
ಚಿಕ್ಕಬಳ್ಳಾಪುರ ತಾಲೂಕಿನ ತೌಡನಹಳ್ಳಿಯಲ್ಲಿ, ದೆವ್ವ ಕಾಡುತ್ತಿದೆ ಎಂಬ ಮಾನಸಿಕ ಭೀತಿಯಿಂದ ಬಳಲುತ್ತಿದ್ದ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ಕುಟುಂಬಸ್ಥರು ವೈದ್ಯಕೀಯ ಚಿಕಿತ್ಸೆಯ ಬದಲು ಮಂತ್ರವಾದಿಗಳ ಮೊರೆ ಹೋಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.
ಚಿಕ್ಕಬಳ್ಳಾಪುರ (ಮಾ.26): ತಾಲೂಕಿನ ತೌಡನಹಳ್ಳಿ ಗ್ರಾಮದಲ್ಲಿ ಮೂಢನಂಬಿಕೆ ಮತ್ತು ಮಾನಸಿಕ ಭೀತಿಯಿಂದಾಗಿ ಮಹಿಳೆಯೊಬ್ಬರು ವಿಚಿತ್ರವಾಗಿ ವರ್ತಿಸಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಮೂಲತಃ ದೊಡ್ಡಬಳ್ಳಾಪುರ ತಾಲೂಕಿನ ಸೋತೇನಹಳ್ಳಿಯವರಾದ ಮಂಜುಳಾ (36), ತೌಡನಹಳ್ಳಿಯ ರಮೇಶ್ ಎಂಬುವವರನ್ನು ಮದುವೆಯಾಗಿ 16 ವರ್ಷಗಳಾಗಿದ್ದವು. ದಂಪತಿಗಳ ನಡುವೆ ಯಾವುದೇ ಕಲಹವಿರಲಿಲ್ಲ. ಆದರೆ ಇತ್ತೀಚೆಗೆ ತವರು ಮನೆಯಲ್ಲಿ ನಡೆದ ಮಾವನ ತಿಥಿ ಕಾರ್ಯದಲ್ಲಿ ಭಾಗವಹಿಸಿ ಬಂದ ನಂತರ ಮಂಜುಳಾ ಅವರ ವರ್ತನೆಯಲ್ಲಿ ತೀವ್ರ ಬದಲಾವಣೆ ಕಂಡುಬಂದಿತ್ತು.
ವಿಚಿತ್ರ ವರ್ತನೆ ಮತ್ತು ದೆವ್ವದ ಭೀತಿ
ಮನೆಯಲ್ಲಿ ಕುಳಿತರೂ, ನಿಂತರೂ ಯಾರೋ ಒಬ್ಬರು ತನ್ನ ಕಣ್ಣೆದುರೇ ಬಂದು ಕಾಟ ಕೊಡುತ್ತಿದ್ದಾರೆ ಎಂಬ ಭ್ರಮೆಗೆ ಮಂಜುಳಾ ಒಳಗಾಗಿದ್ದರು. “ಗಂಡು ದೆವ್ವವೊಂದು ನನಗೆ ಕೊಡಬಾರದ ಕಾಟ ಕೊಡುತ್ತಿದೆ, ದೊಡ್ಡಬಳ್ಳಾಪುರದ ಸುನಿಲ್ ಎಂಬುವವರ ದೃಶ್ಯ ಕಣ್ಣ ಮುಂದೆ ಬರುತ್ತಿದೆ” ಎಂದು ಹೇಳುತ್ತಾ ಅತೀವವಾಗಿ ಚಡಪಡಿಸುತ್ತಿದ್ದರು. ಯಾರೋ ತನ್ನನ್ನು ಹಿಂಬಾಲಿಸುತ್ತಿದ್ದಾರೆ ಎಂಬ ಭಯ ಅವರನ್ನು ಪೀಡಿಸುತ್ತಿತ್ತು.
ಮಂತ್ರವಾದಿಗಳ ಮೊರೆ ಹೋದ ಕುಟುಂಬ
ಮಂಜುಳಾ ಅವರ ಈ ಸ್ಥಿತಿಯನ್ನು ಕಂಡು ಗಾಬರಿಗೊಂಡ ಪತಿ ರಮೇಶ್, ಕೆಲಸ ಕಾರ್ಯಗಳನ್ನು ಬಿಟ್ಟು ಕಳೆದ ಒಂದು ವಾರದಿಂದ ದೇವಸ್ಥಾನ ಮತ್ತು ಮಂತ್ರವಾದಿಗಳ ಬಳಿ ಅಲೆದಾಡಿದ್ದಾರೆ. ಮೇಲೂರಿನ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಕರೆದೊಯ್ದು, ಮಂತ್ರವಾದಿಯೊಬ್ಬರ ಬಳಿ ತಾಯತವನ್ನೂ ಕಟ್ಟಿಸಿದ್ದರು. ವೈದ್ಯರ ಬಳಿ ತೋರಿಸಿದರೂ ಯಾವುದೇ ಚಿಕಿತ್ಸೆ ಫಲಕಾರಿಯಾಗದೆ ಮಂಜುಳಾ ಮನೆಯಲ್ಲಿ ಕುಸಿದು ಬಿದ್ದು ಅಸ್ವಸ್ಥರಾಗಿದ್ದರು. ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಅವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಮಗಳ ಸಾವಿನ ಸುದ್ದಿ ತಿಳಿದ ಮಂಜುಳಾ ತಾಯಿ ಗಂಗಮ್ಮ, “ನಮಗೆ ಈ ವಿಷಯವನ್ನೇ ಮುಚ್ಚಿಡಲಾಗಿತ್ತು, ಮಗಳು ಸತ್ತ ನಂತರ ನಮಗೆ ತಿಳಿಸಿದ್ದಾರೆ” ಎಂದು ಪತಿ ರಮೇಶ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಮಂಜುಳಾ ಅವರಿಗೆ ಕಾಡಿದ್ದು ದೆವ್ವವೋ ಅಥವಾ ಮಾನಸಿಕ ಭ್ರಮೆಯೋ ಎಂಬುದು ನಿಗೂಢವಾಗಿದ್ದರೂ, ಅವರನ್ನು ಮಂತ್ರವಾದಿಗಳ ಬಳಿ ಕರೆದೊಯ್ಯುವ ಬದಲು ಮನೋರೋಗ ತಜ್ಞರ ಬಳಿ ಚಿಕಿತ್ಸೆ ಕೊಡಿಸಿದ್ದರೆ ಬಹುಶಃ ಅವರು ಬದುಕುಳಿಯುತ್ತಿದ್ದರೇನೋ ಎಂಬ ಮಾತುಗಳು ಕೇಳಿಬರುತ್ತಿವೆ. ಪ್ರಸ್ತುತ ನಂದಿಗಿರಿಧಾಮ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.