
ಸೋಶಿಯಲ್ ಮೀಡಿಯಾದಲ್ಲಿ ‘ಧುರಂಧರ್’ ಸಿನಿಮಾ ಬಗ್ಗೆ ಹೊಸ ಚರ್ಚೆಯೊಂದು ಶುರುವಾಗಿದೆ. ಇತ್ತೀಚೆಗೆ ಪಾಕಿಸ್ತಾನಿ ವ್ಯಕ್ತಿಯೊಬ್ಬರ ವಿಡಿಯೋ ವೈರಲ್ ಆಗಿದ್ದು, ಅವರು ಚಿತ್ರದ ಕಥೆ, ಪಾತ್ರಗಳು ಮತ್ತು ವಾಸ್ತವದ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ.
‘ಧುರಂಧರ್’ ಮತ್ತು ‘ಧುರಂಧರ್ 2’ ಎರಡೂ ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಸುನಾಮಿಯನ್ನೇ ಸೃಷ್ಟಿಸಿವೆ. ಆದಿತ್ಯ ಧರ್ ನಿರ್ದೇಶನದ ಈ ಚಿತ್ರವನ್ನು ಇಡೀ ಜಗತ್ತೇ ಮೆಚ್ಚಿಕೊಂಡಿದೆ. ಆದರೆ, ಇತ್ತೀಚೆಗೆ ಪಾಕಿಸ್ತಾನದ ವ್ಯಕ್ತಿಯೊಬ್ಬರು ಈ ಸಿನಿಮಾವನ್ನು ‘ಓವರ್‌ರೇಟೆಡ್’ ಎಂದು ಕರೆದಿದ್ದಾರೆ. ಇನ್‌ಸ್ಟಾಗ್ರಾಂ ಇನ್‌ಫ್ಲುಯೆನ್ಸರ್ ರೋಹನ್ ಭಾಟಿಯಾ ಅವರು ಬಾಲಿಯಲ್ಲಿ ಪಾಕಿಸ್ತಾನಿ ವ್ಯಕ್ತಿಯೊಬ್ಬರನ್ನು ಭೇಟಿಯಾಗಿದ್ದರು. ಈ ವೇಳೆ ಅವರು ‘ಧುರಂಧರ್’ ಚಿತ್ರದ ಬಗ್ಗೆ ಅಭಿಪ್ರಾಯ ಕೇಳಿದ್ದಾರೆ. ಆ ವ್ಯಕ್ತಿ, ಸಿನಿಮಾ ಸ್ವಲ್ಪ ಓವರ್‌ರೇಟೆಡ್ ಅನಿಸಿತು ಮತ್ತು ಕೆಲವು ದೃಶ್ಯಗಳು ತಮಾಷೆಯಾಗಿದ್ದವು ಎಂದು ಹೇಳಿರುವ ವಿಡಿಯೋ ಈಗ ವೈರಲ್ ಆಗಿದೆ.
ಲಿಯಾರಿ ಬಗ್ಗೆ ಎತ್ತಿದ ಪ್ರಶ್ನೆ
ಸಿನಿಮಾದಲ್ಲಿ ಬರುವ ಕರಾಚಿಯ ಲಿಯಾರಿ (Lyari) ಪ್ರದೇಶದ ದೃಶ್ಯಗಳು ಮತ್ತು ಸಂಭಾಷಣೆ ಬಗ್ಗೆ ಪಾಕಿಸ್ತಾನಿ ವ್ಯಕ್ತಿ ಮಾತನಾಡಿದ್ದಾರೆ. “ಲಿಯಾರಿಯನ್ನು ಕಂಟ್ರೋಲ್ ಮಾಡುವವನು ಕರಾಚಿಯನ್ನು ಕಂಟ್ರೋಲ್ ಮಾಡುತ್ತಾನೆ’ ಅನ್ನೋ ಡೈಲಾಗ್ ನಮಗೆ ಬಹಳ ತಮಾಷೆ ಅನಿಸಿತು. ನಿಜ ಹೇಳಬೇಕೆಂದರೆ, ಕರಾಚಿಯಿಂದ ಇಡೀ ಪಾಕಿಸ್ತಾನವನ್ನು ಕಂಟ್ರೋಲ್ ಮಾಡಲು ಸಾಧ್ಯವಿಲ್ಲ,” ಎಂದು ಅವರು ಹೇಳಿದ್ದಾರೆ. ಲಿಯಾರಿಯಲ್ಲಿ ಗ್ಯಾಂಗ್ ವಾರ್ ನಡೆಯುವುದು ನಿಜವಾದರೂ, ಸಿನಿಮಾದಲ್ಲಿ ಅದನ್ನು ಬಹಳ ಉತ್ಪ್ರೇಕ್ಷೆ ಮಾಡಿ ತೋರಿಸಲಾಗಿದೆ ಎಂದು ಅವರು ಒಪ್ಪಿಕೊಂಡಿದ್ದಾರೆ.
ಸಾರಾ ಅರ್ಜುನ್ ಲುಕ್ ಬಗ್ಗೆ ಕಾಮೆಂಟ್
ಪಾಕಿಸ್ತಾನಿ ವ್ಯಕ್ತಿ, ಚಿತ್ರದಲ್ಲಿನ ಸಾರಾ ಅರ್ಜುನ್ ಪಾತ್ರದ ಬಗ್ಗೆಯೂ ಪ್ರಶ್ನೆ ಎತ್ತಿದ್ದಾರೆ. “ಲಿಯಾರಿಯ ಬೀದಿಗಳಲ್ಲಿ ಮಿನಿ ಸ್ಕರ್ಟ್ ಹಾಕಿಕೊಂಡು ಓಡಾಡುವುದು ಅಸಾಧ್ಯ,” ಎಂದು ಅವರು ಹೇಳಿದ್ದಾರೆ. ಅವರ ಜೊತೆಗಿದ್ದ ಮಹಿಳೆಯೂ ಇದನ್ನು ಒಪ್ಪಿಕೊಂಡು, “ಅಲ್ಲಿ ಆ ರೀತಿಯ ಬಟ್ಟೆ ಧರಿಸಿ ಒಬ್ಬಂಟಿಯಾಗಿ ಓಡಾಡುವುದು ವಾಸ್ತವಕ್ಕೆ ದೂರವಾದದ್ದು,” ಎಂದಿದ್ದಾರೆ.
ಹಾಡು ಮತ್ತು ಇತರ ಡೀಟೇಲ್ಸ್ ಬಗ್ಗೆಯೂ ಆಕ್ಷೇಪ
ಆ ವ್ಯಕ್ತಿ, “ಚಿತ್ರದ ‘FA9LA’ ಹಾಡು ಚೆನ್ನಾಗಿದೆ, ಆದರೆ ಅದು ಬಲೋಚಿ ಹಾಡಲ್ಲ,” ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, “ಸಿನಿಮಾದಲ್ಲಿ ರಣವೀರ್ ಸಿಂಗ್ ಹಾಫ್ ಸ್ಲೀವ್ ಕುರ್ತಾ ಧರಿಸಿದ್ದಾರೆ. ಆದರೆ ಲಿಯಾರಿಯಲ್ಲಿ ಯಾರೂ ಆ ರೀತಿ ಬಟ್ಟೆ ಹಾಕುವುದಿಲ್ಲ,” ಎಂದೂ ಅವರು ತಿಳಿಸಿದ್ದಾರೆ. ಜೊತೆಗೆ, ಸಿನಿಮಾದಲ್ಲಿ ಮಂತ್ರಿಯೊಬ್ಬರ ಮಗಳನ್ನು ಹೀರೋ ಕರೆದೊಯ್ಯುವ ದೃಶ್ಯವನ್ನು ‘ಅಸಾಧ್ಯ’ ಎಂದು ಕರೆದಿದ್ದಾರೆ. “ಇದನ್ನು ಕೇವಲ ನಾಟಕೀಯ ಪರಿಣಾಮಕ್ಕಾಗಿ ತೋರಿಸಲಾಗಿದೆ,” ಎಂಬುದು ಅವರ ಅಭಿಪ್ರಾಯ. ಆದಾಗ್ಯೂ, ಅವರು ಚಿತ್ರದ ಹಾಡುಗಳು ಮತ್ತು ಸಿನಿಮಾಟೋಗ್ರಫಿಯನ್ನು ಹೊಗಳಿದ್ದಾರೆ.
‘ಧುರಂಧರ್ 2’ ಗಳಿಕೆ
‘ಧುರಂಧರ್’ ಹಿಟ್ ಆದ ನಂತರ ಅದರ ಎರಡನೇ ಭಾಗ ‘ಧುರಂಧರ್ 2’ ಬಿಡುಗಡೆಯಾಗಿದೆ. ಈ ಚಿತ್ರವು ಒಂದು ವಾರದಲ್ಲಿ ವಿಶ್ವಾದ್ಯಂತ 1000 ಕೋಟಿ ರೂಪಾಯಿಗೂ ಹೆಚ್ಚು ಗಳಿಕೆ ಮಾಡಿದೆ. ಭಾರತದಲ್ಲಿ ಈ ಚಿತ್ರದ ಒಟ್ಟು ನೆಟ್ ಕಲೆಕ್ಷನ್ 674.17 ಕೋಟಿ ರೂಪಾಯಿ ಮತ್ತು ಗ್ರಾಸ್ ಕಲೆಕ್ಷನ್ 805.32 ಕೋಟಿ ರೂಪಾಯಿ ಆಗಿದೆ.