
ಬೆಂಗಳೂರು, ಮಾ.25: ಕರ್ನಾಟಕ ವಿಧಾನಸಭೆಯ ಬಜೆಟ್ ಅಧಿವೇಶನದಲ್ಲಿ ತೀವ್ರ ಚರ್ಚೆ ನಡೆಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿ ಶಾಸಕ ಸುನಿಲ್ ಕುಮಾರ್ ಅವರ ಪ್ರಶ್ನೆಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಹೈಕಮಾಂಡ್ ನಿರ್ಧಾರಗಳ ಕುರಿತು ಎದ್ದ ಪ್ರಶ್ನೆಗಳಿಗೆ ಉತ್ತರಿಸಿದ ಸಿದ್ದರಾಮಯ್ಯ, ನಾನು ಪಕ್ಷ ನಿಷ್ಠೆ ಮತ್ತು ರಾಜಕೀಯ ತತ್ವಗಳನ್ನು ಹೆಚ್ಚು ಗೌರವಿಸುತ್ತೇನೆ. ನೀವು ಮೋದಿ ಅವರನ್ನು ಕೇಳಿ ಎಲ್ಲ ಮಾಡುತ್ತೀರಾ? ಎಂದು ಸಿಎಂ ಹೇಳಿದಾಗ, ಶಾಸಕ ಸುನಿಲ್ ಕುಮಾರ್ “ನಾನು ಮೋದಿಯವರ ಭಕ್ತ, ನಾನು ಹೈಕಮಾಂಡ್ ನ ಭಕ್ತ, ನಾನು ಒಬ್ಬ ಪಾರ್ಟಿಯ ಶಿಸ್ತಿನ ಸಿಪಾಯಿ. ನಾನು ಕರ್ನಾಟಕದಲ್ಲಿ ಇದ್ದೀನಿ ಅನ್ನೋ ಕಾರಣಕ್ಕೆ ಹೈಕಮಾಂಡ್ ಮಾತು ಕೇಳಲ್ಲ ಅಂತ ಹೇಳಲ್ಲ. ನಾನು ಹೈಕಮಾಂಡ್ ಮಾತೇ ಕೇಳೋದು, ಪಾರ್ಟಿ ಮಾತೇ ಕೇಳೋದು” ಎಂದ. ಇದೇ ವೇಳೆ ಸಿಎಂ ಸಿದ್ದರಾಮಯ್ಯ ಅವರು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಕುರಿತಾದ ಟೀಕೆಗಳನ್ನು ಮಾಡಿದ್ದಾರೆ. ಇನ್ನು ಸಿದ್ದರಾಮಯ್ಯ ಅವರು ತಮ್ಮ ಸುದೀರ್ಘ ರಾಜಕೀಯ ಪಯಣದ ಮಹತ್ವದ ಘಟನೆಗಳನ್ನು ಸದನದಲ್ಲಿ ವಿವರಿಸಿದರು. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ರಾಷ್ಟ್ರೀಯ ಅಧ್ಯಕ್ಷರಾಗಿ ನಾನು ರಾಜ್ಯ ಘಟಕದ ಅಧ್ಯಕ್ಷರಾಗಿದ್ದರು. “ಕರ್ನಾಟಕದಲ್ಲಿ ನಾವಿಬ್ಬರೂ ಪರಸ್ಪರ ಮಾತುಕತೆ ಆಡಿಕೊಂಡೇ ಪಕ್ಷ ನಡೆಸುತ್ತಾ ಇದ್ದಿದ್ದು” ಎಂದು ಸ್ಮರಿಸಿದರು. ಹುಬ್ಬಳ್ಳಿಯಲ್ಲಿ ಅಹಿಂದ ಸಮಾವೇಶವನ್ನು ನಡೆಸುವ ನಿರ್ಧಾರವನ್ನು ದೇವೇಗೌಡರು ವಿರೋಧಿಸಿದರೂ, ನಾನು ಸಮಾವೇಶವನ್ನು ಯಶಸ್ವಿಯಾಗಿ ನಡೆಸಿದೆ. ಇದರ ಪರಿಣಾಮವಾಗಿ, ದೇವೇಗೌಡರು ಜನತಾ ದಳ (ಸೆಕ್ಯುಲರ್) ಪಕ್ಷದಿಂದ ನನ್ನನ್ನು ಉಚ್ಚಾಟಿಸಿದರು. 2006ರಲ್ಲಿ ಜನತಾ ದಳ (ಸೆಕ್ಯುಲರ್) ನಿಂದ ಉಚ್ಚಾಟನೆಗೊಂಡ ನಂತರ ಸಿದ್ದರಾಮಯ್ಯ ಅವರು ಅಖಿಲ ಭಾರತ ಪ್ರಗತಿಪರ ಜನತಾದಳ (APJD) ಎಂಬ ಹೊಸ ಪಕ್ಷವನ್ನು ಸ್ಥಾಪಿಸಿದರು. “ನಾನು ರಘುಪತಿ ಅವರನ್ನು ಕಳಿಸಿ ಅದನ್ನು ರಿಜಿಸ್ಟರ್ ಮಾಡಿಸಿ ನಮ್ಮ ಹೆಸರಿಗೆ ಮಾಡಿಸಿಕೊಂಡಿದ್ದು” ಎಂದು ಪ್ರಕಟಿಸಿದರು. ನಂತರ, ತಾವು ಒಂಬತ್ತು ಮಂದಿ ಶಾಸಕರೊಂದಿಗೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಉಪಚುನಾವಣೆಯಲ್ಲಿ ಮತ್ತೆ ಗೆಲುವು ಸಾಧಿಸಿ ಕಾಂಗ್ರೆಸ್ ಪಕ್ಷದಲ್ಲಿ ತಮ್ಮ ಸ್ಥಾನ ಭದ್ರಪಡಿಸಿಕೊಂಡ ಬಗ್ಗೆ ಹೇಳಿದ್ದಾರೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ