ಜೆರೋಧಾ ಸಹ-ಸಂಸ್ಥಾಪಕ ನಿಖಿಲ್ ಕಾಮತ್ (nikhil kamath) ಸದ್ಯ ರಿಷಿ ಸುನಕ್- ಅಕ್ಷತಾ ಮೂರ್ತಿ ಸಂದರ್ಶನದಿಂದ ಸುದ್ದಿಯಲ್ಲಿದ್ದಾರೆ. ಈ ನಿಖಿಲ್ ಕಾಮತ್ಗೆ ಮದುವೆ ಆಗುವ ಯೋಚನೆ ಇಲ್ಲವಂತೆ. ಇದಕ್ಕೆ ಅವರು ನೀಡಿದ ಕಾರಣ ವಿಶಿಷ್ಟವಾಗಿದೆ.
ಇತ್ತೀಚೆಗೆ ಜೆರೋಧಾದ ಫೌಂಡರ್ ನಿಖಿಲ್ ಕಾಮತ್ ಮಾಡಿರುವ ಒಂದು ಪಾಡ್ಕ್ಯಾಸ್ಟ್ನ ಒಂದು ಟೀಸರ್ ವೈರಲ್ ಆಯ್ತು. ಅದ್ರಲ್ಲಿ ಅವರು ಇಂಗ್ಲೆಂಡ್ನ ಮಾಜಿ ಪ್ರಧಾನಿ ರಿಷಿ ಸುನಕ್ ಹಾಗೂ ಅವರ ಪತಿ ಅಕ್ಷತಾ ಮೂರ್ತಿ ಅವರನ್ನು ಸಂದರ್ಶನ ಮಾಡಿದ್ದಾರೆ. ಅದ್ರಲ್ಲಿ ಅಕ್ಷತಾ ಹಾಗೂ ನಿಖಿಲ್, ರಿಷಿ ಸುನಕ್ಗೆ ಗೊತ್ತಾಗದಂತೆ ಕನ್ನಡ ಮಾತನಾಡಿರುವ ಭಾಗ ತಮಾಷೆಯಾಗಿದೆ, ಎಲ್ಲರ ಮನ ಗೆದ್ದಿದೆ.
ಇತ್ತೀಚೆಗೆ ನಿಖಿಲ್ ಕಾಮತ್ ಯಶಸ್ವೀ ಉದ್ಯಮಿ ಆಗಿರುವುದಷ್ಟೇ ಅಲ್ದೆ, ಉತ್ತಮ ಪಾಡ್ಕ್ಯಾಸ್ಟರ್ ಕೂಡ ಆಗಿ ಹೊರಹೊಮ್ಮಿದ್ದಾರೆ. ಯುವಾಲ್ ನೋವಾ ಹರಾರಿ ಥರ ಇಸ್ರೇಲಿ ಲೇಖಕನನ್ನು ಕೂಡ ಮಾತಾಡಿಸಿದ್ದಾರೆ. ದೊಡ್ಡದೊಡ್ಡವರೆಲ್ಲ ಅವರ ಮುಂದೆ ಸಂದರ್ಶನಕ್ಕೆ ಬಂದು ಕೂತಿದ್ದಾರೆ. ತಣ್ಣನೆಯ ಶೈಲಿಯಲ್ಲಿ, ಯಾವ ಭಾವನೆಯೂ ಇಲ್ಲದಂತೆ ಪ್ರಶ್ನೆ ಕೇಳುವ ನಿಖಿಲ್ ಪಾಡ್ಕ್ಯಾಸ್ಟ್ ಒಂಥರಾ ವಿಶಿಷ್ಟ.
ಅದಿರಲಿ. ಇದೀಗ ನಿಖಿಲ್ ಕಾಮತ್ನನ್ನೇ ರಣಬೀರ್ ಕಪೂರ್ ಒಂದು ಸಂದರ್ಶನದಲ್ಲಿ ಗ್ರಿಲ್ ಮಾಡಿದ್ದಾರೆ. ಅದರ ರೀಲ್ ಕೂಡ ವೈರಲ್ ಆಗ್ತಿದೆ. ಅದ್ರಲ್ಲಿ ನಿಖಿಲ್ ಕಾಮತ್, ತಾನ್ಯಾಕೆ ಮದುವೆ ಆಗೋ ಯೋಚನೇಲಿಲ್ಲ ಎನ್ನೋದಕ್ಕೆ ಕಾರಣ ನೀಡಿದ್ದಾರೆ. ನಾನು ನಿರಂತರವಾಗಿ ಬದಲಾಯಿಸೋ ಮನುಷ್ಯ. ನಾನು ಈ ವರ್ಷ ಇದ್ದ ಹಾಗೆ ಮುಂದಿನ ವರ್ಷ ಇರೋಲ್ಲ. ನಾನು ಬದಲಾಗುತ್ತೇನೆ. ಹೀಗಾಗಿ ನಾನು ನನ್ನ ಈಗಿನ ಸ್ವರೂಪವನ್ನು ಇನ್ನೊಬ್ಬ ವ್ಯಕ್ತಿಗೆ ತೋರಿಸಿ ಇದೇ ನಾನು, ಹೀಗೇ ಇರ್ತೀನಿ ಎಂದು ಹೇಳಲಾರೆ ಎಂದಿದ್ದಾರೆ.
ಕಿರಣ್ ಮಜುಂದಾರ್ ಶಾ ಆದರ್ಶವಂತೆ
ಹಾಗಾದ್ರೆ, ನೀನು 70 ವರ್ಷ ಆದಾಗ ನಿನ್ನ ಲೈಫ್ ಹೇಗಿರಬಹುದು ಎಂಬ ಪ್ರಶ್ನೆ ಬಂತು. ಅದಕ್ಕೂ ನಿಖಿಲ್ ಉತ್ತರಿಸಿದ್ದಾರೆ. ನನಗೆ ಸ್ನೇಹಿತರಿದ್ದಾರೆ. ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಅವರಲ್ಲೊಬ್ಬರು. ಅವರಿಗೆ ಈಗ 70 ವರ್ಷ. ನಾವಿಬ್ರೂ ಒಂದೇ ಅಪಾರ್ಟ್ಮೆಂಟಲ್ಲಿ ಇದೀವಿ. ಅವರೂ ಸಿಂಗಲ್, ಅವರಿಗೂ ಮಕ್ಕಳಿಲ್ಲ. ಪತಿ ಕಳೆದ ವರ್ಷ ತೀರಿಕೊಂಡರು. ನೀವು ಒಬ್ಬಂಟಿ ಅನಿಸಲ್ವಾ ಎಂದು ಅವರನ್ನು ಕೇಳುತ್ತೇನೆ. ಸುಮಾರು ವಿಷಯಗಳಿಗೆ ಅವರನ್ನು ಮೆಚ್ಚುತ್ತೀನಿ. ಆದ್ರೆ ಅವರು ಬದುಕಿನಲ್ಲಿ ತುಂಬಾ ಸಂತೃಪ್ತೆ. ಯಾವುದೋ ಒಂದು ಸಂಗತಿಯ ಕೊರತೆ ಅನುಭವಿಸ್ತಿದಾರೆ ಅನಿಸೋಲ್ಲ- ಅಂತಾರೆ ನಿಖಿಲ್.
ನಿಖಿಲ್ ಇಷ್ಟೆಲ್ಲ ಹೇಳಿದ್ರೂ ನೆಟಿಜೆನ್ಗಳಿಗೆ ಯಾಕೋ ಅನುಮಾನ. ನಿಖಿಲ್ ಕಾಮತ್ ಮತ್ತು ಬಾಲಿವುಡ್ ನಟಿ ರಿಯಾ ಚಕ್ರವರ್ತಿ ಅವರ ನಡುವೆ ಡೇಟಿಂಗ್ ನಡೆಯುತ್ತಿದೆ ಎಂಬ ವದಂತಿ ಜೋರಾಗಿ ಇತ್ತು. ಇತ್ತೀಚೆಗೆ ಇವರಿಬ್ಬರು ಸಾರ್ವಜನಿಕವಾಗಿ ಒಂದಕ್ಕಿಂತ ಹೆಚ್ಚು ಬಾರಿ ಒಟ್ಟಿಗೆ ಕಾಣಿಸಿಕೊಂಡಿರುವುದು ಈ ಗಾಸಿಪ್ಗೆ ಮತ್ತಷ್ಟು ಬಲ ನೀಡಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಚಿತ್ರಗಳು ಮತ್ತು ವಿಡಿಯೋಗಳಲ್ಲಿ ರಿಯಾ, ನಿಖಿಲ್ ಕಾಮತ್ ಅವರ ಜೊತೆ ಮುಂಬೈನಲ್ಲಿ ಬೈಕ್ ಸವಾರಿ ಮಾಡುತ್ತಿರುವುದು ಕಂಡುಬಂದಿತ್ತು. 2024ರ ಕೊನೆ ಅಥವಾ 2025ರ ಆರಂಭದಲ್ಲಿ ಇಬ್ಬರೂ ಗೋವಾಗೆ ಒಟ್ಟಿಗೆ ಪ್ರವಾಸ ಹೋಗಿದ್ದಾರೆ ಎಂಬ ಮಾತುಗಳೂ ಇದ್ದವು. ಈ ಎಲ್ಲಾ ವದಂತಿಗಳ ನಡುವೆಯೂ, ನಿಖಿಲ್ ಕಾಮತ್ ಅಥವಾ ರಿಯಾ ಚಕ್ರವರ್ತಿ ಇವರಿಬ್ಬರೂ ತಮ್ಮ ಸಂಬಂಧದ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.
ನಿಖಿಲ್ ಕಾಮತ್ ಮೊದಲು ನಟಿ ಮಾನುಷಿ ಚಿಲ್ಲರ್ ಜೊತೆಗೆ ಸಾಂಗತ್ಯ ಹೊಂದಿದ್ದರು ಎಂಬ ವರದಿಗಳು ಇದ್ದವು. ರಿಯಾ ಚಕ್ರವರ್ತಿ, ಕೆಲ ವರ್ಷಗಳ ಹಿಂದೆ ನಿಧನರಾದ ನಟ ಸುಶಾಂತ್ ಸಿಂಗ್ ರಜಪೂತ್ ಜೊತೆ ಸಂಬಂಧದಲ್ಲಿದ್ದವರು.
