ಬೆಂಗಳೂರು: 19ನೇ ಸೀಸನ್ ಐಪಿಎಲ್ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಹೀಗಿರುವಾಗಲೇ ಆರ್ಸಿಬಿ ತಂಡವು ಬ್ರ್ಯಾಂಡ್ ವ್ಯಾಲ್ಯೂ ವಿಚಾರದಲ್ಲಿ ಐದು ಬಾರಿಯ ಚಾಂಪಿಯನ್ಗಳಾದ ಚೆನ್ನೈ ಸೂಪರ್ ಕಿಂಗ್ಸ್, ಮುಂಬೈ ಇಂಡಿಯನ್ಸ್ ಹಿಂದಿಕ್ಕಿ ನಂ.1 ಸ್ಥಾನಕ್ಕೆ ಲಗ್ಗೆಯಿಟ್ಟಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ.

ಈ ಸಲ ಐಪಿಎಲ್ ಸೀಸನ್ಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬರೀ ಹಾಲಿ ಚಾಂಪಿಯನ್ಸ್ ಆಗಿ ಎಂಟ್ರಿ ಕೊಡ್ತಿಲ್ಲ. ಲೀಗ್ನಲ್ಲೇ ಅತ್ಯಂತ ಮೌಲ್ಯಯುತ ತಂಡ ಅನ್ನೋ ಹೊಸ ಬಿರುದನ್ನೂ ಜೊತೆಗೆ ತಂದಿದೆ. ಹದಿನೆಂಟು ವರ್ಷಗಳ ಕಾಯುವಿಕೆಗೆ ಅಂತ್ಯ ಹಾಡಿ ಮೊದಲ ಬಾರಿಗೆ ಐಪಿಎಲ್ ಟ್ರೋಫಿ ಗೆದ್ದಿದ್ದೇ ತಡ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬ್ರ್ಯಾಂಡ್ ಮೌಲ್ಯ ಗಗನಕ್ಕೇರಿದೆ. ತಲಾ ಐದು ಬಾರಿ ಕಪ್ ಗೆದ್ದಿರುವ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳನ್ನೂ ಹಿಂದಿಕ್ಕಿ ಆರ್ಸಿಬಿ ದುಡ್ಡಿನ ವಿಚಾರದಲ್ಲಿ ನಂಬರ್ 1 ಸ್ಥಾನಕ್ಕೇರಿದೆ.

ಹೌದು ಹಣಕಾಸು ಸಲಹಾ ಸಂಸ್ಥೆ ‘ಬ್ರ್ಯಾಂಡ್ ಫೈನಾನ್ಸ್’ ಬಿಡುಗಡೆ ಮಾಡಿರುವ ಹೊಸ ವರದಿ ಪ್ರಕಾರ, ಆರ್ಸಿಬಿ ಬ್ರ್ಯಾಂಡ್ ಮೌಲ್ಯ ಬರೋಬ್ಬರಿ 2,486 ಕೋಟಿ ರೂಪಾಯಿ. ವಿರಾಟ್ ಕೊಹ್ಲಿ ಅವರ ಇರುವಿಕೆ ಮತ್ತು ಅಪಾರ ಅಭಿಮಾನಿಗಳ ಬೆಂಬಲವೇ ಬೆಂಗಳೂರು ತಂಡದ ಮೌಲ್ಯ ಹೆಚ್ಚಾಗಲು ಪ್ರಮುಖ ಕಾರಣಗಳು.

ಮಹಿಳಾ ಕ್ರಿಕೆಟ್ನ ಸೂಪರ್ ಸ್ಟಾರ್ ಸ್ಮೃತಿ ಮಂಧಾನ ಕೂಡ ಆರ್ಸಿಬಿ ತಂಡದ ಭಾಗವಾಗಿದ್ದಾರೆ. ಅಷ್ಟೇ ಅಲ್ಲ, ಮಹಿಳಾ ಪ್ರೀಮಿಯರ್ ಲೀಗ್ನಲ್ಲೂ ಆರ್ಸಿಬಿಯೇ ಹಾಲಿ ಚಾಂಪಿಯನ್. ಸ್ಪಿರಿಟ್ ತಯಾರಿಕಾ ಕಂಪನಿ ಡಿಯಾಜಿಯೊ ಒಡೆತನದಲ್ಲಿ ಆರ್ಸಿಬಿ ತಂಡ ಇದೆ. ಫ್ರಾಂಚೈಸಿಯನ್ನು ಮಾರಾಟ ಮಾಡಲು ಡಿಯಾಜಿಯೊ ಕಂಪನಿ ಸಿದ್ಧತೆ ನಡೆಸುತ್ತಿರುವ ಹೊತ್ತಿನಲ್ಲೇ, ಆರ್ಸಿಬಿ ಮಾರುಕಟ್ಟೆ ಮೌಲ್ಯದಲ್ಲಿ ಮೊದಲ ಸ್ಥಾನಕ್ಕೇರಿರುವುದು ವಿಶೇಷ.

ಮಾರುಕಟ್ಟೆ ಮೌಲ್ಯದಲ್ಲಿ ಮುಂಬೈ ಇಂಡಿಯನ್ಸ್ ಎರಡನೇ ಸ್ಥಾನದಲ್ಲಿದ್ದು, ಅದರ ಮೌಲ್ಯ 2238 ಕೋಟಿ ರೂಪಾಯಿ. ರಿಲಯನ್ಸ್ ಇಂಡಸ್ಟ್ರೀಸ್ ಒಡೆತನದಲ್ಲಿರುವ ಮುಂಬೈ ಇಂಡಿಯನ್ಸ್, ಬೇರೆ ದೇಶಗಳ ಟಿ20 ಲೀಗ್ಗಳಲ್ಲೂ ಫ್ರಾಂಚೈಸಿಗಳನ್ನು ಹೊಂದಿದೆ. ಸಚಿನ್ ತೆಂಡೂಲ್ಕರ್, ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ ಮತ್ತು ಜಸ್ಪ್ರೀತ್ ಬುಮ್ರಾ ಅವರಂತಹ ಸೂಪರ್ಸ್ಟಾರ್ಗಳು ಮುಂಬೈ ತಂಡಕ್ಕೆ ದೊಡ್ಡ ಅಭಿಮಾನಿ ಬಳಗವನ್ನು ತಂದುಕೊಟ್ಟಿದ್ದಾರೆ.

2172 ಕೋಟಿ ರೂಪಾಯಿ ಮೌಲ್ಯದೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್ ಮೂರನೇ ಸ್ಥಾನದಲ್ಲಿದೆ. ಎಂ.ಎಸ್. ಧೋನಿ ಅವರೇ ಚೆನ್ನೈ ತಂಡದ ಮೌಲ್ಯ ಹೆಚ್ಚಾಗಲು ಮುಖ್ಯ ಕಾರಣ. ಧೋನಿ ಉತ್ತರಾಧಿಕಾರಿಯಾಗಿ ಸಂಜು ಸ್ಯಾಮ್ಸನ್ ತಂಡಕ್ಕೆ ಕ್ಯಾಪ್ಟನ್ ಆಗಿ ಬಂದರೆ, ತಂಡದ ಮೌಲ್ಯ ಮತ್ತಷ್ಟು ಹೆಚ್ಚಾಗಬಹುದು ಎಂದು ಅಂದಾಜಿಸಲಾಗಿದೆ. ನಾಲ್ಕನೇ ಸ್ಥಾನದಲ್ಲಿರುವ ಕೋಲ್ಕತ್ತಾ ನೈಟ್ ರೈಡರ್ಸ್ ಮೌಲ್ಯ 2053 ಕೋಟಿ ರೂಪಾಯಿ.

ಇನ್ನು ಐಪಿಎಲ್ ವಿಚಾರಕ್ಕೆ ಬಂದರೇ 19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ಇದೇ ಮಾರ್ಚ್ 28ರಿಂದ ಆರಂಭವಾಗಲಿದ್ದ, ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ. ಈ ಹೈವೋಲ್ಟೇಜ್ ಪಂದ್ಯವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ.

Source link
ಚಾಂಪಿಯನ್ಸ್ ಅಷ್ಟೇ ಅಲ್ಲ, ಐಪಿಎಲ್ನ ಅತ್ಯಂತ ಶ್ರೀಮಂತ ತಂಡವೂ ನಮ್ಮ ಆರ್ಸಿಬಿಯೇ! ಬ್ರ್ಯಾಂಡ್ ವ್ಯಾಲ್ಯೂದಲ್ಲಿ CSKಗೆ ಎಷ್ಟನೇ ಸ್ಥಾನ?