ಬೆಂಗಳೂರು:ಗೂಗಲ್ ಮ್ಯಾಪ್ ಅವಾಂತರ, ನಿಂತಿದ್ದ ಕಾರಿಗೆ ಲೋಡ್‌ ತುಂಬಿದ ಲಾರಿ ಗುದ್ದಿ ನಿದ್ದೆಯಲ್ಲಿದ್ದ ಯುವಕ ಸಜೀವ ದಹನ! | Bengaluru Tragic Accident Youth Dies After Truck Rams Car Sparks Massive Fire In Kurubarahalli Gdp

ಬೆಂಗಳೂರು:ಗೂಗಲ್ ಮ್ಯಾಪ್ ಅವಾಂತರ, ನಿಂತಿದ್ದ ಕಾರಿಗೆ ಲೋಡ್‌ ತುಂಬಿದ ಲಾರಿ ಗುದ್ದಿ ನಿದ್ದೆಯಲ್ಲಿದ್ದ ಯುವಕ ಸಜೀವ ದಹನ! | Bengaluru Tragic Accident Youth Dies After Truck Rams Car Sparks Massive Fire In Kurubarahalli Gdp



ಬೆಂಗಳೂರು:ಗೂಗಲ್ ಮ್ಯಾಪ್ ಅವಾಂತರ, ನಿಂತಿದ್ದ ಕಾರಿಗೆ ಲೋಡ್‌ ತುಂಬಿದ ಲಾರಿ ಗುದ್ದಿ ನಿದ್ದೆಯಲ್ಲಿದ್ದ ಯುವಕ ಸಜೀವ ದಹನ! | Bengaluru Tragic Accident Youth Dies After Truck Rams Car Sparks Massive Fire In Kurubarahalli Gdp

ಬೆಂಗಳೂರಿನ ಕುರುಬರಹಳ್ಳಿಯಲ್ಲಿ ಗೂಗಲ್ ಮ್ಯಾಪ್ ಅನುಸರಿಸಿ ಬಂದ ಓವರ್‌ಲೋಡ್ ಲಾರಿಯೊಂದು ನಿಯಂತ್ರಣ ತಪ್ಪಿ ನಿಂತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಈ ಭೀಕರ ಅಪಘಾತದಲ್ಲಿ ಕಾರಿನಲ್ಲೇ ಮಲಗಿದ್ದ 23 ವರ್ಷದ ಕ್ಯಾಬ್ ಚಾಲಕ ಸಜೀವ ದಹನವಾಗಿ ದಾರುಣವಾಗಿ ಸಾವನ್ನಪ್ಪಿದ್ದಾನೆ. ಈ ಘಟನೆಯು ನಿಷೇಧಿತ ಮಾರ್ಗಗಳಲ್ಲಿ ಭಾರೀ ವಾಹನಗಳ ಸಂಚಾರದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಬೆಂಗಳೂರು: ನಗರದ ಕುರುಬರಹಳ್ಳಿ ಪ್ರದೇಶದಲ್ಲಿ ತಡರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಯುವಕನೊಬ್ಬ ದಾರುಣವಾಗಿ ಸಾವನ್ನಪ್ಪಿದ ಘಟನೆ ಬೆಳಕಿಗೆ ಬಂದಿದೆ. ಲಾರಿಯ ನಿಯಂತ್ರಣ ತಪ್ಪಿ ನಿಂತಿದ್ದ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಭೀಕರ ಅಗ್ನಿ ಅವಘಡ ಸಂಭವಿಸಿದೆ. ರಾತ್ರಿ ಸುಮಾರು 1.30ರ ಸುಮಾರಿಗೆ ನಡೆದಿದೆ. ಆಂಧ್ರ ಪ್ರದೇಶದಿಂದ ಸುಂಕದಕಟ್ಟೆ ಕಡೆಗೆ ಕಬ್ಬಿಣ ತುಂಬಿಕೊಂಡು ಬರುತ್ತಿದ್ದ ಲಾರಿ, ಗೂಗಲ್ ಮ್ಯಾಪ್ ಮಾರ್ಗದರ್ಶನದಂತೆ ಕುರುಬರಹಳ್ಳಿ ಮಾರ್ಗವಾಗಿ ಸಾಗುತ್ತಿತ್ತು. ಆದರೆ ಈ ಮಾರ್ಗದಲ್ಲಿ ಇಳಿಜಾರು ರಸ್ತೆ ಇರುವುದರಿಂದ, ಈಗಾಗಲೇ ಓವರ್‌ಲೋಡ್ ಆಗಿದ್ದ ಲಾರಿ ನಿಯಂತ್ರಣ ತಪ್ಪಿದೆ.

ಗೂಗಲ್ ಮ್ಯಾಪ್ ತಂದ ಅವಾಂತರ

ಚಾಲಕ ಗೂಗಲ್ ಮ್ಯಾಪ್ ನೋಡಿಕೊಂಡು ಬರುತ್ತಿದ್ದ, ಗೂಗಲ್ ಮ್ಯಾಪ್ನಲ್ಲಿ ಕುರುಬರಹಳ್ಳಿ ಮುಖಾಂತರ ದಾರಿ ತೋರಿಸಿತ್ತು. ಕುರುಬರಹಳ್ಳಿ ಬಳಿಯಲ್ಲಿ ಬಹುತೇಕ ಇಳಿಜಾರು ರಸ್ತೆ ಇದೆ. ಹೀಗಾಗಿ ಇಳಿಜಾರಿನಲ್ಲಿ ಲೋಡ್ ತುಂಬಿದ ಲಾರಿ ಕಂಟ್ರೋಲ್‌ ಗೆ ಸಿಗದೆ ನಿಯಂತ್ರಣ ತಪ್ಪಿ, ಮನೆ ಮುಂದೆ ನಿಲ್ಲಿಸಲಾಗಿದ್ದ ಸಿಎನ್‌ಜಿ ಕಾರಿಗೆ ಭೀಕರವಾಗಿ ಡಿಕ್ಕಿ ಹೊಡೆದಿದ್ದು, ಡಿಕ್ಕಿಯ ತೀವ್ರತೆಯಿಂದ ಕಾರನ್ನು ಸುಮಾರು 50ರಿಂದ 100 ಮೀಟರ್ ದೂರವರೆಗೆ ಎಳೆದೊಯ್ದಿದೆ. ನಂತರ ಕಾರು ಸಮೀಪದಲ್ಲಿದ್ದ ಸ್ಕ್ರಾಪ್ ಗೋಡೌನ್‌ಗೆ ನುಗ್ಗಿದ್ದು, ಡಿಕ್ಕಿಯಿಂದ ಉಂಟಾದ ಸ್ಪಾರ್ಕ್‌ನಿಂದ ಕಾರು ಹಾಗೂ ಸ್ಕ್ರಾಪ್ ಸಾಮಗ್ರಿಗಳಿಗೆ ಬೆಂಕಿ ಹೊತ್ತಿಕೊಂಡಿದೆ. ಪರಿಣಾಮವಾಗಿ ಕಾರು ಮತ್ತು ಲಾರಿ ಎರಡೂ ಹೊತ್ತಿ ಉರಿದಿವೆ.

ಕಲಬುರಗಿ ಮೂಲದ ಯುವಕ ಮೃತ್ಯು

ಘಟನೆಯ ಸಮಯದಲ್ಲಿ ಕಾರಿನೊಳಗೆ ಮಲಗಿದ್ದ ಕಲಬುರಗಿ ಮೂಲದ ಅಂಬದಾಸ್ (23) ಎಂಬ ಯುವಕ ಬೆಂಕಿಯಲ್ಲಿ ಸಿಲುಕಿ ದಾರುಣವಾಗಿ ಸಾವನ್ನಪ್ಪಿದ್ದಾನೆ. ಅಗ್ನಿಶಾಮಕ ಸಿಬ್ಬಂದಿ ಮೃತದೇಹವನ್ನು ಹೊರತೆಗೆದಲು ಸಾಕಷ್ಟು ಹರಸಾಹಸ ಪಟ್ಟಿದ್ದಾರೆ. ಐದಾರು ಅಗ್ನಿಶಾಮಕ ವಾಹನಗಳ ಸಹಾಯದಿಂದ ಬೆಂಕಿಯನ್ನು ನಂದಿಸಲಾಯಿತು.

ಲಾರಿ ಚಾಲಕ ಶರ್ಮಾ ಅಪಘಾತ ಸಂಭವಿಸುತ್ತಿದ್ದಂತೆಯೇ ಲಾರಿಯಿಂದ ಜಿಗಿದು ಸಮೀಪದ ರಾಜಾಕಾಲುವೆಗೆ ಹಾರಿ ತನ್ನ ಜೀವವನ್ನು ಉಳಿಸಿಕೊಂಡಿದ್ದಾನೆ. ಆತನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಪ್ರಕರಣ ಸಂಬಂಧ ರಾಜಾಜಿನಗರ ಸಂಚಾರಿ ಪೊಲೀಸರು ಚಾಲಕನನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ.

ಮೃತ ಅಂಬದಾಸ್ ಕುರುಬರಹಳ್ಳಿಯಲ್ಲೇ ಕುಟುಂಬ ಸಮೇತ ವಾಸವಾಗಿದ್ದು, ಡಿಗ್ರಿ ಪೂರ್ಣಗೊಳಿಸಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದನು. ನಂತರ ಸ್ವಂತವಾಗಿ ಕ್ಯಾಬ್‌ ಖರೀದಿಸಿ ಡ್ರೈವಿಂಗ್ ವೃತ್ತಿಗೆ ಇಳಿದಿದ್ದನು. ಲೋನ್ ಪಡೆದು ಕಾರು ಖರೀದಿಸಿದ್ದರಿಂದ ಪ್ರತಿ ತಿಂಗಳು ₹25 ಸಾವಿರ ಇಎಮ್‌ಐ ಕಟ್ಟಬೇಕಾಗಿತ್ತು. ಹಗಲು-ರಾತ್ರಿ ದುಡಿದು ಸಾಲ ತೀರಿಸಲು ಶ್ರಮಿಸುತ್ತಿದ್ದನು.

ಏರ್ಪೋರ್ಟ್ ಡ್ಯೂಟಿ ಬರಬಹುದು ಎಂಬ ನಿರೀಕ್ಷೆದ್ದ ಚಾಲಕ

ಘಟನೆ ನಡೆದ ರಾತ್ರಿ ಕೂಡ ಒಂದು ಡ್ಯೂಟಿ ಮುಗಿಸಿ ಮತ್ತೊಂದು ಡ್ಯೂಟಿಗಾಗಿ ಕಾಯುತ್ತಾ ಕಾರಿನಲ್ಲೇ ಮಲಗಿದ್ದಾಗ ಈ ದುರ್ಘಟನೆ ನಡೆದಿದೆ. ಮನೆಯ ಬಳಿಯೇ ಕಾರು ನಿಲ್ಲಿಸಿಕೊಂಡಿದ್ದರೂ, ಏರ್ಪೋರ್ಟ್ ಡ್ಯೂಟಿ ಬರಬಹುದು ಎಂಬ ನಿರೀಕ್ಷೆಯಲ್ಲಿ ಹೊರಗೆ ಹೋಗದೆ ಕಾರಿನಲ್ಲೇ ವಿಶ್ರಾಂತಿ ಪಡೆಯುತ್ತಿದ್ದನು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಈ ವರ್ಷವೇ ಮಗನ ಮದುವೆ ಮಾಡುವ ಯೋಜನೆ ಮಾಡಿಕೊಂಡಿದ್ದ ಕುಟುಂಬಸ್ಥರು, ಮುಂದಿನ ತಿಂಗಳು ಹೆಣ್ಣು ನೋಡಲು ಮಾತುಕತೆ ನಡೆಸಿದ್ದರು. ಆದರೆ ಈ ದುರಂತದಿಂದ ಅವರ ಎಲ್ಲಾ ಕನಸುಗಳು ಚೂರುಚೂರಾಗಿವೆ.

ಮೃತನ ತಾಯಿ ಶಾಂತಾಬಾಯಿ ದುಃಖ ತಡೆಯಲಾಗದೆ ಕಣ್ಣೀರಿಡುತ್ತಾ, “ನನ್ನ ಮಗ ಡಿಗ್ರಿ ಓದಿ ಕೆಲಸ ಮಾಡುತ್ತಿದ್ದ. ಆದರೆ ಡ್ರೈವಿಂಗ್ ಮಾಡಬೇಕು ಎಂದು ಕ್ಯಾಬ್ ತೆಗೆದುಕೊಂಡ. ಒಂದು ಡ್ಯೂಟಿ ಮುಗಿಸಿ ಇನ್ನೊಂದು ಕಾಯುತ್ತಿದ್ದ. ರಾತ್ರಿ ಒಂದು ಗಂಟೆ ಸುಮಾರಿಗೆ ಲಾರಿ ಬಂದು ಡಿಕ್ಕಿ ಹೊಡೆದಿದೆ. ನನ್ನ ಮಗನ ದೇಹವೇ ಪತ್ತೆಯಾಗುತ್ತಿಲ್ಲ, ಏನು ಮಾಡಬೇಕು” ಎಂದು ಆಕ್ರಂದನ ವ್ಯಕ್ತಪಡಿಸಿದ್ದಾರೆ.

ಅಪಘಾತದ ಸ್ಥಳಕ್ಕೆ ಮಹಾಲಕ್ಷ್ಮೀ ಲೇಔಟ್ ಶಾಸಕ ಗೋಪಾಲಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದು, ನಿಷೇಧಿತ ಮಾರ್ಗಗಳಲ್ಲಿ ಓವರ್‌ಲೋಡ್ ವಾಹನಗಳ ಸಂಚಾರದ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ.

ಒಟ್ಟಾರೆ, ಗೂಗಲ್ ಮ್ಯಾಪ್ ಮಾರ್ಗದರ್ಶನ, ಓವರ್‌ಲೋಡ್ ಲಾರಿ ಹಾಗೂ ಇಳಿಜಾರು ರಸ್ತೆಯ ಸಂಯೋಗದಿಂದ ಸಂಭವಿಸಿದ ಈ ದುರಂತ, ಅಮಾಯಕ ಯುವಕನ ಪ್ರಾಣವನ್ನು ಬಲಿ ಪಡೆದಿದೆ.



Source link

Leave a Reply

Your email address will not be published. Required fields are marked *