ಸಭ್ಯ ನಟ ಡಾರ್ಲಿಂಗ್ ಕೃಷ್ಣ ಇದೇ ಮೊದಲ ಬಾರಿಗೆ ಗಂಭೀರ ವಿವಾದವೊಂದರಲ್ಲಿ ಸಿಲುಕಿದ್ದಾರೆ. ಯುವ ನಿರ್ದೇಶಕ ರಾಘವೇಂದ್ರ ನಾಯಕ್, ತಮ್ಮ ಕಥೆಯನ್ನು ಕದ್ದು ‘ಲವ್ ಮಾಕ್ಟೇಲ್ 3’ ಸಿನಿಮಾ ಮಾಡಿದ್ದಾರೆ ಎಂದು ಕೃಷ್ಣ ವಿರುದ್ಧ ಆರೋಪಿಸಿದ್ದಾರೆ. ಈ ಹಿಂದೆ ತಾನು ಕೃಷ್ಣಗೆ ಕಥೆ ಹೇಳಿದ್ದೆ ಎಂದು ಆರೋಪಿಸಿದ್ದಾರೆ.
ಬೆಂಗಳೂರು: ಡಾರ್ಲಿಂಗ್ ಕೃಷ್ಣ ಕನ್ನಡ ಚಿತ್ರರಂಗದಲ್ಲಿ ಸಭ್ಯನಟ ಅಂತಲೇ ಕರೆಸಿಕೊಂಡವರು. ಇದೂವರೆಗೂ ಕೃಷ್ಣ ಯಾವುದೇ ವಿವಾದ ಮಾಡಿಕೊಂಡವರಲ್ಲ. ಆದ್ರೆ ಈ ಸಾರಿ ಕೃಷ್ಣ ಮೇಲೆ ಗಂಭೀರ ಆರೋಪವೊಂದು ಕೇಳಿಬಂದಿದೆ. ಕನ್ನಡದ ಯುವ ನಿರ್ದೇಶಕರೊಬ್ಬರ ಕಥೆ ಕದ್ದು , ಲವ್ ಮಾಕ್ಟೇಲ್ ಸಿನಿಮಾ ಮಾಡಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ.
ಯುವ ನಿರ್ದೇಶಕನ ಕಥೆ ಕದ್ದು ಮಾಕ್ಟೇಲ್-3 ಮಾಡಿದ್ರಾ?
ಯೆಸ್ ಡಾರ್ಲಿಂಗ್ ಕೃಷ್ಣ ಮೇಲೆ ಒಂದು ಗಂಭೀರ ಆರೋಪ ಕೇಳಿಬಂದಿದೆ. ಸಾಮಾನ್ಯವಾಗಿ ಕೃಷ್ಣ ಇಂಡಸ್ಟ್ರಿಯಲ್ಲಿ ಸಭ್ಯ ವ್ಯಕ್ತಿ ಅಂತ ಕರೆಸಿಕೊಂಡವರು. ಅವರಾಯ್ತು, ಅವರ ಕೆಲಸ ಆಯ್ತು ಅಂತ ವಿವಾದಗಳಿಂದ ಸದಾ ದೂರ ಇರೋ ವ್ಯಕ್ತಿ ಡಾರ್ಲಿಂಗ್ ಕೃಷ್ಣ. ಕಳೆದ ವಾರ ರಿಲೀಸ್ ಆಗಿರೋ ಕೃಷ್ಣ ನಿರ್ಮಾಣ ನಿರ್ದೇಶನದ ಲವ್ ಮಾಕ್ಟೇಲ್ 3 ಯಶಸ್ವಿ ಪ್ರದರ್ಶನ ಕಾಣ್ತಾ ಇದೆ. ಆದ್ರೆ ಇದೇ ಚಿತ್ರದ ಕಥೆ ಬಗ್ಗೆ ಈಗ ಗಂಭೀರ ಆರೋಪ ಬಂದಿದೆ. ಈ ಹಿಂದೆ ಮಾರಿಗೋಲ್ಡ್ ಅನ್ನೋ ಸಿನಿಮಾ ಮಾಡಿದ್ದ ರಾಘವೇಂದ್ರ ನಾಯಕ್ ಅನ್ನೋ ನಿರ್ದೇಶಕ ಈ ಕಥೆ ತಮ್ಮದು. ಅದನ್ನ ಕದ್ದು ಕೃಷ್ಣ ಸಿನಿಮಾ ಮಾಡಿದ್ದಾರೆ ಅಂತ ಆರೋಪ ಮಾಡಿದ್ದಾರೆ.
ಕೃಷ್ಣನಿಗೆ ಕಥೆ ಹೇಳಿದ್ದ ನಿರ್ದೇಶಕನಿಗೆ ಆಯ್ತಾ ದೋಖಾ..?
ಅಸಲಿಗೆ ರಾಘವೇಂದ್ರ ನಾಯಕ್ ಮಾಡಿದ್ದ ಕಥೆ ಮೆಚ್ಚಿ ನಿರ್ಮಾಪಕ ಕಂ ನಿರ್ದೇಶಕ ಗುರು ದೇಶಪಾಂಡೆ , ಅವರನ್ನ ಕೃಷ್ಣ ಮನೆಗೆ ಕರೆದುಕೊಂಡು ಹೋಗಿದ್ರಂತೆ. ಆಗ ಕಥೆ ಕೇಳಿದ ಕೃಷ್ಣ , ನಾನು ಕೂಡ ಲವ್ ಮಾಕ್ಟೇಲ್ನಲ್ಲಿ ಮಗುವಿನ ಕಥೆ ಮಾಡ್ತಾ ಇದ್ದೀನಿ. ಸೋ ಇದು ಬೇಡ ಅಂದಿದ್ರಂತೆ. ಅಪ್ಪಿ ತಪ್ಪಿ ಕೂಡ ನನ್ನ ಸಿನಿಮಾ ಕಥೆ ಎಳೆಯೂ ಇದೇ ರೀತಿ ಇದೆ ಅಂತ ಹೇಳಿರಲಿಲ್ಲ. ಈಗ ನೋಡಿದ್ರೆ ಅದೇ ಎಳೆಯನ್ನ ಇಟ್ಟುಕೊಂಡು ಲವ್ ಮಾಕ್ಟೇಲ್ 3 ಮಾಡಿದ್ದಾರೆ.
ಪ್ರೀಮಿಯರ್ ಶೋನಲ್ಲಿ ಚಿತ್ರ ನೋಡಿ ಶಾಕ್ ಆದ ಗುರು ದೇಶಪಾಂಡೆ , ಕೃಷ್ಣನಿಗೆ ಕರೆ ಮಾಡಿ ಈ ಬಗ್ಗೆ ಕೇಳಿದ್ರೆ ನನಗೆ ಆ ತರಹದ ಕಥೆ ಕೇಳಿದ ನೆನಪೇ ಇಲ್ಲ ಅಂತ ಹಾರಿಕೆ ಉತ್ತರ ಕೊಟ್ಟಿದ್ದಾರಂತೆ. ಇದರಿಂದ ಬೇಸರಕೊಂಡ ಬರಹಗಾರ ರಾಘವೇಂದ್ರ ನಾಯಕ್ ತಾವು ಹೇಗೆ ಕೃಷ್ಣನಿಂದ ಮೋಸ ಹೋದೆ ಅನ್ನೋದನ್ನ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಇಷ್ಟು ದಿನ ಒಂದೇ ಒಂದು ವಿವಾದ ಮಾಡಿಕೊಳ್ಳದ ಕೃಷ್ಣ, ಯಾಕೆ ಇಂಥಾ ತಪ್ಪು ಮಾಡಿದ್ರು ಅಂತ ವೀಕ್ಷಕರು ಬೇಸರಿಸಿಕೊಂಡಿದ್ದಾರೆ. ಈ ಬಗ್ಗೆ ಕೃಷ್ಣ ಯಾವುದೇ ಪ್ರತಿಕ್ರಿಯೆ ಕೊಟ್ಟಿಲ್ಲ. ಈ ವಿಚಾರವಾಗಿ ಕಾನೂನು ಮೂಲಕ ಉತ್ತರಿಸ್ತೀನಿ ಅಂತಿದ್ದಾರೆ. ಒಟ್ನಲ್ಲಿ ಇದನ್ನೆಲ್ಲಾ ನೋಡಿದ ಜನ ಅಂತೂ, ‘ಡಾರ್ಲಿಂಗ್ ಏನಿದೆಲ್ಲಾ’ ಅಂತಿರೋದು ಸುಳ್ಳಲ್ಲ..!
ಫಿಲ್ಮ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್.