
Kipi Keerthi Love Story: ಸೋಶಿಯುಲ್ ಮೀಡಿಯಾ ಇನ್ಫ್ಲುಯೆನ್ಸರ್ ಕಿಪಿ ಕೀರ್ತಿಯ ಪ್ರೇಮ ಪ್ರಕರಣದಲ್ಲಿ ಬಿಲ್ಡಪ್ ಕೊಟ್ಟಿದ್ದ ಮುತ್ತು ಅಲಿಯಾಸ್ ಬ್ಲಾಕ್ ಕೋಬ್ರಾನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ತುಮಕೂರು: ಸಾಮಾಜಿಕ ಜಾಲತಾಣದಲ್ಲಿ ತನ್ನ ವಿಶೇಷ ನಗು ಮತ್ತು ಮಾತುಗಳಿಂದಲೇ ಗಮನ ಸೆಳೆದಿರುವ ಕಿಪಿ ಕೀರ್ತಿ ಪ್ರೇಮ ಪ್ರಕರಣ ಸಾಕಷ್ಟು ಸಂಚಲನ ಸೃಷ್ಟಿಸಿತ್ತು. ಕಿಪಿ ಕೀರ್ತಿಗಾಗಿ ಬಿಲ್ಡಪ್ ಕೊಟ್ಟು ರೀಲ್ಸ್ ಮಾಡಿದ್ದ ಮುತ್ತು ಅಲಿಯಾಸ್ ಬ್ಲಾಕ್ ಕೋಬ್ರಾ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದು ಬುದ್ದಿ ಹೇಳಿ ಕಳುಹಿಸಿದ್ದಾರೆ. ಕೈಯಲ್ಲಿ ಚಾಕು ಹಿಡಿದುಕೊಂಡು ರೀಲ್ಸ್ ಮಾಡಿದ್ದ ಮುತ್ತು ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಮಿಡಿಗೇಶಿ ಹೊಬಳಿಯ ಹೊಸಕೆರೆ ಮೂಲದ ಮುತ್ತು, ಕ್ಯಾತ್ಸಂದ್ರ ಬಳಿ ಕಡಲೆಕಾಯಿ ವ್ಯಾಪಾರ ಮಾಡಿಕೊಂಡಿದ್ದನು. ಈ ವ್ಯಾಪಾರದ ಜೊತೆಯಲ್ಲಿ ರೀಲ್ಸ್ ಮಾಡಿಕೊಂಡಿದ್ದನು.
ಕಿಪಿ ಕೀರ್ತಿ ಹೆಸರೇಳಿದರೇ ನಾಲಿಗೆ ಕತ್ತರಿಸುತ್ತೇನೆ ಎಂದು ಚಾಕು ಹಿಡಿದು ಬಿಲ್ಡಪ್ ಕೊಟ್ಟಿದ್ದನು. ಇದರ ಜೊತೆಯಲ್ಲಿಯೇ ಕಿಪಿ ಕೀರ್ತಿ ವಿಚಾರವಾಗಿ ಒಂದಿಷ್ಟು ವಿಡಿಯೋಗಳನ್ನು ಮಾಡಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿಕೊಂಡಿದ್ದನು. ಚಾಕು ಹಿಡಿದ ವಿಡಿಯೋ ವೈರಲ್ ಆಗಿತ್ತು. ಈ ವಿಡಿಯೋ ನೋಡಿದ ಕ್ಯಾತ್ಸಂದ್ರ ಪೊಲೀಸರು ಸುಮೋಟೊ ಪ್ರಕರಣ ದಾಖಲಿಸಿಕೊಂಡಿದ್ದರು.
ಕ್ಷಮೆ ಹೇಳಿಕೆ ದಾಖಲಿಸಿದ ಮುತ್ತು!
ಮುತ್ತನನ್ನು ಠಾಣೆಗೆ ಕರೆಸಿ ಪೊಲೀಸರು ಮತ್ತೊಮ್ಮೆ ಈ ರೀತಿ ವಿಡಿಯೋ ಮಾಡದಂತೆ ಎಚ್ಚರಿಕೆ ನೀಡಿದ್ದಾರೆ. ಮತ್ತೊಮ್ಮೆ ಚಾಕು ಹಿಡಿದು ಈ ರೀಲ್ಸ್ ಮಾಡೋದಿಲ್ಲ ಎಂದು ಮುತ್ತು ಪೊಲೀಸರ ಮುಂದೆ ಹೇಳಿಕೆಯನ್ನು ದಾಖಲಿಸಿದ್ದಾನೆ. ಹೇಳಿಕೆ ದಾಖಲಿಸಿಕೊಂಡ ಪೊಲೀಸರು ಮುತ್ತನನ್ನು ಬಿಟ್ಟು ಕಳುಹಿಸಿದ್ದಾರೆ.
ವೈರಲ್ ವಿಡಿಯೋದಲ್ಲಿ ಏನಿತ್ತು?
ಏಯ್ ಕಪ್ಪೆ, ನರಸೇಪುರದ ಸುನಿಲ್ ಕಪ್ಪೆ. ಏನೋ ನಿಂದು, ಯಾರನ್ನ ಮೂಟೆ ಕಟ್ಟಿ ಹಾಕ್ತಿನಿ ಅಂತ ಹೇಳ್ತಿದ್ದೀಯಾ? ಜಾಸ್ತಿ ಮಾಡ್ತಿದ್ದೀಯಾ? ತುಮಕೂರಿಗೆ ಬಂದು ಮುತ್ತು ಬ್ಲಾಕ್ ಕೋಬ್ರಾ ಯಾರು ಅಂತ ಕೇಳು? ತುಮಕೂರಿನ ಜನ ನನ್ನ ಹಿಸ್ಟರಿ ಹೇಳುತ್ತಾರೆ. ನನ್ನ ಹೆಸರು ಕೇಳಿದ್ರೆ ನೀನು ದಂಗಾಗಿ ಹೋಗ್ತಿಯಾ. ತುಮಕೂರಿಗೆ ಬಂದ್ರೆ ನಿನ್ನನ್ನು ಚುಚ್ಚಿ ಸಾಯಿಸ್ತೀನಿ. ತುಮಕೂರಿಗೆ ಬಂದಾಗ ನನ್ನ ಕೈಗೆ ಸಿಕ್ಕರೆ ನೀನು ಫಿನಿಶ್. ಇನ್ನೊಮ್ಮೆ ಕಿಪಿ ಕೀರ್ತಿ ಹೆಸರು ಹೇಳಿದರೆ ನಿನ್ನ ನಾಲಿಗೆ ಕತ್ತರಿಸುತ್ತೇನೆ. ಉಸಿರಾಡೋಕ್ಕೆ ಆಗದಂತೆ ಕೊಂದು ಮೂಟೆ ಕಟ್ಟಿ ಸಕಲೇಶಪುರಕ್ಕೆ ಬಂದು ಹೇಮಾವತಿ ನದಿಗೆ ಎಸೆಯುತ್ತೇನೆ ಎಂದು ಮುತ್ತು ಜೀವ ಬೆದರಿಕೆ ಹಾಕಿದ್ದನು.