ನಟ ಪುನೀತ್ ರಾಜ್‌ಕುಮಾರ್ ಅವರ ಮೊದಲ ಹೆಸರು ಲೋಹಿತ್ ಆಗಿತ್ತು. ‘ಲೋಹಿತ್’ ಎಂದರೆ ಅಲ್ಪಾಯು ಎಂಬ ಅರ್ಥವಿದ್ದ ಕಾರಣ, ಚೌಡೇಶ್ವರಿ ದೇವಿಯ ಸಲಹೆಯಂತೆ ಅವರ ಹೆಸರನ್ನು ‘ಪುನೀತ್’ ಎಂದು ಬದಲಾಯಿಸಲಾಯಿತು. 1985ರಲ್ಲಿ ಡಾ.ರಾಜ್‌ಕುಮಾರ್ ಅವರು ಪತ್ರಿಕೆಯಲ್ಲಿ ನೀಡಿದ್ದ ಜಾಹೀರಾತಿನ ತುಣುಕು ವೈರಲ್ ಆಗಿದೆ.

ಇದೇ 17ರಂದು ನಟ ಪುನೀತ್ ರಾಜ್‌ಕುಮಾರ್ ಅವರ 51ನೇ ಹುಟ್ಟುಹಬ್ಬವನ್ನು ಅವರ ಸ್ಮರಣೆಯಲ್ಲಿಯೇ ಅಭಿಮಾನಿಗಳು, ಕುಟುಂಬಸ್ಥರು ಆಚರಿಸಿಕೊಂಡರು. ಅವರನ್ನು ಸ್ಮರಿಸುತ್ತಾ ಅಭಿಮಾನಿಗಳು ಭಾವುಕರಾದರು. ಅಷ್ಟಕ್ಕೂ ಎಲ್ಲರ ನೆಚ್ಚಿನ ಅಪ್ಪು ಎಲ್ಲರನ್ನೂ ಅಗಲಿ ನಾಲ್ಕು ವರ್ಷಗಳಾಗುತ್ತಾ ಬಂದರೂ ಅವರ ನೆನಪು ಸದಾ ಹಸಿರು. ಹಲವಾರು ನಟರು ಮಾತ್ರವಲ್ಲದೇ ಗಾಯಕರು, ನಿರ್ದೇಶಕರು ಸೇರಿದಂತೆ ಸಾಮಾನ್ಯ ಜನರನ್ನೂ ಅವರು ಹುರಿದುಂಬಿಸುತ್ತಿದ್ದ ರೀತಿಯೇ ಚೆಂದ. ಇದೇ ಕಾರಣಕ್ಕೆ ಅವರು ಎಲ್ಲರನ್ನೂ ಅಗಲಿದರೂ ಅವರ ನೆನಪನ್ನು ಸಿನಿ ಕ್ಷೇತ್ರದವರು ಸೇರಿದಂತೆ ಎಲ್ಲರೂ ಮಾಡುತ್ತಲೇ ಇರುತ್ತಾರೆ.

ಈ ಭೂಮಿಯ ಮೇಲೆ ಜನ್ಮ ತಾಳಿದಾಗಲೇ, ಇಂತಿಷ್ಟೇ ಆಯಸ್ಸು ಎಂದು ಭಗವಂತ ಬರೆದಾಗಿರುತ್ತದೆ. ಉಳಿದೆಲ್ಲವೂ ಒಂದು ನೆಪವಾಗಿಬಿಡುತ್ತದೆ ಅಷ್ಟೇ. ಅಷ್ಟಕ್ಕೂ ಎಲ್ಲರಿಗೂ ತಿಳಿದಿರುವಂತೆ ಪುನೀತ್ ರಾಜ್ ಅವರು ಗುರುತಿಸಿಕೊಂಡದ್ದು ಬಾಲನಟನಾಗಿ ಲೋಹಿತ್ ಎಂಬ ಹೆಸರಿನಲ್ಲಿ. ಲೋಹಿತ್ ಅವರ ಹುಟ್ಟು ಹೆಸರು. ಇದೇ ಹೆಸರನ್ನು ಬೆಂಗಳೂರಿನಲ್ಲಿ ಇರುವ ಫಾರ್ಮ್ಗೆ ಲೋಹಿತ್ ಫಾರ್ಮ್ ಎಂದೇ ಹೆಸರು ಇಡಲಾಗಿತ್ತು.

ಅಂದು ಚೌಡೇಶ್ವರಿ ದೇವಿ ಪೂಜೆ ನಡೆಯುತ್ತಿದ್ದಾಗ, ದೇವಿಯೇ ಅಲ್ಪಾಯು ಬಗ್ಗೆ ಹೇಳಿದ್ದಳು. ಲೋಹಿತ್ ಎಂದರೆ ಅಲ್ಪಾಯು ಎನ್ನುವ ಅರ್ಥ ಕೊಡುತ್ತದೆ ಎನ್ನುವ ಕಾರಣಕ್ಕೆ ಪುನೀತ್ ಎಂದು ನಾಮಕರಣ ಮಾಡುವಂತೆ ಸಲಹೆ ಬಂದಿತ್ತು. ಕೊನೆಗೆ ಲೋಹಿತ್ಗೆ ಪುನೀತ್ ಎಂದು ಹೆಸರು ಬದಲಾಯಿಸಿ, ಆ ಫಾರ್ಮ್ ಹೆಸರನ್ನು ಕೂಡ ಬದಲು ಮಾಡಲಾಗಿತ್ತು. ಆದರೆ ವಿಧಿಯ ಆಟವೇ ಬೇರೆಯಾಗಿತ್ತು. ಪುನೀತ್ ಎಂದು ಹೆಸರು ಬದಲಾದರೂ ಅಲ್ಪಾಯುವಿನಲ್ಲಿಯೇ ಹೋಗಿಬಿಟ್ಟರು ಅಪ್ಪು.

ಅಂದಹಾಗೆ, 1985ರಲ್ಲಿ, ಅವರ ಹೆಸರನ್ನು ಲೋಹಿತ್ನಿಂದ ಪುನೀತ್ ಮಾಡಿ ಪತ್ರಿಕೆಗಳಲ್ಲಿ ಜಾಹೀರಾತು ಕೊಟ್ಟಿದ್ದರು ಡಾ.ರಾಜ್‌ಕುಮಾರ್. ಆ ಪತ್ರಿಕೆಯ ತುಣುಕನ್ನು ಮಲ್ಲಿಕಾರ್ಜುನ ಮೇಟಿ ಎನ್ನುವವರು ತಮ್ಮ ಫೇಸ್ಬುಕ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಇದರಲ್ಲಿ, ಡಾ.ರಾಜ್‌ಕುಮಾರ್ ಅವರು, ಡಾ.ರಾಜ್‌ಕುಮಾರ್ ಉರ್ಫ್ ಎಸ್ಪಿ ಮುತ್ತುರಾದ ಆದ ನಾನು, ನನ್ನ ಮಗ ಮಾಸ್ಟರ್ ಲೋಹಿತನ ಹೆಸರನ್ನು ಇಂದಿನಿಂದ ಅಂದರೆ 16.3.1985ರಿಂದ ಮಾಸ್ಟರ್ ಪುನೀತಾ ಎಂಬುದಾಗಿ ಬದಲಾಯಿಸುತ್ತೇನೆ. ಈ ಹೆಸರು ಬದಲಾವಣೆ ಬಗ್ಗೆ ನೋಟರಿ ಶ್ರೀ ಎಸ್.ಬಿ.ಚಂದ್ರಶೇಖರ್ರವ್ ಸಮಕ್ಷಮದಲ್ಲಿ ಪ್ರಮಾಣ ಸಹ ಈ ದಿನ ಮಾಡಿಸಿರುತ್ತೇನೆ ಎಂದು ಬರೆಯಲಾಗಿದೆ.

ಪುನೀತ್ ಆರು ತಿಂಗಳು ಮಗುವಿದ್ದಾಗ 1976ರಲ್ಲಿ ತೆರೆಕಂಡ `ಪ್ರೇಮದ ಕಾಣಿಕೆ’ ಚಿತ್ರದ ಮೂಲಕ ಕಾಣಿಸಿಕೊಂಡರು. ಇದಾದ ಬಳಿಕ, ಸನಾದಿ ಅಪ್ಪಣ್ಣ, ತಾಯಿಗೆ ತಕ್ಕ ಮಗ, ವಸಂತ ಗೀತ, ಭೂಮಿಗೆ ಬಂದ ಭಗವಂತ, ಭಾಗ್ಯವಂತರು ಮುಂತಾದ ಚಿತ್ರಗಳಲ್ಲಿ ನಟಿಸಿದ್ದರು. ಭಾಗ್ಯವಂತ ಚಿತ್ರದ `ಬಾನ ದಾರಿಯಲ್ಲಿ ಸೂರ್ಯ’, ಚಲಿಸುವ ಮೋಡಗಳು ಚಿತ್ರದ `ಕಾಣದಂತೆ ಮಾಯವಾದನೋ’,ಯಾರಿವನು ಚಿತ್ರದ `ಕಣ್ಣಿಗೆ ಕಾಣುವ ದೇವರು’ ಮುಂತಾದ ಗೀತೆಗಳನ್ನು ಹಾಡಿ ಹಿನ್ನೆಲೆ ಗಾಯಕರಾಗಿಯೂ ಕಾಣಿಸಿಕೊಂಡರು. ಇವರು ನಟಿಸಿದ್ದ `ಚಲಿಸುವ ಮೋಡಗಳು’ ಮತ್ತು `ಎರಡು ನಕ್ಷತ್ರಗಳು’ ಚಿತ್ರದ ಅಭಿನಯಕ್ಕಾಗಿ ಕರ್ನಾಟಕ ರಾಜ್ಯ ಪ್ರಶಸ್ತಿ ಲಭಿಸಿದ್ದವು. ಇವುಗಳಲ್ಲಿ ಬಾಲ ಕಲಾವಿದನಾಗಿ ಲೋಹಿತ್ ಎಂದೇ ಫೇಮಸ್ ಆದವರು ಅಪ್ಪು.

Source link
ಡಾ.ರಾಜ್‌ಕುಮಾರ್ ಉರ್ಫ್ ಮುತ್ತರಾಜ ಆದ ನಾನು: 1985ರ ಕುತೂಹಲದ ಜಾಹೀರಾತಿನಲ್ಲಿ ಏನಿದೆ ನೋಡಿ