
ಬೆಂಗಳೂರು ಮಾ.24: ಜನವರಿ 28 ರಂದು ಪುಣೆಯ ಬಾರಾಮತಿ ವಿಮಾನ ನಿಲ್ದಾಣದ ಬಳಿ ನಡೆದ ವಿಮಾನ ಅಪಘಾತದಲ್ಲಿ ಮಹಾರಾಷ್ಟ್ರದ ಮಾಜಿ ಡಿಸಿಎಂ ಅಜಿತ್ ಪವಾರ್ (ಅಜಿತ್ ಪವಾರ್) ಸಾವನ್ನಪ್ಪಿದ್ದರು. ಈ ಪ್ರಕರಣಕ್ಕೆ ಈಗ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ರೋಹಿತ್ ಪವಾರ್ ಅವರು ದೂರು ನೀಡಿದ್ದು, ಇದು ಆಕಸ್ಮಿಕ ಸಾವಲ್ಲ, ಬದಲಿಗೆ ವ್ಯವಸ್ಥಿತ ಸಂಚು ಎಂದು ಆರೋಪಿಸಿದ್ದಾರೆ.ಅಮೆರಿಕದಲ್ಲಿ ಸೇವೆಯಿಂದ ನಿವೃತ್ತಿಗೊಂಡಿದ್ದ, ಹಾರಾಟಕ್ಕೆ ಯೋಗ್ಯವಲ್ಲದ ವಿಮಾನವನ್ನು ಭಾರತಕ್ಕೆ ತರಲಾಯಿತು. ವಿಮಾನದ ಸುರಕ್ಷಿತ ಮಿತಿ 5,000 ಗಂಟೆಗಳಿದ್ದರೂ, ಸುಮಾರು 8,000 ಗಂಟೆ ಹಾರಾಟ ನಡೆಸಿದ್ದ ದಾಖಲೆಗಳನ್ನು ತಿದ್ದಿ ವಾಣಿಜ್ಯ ಬಳಕೆಗೆ ಬಳಸಲಾಗಿದೆ.
ವಿಮಾನದ ಪೈಲಟ್ ಸುಮಿತ್ ಕಪೂರ್ ಈ ಹಿಂದೆ ಎರಡು ಬಾರಿ ಮದ್ಯಪಾನ ಮಾಡಿ ಸಿಕ್ಕಿಬಿದ್ದು ಅಮಾನತುಗೊಂಡಿದ್ದರು. ಇಂತಹ ವ್ಯಕ್ತಿಯನ್ನು ಉಪಮುಖ್ಯಮಂತ್ರಿಗಳ ವಿಮಾನಕ್ಕೆ ಪೈಲಟ್ ಆಗಿ ನೇಮಿಸಿದ್ದು ಯಾಕೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಇದು ಉದ್ದೇಶಪೂರ್ವಕ ಸಂಚಿನ ಭಾಗವೇ ಎಂಬ ಅನುಮಾನ ಮೂಡಿಸಿದೆ.
ಅಜಿತ್ ಪವಾರ್ ಅವರು ರಸ್ತೆ ಮೂಲಕ ಹೋಗಬೇಕಿತ್ತು. ಆದರೆ ಕೊನೆ ಕ್ಷಣದಲ್ಲಿ ಅದು ವಿಮಾನ ಪ್ರಯಾಣವಾಗಿ ಬದಲಾಗಿದ್ದು ಹೇಗೆ? ಇದರ ಹಿಂದೆ ಯಾರಿದ್ದಾರೆ ಎಂಬ ಬಗ್ಗೆ ತನಿಖೆ ನಡೆಯಬೇಕಿದೆ. ವಿಮಾನ ಪತನವಾಗುವ ಮುನ್ನ ಕೋ-ಪೈಲಟ್ “ಓ ಶಿಟ್” ಎಂದು ಕಿರುಚಿದ್ದಾರೆ. ಆದರೆ ಮುಖ್ಯ ಪೈಲಟ್ ಕಪೂರ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಪೈಲಟ್ ಅಮಲಿನಲ್ಲಿದ್ದರೇ ಅಥವಾ ಉದ್ದೇಶಪೂರ್ವಕವಾಗಿ ಸುಮ್ಮನಿದ್ದರೇ ಎಂಬ ಸಂಶಯವಿದೆ.
ಇದನ್ನೂ ಓದಿ: ಅಜಿತ್ ಪವಾರ್ ಇದ್ದ ವಿಮಾನ ಪತನಗೊಂಡ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಬಾರಾಮತಿಯಲ್ಲಿ ದಟ್ಟ ಮಂಜು ಕವಿದಿದ್ದು, ಕನಿಷ್ಠ 5 ಕಿ.ಮೀ ವಿಸಿಬಿಲಿಟಿ ಇಲ್ಲದಿದ್ದರೂ ಲ್ಯಾಂಡಿಂಗ್‌ಗೆ ಅವಕಾಶ ನೀಡಿದ್ದು ಯಾರು? ಟೇಬಲ್ಟಾಪ್ ರನ್ವೇ ಆಗಿದ್ದರೂ ಅಪಾಯಕಾರಿ ನಿರ್ಧಾರ ಕೈಗೊಳ್ಳಲು ಕಾರಣವೇನು? ಡಿಜಿಸಿಎ (ಡಿಜಿಸಿಎ) ತನಿಖೆಯಲ್ಲಿ ವಿಮಾನ ಹಾರಾಟಕ್ಕೆ ಯೋಗ್ಯವಾಗಿಲ್ಲ ಎಂದು ತಿಳಿದಿದ್ದರೂ ವಿಎಸ್‌ಆರ್ ವೆಂಚರ್ಸ್ ನಿಯಮಗಳು ಗಾಳಿಗೆ ತೂರಿ ಕಾರ್ಯಾಚರಣೆ ನಡೆಸಿದೆ ಎಂಬ ಆರೋಪ ಕೇಳಿ ಬಂದಿದೆ. ಇದೀಗ ಈ ಬಗ್ಗೆ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ರೋಹಿತ್ ಪವಾರ್ ಅವರು ದೂರು ನೀಡಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ