
ಫೇಸ್ಬುಕ್, ವ್ಯಾಟ್ಸಾಪ್‌ಗೆ ಆಧಾರ್ ವೆರಿಫಿಕೇಶನ್ ನಿಯಮ, ಸಂಸದೀಯ ಸಮಿತಿ ಮಹತ್ವದ ಪ್ರಸ್ತಾವನೆ, ಆಧಾರ್ ಕಾರ್ಡ್ ಲಿಂಕ್ ಮಾಡಬೇಕಾದ ಅನಿವಾರ್ಯತೆ ಹಲವೆಡೆ ಇದೆ. ಇದೀಗ ಸೋಶಿಯಲ್ ಮೀಡಿಯಾಕೂ ಇದು ಅನಿವಾರ್ಯವಾಗುತ್ತಿದೆ.
ನವದೆಹಲಿ (ಮಾ.27) ವ್ಯಾಟ್ಸಾಪ್, ಫೇಸ್‌ಬುಕ್, ಇನ್‌ಸ್ಟಾಗ್ರಾಂ ಸೇರಿದಂತೆ ಸೋಶಿಯಲ್ ಮೀಡಿಯಾ ಬಳಕೆ ಮಾಡಲು, ಪೋಸ್ಟ ಮಾಡಲು ಅಥವಾ ಮುಂದುವರಿಯಲು ಇನ್ನು ಆಧಾರ್ ಕಾರ್ಡ್ ನಂಬರ್, ಮತದಾರ ಗುರುತಿನ ಚೀಟಿ ಸೇರಿದಂತೆ ಸರ್ಕಾರದ ಅಧಿಕೃತ ಐಡಿ ಕಾರ್ಡ್ ವೆರಿಫಿಕೇಶನ್ ಮಾಡುವುದು ಕಡ್ಡಾಯವಾಗಲಿದೆ.ಸಂಸದೀಯ ಮಂಡಳಿ ಮಹತ್ವದ ಪ್ರಸ್ತಾವನೆ ಮುಂದಿಟ್ಟಿದೆ. ಸೋಶಿಯಲ್ ಮೀಡಿಯಾ ಬಳಕೆಗೆ ಕಡ್ಡಾಯ ಕೆವೈಸಿ ನಿಯಮ ಜಾರಿಗೆ ತರಲು ಮುಂದಾಗಿದೆ. ಈ ಕುರಿತ ಪ್ರಸ್ತಾವನೆಯನ್ನು ಸಂಸದೀಯ ಸಮಿತಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದೆ.
ಸೋಶಿಯಲ್ ಮೀಡಿಯಾ ಬಳಕೆಗೆ ಆಧಾರ್ ಕಾರ್ಡ್ ಯಾಕೆ?
ಫೇಸ‌್‌ಬುಕ್ ಸೇರಿದಂತೆ ಸೋಶಿಯಲ್ ಮೀಡಿಯಾ ಬಳಕೆ ಆಧಾರ ಕಾರ್ಡ್ ಸೇರಿದಂತೆ ಇತರ ಸರ್ಕಾರಿ ಕಾರ್ಡ್ ವೆರಿಫಿಕೇಶನ್ ಕಡ್ಡಾಯಗೊಳಿಸಲು ಕಾರಣವೇನು ಅನ್ನೋ ಕುರಿತು ಪ್ರಸ್ತಾವನೆಯಲ್ಲಿ ಹೇಳಲಾಗಿದೆ. ಹೆಚ್ಚಾಗುತ್ತಿರುವ ಸೈಬರ್ ಕ್ರೈಂ, ಸೋಶಿಯಲ್ ಮೀಡಿಯಾಗಳಿಂದ ಹೆಚ್ಚಾಗುತ್ತಿರುವ ಅಪಾಯಗಳನ್ನು ತಪ್ಪಿಸಲು ಈ ಪ್ರಸ್ತಾವನೆ ಸಲ್ಲಿಸಲಾಗಿದೆ. ಫೇಕ್ ಐಡಿ ಮೂಲಕ ನಿಯಮ ಉಲ್ಲಂಘಿಸುವವರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಈ ರೀತಿಯ ಪ್ರಕರಣ ನಿಯಂತ್ರಿಸಲು ಸರ್ಕಾರಿ ಅಧಿಕೃತ ಐಡಿ ಕಾರ್ಡ್ ವೆರಿಫಿಕೇಶನ್ ಮಾಡಿಸುವುದು ಕಡ್ಡಾಯ ಮಾಡಲು ಪ್ರಸ್ತಾವನೆಯಲ್ಲಿ ಸೂಚಿಸಿದೆ.
ಎಲ್ಲಾ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ ಹಾಗೂ ಗೇಮಿಂಗ್ ಪ್ಲಾಟ್‌ಫಾರ್ಮ್‌ಗೆ ಕೆವೈಸಿ ಕಡ್ಡಾಯ ಮಾಡಲು ಸಂಸದೀಯ ಮಂಡಳಿ ಸೂಚನೆ ನೀಡಿದೆ. ಸೋಶಿಯಲ್ ಮೀಡಿಯಾಗಳಾದ ಫೇಸ್‌ಬುಕ್, ವ್ಯಾಟ್ಸಾಪ್, ಇನ್‌ಸ್ಟಾಗ್ರಾಂ, ಯೂಟ್ಯೂಬ್, ಎಕ್ಸ್ ಸೇರಿದಂತೆ ಪ್ರಮುಖ ತಾಣಗಳು ಸೇರಿದೆ. ಇದು ಹೊಸ ಬಳಕೆದಾರರಿಗೆ ಮಾತ್ರವಲ್ಲ, ಈಗಾಗಲೇ ಖಾತೆ ಹೊಂದಿರುವ ಬಳಕೆದಾರರಿಗೂ ಇದು ಅನ್ವಯವಾಗಲಿದೆ.
ವಯಸ್ಸು ವೇರಿಫಿಕೇಶನ್ ಕಡ್ಡಾಯ
ಸಂಸದೀಯ ಮಂಡಳಿ ಸಲ್ಲಿಸಿದ ಪ್ರಸ್ತಾವನೆಯಲ್ಲಿ ಸೋಶಿಯಲ್ ಮೀಡಿಯಾ ಬಳಕೆ ಮಾಡುವ ವ್ಯಕ್ತಿ ತಮ್ಮ ವಯಸ್ಸಿನ ದೃಢೀಕರಣ ಮಾಡಬೇಕು. ಈ ಮೂಲಕ ಮಕ್ಕಳು, ಅಪ್ರಾಪ್ತರು ಸೋಶಿಯಲ್ ಮೀಡಿಯಾ ಬಳಕೆಯಿಂದ ಆಗುತ್ತಿರುವ ದುರ್ಘಟನೆಗಳು, ಅಪಾಯಗಳನ್ನು ತಪ್ಪಿಸಲು ಹಾಗೂ ನಿರ್ಬಂಧಿಸಲು ನೆರವಾಗಲಿದೆ.
ಕೆವೈಸಿ ದೃಢೀಕರಣ ಬಳಿಕ ನಿಯಮ ಉಲ್ಲಂಘಿಸಿದರೆ ಖಾತೆ ಬ್ಲಾಕ್ ಆಗಲಿದೆ. ಬಳಿಕ ಸಕ್ರೀಯಗೊಳಿಸಲು ಮತ್ತೆ ಕೆವೈಸಿ ಪೂರ್ಣಗೊಳಿಸಬೇಕು. ಇನ್ನು ಆಧಾರ್ ಸೇರಿದಂತೆ ಯಾವುದಾದರು ಸರ್ಕಾರಿ ಅಧಿಕೃತ ಗುರುತಿನ ಚೀಟಿ ಮೂಲಕ ಮಾಡುವ ಕೆವೈಸಿ ಕಾಲ ಕಾಲಕ್ಕೆ ತಕ್ಕಂತೆ ನವೀಕರಣ ಮಾಡಬೇಕು. ಈ ಮೂಲಕ ನಕಲಿ ಖಾತೆ, ಅಸಂಬದ್ಧ ಕಮೆಂಟ್, ಸೋಶಿಯಲ್ ಮೀಡಿಯಾ ಮೂಲಕ ಪ್ರಚೋದನೆ, ನಿಯಮ ಉಲ್ಲಂಘನೆಗಳ ಪ್ರಕರಣಗಳನ್ನು ನಿಯಂತ್ರಿಸುವುದು, ಸೈಬರ್ ಕ್ರೈಂ ಸೇರಿದಂತೆ ಅಪರಾಧಗಳನ್ನು ತಡೆಯುವ ಪ್ರಮುಖ ಗುರಿ ಇಟ್ಟಕೊಂಡಿದೆ.