ಐಪಿಎಲ್‌ಗೆ ಕೆಕೆಆರ್‌, ಡೆಲ್ಲಿ, ಗುಜರಾತ್‌ ಭರ್ಜರಿ ಸಿದ್ಧತೆ! ಈ 3 ತಂಡಗಳ ಬಲ-ದೌರ್ಬಲ್ಯಗಳೇನು? | Ipl 2026 Kkr Gujarat Titans And Delhi Capitals Squad Analysis Strengths And Weaknesses Kvn

ಐಪಿಎಲ್‌ಗೆ ಕೆಕೆಆರ್‌, ಡೆಲ್ಲಿ, ಗುಜರಾತ್‌ ಭರ್ಜರಿ ಸಿದ್ಧತೆ! ಈ 3 ತಂಡಗಳ ಬಲ-ದೌರ್ಬಲ್ಯಗಳೇನು? | Ipl 2026 Kkr Gujarat Titans And Delhi Capitals Squad Analysis Strengths And Weaknesses Kvn



ಐಪಿಎಲ್‌ಗೆ ಕೆಕೆಆರ್‌, ಡೆಲ್ಲಿ, ಗುಜರಾತ್‌ ಭರ್ಜರಿ ಸಿದ್ಧತೆ! ಈ 3 ತಂಡಗಳ ಬಲ-ದೌರ್ಬಲ್ಯಗಳೇನು? | Ipl 2026 Kkr Gujarat Titans And Delhi Capitals Squad Analysis Strengths And Weaknesses Kvn

19ನೇ ಆವೃತ್ತಿಯ ಐಪಿಎಲ್‌ಗೆ ಸಜ್ಜಾಗಿರುವ ಕೋಲ್ಕತಾ ನೈಟ್‌ರೈಡರ್ಸ್‌, ಗುಜರಾತ್‌ ಟೈಟಾನ್ಸ್‌ ಹಾಗೂ ಡೆಲ್ಲಿ ಕ್ಯಾಪಿಟಲ್ಸ್‌ ತಂಡಗಳ ಸಮಗ್ರ ವಿಶ್ಲೇಷಣೆ ಇಲ್ಲಿದೆ. ಈ ಲೇಖನವು ಪ್ರತಿ ತಂಡದ 2026ರ ಬಲಾಬಲ, ದೌರ್ಬಲ್ಯಗಳು ಮತ್ತು ಸಂಭಾವ್ಯ ಆಡುವ ಬಳಗದ ಬಗ್ಗೆ ವಿವರವಾದ ಮಾಹಿತಿಯನ್ನು ಒದಗಿಸುತ್ತದೆ.

19ನೇ ಆವೃತ್ತಿಯ ಐಪಿಎಲ್‌ಗೆ ಮಾಜಿ ಚಾಂಪಿಯನ್ನರಾದ ಕೋಲ್ಕತಾ ನೈಟ್‌ರೈಡರ್ಸ್‌, ಗುಜರಾತ್‌ ಟೈಟಾನ್ಸ್‌ ಹಾಗೂ ಇನ್ನೂ ಒಮ್ಮೆಯೂ ಚಾಂಪಿಯನ್‌ ಆಗದ ಡೆಲ್ಲಿ ಕ್ಯಾಪಿಟಲ್ಸ್‌ ಭರ್ಜರಿ ಸಿದ್ಧತೆ ನಡೆಸಿವೆ. ಈ ಮೂರು ತಂಡಗಳ ಬಲಾಬಲದ ಬಗ್ಗೆ ಇಂದಿನ ಏಷ್ಯಾನೆಟ್ ಸೋದರ ಸಂಸ್ಥೆ ‘ಕನ್ನಡಪ್ರಭ’ ಸಂಚಿಕೆಯಲ್ಲಿ ಸಮಗ್ರ ವಿವರ ಪ್ರಕಟಿಸಲಾಗಿದೆ. ಮಂಗಳವಾರ 3 ತಂಡಗಳ ಬಗ್ಗೆ ವಿವರ ಪ್ರಕಟ ಮಾಡಲಾಗಿತ್ತು.

ಕೋಲ್ಕತಾ ನೈಟ್‌ರೈಡರ್ಸ್‌ (ಕೆಕೆಆರ್‌): ಕಳೆದ ಆವೃತ್ತಿ: 8ನೇ ಸ್ಥಾನ

ಪೂರ್ತಿಗೊಂಡ 12 ಪಂದ್ಯಗಳಲ್ಲಿ ಕೆಕೆಆರ್‌ 7ರಲ್ಲಿ ಸೋತು 10 ತಂಡಗಳ ಪೈಕಿ 8ನೇ ಸ್ಥಾನಕ್ಕೆ ತೃಪ್ತಿಪಟ್ಟಿತ್ತು. ತಂಡದ ಪ್ರದರ್ಶನ ಒಟ್ಟಾರೆಯಾಗಿ ತೀರಾ ಕಳಪೆಯಾಗಿತ್ತು.

2026ರಲ್ಲಿ ತಂಡ ಹೇಗಿದೆ?

2014ರ ಬಳಿಕ ತಂಡದಲ್ಲಿ ಆ್ಯಂಡ್ರೆ ರಸೆಲ್‌ ಇಲ್ಲ. ಹೀಗಾಗಿ ರಿಂಕು ಹಾಗೂ ರಮಣ್‌ದೀಪ್‌ ಸಹಜವಾಗಿಯೇ ಫಿನಿಶರ್‌ ಪಾತ್ರಕ್ಕೆ ಪೂರ್ಣ ಪ್ರಮಾಣದಲ್ಲಿ ಸಜ್ಜಾಗಬೇಕಿದೆ. ದುಬಾರಿ ಮೊತ್ತಕ್ಕೆ ತಂಡ ಸೇರಿರುವ ಕ್ಯಾಮರೂನ್‌ ಗ್ರೀನ್‌ ಮೇಲೆ ಆರಂಭದಿಂದಲೇ ಒತ್ತಡ ಇರಲಿದೆ. ಟಿ20 ವಿಶ್ವಕಪ್‌ನಲ್ಲಿ ಅಬ್ಬರಿಸಿದ ಟಿಮ್‌ ಸೀಫರ್ಟ್‌ ಹಾಗೂ ಫಿನ್‌ ಆ್ಯಲೆನ್‌ ಬಲ ತಂಡಕ್ಕಿದೆ. ಸುನಿಲ್‌ ನರೇನ್‌ ಹಾಗೂ ವರುಣ್‌ ಚಕ್ರವರ್ತಿ ತಂಡದ ಟ್ರಂಪ್‌ಕಾರ್ಡ್‌ಗಳು. ರಾಹುಲ್‌ ತ್ರಿಪಾಠಿ ಮತ್ತೊಮ್ಮೆ ಕೆಕೆಆರ್‌ಗೆ ಸೇರ್ಪಡೆಗೊಂಡಿದ್ದು, ಎಷ್ಟರ ಮಟ್ಟಿಗೆ ಯಶಸ್ಸು ಕಾಣಬಲ್ಲರು ಎನ್ನುವ ಕುತೂಹಲವಿದೆ. ಇನ್ನು ನಾಯಕ ಅಜಿಂಕ್ಯ ರಹಾನೆ 3ನೇ ಕ್ರಮಾಂಕದಲ್ಲಿ ಆಡುವ ನಿರೀಕ್ಷೆ ಇದೆ. ಅವರ ಬ್ಯಾಟಿಂಗ್‌ ಸ್ಟ್ರೈಕ್‌ರೇಟ್‌ ತಂಡಕ್ಕೆ ನಿರ್ಣಾಯಕ ಎನಿಸಲಿದೆ. ಕಳೆದ ಆವೃತ್ತಿಯಲ್ಲಿ ಗಮನ ಸೆಳೆದಿದ್ದ ಅಂಗ್‌ಕೃಷ್‌ ರಘುವಂಶಿ ಮೇಲೆ ಹೆಚ್ಚಿನ ನಿರೀಕ್ಷೆ ಇದೆ. ಅಂಗ್‌ಕೃಷ್‌ ವಿಕೆಟ್‌ ಕೀಪರ್‌ ಆಗಿ ಆಡಿದರೆ, ತಂಡಕ್ಕೆ ವಿದೇಶಿ ಆಟಗಾರರ ಆಯ್ಕೆಯಲ್ಲಿ ಸ್ವಲ್ಪ ತಲೆನೋವು ಕಡಿಮೆಯಾಗಲಿದೆ.

ದೌರ್ಬಲ್ಯಗಳೇನು?: 

ಟೂರ್ನಿ ಆರಂಭಕ್ಕೂ ಮೊದಲೇ ವೇಗಿಗಳಾದ ಹರ್ಷಿತ್‌ ರಾಣಾ, ಆಕಾಶ್‌ದೀಪ್‌ರನ್ನು ತಂಡ ಕಳೆದುಕೊಂಡಿದೆ. ದೊಡ್ಡ ಮೊತ್ತ ನೀಡಿ ಖರೀದಿಸಿದ್ದ ಬಾಂಗ್ಲಾದ ಮುಸ್ತಾಫಿಜುರ್‌ರನ್ನು ಈಗಾಗಲೇ ತಂಡದಿಂದ ಹೊರಹಾಕಲಾಗಿದೆ. ಹೀಗಾಗಿ, ವೇಗದ ಬೌಲಿಂಗ್‌ ದುರ್ಬಲವಾಗಿ ಕಾಣುತ್ತಿದೆ. ನರೇನ್‌ ಹಾಗೂ ಗ್ರೀನ್‌ ಸಹಜವಾಗಿಯೇ ಆಡುವ ಬಳಗದಲ್ಲಿ ಇರಲಿದ್ದಾರೆ. ಹೀಗಾಗಿ, ಉಳಿದ 2 ಸ್ಥಾನಗಳಿಗೆ ಸೀಫರ್ಟ್‌, ಆ್ಯಲೆನ್‌, ರಚಿನ್‌ ರವೀಂದ್ರ, ಮುಜರ್‌ಬಾನಿ, ರೋವ್ಮನ್‌ ಪೋವೆಲ್‌, ಪತಿರನ ನಡುವೆ ಪೈಪೋಟಿ ಏರ್ಪಡಲಿದೆ.

ಅತ್ಯುತ್ತಮ 12 ಆಯ್ಕೆ: ಟಿಮ್‌ ಸೀಫರ್ಟ್‌/ಫಿನ್‌ ಆ್ಯಲೆನ್‌/ರಾಹುಲ್‌ ತ್ರಿಪಾಠಿ, ಅಜಿಂಕ್ಯ ರಹಾನೆ(ನಾಯಕ), ಅಂಗ್‌ಕೃಷ್‌ ರಘುವಂಶಿ, ಕ್ಯಾಮರೂನ್‌ ಗ್ರೀನ್‌, ರಿಂಕು ಸಿಂಗ್‌, ರಮಣ್‌ದೀಪ್‌ ಸಿಂಗ್‌, ಸುನಿಲ್‌ ನರೇನ್‌, ವೈಭವ್‌ ಅರೋರಾ, ಉಮ್ರಾನ್‌ ಮಲಿಕ್‌, ವರುಣ್‌ ಚಕ್ರವರ್ತಿ, ಮುಜರ್‌ಬಾನಿ/ಕಾರ್ತಿಕ್‌ ತ್ಯಾಗಿ/ಅನುಕೂಲ್‌ ರಾಯ್‌.

ಗುಜರಾತ್‌ ಟೈಟಾನ್ಸ್‌: ಕಳೆದ ಆವೃತ್ತಿ: 4ನೇ ಸ್ಥಾನ

ಲೀಗ್‌ನಲ್ಲಿ 9 ಪಂದ್ಯಗಳನ್ನು ಗೆದ್ದಿದ್ದ ಗುಜರಾತ್‌ ಟೈಟಾನ್ಸ್‌, ಅಂಕಪಟ್ಟಿಯಲ್ಲಿ 3ನೇ ಸ್ಥಾನ ಪಡೆದಿತ್ತು. ಆದರೆ ಪ್ಲೇ-ಆಫ್‌ನ ಎಲಿಮಿನೇಟರ್‌ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ವಿರುದ್ಧ ಸೋತು ಹೊರಬಿದ್ದಿತ್ತು.

2026ರಲ್ಲಿ ತಂಡ ಹೇಗಿದೆ?

ತಂಡದ ಹನ್ನೆರಡರ ಬಳಗ ಹೆಚ್ಚೂ ಕಡಿಮೆ ಕಳೆದ ಆವೃತ್ತಿಯಂತೆಯೇ ಇದೆ. ಆದರೆ ಮಧ್ಯಮ ಕ್ರಮಾಂಕದಲ್ಲಿ ಒಂದು ಮಹತ್ವದ ಬದಲಾವಣೆ ಆಗಿದ್ದು, ಶೆರ್ಫೇನ್‌ ರುಥರ್‌ಪೋರ್ಡ್‌ ಇಲ್ಲ. ಅವರ ಬದಲು ಟಾಮ್‌ ಬ್ಯಾನ್ಟನ್ ಬಂದಿದ್ದಾರೆ. ಇತ್ತೀಚಿನ ಟಿ20 ವಿಶ್ವಕಪ್‌ನಲ್ಲಿ 4ನೇ ಕ್ರಮಾಂಕದಲ್ಲಿ ಆಡಿದ್ದ ಬ್ಯಾನ್ಟನ್‌ ಉತ್ತಮ ಫಾರ್ಮ್‌ನಲ್ಲಿದ್ದರು. ಆದರೆ4ನೇ ಕ್ರಮಾಂಕಕ್ಕೆ ಗ್ಲೆನ್‌ ಫಿಲಿಪ್ಸ್‌ ಕೂಡ ಸ್ಪರ್ಧೆಯಲ್ಲಿದ್ದಾರೆ. ಫಿಲಿಪ್ಸ್‌ರ ಬೌಲಿಂಗ್‌, ಫೀಲ್ಡಿಂಗ್‌ ಪರಿಗಣಿಸಿ ಅವರಿಗೇ ಮಣೆ ಹಾಕುವ ಸಾಧ್ಯತೆ ಹೆಚ್ಚು. ₹7 ಕೋಟಿ ನೀಡಿ ಜೇಸನ್‌ ಹೋಲ್ಡರ್‌ರನ್ನು ಖರೀದಿಸಿರುವ ಗುಜರಾತ್‌, ತಂಡದಲ್ಲಿ ಅವರಿಗೆ ಜಾಗ ಮಾಡಬೇಕಿದ್ದರೆ ವೇಗಿ ಕಗಿಸೋ ರಬಾಡರನ್ನು ಹೊರಗಿಡಬೇಕಾಗಬಹುದು. ಅಥವಾ ಬ್ಯಾನ್ಟನ್‌ ಹಾಗೂ ಫಿಲಿಪ್ಸ್‌ ಇಬ್ಬರನ್ನು ಆಡಿಸದೆ ಇರಬೇಕಾಗಬಹುದು.

ದೌರ್ಬಲ್ಯ ಏನು?

ಬ್ಯಾಟಿಂಗ್‌ ತಂಡದ ಬಲ. ಅದೇ ದೌರ್ಬಲ್ಯ ಕೂಡ. ನಾಯಕ ಗಿಲ್‌ ಭಾರತ ಟಿ20 ತಂಡದಿಂದ ಹೊರಬಿದ್ದಿದ್ದಾರೆ. ಇನ್ನು ಬಟ್ಲರ್‌ 2026ರಲ್ಲಿ ಟಿ20ಯಲ್ಲಿ ಕೇವಲ 20.4ರ ಬ್ಯಾಟಿಂಗ್‌ ಸರಾಸರಿ ಹೊಂದಿದ್ದಾರೆ. ಇತ್ತೀಚಿನ ಟಿ20 ವಿಶ್ವಕಪ್‌ನಲ್ಲೂ ಕಳಪೆ ಆಟವಾಡಿದ್ದರು. ಕಳೆದ 2 ಆವೃತ್ತಿಗಳಲ್ಲಿ ಗುಜರಾತ್‌ನ ಮಧ್ಯಮ ಕ್ರಮಾಂಕ (4ರಿಂದ 7)ದಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿಲ್ಲ. ಹಾರ್ದಿಕ್‌ ಪಾಂಡ್ಯ ತಂಡದಿಂದ ಹೊರಹೋದ ಬಳಿಕ ಅವರ ಸ್ಥಾನವನ್ನು ಸಮರ್ಥವಾಗಿ ತುಂಬಲು ಯಾರಿಂದಲೂ ಆಗಿಲ್ಲ.

ಅತ್ಯುತ್ತಮ 12 ಆಯ್ಕೆ: ಶುಭ್‌ಮನ್‌ ಗಿಲ್‌(ನಾಯಕ), ಸಾಯಿ ಸುದರ್ಶನ್‌, ಜೋಸ್‌ ಬಟ್ಲರ್‌, ಬ್ಯಾನ್ಟನ್‌/ಫಿಲಿಪ್ಸ್‌, ವಾಷಿಂಗ್ಟನ್‌/ಕುಮಾರ್‌ ಕುಶಾಗ್ರ, ಶಾರುಖ್‌ ಖಾನ್‌, ರಾಹುಲ್‌ ತೆವಾಟಿಯಾ, ರಶೀದ್‌ ಖಾನ್‌, ರಬಾಡ/ಹೋಲ್ಡರ್‌, ಸಾಯಿ ಕಿಶೋರ್‌, ಪ್ರಸಿದ್ಧ್‌ ಕೃಷ್ಣ, ಮೊಹಮದ್‌ ಸಿರಾಜ್.

ಡೆಲ್ಲಿ ಕ್ಯಾಪಿಟಲ್ಸ್‌ : ಕಳೆದ ಆವೃತ್ತಿ: 5ನೇ ಸ್ಥಾನ

14 ಪಂದ್ಯಗಳಲ್ಲಿ 7 ಗೆಲುವು, 6 ಸೋಲಿನೊಂದಿಗೆ 15 ಅಂಕ ಪಡೆದು 5ನೇ ಸ್ಥಾನಕ್ಕೆ ತೃಪ್ತಿಪಟ್ಟಿತ್ತು. ಕೇವಲ 1 ಅಂಕದಿಂದ ಪ್ಲೇ-ಆಫ್‌ನಲ್ಲಿ ಸ್ಥಾನ ಕೈತಪ್ಪಿತ್ತು. ಸನ್‌ರೈಸರ್ಸ್‌ ವಿರುದ್ಧದ ಪಂದ್ಯ ರದ್ದಾಗಿದ್ದು ತಂಡಕ್ಕೆ ಮುಳುವಾಗಿತ್ತು.

2026ರಲ್ಲಿ ತಂಡ ಹೇಗಿದೆ?

ಅಕ್ಷರ್‌ ಪಟೇಲ್‌ರನ್ನೇ ನಾಯಕನನ್ನಾಗಿ ಮುಂದುವರಿಸಲಾಗಿದೆ. ಆದರೆ ಹಿಂದಿನ ಆವೃತ್ತಿಗೆ ಹೋಲಿಸಿದರೆ ಈ ಬಾರಿ ತಂಡದಲ್ಲಿ ಹಲವು ಬದಲಾವಣೆಗಳಾಗಿವೆ. ಡೇವಿಡ್‌ ಮಿಲ್ಲರ್‌, ಪಥುಂ ನಿಸ್ಸಾಂಕ, ಅಕಿಬ್‌ ನಬಿಯಂತಹ ಬಲಿಷ್ಠ ಆಟಗಾರರು ಸೇರ್ಪಡೆಗೊಂಡಿದ್ದಾರೆ. ಕೆ.ಎಲ್‌.ರಾಹುಲ್‌ ತಂಡದ ಬ್ಯಾಟಿಂಗ್‌ ಆಧಾರಸ್ತಂಭವಾಗಬೇಕಿದೆ. ಟ್ರಿಸ್ಟನ್‌ ಸ್ಟಬ್ಸ್‌, ನಿತೀಶ್‌ ರಾಣಾ, ವಿಪ್ರಜ್‌ ನಿಗಂ, ಅಶುತೋಷ್‌ ಶರ್ಮಾರಂತಹ ಮ್ಯಾಚ್‌ ವಿನ್ನರ್‌ಗಳ ಬಲ ತಂಡಕ್ಕಿದೆ. ಕುಲ್ದೀಪ್‌ ಯಾದವ್‌ ಹಾಗೂ ಅಕ್ಷರ್‌ರಂತಹ ಅನುಭವಿ ಸ್ಪಿನ್ನರ್‌ಗಳು ತಂಡಕ್ಕೆ ಟ್ರಂಪ್‌ ಕಾರ್ಡ್‌ಗಳಾಗಬಲ್ಲರು.

ದೌರ್ಬಲ್ಯ ಏನು?

ಮಿಚೆಲ್‌ ಸ್ಟಾರ್ಕ್‌ರನ್ನು ತಂಡ ಹೆಚ್ಚಾಗಿ ನೆಚ್ಚಿಕೊಂಡಿದ್ದು, ಅವರ ಆಗಮನದ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. ಕೆಲಸದ ಒತ್ತಡ ನಿರ್ವಹಣೆ ಹೆಸರಿನಲ್ಲಿ ಅವರಿಗೆ ಕ್ರಿಕೆಟ್‌ ಆಸ್ಟ್ರೇಲಿಯಾ ಎಷ್ಟು ಓವರ್‌ಗಳ ಮಿತಿ ಹೇರಲಿದೆ ಎನ್ನುವುದು ಗೊತ್ತಿಲ್ಲ. ಇನ್ನು ನಟರಾಜನ್‌, ಮುಕೇಶ್‌ ಕುಮಾರ್‌ ಇತ್ತೀಚೆಗೆ ಹೆಚ್ಚು ಪಂದ್ಯಗಳನ್ನಾಡಿಲ್ಲ. ಒಟ್ಟಾರೆಯಾಗಿ ತಂಡಕ್ಕೆ ವೇಗದ ಬೌಲಿಂಗ್‌ ಆಯ್ಕೆಗಳು ಕಡಿಮೆ ಇವೆ.

ಅತ್ಯುತ್ತಮ 12 ಆಯ್ಕೆ: ಪಥುಂ ನಿಸ್ಸಾಂಕ, ಕೆ.ಎಲ್‌.ರಾಹುಲ್‌, ನಿತೀಶ್‌ ರಾಣಾ, ಟ್ರಿಸ್ಟನ್‌ ಸ್ಟಬ್ಸ್‌, ಡೇವಿಡ್‌ ಮಿಲ್ಲರ್‌, ಅಕ್ಷರ್‌ ಪಟೇಲ್‌ (ನಾಯಕ), ಅಶುತೋಷ್‌ ಶರ್ಮಾ, ವಿಪ್ರಜ್‌ ನಿಗಂ, ಮಿಚೆಲ್‌ ಸ್ಟಾರ್ಕ್‌, ಕುಲ್ದೀಪ್‌ ಯಾದವ್‌, ಮುಕೇಶ್‌ ಕುಮಾರ್‌, ಅಭಿಷೇಕ್‌ ಪೊರೆಲ್‌/ಟಿ.ನಟರಾಜನ್‌.



Source link

Leave a Reply

Your email address will not be published. Required fields are marked *