
ಅಂಕೋಲಾದಲ್ಲಿ ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ನಾಯಕ್ ಅವರ ಮೇಲೆ ಹಾಡಹಗಲೇ ಹತ್ಯೆ ಯತ್ನ ನಡೆದಿದೆ. ದುಷ್ಕರ್ಮಿಗಳ ದಾಳಿಯಿಂದ ಗಂಭೀರವಾಗಿ ಗಾಯಗೊಂಡ ಅವರು ಪ್ರಾಣಾಪಾಯದಿಂದ ಪಾರಾಗಿದ್ದು, ಪ್ರಕರಣ ಸಂಬಂಧ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿ ತನಿಖೆ ಮುಂದುವರೆಸಿದ್ದಾರೆ.
ಉತ್ತರ ಕನ್ನಡ: ಕಾಂಗ್ರೆಸ್ ಮುಖಂಡ ಹಾಗೂ ರಾಜ್ಯ ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರ ಆಪ್ತರಾಗಿರುವ ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ ನಾಯಕ್ ಅವರ ಮೇಲೆ ಅಂಕೋಲಾದಲ್ಲಿ ನಡೆದ ಹತ್ಯೆ ಯತ್ನ ಪ್ರಕರಣ ಜಿಲ್ಲೆಯಲ್ಲಿ ಭೀತಿಯ ವಾತಾವರಣ ಸೃಷ್ಟಿಸಿದೆ. ಬುಧವಾರ ಬೆಳಗ್ಗೆ ಹಾಡಹಗಲೇ ನಡೆದ ಈ ದಾಳಿ ರಾಜಕೀಯ ವಲಯದಲ್ಲೂ ಭಾರೀ ಚರ್ಚೆಗೆ ಗ್ರಾಸವಾಗಿದೆ. ಇದೀಗ ಪ್ರಕರಣ ಸಂಬಂಧ 6 ಜನ ಹಂತಕರಲ್ಲಿ ನಾಲ್ಕು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಹಾಡಹಗಲೇ ದಾಳಿ
ಅಂಕೋಲಾ ಪಟ್ಟಣದಲ್ಲಿ ಬೆಳಿಗ್ಗೆ ಸುಮಾರು 9.30ರ ವೇಳೆಗೆ ಹೇರ್ ಕಟಿಂಗ್ ಸಲುವಾಗಿ ಒಬ್ಬರೇ ತೆರಳಿದ್ದ ಗೋಪಾಲಕೃಷ್ಣ ನಾಯಕ್ ಅವರ ಮೇಲೆ ಆರು ಮಂದಿ ದುಷ್ಕರ್ಮಿಗಳ ಗುಂಪು ಏಕಾಏಕಿ ಚಾಕುವಿನಿಂದ ದಾಳಿ ನಡೆಸಿದೆ. ಇದನ್ನು ಹತ್ತಿರದಿಂದ ಕಂಡಿದ್ದ ಎದುರು ಮನೆಯ ಸುಜಾತಾ ಶ್ರೀನಿವಾಸ ನಾಯ್ಕ ದೊಡ್ಡದಾಗಿ ಬೊಬ್ಬೆ ಹಾಕಿದ್ದಾರೆ. ಈ ಸಂದರ್ಭ ಗೋಪಾಲಕೃಷ್ಣ ಸಮಯಪ್ರಜ್ಞೆ ಮೆರೆದು ತಕ್ಷಣವೇ ಸಮೀಪದಲ್ಲಿದ್ದ ಬ್ಯಾಂಕ್‌ವೊಂದರೊಳಗೆ ಓಡಿಹೋಗಿ, ಒಳಗಿನಿಂದ ಬಾಗಿಲು ಹಾಕಿಕೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನಂತರ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಭೀಕರ ದಾಳಿಯಲ್ಲಿ ಅವರ ತಲೆ ಭಾಗದಲ್ಲಿ ಮೂರು ಕಡೆ ಹಾಗೂ ಎರಡು ಕೈಗಳಿಗೆ ಗಂಭೀರ ಗಾಯಗಳಾಗಿವೆ. ಹಾಗೆ ಗೋಪಾಲಕೃಷ್ಣ ನಾಯಕ ಜೊತೆಗಿದ್ದ ಅವರ ಸ್ನೇಹಿತ ರಾಘವೇಂದ್ರ ನಾಯಕ ತಲೆಭಾಗಕ್ಕೆ ದುಷ್ಕರ್ಮಿಗಳು ಚಾಕುವಿನಿಂದ ಇರಿದಿದ್ದಾರೆ.
ಮೂರು ತಿಂಗಳಿನಿಂದ ಸ್ಕೆಚ್
ಪ್ರಾಥಮಿಕ ತನಿಖೆಯಲ್ಲಿ, ಈ ದಾಳಿಗೆ ಸುಮಾರು ಮೂರು ತಿಂಗಳಿನಿಂದಲೇ ಸ್ಕೆಚ್ ಹಾಕಲಾಗಿತ್ತು ಎಂಬ ಶಂಕೆ ವ್ಯಕ್ತವಾಗಿದೆ. ಆರೋಪಿಗಳು ಅಂಕೋಲಾದಲ್ಲೇ ಮನೆ ಮಾಡಿಕೊಂಡು, ಗೋಪಾಲಕೃಷ್ಣ ನಾಯಕ್ ಅವರ ದಿನಚರಿಯನ್ನು ಗಮನಿಸಿ ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದರು ಎನ್ನಲಾಗಿದೆ. ಸದಾ ಬೆಂಬಲಿಗರೊಂದಿಗೆ ಇರುವ ನಾಯಕ್ ಒಬ್ಬಂಟಿಯಾಗಿ ಇರುವ ಸಮಯವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ.
ಗೋವಾ ಮೂಲದ ಆರೋಪಿಗಳು, ನಾಲ್ವರು ಆರೋಪಿಗಳು ವಶಕ್ಕೆ
ಈ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳು ಗೋವಾ ಮೂಲದವರಾಗಿರುವ ಮಾಹಿತಿ ದೊರೆತಿದೆ. ಗೋಪಾಲಕೃಷ್ಣ ನಾಯಕ್ ಅವರ ಫೋಟೋ ನೀಡಿ ಕೊಲೆಗಾಗಿ ಸುಪಾರಿ ನೀಡಲಾಗಿತ್ತು . ಸ್ಥಳೀಯರ ಕೈವಾಡವೂ ಇರಬಹುದು ಎಂಬ ಶಂಕೆ ಮೇಲೆ ಪೊಲೀಸರು ತೀವ್ರ ಪರಿಶೀಲನೆ ನಡೆಸುತ್ತಿದ್ದಾರೆ. ದಾಳಿ ನಡೆಸಿದ ಬಳಿಕ ನಾಲ್ವರು ಆರೋಪಿಗಳು ಗೋವಾದತ್ತ ಪರಾರಿಯಾಗಲು ಯತ್ನಿಸಿದ್ದರು. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ತಕ್ಷಣ ಅಲರ್ಟ್ ಆಗಿ ಕಾರವಾರ-ಗೋವಾ ಗಡಿಯ ಮಾಜಾಳಿ ಚೆಕ್ ಪೋಸ್ಟ್‌ನಲ್ಲಿ ಕಟ್ಟುನಿಟ್ಟಿನ ತಪಾಸಣೆ ನಡೆಸಿದರು. ಈ ವೇಳೆ ಶಂಕಿತ ನಾಲ್ವರು ದುಷ್ಕರ್ಮಿಗಳನ್ನು ಚಿತ್ತಾಕುಲ ಠಾಣಾ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಉಳಿದ ಇಬ್ಬರು ಆರೋಪಿಗಳಿಗಾಗಿ ತೀವ್ರ ಶೋಧ ಮುಂದುವರಿದಿದೆ. ಗೋವಾಗೆ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ.
ತನಿಖೆ ಚುರುಕು
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್ ಅವರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿದ್ದು, ಪ್ರಕರಣದ ಎಲ್ಲಾ ಆಯಾಮಗಳಲ್ಲಿ ತನಿಖೆ ಮುಂದುವರಿದಿದೆ. ಪಶ್ಚಿಮ ವಲಯ ಐಜಿಪಿ ಕಾರವಾರದಲ್ಲಿಯೇ ತಂಗಿ ತನಿಖೆಯನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಈ ಹತ್ಯೆಯ ಪ್ರಯತ್ನಕ್ಕೆ ರಾಜಕೀಯ ಅಥವಾ ರಿಯಲ್ ಎಸ್ಟೇಟ್ ವ್ಯವಹಾರ ಕಾರಣವೇ ಎಂದು ತನಿಖೆ ನಡೆಸಲಾಗುತ್ತಿದೆ. ಗೋಪಾಲಕೃಷ್ಣ ನಾಯಕ್ ರಾಜಕೀಯವಾಗಿ ಬೆಳೆಯುತ್ತಿರುವ ಹಿನ್ನೆಲೆ, ಅವರ ಪ್ರಭಾವವನ್ನು ತಡೆಯುವ ಉದ್ದೇಶದಿಂದಲೇ ಈ ದಾಳಿ ನಡೆದಿದೆಯೇ ಎಂಬ ಅನುಮಾನವೂ ವ್ಯಕ್ತವಾಗಿದೆ. ಈ ಪ್ರಕರಣದ ಹಿಂದೆ ಯಾರು ಇದ್ದಾರೆ ಎಂಬುದು ತನಿಖೆಯಿಂದ ಸ್ಪಷ್ಟವಾಗಬೇಕಿದೆ.
ಆತಂಕದಲ್ಲಿ ಅಂಕೋಲಾ ಜನತೆ
2014ರಲ್ಲಿ ಅದಿರು ಉದ್ಯಮಿ ಆರ್.ಎನ್. ನಾಯಕ ಅವರನ್ನು ಪಟ್ಟಣದ ಬಸ್ ನಿಲ್ದಾಣದ ಎದುರಿನಲ್ಲಿಯೇ ಭೀಕರವಾಗಿ ಹತ್ಯೆಗೈಯ್ಯಲಾಗಿತ್ತು. ಈಗ ಮತ್ತೆ ಹಾಡುಹಗಲೇ ದುಷ್ಕರ್ಮಿಗಳ ತಂಡ ಅಟ್ಟಹಾಸ ಮೆರೆದಿರುವುದು ಜನತೆಯನ್ನು ಇನ್ನಷ್ಟು ಆತಂಕಕ್ಕೆ ಎಡೆಮಾಡಿ ಕೊಟ್ಟಿದೆ. ಪೊಲೀಸರು ತ್ವರಿತವಾಗಿ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿ ನಾಗರಿಕರ ಆತಂಕವನ್ನು ದೂರ ಮಾಡಬೇಕಿದೆ.
ಒಟ್ಟಿನಲ್ಲಿ, ಹಾಡಹಗಲೇ ನಡೆದ ಈ ಹತ್ಯೆ ಯತ್ನ ಪ್ರಕರಣ ಉತ್ತರ ಕನ್ನಡ ಜಿಲ್ಲೆಯಲ್ಲೇ ಆತಂಕ ಮೂಡಿಸಿದ್ದು, ಕಾನೂನು ಸುವ್ಯವಸ್ಥೆಯ ಬಗ್ಗೆ ಪ್ರಶ್ನೆಗಳನ್ನು ಎಬ್ಬಿಸಿದೆ. ಪ್ರಕರಣದ ಸಂಪೂರ್ಣ ಸತ್ಯ ಹೊರಬರುವವರೆಗೆ ರಾಜಕೀಯ ಹಾಗೂ ಸಾರ್ವಜನಿಕ ವಲಯದಲ್ಲಿ ಕುತೂಹಲ ಮುಂದುವರಿದಿದೆ.