
ಮಾ.30ರ ವರೆಗೆ ರಾಜ್ಯದಲ್ಲಿ ಗುಡುಗು ಮಿಂಚು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. 17 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ಬೆಂಗಳೂರಿನಲ್ಲಿ ಸಂಜೆ ವೇಳೆ ಮಳೆಯಾಗುವ ಸಾಧ್ಯತೆ ಇದೆ ಎಂದಿದೆ.
ಬೆಂಗಳೂರು (ಮಾ.25) ರಾಜ್ಯದಲ್ಲಿ ಕಳೆದೆರೆಡು ದಿನದಿಂದ ಹಲವು ಭಾಗದಲ್ಲಿ ಮಳೆಯಾಗುತ್ತಿದೆ. ಇದರ ಬೆನ್ನಲ್ಲೇ ಇದೀಗ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಮಾರ್ಚ್ 30ರ ವರೆಗೆ ಗುಡುಗು ಮಿಂಚು ಸಹಿತ ಮಳೆಯಾಗಲಿದೆ ಎಂದಿದೆ. ಇದೇ ವೇಳೆ ಮುನ್ನೆಚ್ಚೆರಿಕಾ ಕ್ರಮವಾಗಿ 17 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಈ ಪೈಕಿ ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆಯಾದರೆ, ಬೆಂಗಳೂರು ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ ಎಂದಿದೆ.
ಬೆಂಗಳೂರಿನಲ್ಲಿ ಹೇಗಿರಲಿದೆ ಹವಾಮಾನ?
ಬೆಂಗಳೂರಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇದೆ. ಸಂಜೆ ನಂತರ ಗುಡುಗು ಸಹಿತ ಮಳೆಯ ಸಾಧ್ಯತೆ ಇದೆ. ರಾತ್ರಿ ವೇಳೆಗೆ ಮಳೆಯಾಗುವ ಸಾಧ್ಯತೆ ಹೆಚ್ಚು ಎಂದು ಸಾರ್ವಜನಿಕರಿಗೆ ಹವಮಾನ ಇಲಾಖೆ ಸೂಚನೆ ನೀಡಿದೆ. ಇದೇ ವೇಳೆ ಕೆಲ ಸೂಚನೆಗಳನ್ನು ಪಾಲಿಸಲು ಹವಾಮಾನ ಇಲಾಖೆ ಸೂಚಿಸಿದೆ. ಗುಡುಗು ಮಿಂಚಿನ ಸಮಯದಲ್ಲಿ ಮರಗಳ ಕೆಳಗೆ ನಿಲ್ಲಬೇಡಿ. ವಾಹನ ಚಾಲನೆ ವೇಳೆ ಎಚ್ಚರಿಕೆ ಅಗತ್ಯ ಎಂದಿದೆ.
ಉತ್ತರ ಕರ್ನಾಟಕ, ಮಲೆನಾಡು ಹಾಗೂ ದಕ್ಷಿಣ ಭಾಗದ ಹಲವು ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಈ ಪೈಕಿ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಭಾರಿ ಮಳೆ ಸಂಭವ ಇದೆ ಎಂದಿದೆ. ಮಲೆನಾಡು ಭಾಗಗಳಲ್ಲಿ ಗಾಳಿ ಸಹಿತ ಮಳೆಯಾಗಲಿದೆ. ಈ ಪೈಕಿ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳಲ್ಲಿ ಗಾಳಿ ಸಹಿತ ಮಳೆ ತೀವ್ರಗೊಳ್ಳಲಿದೆ ಎಂದಿದೆ. ಮಳೆಯ ಜೊತೆ ಬಿರುಗಾಳಿ ಬೀಸುವ ಸಾಧ್ಯತೆ ಇಂದು ಹವಾಮಾನ ಇಲಾಖೆ ಎಚ್ಚರಿಸಿದೆ.
ಉತ್ತರ ಕರ್ನಾಟಕದಲ್ಲಿ ವರುಣನ ಅಬ್ಬರ ಜೋರಾಗಲಿದೆ. ಬೆಳಗಾವಿ, ಧಾರವಾಡ, ಹಾವೇರಿ ಭಾಗದಲ್ಲಿ ಮಳೆ ಜೊತೆಗೆ ಬಿರುಗಾಳಿ ಬೀಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಸೂಚಿಸಿದೆ. ದಕ್ಷಿಣ ಒಳನಾಡಿನಲ್ಲಿ ಸಾಧಾರಣದಿಂದ ಮಳೆಯಾಗಲಿದೆ. ಸಂಜೆ ಅಥವ ರಾತ್ರಿ ವೇಳೆ ಕೆಲ ಭಾಗದಲ್ಲಿ ಮಳೆಯಾಗಲಿದೆ ಎಂದಿದೆ.
ಸಾಧಾರಣ ಮಳೆ ಪ್ರದೇಶ
- ಬೆಂಗಳೂರು ನಗರ
- ಬೆಂಗಳೂರು ಗ್ರಾಮಾಂತರ
- ಮೈಸೂರು
- ತುಮಕೂರು
ಯೆಲ್ಲೋ ಅಲರ್ಟ್ ಘೋಷಿಸಿರುವ ಜಿಲ್ಲೆ
ಬೀದರ್, ಕಲಬುರಗಿ,ವಿಜಯಪುರ,ಯಾದಗಿರಿ,ರಾಯಚೂರು,ಬಾಗಲಕೋಟೆ,ಬೆಳಗಾವಿ,ಬಳ್ಳಾರಿ,ಕೊಪ್ಪಳ,ಗದಗ,ಧಾರವಾಡ,ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಚಾಮರಾಜನಗರ