
Bangalore school student punishment case ಶಾಲೆಗೆ ತಡವಾಗಿ ಬಂದ ವಿದ್ಯಾರ್ಥಿಗಳಿಗೆ ಬಸ್ಕಿ ಹೊಡೆಸಿದ ಆರೋಪದ ಮೇಲೆ ಬೆಂಗಳೂರಿನ ಟೆಕ್ನೋ ಶಾಲೆಯ ಪ್ರಾಂಶುಪಾಲೆ ಮತ್ತು ಮೂವರು ಶಿಕ್ಷಕರ ವಿರುದ್ಧ ದಾಖಲಾಗಿದ್ದ ಎಫ್‌ಐಆರ್‌ಗೆ ಹೈಕೋರ್ಟ್ ತಡೆ ನೀಡಿದೆ. ಏನಿದು ಪ್ರಕರಣ? ಪೂರ್ಣ ವರದಿ ಇಲ್ಲಿದೆ.
ಬೆಂಗಳೂರು (ಮಾ.28) ವಿದ್ಯಾರ್ಥಿಗಳು ಶಾಲೆಗೆ ತಡವಾಗಿ ಬಂದಿದ್ದಕ್ಕೆ ಬಸ್ಕಿ ಹೊಡೆಸುವ ಮತ್ತು ಶಾಲೆಯ ಆವರಣ ಸುತ್ತು ಹಾಕುವ ಶಿಕ್ಷೆ ನೀಡಿದ ಆರೋಪದ ಮೇಲೆ ಪ್ರಾಂಶುಪಾಲೆ ಮತ್ತು ಇತರೆ ಮೂವರ ವಿರುದ್ಧ ದಾಖಲಾಗಿದ್ದ ಎಫ್‌ಐಆರ್‌ಗೆ ಹೈಕೋರ್ಟ್ ಶುಕ್ರವಾರ ತಡೆ ನೀಡಿದೆ.
ತಮ್ಮ ವಿರುದ್ಧದ ಪ್ರಕರಣ ರದ್ದುಪಡಿಸುವಂತೆ ಕೋರಿ ಬೆಂಗಳೂರಿನ ಟೆಕ್ನೋ ಶಾಲೆಯ ಪ್ರಾಂಶುಪಾಲೆ ಮೀನಾಕ್ಷಿ ವಿನೋಧಿನಿ, ಶಿಕ್ಷಕರಾದ ರಾಯಚೋಟಿ ನರೇಶ್, ಕೆ.ಭರತ್ ಕುಮಾರ್ ಮತ್ತು ಎಸ್.ಶ್ರೀನಿವಾಸ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಈ ಆದೇಶ ಮಾಡಿದೆ.
ಪ್ರಕರಣವೇನು?
ಬೆಂಗಳೂರಿನ ಯಲಹಂಕ ಉಪನಗರದ ತಿರುಮಲನಗರದಲ್ಲಿರುವ ಚೈತನ್ಯ ಟೆಕ್ನೋ ಶಾಲೆಯ ಏಳನೇ ತರಗತಿಯಿಂದ 10ನೇ ತರಗತಿಯ ಏಳು ವಿದ್ಯಾರ್ಥಿಗಳು 2026ರ ಮಾ.13ರಂದು ತಡವಾಗಿ ಶಾಲೆಗೆ ಬಂದಿದ್ದರು. ಇದರಿಂದ ಅವರನ್ನು ತರಗತಿಗೆ ಸೇರಿಸದೆ ಆವರಣದಲ್ಲಿ ನಿಲ್ಲಿಸಲಾಗಿತ್ತು ಹಾಗೂ ಬಸ್ಕಿ ಹೊಡೆಸಲಾಯಿತು ಎಂಬ ಬಗ್ಗೆ ಶಾಲೆಯ ಪ್ರಾಂಶುಪಾಲೆ ಮೀನಾಕ್ಷಿ ವಿನೋಧಿನಿ, ನರೇಶ್, ಭೌತಶಾಸ್ತ್ರ ಶಿಕ್ಷಕ ಭರತ್, ಗಣಿತ ಶಿಕ್ಷಕ ಶ್ರೀನಿವಾಸ್ ಅವರ ಮೇಲಿತ್ತು. ಇದರ ಆಧಾರದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ದೂರು ನೀಡಿದ್ದರು. ಅದನ್ನು ಆಧರಿಸಿ ಯಲಹಂಕ ನ್ಯೂ ಟೌನ್ ಪೊಲೀಸರು ನಾಲ್ವರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು.
ಇದರಿಂದ ಎಫ್ಐಆರ್ ರದ್ದು ಕೋರಿ ಹೈಕೋರ್ಟ್ ಮೊರೆ ಹೋಗಿರುವ ಅರ್ಜಿದಾರರು, ತಾವು ಮಕ್ಕಳಿಗೆ ಯಾವುದೇ ಶಿಕ್ಷೆ ನೀಡಿಲ್ಲ. ಪೋಷಕರನ್ನು ಕರೆದುಕೊಂಡು ಬರುವಂತೆ ಶಿಕ್ಷಕರು ಸೂಚಿಸಲಾಗಿತ್ತಷ್ಟೆ. ನಮ್ಮ ವಿರುದ್ಧ ದೂರು ನೀಡುವಂತೆ ಮಕ್ಕಳಿಗೆ ಬಲವಂತ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ಸರ್ಕಾರಿ ಅಭಿಯೋಜಕರು, ಅರ್ಜಿದಾರರ ವಿರುದ್ಧ ಬಲವಂತದ ಕ್ರಮ ಜರುಗಿಸದಂತೆ ಪೊಲೀಸರಿಗೆ ಸೂಚಿಸಲಾಗುವುದು ಎಂದು ನ್ಯಾಯಪೀಠಕ್ಕೆ ತಿಳಿಸಿದರು.
ವಾದ-ಪ್ರತಿವಾದ ಆಲಿಸಿದ ಪೀಠ, ಅರ್ಜಿದಾರರ ವಿರುದ್ಧದ ಎಫ್‌ಐಆರ್‌ಗೆ ತಡೆಯಾಜ್ಞೆ ನೀಡಿತು.