
ರಾಜ್ಯದಲ್ಲಿರುವುದು ಡಬಲ್ ಸ್ಟೇರಿಂಗ್ ಸರ್ಕಾರ. ಒಂದು ಸ್ಟೇರಿಂಗ್ ಸಿಎಂ, ಇನ್ನೊಂದು ಸ್ಟೇರಿಂಗ್ ಡಿಸಿಎಂ ಕೈಯಲ್ಲಿದೆ. ಸರ್ಕಾರ ಹಲ್ಲುಕಿತ್ತ ಹಾವಿನಂತಾಗಿದೆ ಎಂದು ಮಾಜಿ ಸಚಿವ ಶ್ರೀರಾಮುಲು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಬಾಗಲಕೋಟೆ (ಮಾ.24): ಸರ್ಕಾರ ಎರಡೂವರೆ ವರ್ಷ ನೋಡಿಕೊಂಡು ಬಂದಿದ್ದೇವೆ. ರಾಜ್ಯದಲ್ಲಿರುವುದು ಡಬಲ್ ಸ್ಟೇರಿಂಗ್ ಸರ್ಕಾರ. ಒಂದು ಸ್ಟೇರಿಂಗ್ ಸಿಎಂ, ಇನ್ನೊಂದು ಸ್ಟೇರಿಂಗ್ ಡಿಸಿಎಂ ಕೈಯಲ್ಲಿದೆ. ಸರ್ಕಾರ ಹಲ್ಲುಕಿತ್ತ ಹಾವಿನಂತಾಗಿದೆ ಎಂದು ಮಾಜಿ ಸಚಿವ ಶ್ರೀರಾಮುಲು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಬಾಗಲಕೋಟೆಯಲ್ಲಿ ಮಾಜಿ ಸಚಿವ ಶ್ರೀರಾಮುಲು ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಎಐಸಿಸಿ ಅಧ್ಯಕ್ಷ ಖರ್ಗೆ ಕೇವಲ ಉತ್ಸವ ಮೂರ್ತಿಯಾಗಿದ್ದಾರೆ. ಉತ್ಸವ ಮೂರ್ತಿ ರೀತಿ ಕಾಂಗ್ರೆಸ್ ಅಧ್ಯಕ್ಷರನ್ನು ಬಳಕೆ ಮಾಡಲಾಗುತ್ತಿದೆ. ಸಿಎಂ ಮತ್ತು ಡಿಸಿಎಂ ಮಧ್ಯೆ ಕುರ್ಚಿಗಾಗಿ ಪೈಪೋಟಿ ಇದೆ. ಇವರಿಬ್ಬರೂ ರಾಜ್ಯದ ಖಜಾನೆ ಖಾಲಿ ಮಾಡಿ ಹೈಕಮಾಂಡ್ ಕಾಂಗ್ರೆಸ್ ಪಕ್ಷದ ಖಜಾನೆ ತುಂಬುತ್ತಿದ್ದಾರೆ ಎಂದು ಆರೋಪಿಸಿದರು.
ಉಪ ಚುನಾವಣೆಗಳಲ್ಲಿ ನಮ್ಮಿಬ್ಬರೂ ಅಭ್ಯರ್ಥಿಗಳು ಗೆಲ್ಲೋದು ನಿಶ್ಚಿತ. ಹಿಂದೆ ಮಾಡಿದ ತಪ್ಪನ್ನು ಬಾಗಲಕೋಟೆ ಜನ ಮಾಡೋದಿಲ್ಲ. ಮುಂದಿನ ಚುನಾವಣೆಗೆ ಈ ಉಪಚುನಾವಣೆ ದಿಕ್ಸೂಚಿಯಾಗಲಿದೆ. ಬಾಗಲಕೋಟೆ ಜಿಲ್ಲೆಯಲ್ಲಿ ಹಿಂದುತ್ವ ಪರ ಕಾರ್ಯಕರ್ತರಿದ್ದಾರೆ. ಇದು ಹಿಂದೂಗಳ ಕೋಟೆ ಬಾಗಲಕೋಟೆಯಾಗಿದ್ದು, ಹೀಗಾಗಿ ನಮ್ಮ ಅಭ್ಯರ್ಥಿ ಗೆಲ್ಲುತ್ತಾರೆ ಎಂದು ಹೇಳಿದರು.
ನಾನು ಸಾಕಷ್ಟು ಉಪಚುನಾವಣೆ ಮಾಡಿದ್ದೇನೆ. ಸರ್ಕಾರ ಹಣಬಲ, ತೋಳ್ಬಲ ತೋರಿಸ್ತಾರೆ. ಆದ್ರೆ ಜನರ ಬಲ ಇರೋದ್ರಿಂದ ಈ ಬಾರಿ ಬಿಜೆಪಿ ಗೆಲ್ಲುತ್ತೆ. ಈ ಸರ್ಕಾರ ಬಂದ ನಂತರ ರಾಜ್ಯದ ಜನರನ್ನು ಜಾತಿ, ಸಮುದಾಯವಾರು ವಿಭಜನೆ ಮಾಡಿದ್ದಾರೆ ಎಂದರು.
ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಹಣ ಲೂಟಿ ಮಾಡಿದ್ರಿ, ಹಣ ವಾಪಸ್ ಕಟ್ಟಿದ್ರಾ? ಪಾವಗಡದಲ್ಲಿ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡ್ರು, ಎಲ್ಲಾ ಹಣ ತಂದು ಬಾಗಲಕೋಟೆಯಲ್ಲಿ ಸುರಿತಿರಿ. ಆದ್ರೂ ಏನೂ ಲಾಭವಾಗುವುದಿಲ್ಲ. ಬಿಜೆಪಿ ಗೆಲ್ಲುತ್ತೆ, ನಾವು ಸಹ ಎಲ್ಲರೂ ಸೇರಿ ಜನರಿಗೆ ತಿಳಿಸಿ ಗೆಲುವು ಕಾಣುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪಾತಾಳಕ್ಕೆ ಹೋಗೋದು ಶುರು
ಉಪಚುನಾವಣೆ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸರ್ಕಾರವೇ ಝಂಡಾ ಊರುತ್ತಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಿಮಗೆ ಎಷ್ಟೇ ಶಕ್ತಿ ಇರಬಹುದು, ಆದರೆ ಜನರ ಶಕ್ತಿ ಎದುರು ನೀವು ನಿಲ್ಲೋದಿಲ್ಲ. ನಾವು ಇಲ್ಲೇ ಠಿಕಾಣಿ ಹೂಡುತ್ತೇವೆ. ನಾವು ಅಷ್ಟು ಸುಲಭವಾಗಿ ಬಿಡೋದಿಲ್ಲ. ಇಲ್ಲಿಂದಲೇ ಕಾಂಗ್ರೆಸ್ ಪಾತಾಳಕ್ಕೆ ಹೋಗೋದು ಶುರು. ಈಗ ಅಲ್ಪಸಂಖ್ಯಾತರೇ ನಮ್ಮ ಪಕ್ಷಕ್ಕೆ ಬರ್ತಿದ್ದಾರೆ. ಮುಸಲ್ಮಾನರಿಗೂ ಕಾಂಗ್ರೆಸ್ ಜೊತೆ ಇದ್ದರೆ ನಮಗೆ ಉಳಿಗಾಲ ಇಲ್ಲ ಎಂದು ಗೊತ್ತಾಗಿದೆ, ಆ ಕಾರಣ ಅವರು ಬಿಜೆಪಿ ಕಡೆ ಬರುತ್ತಿದ್ದಾರೆ ಎಂದು ಹೇಳಿದರು.