
ಬೆಂಗಳೂರು ಮೂಲದ ‘ರೋಹಿಣಿ ನಿಲೇಕಣಿ ಫಿಲಾಂತ್ರಪೀಸ್’ ಸಂಸ್ಥೆಯು ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ವೀಕ್ಷಣಾ ಗೋಪುರ ನಿರ್ಮಾಣಕ್ಕಾಗಿ 5 ಕೋಟಿ ರೂ. ನೆರವು ನೀಡಿದೆ. ಈ 25 ಮೀಟರ್ ಎತ್ತರದ ಗೋಪುರವು ಪ್ರವಾಸಿಗರಿಗೆ ಉದ್ಯಾನವನದ ದಟ್ಟ ಅರಣ್ಯ ಮತ್ತು ಬೆಂಗಳೂರಿನ ಸ್ಕೈಲೈನ್ನ ದೃಶ್ಯಗಳನ್ನು ಒದಗಿಸಲಿದೆ.
ಬೆಂಗಳೂರು (ಮಾ.24): ವನ್ಯಜೀವಿ ಸಂರಕ್ಷಣೆ ಮತ್ತು ಪ್ರವಾಸಿಗರ ಅನುಭವವನ್ನು ಉತ್ತಮಪಡಿಸುವ ನಿಟ್ಟಿನಲ್ಲಿ ಬೆಂಗಳೂರು ಮೂಲದ ‘ರೋಹಿಣಿ ನಿಲೇಕಣಿ ಫಿಲಾಂತ್ರಪೀಸ್’ (Rohini Nilekani Philanthropies) ಸಂಸ್ಥೆಯು ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಸಾರ್ವಜನಿಕ ವೀಕ್ಷಣಾ ಗೋಪುರ (Observation Tower) ನಿರ್ಮಾಣಕ್ಕಾಗಿ 5 ಕೋಟಿ ರೂಪಾಯಿ ನೆರವು ನೀಡಲು ಮುಂದಾಗಿದೆ. ಮಂಗಳವಾರ ಸಾಮಾಜಿಕ ಕಾರ್ಯಗಳ ಸಂಸ್ಥೆ ಮತ್ತು ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುವ ಬನ್ನೇರುಘಟ್ಟ ಜೈವಿಕ ಉದ್ಯಾನವನದ ನಡುವೆ ಈ ಸಂಬಂಧ ಒಪ್ಪಂದಕ್ಕೆ (MoU) ಸಹಿ ಹಾಕಲಾಯಿತು.
ಹೇಗಿರಲಿದೆ ಈ ವೀಕ್ಷಣಾ ಗೋಪುರ?
ಮೃಗಾಲಯದ ಆವರಣದಲ್ಲಿ 25 ಮೀಟರ್ ಎತ್ತರದ ಭವ್ಯ ಗೋಪುರ ನಿರ್ಮಾಣವಾಗಲಿದೆ. ಇಲ್ಲಿ ಏಕಕಾಲದಲ್ಲಿ 50 ರಿಂದ 70 ಪ್ರವಾಸಿಗರು ನಿಂತು ವೀಕ್ಷಿಸಬಹುದಾಗಿದೆ. ಇಲ್ಲಿಂದ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ದಟ್ಟ ಅರಣ್ಯದ ಕಣಿವೆ ಹಾಗೂ ಬೆಂಗಳೂರಿನ ಸ್ಕೈಲೈನ್ನ ಸುಂದರ ದೃಶ್ಯಗಳನ್ನು ಸವಿಯಬಹುದಾಗಿದೆ. ಈ ಗೋಪುರವು ಸೌರಶಕ್ತಿ ವ್ಯವಸ್ಥೆ ಮತ್ತು ಮಳೆನೀರು ಕೊಯ್ಲು ಸೇರಿದಂತೆ ಪರಿಸರ ಸ್ನೇಹಿ ತಂತ್ರಜ್ಞಾನಗಳನ್ನು ಒಳಗೊಂಡಿರಲಿದೆ.
ವಾರ್ಷಿಕವಾಗಿ 22 ಲಕ್ಷಕ್ಕೂ ಹೆಚ್ಚು ಪ್ರವಾಸಿಗರನ್ನು ಸೆಳೆಯುವ ಬನ್ನೇರುಘಟ್ಟ ಉದ್ಯಾನವನವು ವನ್ಯಜೀವಿ ರಕ್ಷಣೆ ಮತ್ತು ಪರಿಸರ ಶಿಕ್ಷಣದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಈ ಹೊಸ ಗೋಪುರವು ಕೇವಲ ವಿನೋದಕ್ಕಾಗಿ ಮಾತ್ರವಲ್ಲದೆ, ಜೈವಿಕ ವೈವಿಧ್ಯತೆಯ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲು ಸಹಕಾರಿಯಾಗಲಿದೆ.
‘ಜನರನ್ನು ಪ್ರಕೃತಿಯೊಂದಿಗೆ ಮರುಸಂಪರ್ಕಿಸುವಲ್ಲಿ ಸಾರ್ವಜನಿಕ ಸಂಸ್ಥೆಗಳ ಪಾತ್ರ ಬಹಳ ದೊಡ್ಡದು. ಈ ಗೋಪುರವು ನಿಸರ್ಗದ ಬಗ್ಗೆ ಕುತೂಹಲ ಮೂಡಿಸುವುದರ ಜೊತೆಗೆ ಪರಿಸರದ ಬಗ್ಗೆ ಕಾಳಜಿ ವಹಿಸಲು ಜನರನ್ನು ಪ್ರೇರೇಪಿಸುತ್ತದೆ ಎಂಬ ಭರವಸೆ ನನಗಿದೆ’ ಎಂದು ರೋಹಿಣಿ ನಿಲೇಕಣಿ ಫಿಲಾಂತ್ರಪೀಸ್ ಅಧ್ಯಕ್ಷೆ ರೋಹಿಣಿ ನಿಲೇಕಣಿ ಹೇಳಿದ್ದಾರೆ.
ಬನ್ನೇರುಘಟ್ಟ ಜೈವಿಕ ಉದ್ಯಾನವನದ ಕಾರ್ಯನಿರ್ವಾಹಕ ನಿರ್ದೇಶಕ ಎ.ವಿ. ಸೂರ್ಯ ಸೇನ್ ಮಾತನಾಡಿ “ಈ ಉಪಕ್ರಮವು ಉದ್ಯಾನವನದ ಸಂರಕ್ಷಣೆ ಮತ್ತು ಶಿಕ್ಷಣದ ಉದ್ದೇಶವನ್ನು ಬಲಪಡಿಸುತ್ತದೆ. ಅಷ್ಟೇ ಅಲ್ಲದೆ, ಜವಾಬ್ದಾರಿಯುತ ಪ್ರವಾಸೋದ್ಯಮವನ್ನು ಉತ್ತೇಜಿಸಲು ನೆರವಾಗುತ್ತದೆ’ ಎಂದರು. ಈ ಯೋಜನೆಯು ಸ್ಥಳೀಯರ ಜೀವನೋಪಾಯಕ್ಕೆ ಕೊಡುಗೆ ನೀಡುವ ಜೊತೆಗೆ, ಬನ್ನೇರುಘಟ್ಟವನ್ನು ದೇಶದ ಮುಂಚೂಣಿ ಪರಿಸರ ಪ್ರವಾಸೋದ್ಯಮ ತಾಣವಾಗಿ ಗುರುತಿಸಿಕೊಳ್ಳಲು ನೆರವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.