
ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮವು (IRCTC) ಮಂಗಳೂರಿನಿಂದ ಎರಡು ವಿಶೇಷ ಯಾತ್ರಾ ಪ್ಯಾಕೇಜ್ಗಳನ್ನು ಘೋಷಿಸಿದೆ. ಮೇ 10 ರಿಂದ ‘ದಿವ್ಯ ದ್ವಾರಕಾ ಸೋಮನಾಥ ಯಾತ್ರೆ’ ಎಂಬ ವಿಶೇಷ ರೈಲು ಹಾಗೂ ಏಪ್ರಿಲ್ 22 ರಿಂದ ಶಿರಡಿಗೆ ವಿಶೇಷ ವಿಮಾನ ಪ್ಯಾಕೇಜ್ ಲಭ್ಯವಿದೆ.
ಮಂಗಳೂರು (ಮಾ.28): ಭಾರತೀಯ ರೈಲ್ವೇ ಕ್ಯಾಟರಿಂಗ್ ಆ್ಯಂಡ್ ಟೂರಿಸಂ ಕಾರ್ಪೊರೇಶನ್ ಲಿಮಿಟೆಡ್ (ಐಆರ್ಸಿಟಿಸಿ) ವತಿಯಿಂದ ದಿವ್ಯ ದ್ವಾರಕಾ ಸೋಮನಾಥ ಯಾತ್ರೆ ಎಂಬ ವಿಶೇಷ ಪ್ರವಾಸಿ ರೈಲು ಯಾತ್ರೆ ಹಾಗೂ ಶಿರಡಿಗೆ ವಿಶೇಷ ವಿಮಾನ ಯಾತ್ರೆಯನ್ನು ಆಯೋಜಿಸಲಾಗಿದೆ.
ನಗರದ ಪ್ರೆಸ್ಕ್ಲಬ್ನಲ್ಲಿ ಶುಕ್ರವಾರ ಐಆರ್ಸಿಟಿಸಿಯ ಜಂಟಿ ಜನರಲ್ ಮ್ಯಾನೇಜರ್ ಸ್ಯಾಮ್ ಜೋಸೆಫ್ ಪಿ. ಮಾತನಾಡಿ, ವಿಶೇಷ ರೈಲು ಯಾತ್ರೆಯು ಮೇ 10ರಂದು ಮಂಗಳೂರು ಮೂಲಕ ಹೊರಡಲಿದೆ ಎಂದರು.
10 ದಿನಗಳ ತೀರ್ಥ ಯಾತ್ರೆಯಲ್ಲಿ ಗುಜರಾತ್ನ ಪ್ರಮುಖ ಆಧ್ಯಾತ್ಮಿಕ ಸ್ಥಳಗಳು ಹಾಗೂ ಗೋವಾದ ಸುಂದರ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಲಾಗುವುದು. ದ್ವಾರಕಾದಲ್ಲಿ ಜ್ಯೋತಿರ್ಲಿಂಗ, ಬೆಟ್ ದ್ವಾರಕಾ, ದ್ವಾರಕಾಧೀಶ ದೇವಾಲಯ ಮತ್ತು ರುಕ್ಮಿಣಿ ದೇವಾಲಯಗಳಿಗೆ ಭೇಟಿ, ಸೋಮನಾಥ ಜ್ಯೋತಿರ್ಲಿಂಗ ಮತ್ತು ಭಲ್ಕಾ ತೀರ್ಥ, ನಿಷ್ಕಳಂಕ ಮಹಾದೇವ ದೇವಾಲಯ ಮತ್ತು ಗಾಂಧಿ ಸ್ಮೃತಿ, ಗೋವಾದಲ್ಲಿ ಐತಿಹಾಸಿಕ ಅಗುವಾಡಾ ಕೋಟೆ, ಬೊಮ್ ಜೀಸಸ್ ಬೆಸಿಲಿಕಾ ಮತ್ತು ಕಲಾಂಗುಟೆ ಮತ್ತು ಕೋಲ್ವಾ ಬೀಚ್ಗಳಿಗೆ ಭೇಟಿ ವ್ಯವಸ್ಥೆ ಇದೆ. ಪ್ರಯಾಣಿಕರು ಮಂಗಳೂರು ಮತ್ತು ಉಡುಪಿ ಮೂಲಕ ರೈಲಿಗೆ ಏರಬಹುದು.
ಬುಕ್ಕಿಂಗ್ಗೆ ಐಆರ್ಸಿಟಿಸಿ ಯ ಅಧಿಕೃತ ಪೋರ್ಟಲ್ನ್ನು ಸಂಪರ್ಕಿಸಬಹುದು. ಪ್ರಯಾಣಿಕರಿಗೆ ತಲಾ 28,760 ರು. ಪ್ಯಾಕೇಜ್ ದರವಿದ್ದು, 3 ಎಸಿ ರೈಲು ಪ್ರಯಾಣ, ಎಸಿ ಹೊಟೇಲ್ ವಸತಿ, ಎಸಿ ರಸ್ತೆ ಸಾರಿಗೆ, ದಿನಕ್ಕೆ ಮೂರು ಸಸ್ಯಾಹಾರಿ ಊಟ, ವೃತ್ತಿಪರ ಟೂರ್ ಎಸ್ಕಾರ್ಟ್ಗಳು, ಸುರಕ್ಷತಾ ಸಿಬ್ಬಂದಿ ಹಾಗೂ ಪ್ರಯಾಣ ವಿಮೆ ಒಳಗೊಂಡಿದೆ ಎಂದು ಅವರು ಹೇಳಿದರು.
ಶಿರಡಿ ಟೂರ್ ಪ್ಯಾಕೇಜ್:
ಇದೇ ವೇಳೆ ಶಿರಡಿ ವಿಮಾನ ಪ್ಯಾಕೇಜ್ನಡಿ ಶನಿ ಶಿಂಗಣಾಪುರ ದೇವಾಲಯ, ಗೃಷ್ಣೇಶ್ವರ ಜ್ಯೋತಿರ್ಲಿಂಗ ದೇವಾಲಯ, ತ್ರ್ಯಂಬಕೇಶ್ವರ ಶಿವ ದೇವಾಲಯ, ಪಂಚವಟಿ ಮತ್ತು ಎಲ್ಲೋರಾ ಗುಹೆಗಳನ್ನು ಒಳಗೊಂಡ ಯಾತ್ರೆ ಇರಲಿದೆ. ಏ. 22ರಿಂದ ಏ. 26ರ ವರೆಗಿನ ಪ್ಯಾಕೇಜ್ ಬೆಲೆ ತಲಾ ಒಬ್ಬರಿಗೆ 28,050 ರು. ಆಗುತ್ತದೆ. ಪ್ಯಾಕೇಜ್ನಲ್ಲಿ ವಿಮಾನ ಟಿಕೆಟ್, ಊಟ ಸಹಿತ ವಸತಿ, ಸ್ಥಳೀಯ ಸಾರಿಗೆ, ಟೂರ್ ಕೋ ಅರ್ಡಿನೇಟರ್ ಸೇವೆ ಮತ್ತು ಪ್ರಯಾಣ ವಿಮೆ ಒಳಗೊಂಡಿರುತ್ತದೆ ಎಂದು ಅವರು ವಿವರ ನೀಡಿದರು.
ಹಿರಿಯ ಕಾರ್ಯನಿರ್ವಾಹಕ ಅಧಿಕಾರಿ ವಿನೋದ್ ನಾಯರ್ ಇದ್ದರು.