆಯಲ್ಲಿ ಭಾನುವಾರ ತಡರಾತ್ರಿ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಇದೇ ವೇಳೆ, ಹಾಫ್ಲಾಂಗ್ (ಎಸ್ಟಿ) ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಅವರು ಸ್ಪರ್ಧಿಸಲಿದ್ದಾರೆ.
ನಿರ್ಮಲ್ ಲ್ಯಾಂಗ್ಥಾಸಾ ಹಿಂದೆ ಸರಿದು ನಂದಿತಾಗೆ ಕಾಂಗ್ರೆಸ್ ಟಿಕೆಟ್
ಭಾನುವಾರ ಬಿಡುಗಡೆಗೊಂಡ ಕಾಂಗ್ರೆಸ್ನ ಐದನೇ ಅಭ್ಯರ್ಥಿಗಳ ಪಟ್ಟಿಯಲ್ಲಿ ಮೊದಲಿಗೆ ನಿರ್ಮಲ್ ಲ್ಯಾಂಗ್ಥಾಸಾ ಅವರನ್ನು ಹಾಫ್ಲಾಂಗ್ ಕ್ಷೇತ್ರದ ಅಭ್ಯರ್ಥಿಯಾಗಿ ಘೋಷಿಸಲಾಗಿತ್ತು. ಆದರೆ ಗೊರ್ಲೋಸಾ ಕಾಂಗ್ರೆಸ್ಗೆ ಸೇರ್ಪಡೆಯಾದ ನಂತರ, ಪಕ್ಷದ ಉನ್ನತ ನಾಯಕತ್ವವು ತಕ್ಷಣ ನಿರ್ಧಾರ ಬದಲಿಸಿ ಲ್ಯಾಂಗ್ಥಾಸಾ ಅವರನ್ನು ಹಿಂದೆ ಸರಿಸಿ, ಅವರ ಬದಲಿಗೆ ಗೊರ್ಲೋಸಾ ಅವರಿಗೆ ಟಿಕೆಟ್ ನೀಡಿದೆ.
ಅಸ್ಸಾಂ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ನಿರ್ಮಲ್ ಲ್ಯಾಂಗ್ಥಾಸಾ ಸೇರಿದಂತೆ ಹಲವು ಪ್ರಮುಖ ನಾಯಕರು ಉಪಸ್ಥಿತರಿದ್ದ ಸಂದರ್ಭದಲ್ಲಿ ಗೊರ್ಲೋಸಾ ಕಾಂಗ್ರೆಸ್ ಸೇರ್ಪಡೆಯನ್ನು ಅಧಿಕೃತವಾಗಿ ಘೋಷಿಸಿದರು. ಸಾರ್ವಜನಿಕ ಹಿತದೃಷ್ಟಿಯಿಂದ ಲ್ಯಾಂಗ್ಥಾಸಾ ಸ್ವಯಂಪ್ರೇರಿತವಾಗಿ ತಮ್ಮ ಸ್ಥಾನವನ್ನು ತ್ಯಜಿಸಿರುವುದಾಗಿ ಕಾಂಗ್ರೆಸ್ ಹೇಳಿದೆ.
ಬಿಜೆಪಿಯ ಹಾಲಿ ಶಾಸಕಿ ಹಾಗೂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ನೇತೃತ್ವದ ಸಚಿವ ಸಂಪುಟದ ಸದಸ್ಯೆಯಾಗಿದ್ದ ಗೊರ್ಲೋಸಾ, ನಾಮಪತ್ರ ಸಲ್ಲಿಕೆಯ ಅಂತಿಮ ದಿನಕ್ಕೂ ಕೇವಲ ಒಂದು ದಿನ ಮುನ್ನ ಕಾಂಗ್ರೆಸ್ ಸೇರ್ಪಡೆಯಾಗಿರುವುದು ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ ಮfತು ಬಿಜೆಪಿಗೆ ದೊಡ್ಡ ಶಾಕ್ ಕೊಟ್ಟಂತಾಗಿದೆ. ಏಪ್ರಿಲ್ 9 ರಂದು ನಡೆಯಲಿರುವ ಚುನಾವಣೆಗೆ ನಾಮಪತ್ರ ಸಲ್ಲಿಸಲು ಸೋಮವಾರ ಕೊನೆಯ ದಿನವಾಗಿದ್ದು, ಈ ತುರ್ತು ಬದಲಾವಣೆ ಗಮನಸೆಳೆದಿದೆ.
ಯುವ ನಾಯಕಿ ರೂಪಾಲಿ ಲ್ಯಾಂಗ್ಥಾಸಾ ಟಿಕೆಟ್ ನೀಡಿರುವ ಬಿಜೆಪಿ
ಹಾಫ್ಲಾಂಗ್ ಕ್ಷೇತ್ರದ ಹಾಲಿ ಶಾಸಕಿ ಆಗಿದ್ದ ನಂದಿತಾ ಗರ್ಲೋಸಾ ಅವರಿಗೆ ಬಿಜೆಪಿ ಈ ಬಾರಿ ಟಿಕೆಟ್ ನೀಡದೇ, ಯುವ ನಾಯಕಿ ರೂಪಾಲಿ ಲ್ಯಾಂಗ್ಥಾಸಾ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿತ್ತು. ರೂಪಾಲಿ ಅವರು ಪ್ರಸ್ತುತ ಉತ್ತರ ಕ್ಯಾಚರ್ ಹಿಲ್ಸ್ ಸ್ವಾಯತ್ತ ಜಿಲ್ಲಾ ಮಂಡಳಿಯ ಸದಸ್ಯರಾಗಿದ್ದಾರೆ.
ಮಾರ್ಚ್ 19 ರಂದು ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದ ಬಳಿಕ ಗೊರ್ಲೋಸಾ ತಕ್ಷಣ ಪ್ರತಿಕ್ರಿಯಿಸಿದ್ದರು. ಮುಖ್ಯಮಂತ್ರಿ ಶರ್ಮಾ ಸೇರಿದಂತೆ ಪಕ್ಷದ ಹಿರಿಯ ನಾಯಕರು ಅವರೊಂದಿಗೆ ಚರ್ಚಿಸಲು ಪ್ರಯತ್ನಿಸಿದ್ದರು. ಆದರೆ ಭಾನುವಾರ ಶರ್ಮಾ ದಿಮಾ ಹಸಾವೊ ಜಿಲ್ಲೆಗೆ ಭೇಟಿ ನೀಡಿದ ವೇಳೆ ಗೊರ್ಲೋಸಾ ಯಾವುದೇ ಸಭೆಗಳಲ್ಲಿ ಭಾಗವಹಿಸಿರಲಿಲ್ಲ ಎಂದು ಸ್ಥಳೀಯ ಬಿಜೆಪಿ ನಾಯಕರು ತಿಳಿಸಿದ್ದಾರೆ.
ಗುವಾಹಟಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಶರ್ಮಾ, ಆರಂಭದಲ್ಲಿ ಗೊರ್ಲೋಸಾ ಪಕ್ಷವನ್ನು ತೊರೆಯುವುದಿಲ್ಲ ಎಂದು ಹೇಳಿದ್ದರೂ, ನಂತರ ಅವರ ಕಾಂಗ್ರೆಸ್ ಸೇರ್ಪಡೆಯ ಬಗ್ಗೆ ಮಾಹಿತಿ ತಿಳಿದ ಬಳಿಕ ತಮ್ಮ ಹೇಳಿಕೆಯನ್ನು ತಿದ್ದುಪಡಿ ಮಾಡಿಕೊಂಡರು. “ನಾನು ಅವರೊಂದಿಗೆ ಮಾತನಾಡಿದ್ದೆ. ಅವರು ತೃಪ್ತರಾಗಿರುವಂತೆ ತೋರುತ್ತಿತ್ತು. ಕಾಂಗ್ರೆಸ್ ಈಗಾಗಲೇ ಹಾಫ್ಲಾಂಗ್ ಅಭ್ಯರ್ಥಿಯನ್ನು ಘೋಷಿಸಿತ್ತು. ಅವರು ಆ ಪಕ್ಷಕ್ಕೆ ಏಕೆ ಸೇರುತ್ತಿದ್ದಾರೆ ಎಂಬುದು ನನಗೆ ಗೊತ್ತಿಲ್ಲ ಎಂದು ಶರ್ಮಾ ಹೇಳಿದರು.
ಗೊರ್ಲೋಸಾ ಅವರು 2021ರ ವಿಧಾನಸಭಾ ಚುನಾವಣೆಯಲ್ಲಿ ಆಯ್ಕೆಯಾಗಿದ್ದು, ಬಳಿಕ ರಾಜ್ಯ ಸಚಿವ ಸಂಪುಟಕ್ಕೆ ಸೇರಿದ್ದರು. ಅವರು ಗಣಿ ಮತ್ತು ಖನಿಜ, ಹಾಗು ಬುಡಕಟ್ಟು ಜನಾಂಗದ ನಂಬಿಕೆಗಳಿಗೆ ಸಂಬಂಧಿಸಿದ ಇಲಾಖೆಗಳ ಹೊಣೆ ಹೊತ್ತಿದ್ದರು. ಬರಾಕ್ ಕಣಿವೆಯಲ್ಲಿಯೂ ಬಿಜೆಪಿ ಹಲವಾರು ಬದಲಾವಣೆಗಳನ್ನು ಮಾಡಿದ್ದು, ಮೂವರು ಹಾಲಿ ಶಾಸಕರಿಗೆ ಟಿಕೆಟ್ ನೀಡಿಲ್ಲ. ಅವರಲ್ಲಿ ಒಬ್ಬರಾದ ನಿಹಾರ್ ರಂಜನ್ ದಾಸ್ ಅವರು ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದರೂ, ನಂತರ ಮುಖ್ಯಮಂತ್ರಿಯನ್ನು ಭೇಟಿ ಮಾಡಿದ ಬಳಿಕ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಿಲ್ಲ ಎಂದು ತಿಳಿಸಿದ್ದಾರೆ.
ಇದೇ ವೇಳೆ, ಮಾಜಿ ಬಿಜೆಪಿ ಶಾಸಕ ಅಮರ್ ಚಂದ್ ಜೈನ್ ಕೂಡ ಕಾಂಗ್ರೆಸ್ ಸೇರಿ ಕಟಿಗೋರಾ ಕ್ಷೇತ್ರದಿಂದ ಅಭ್ಯರ್ಥಿಯಾಗಿದ್ದಾರೆ. ಕಟಿಗೋರಾದಲ್ಲಿ ಬಿಜೆಪಿ ಮಾಜಿ ಕಾಂಗ್ರೆಸ್ ಶಾಸಕ ಕಮಲಾಖ್ಯ ಡೇ ಪುರ್ಕಾಯಸ್ಥ ಅವರನ್ನು ಕಣಕ್ಕಿಳಿಸಿದ್ದು, ಈ ಕ್ಷೇತ್ರದಲ್ಲಿ ಜಯ ಸಾಧಿಸುವ ವಿಶ್ವಾಸವನ್ನು ಮುಖ್ಯಮಂತ್ರಿ ಶರ್ಮಾ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ, ಅಸ್ಸಾಂ ವಿಧಾನಸಭಾ ಚುನಾವಣೆಗೆ ಮುನ್ನ ಪಕ್ಷಾಂತರ, ಅಭ್ಯರ್ಥಿ ಬದಲಾವಣೆಗಳು ಮತ್ತು ರಾಜಕೀಯ ತಂತ್ರಗಳ ನಡುವೆ ಹಾಫ್ಲಾಂಗ್ ಕ್ಷೇತ್ರದಲ್ಲಿ ನಡೆದಿರುವ ಈ ಬೆಳವಣಿಗೆಗಳು ಈ ಬಾರಿ ಚುನಾವಣಾ ಸಮರವನ್ನು ಮತ್ತಷ್ಟು ರೋಚಕಗೊಳಿಸಿವೆ.
Scroll to load tweet…