
ಬೆಂಗಳೂರು, ಮಾರ್ಚ್ 25: ಮಂಗಳವಾರ ಸುರಿದ ಮಳೆಯಿಂದಾಗಿ (ಹವಾಮಾನ ಮುನ್ಸೂಚನೆ) ಹಲವೆಡೆ ಅವಂತಗಳು ಸೃಷ್ಟಿಯಾಗಿವೆ. ಜೋರಾದ ಗಾಳಿಗೆ ಮನೆ ಮೇಲಿನ ಸೂರು ಸಹ ಹಾರಿ ಹೋಗಿದ್ದು, ಜನರು ಕಂಗಾಲಾಗಿದ್ದಾರೆ. ಇಂದು ಸಹ ರಾಜ್ಯದೆಲ್ಲೆಡೆ ಗುಡುಗು ಸಹಿತ ಮಳೆಯಿರಲಿದ್ದು, ಹವಾಮಾನ ಇಲಾಖೆ 20ಕ್ಕೂ ಹೆಚ್ಚು ಜಿಲ್ಲೆಗಳಿಗೆ ಎಲ್ಲೋ ಎಚ್ಚರಿಕೆ ನೀಡಲಾಗಿದೆ.
ಜೋರು ಗಾಳಿ ಮಳೆಗೆ ಗದಗದಲ್ಲಿ ಅವಾಂತರ
ಗದಗ ಜಿಲ್ಲೆಯಲ್ಲಿ ಮಂಗಳವಾರ ರಾತ್ರಿ ಭಾರಿ ಗಾಳಿ, ಗುಡುಗು ಸಹಿತ ಮಳೆಯ ಅಬ್ಬರದಿಂದ ಹಲವು ಕಡೆ ಅವಾಂತರಗಳು ಸಂಭವಿಸಿವೆ. ವಿಶೇಷವಾಗಿ ಮುಂಡರಗಿ ತಾಲೂಕಿನ ದಿಂಡೂರ ತಾಂಡಾದಲ್ಲಿ ಗಾಳಿಯ ತೀವ್ರತೆಗೆ ನಾಲ್ಕಕ್ಕೂ ಹೆಚ್ಚು ಮನೆಗಳ ಮೇಲಿನ ತಗಡಿನ ಶೀಟ್ಗಳು ಹಾರಿ ನಿವಾಸಿಗಳಿಗೆ ಭಾರೀ ತೊಂದರೆ ಉಂಟಾಗಿದೆ. ಶೀಟ್ಗಳು ಹಾರಿದ ಪರಿಣಾಮ ಶಿವಪ್ಪ ಲಮಾಣಿ ಕಾಲಿಗೆ ತೊಂದರೆಯಾಗಿದ್ದು, ಸೋಮವ್ವ ಲಮಾಣಿ ಅವರ ಕೈ ಮುರಿದಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಗ್ರಾಮಸ್ಥರು ಪರದಾಡಿದ ಘಟನೆ ನಡೆದಿದೆ.
ಇನ್ನೂ ಭಾರಿ ಮಳೆ ಮತ್ತು ಗಾಳಿಯಿಂದ ವಿದ್ಯುತ್ ಸಂಪರ್ಕ ಕಡಿತಗೊಂಡು ಗ್ರಾಮಸ್ಥರು ಕತ್ತಲಲ್ಲಿ ಕಂಗಾಲಾಗಿದ್ದಾರೆ. ಬಿರುಗಾಳಿಯಿಂದ ಹಲವು ದೊಡ್ಡ ಮರಗಳು ಧರೆಗೆ ಉರುಳಿದ್ದು, ಮನೆಗಳ ಮುಂದೆ ನಿಲ್ಲಿಸಿದ ಟ್ರ್ಯಾಕ್ಟರ್ ಸೇರಿದಂತೆ ವಾಹನಗಳಿಗೆ ಹಾನಿಯಾಗಿದೆ. ಇನ್ನೂ ಗಾಳಿ ಮತ್ತು ಮಳೆ ಮುಂದುವರಿದಿರುವುದರಿಂದ ಸ್ಥಳೀಯರಲ್ಲಿ ಆತಂಕ ಉಂಟಾಗಿದೆ.
ಈ ಜಿಲ್ಲೆಗಳಿಗೆ ಎಲ್ಲೋ ಎಚ್ಚರಿಕೆ
ಬೀದರ್, ಕಲಬುರ್ಗಿ, ಬಾಗಲಕೋಟೆ, ವಿಜಯಪುರ, ಯಾದಗಿರಿ, ರಾಯಚೂರು, ಕೊಪ್ಪಳ, ಗದಗ, ಬೆಳಗಾವಿ, ಧಾರವಾಡ, ಉತ್ತರ ಕನ್ನಡ, ಬಳ್ಳಾರಿ, ಹಾವೇರಿ, ವಿಜಯನಗರ, ಉಡುಪಿ, ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ಮೈಸೂರು, ಕೊಡಗು, ಹಾಸನ, ತುಮಕೂರು, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆಯಿದ್ದು, ಎಲ್ಲೆಡೆ ಎಚ್ಚರಿಕೆ ನೀಡಲಾಗಿದೆ. ಇನ್ನುಳಿದ ಜಿಲ್ಲೆಗಳಲ್ಲಿ ಒಣ ಹವೆಯಿರಲಿದೆ ಎಂದು ಹವಾಮಾನ ಇಲಾಖೆ.
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.