IPL 2026: ರಂಗು ರಂಗಿನ ಕ್ರಿಕೆಟ್ ಪಂದ್ಯ ಐಪಿಎಲ್ಗೆ ಇಂದು (ಮಾ.28) ಚಾಲನೆ ದೊರೆಯಲಿದೆ. ಹತ್ತು ತಂಡಗಳ ನಡುವಣ ಈ ಕದನಕ್ಕಾಗಿ ಎಲ್ಲಾ ತಂಡಗಳು ಸಜ್ಜಾಗಿದೆ. ಇನ್ನು ಈ ಸೀಸನ್ಗಾಗಿ ಪ್ರತಿ ತಂಡಗಳು ಈ ಬಾರಿ ಬ್ಯಾಟಿಂಗ್ ಲೈನಪ್ ಅನ್ನು ಮತ್ತಷ್ಟು ಬಲಿಷ್ಠಗೊಳಿಸಿದೆ. ಅದರಲ್ಲೂ 10 ತಂಡಗಳು ಬಲಿಷ್ಠ ಓಪನಿಂಗ್ ಜೋಡಿಯನ್ನು ಕಣಕ್ಕಿಳಿಸಿದರೆ, ಯಾವ ತಂಡದ ಪರ ಯಾರು ಇನಿಂಗ್ಸ್ ಆರಂಭಿಸಲಿದ್ದಾರೆ ಎಂದು ನೋಡುವುದಾದರೆ…
ರಾಯಲ್ ಚಾಲೆಂಜರ್ಸ್ ಬೆಂಗಳೂರು: ಆರ್ಸಿಬಿ ಪರ ಈ ಬಾರಿ ಕೂಡ ವಿರಾಟ್ ಕೊಹ್ಲಿ ಹಾಗೂ ಫಿಲ್ ಸಾಲ್ಟ್ ಇನಿಂಗ್ಸ್ ಆರಂಭಿಸಲಿದ್ದಾರೆ. ಕಳೆದ ಸೀಸನ್ನಲ್ಲಿ ಈ ಜೋಡಿಯು ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿರುವ ಕಾರಣ ಈ ಜೋಡಿಯನ್ನು ಬದಲಿಸುವ ಸಾಧ್ಯತೆಯಿಲ್ಲ.
ಚೆನ್ನೈ ಸೂಪರ್ ಕಿಂಗ್ಸ್: ಸಿಎಸ್ಕೆ ಪರ ಈ ಬಾರಿ ಸಂಜು ಸ್ಯಾಮ್ಸನ್ ಇನಿಂಗ್ಸ್ ಆರಂಭವಾಗುವುದು ಖಚಿತ. ಇನ್ನು ಸಂಜು ಜೊತೆ ರುತುರಾಜ್ ಗಾಯಕ್ವಾಡ್ ಅವರನ್ನು ಆರಂಭಿಕನಾಗಿ ಕಣಕ್ಕಿಳಿಸಲು ಚೆನ್ನೈ ಸೂಪರ್ ಕಿಂಗ್ಸ್ ಪ್ಲ್ಯಾನ್ ರೂಪಿಸಿದೆ.
ಲಕ್ನೋ ಸೂಪರ್ ಜೈಂಟ್ಸ್: ಎಲ್ ಎಸ್ ಜಿ ಪರ ಕಳೆದ ಸೀಸನ್ ನಲ್ಲಿ ಮಿಚೆಲ್ ಮಾರ್ಷ್ ಹಾಗೂ ಐಡೆನ್ ಮಾರ್ಕ್ರಾಮ್ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಹೀಗಾಗಿ ಇದೇ ಜೋಡಿಯನ್ನೇ ಈ ಬಾರಿ ಕೂಡ ಆರಂಭಿಕರಾಗಿ ಕಣಕ್ಕಿಳಿಸಲಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್: ಕನ್ನಡಿಗ ಕೆಎಲ್ ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ಪರ ಇನಿಂಗ್ಸ್ ಆರಂಭಿಸಲಿದ್ದಾರೆ ರಾಹುಲ್. ಕೆಎಲ್ ಆರ್ಗೆ ಜೋಡಿಯಾಗಿ ಶ್ರೀಲಂಕಾದ ಸ್ಫೋಟಕ ದಾಂಡಿಗ ಪಾತುಮ್ ನಿಸ್ಸಂಕಾ ಆರಂಭಿಕ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.
ಕೋಲ್ಕತ್ತಾ ನೈಟ್ ರೈಡರ್ಸ್: ಕೆಕೆಆರ್ ಪರ ನ್ಯೂಝಿಲೆಂಡ್ ತಂಡದ ದಾಂಡಿಗ ಫಿನ್ ಅಲೆನ್ ಆರಂಭಿಕನಾಗಿ ಕಣಕ್ಕಿಳಿಯುವುದು ಖಚಿತ. ಅಲೆನ್ ಜೊತೆ ಮತ್ತೊಂದು ತುದಿಯಲ್ಲಿ ಅಜಿಂಕ್ಯ ರಹಾನೆ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ.
ಸನ್ ರೈಸರ್ಸ್ ಹೈದರಾಬಾದ್: ಎಸ್ ಆರ್ ಹೆಚ್ ಪರ ಈ ಬಾರಿ ಕೂಡ ಸ್ಫೋಟಕ ದಾಂಡಿಗರಾದ ಟ್ರಾವಿಸ್ ಹೆಡ್ ಹಾಗೂ ಅಭಿಷೇಕ್ ಶರ್ಮಾ ಇನಿಂಗ್ಸ್ ಆರಂಭಿಸಲಿದ್ದಾರೆ.
ಗುಜರಾತ್ ಟೈಟಾನ್ಸ್: ಜಿಟಿ ತಂಡದ ಪರ ಶುಭಮನ್ ಗಿಲ್ ಹಾಗೂ ಸಾಯಿ ಸುದರ್ಶನ್ ಇನಿಂಗ್ಸ್ ಆರಂಭಿಸಲಿದ್ದಾರೆ. ಕಳೆದ ಎರಡು ಸೀಸನ್ಗಳಲ್ಲಿ ಈ ಇಬ್ಬರು ದಾಂಡಿಗರು ಗುಜರಾತ್ ಟೈಟಾನ್ಸ್ ತಂಡಕ್ಕೆ ಉತ್ತಮ ಆರಂಭ ಒದಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗಾಗಿ ಈ ಜೋಡಿಯನ್ನು ಬದಲಿಸುವ ಸಾಧ್ಯತೆಯಿಲ್ಲ.
ರಾಜಸ್ಥಾನ್ ರಾಯಲ್ಸ್: ಆರ್ ಆರ್ ಪರ ಈ ಬಾರಿ ಕೂಡ ಇಬ್ಬರು ಯುವ ಎಡಗೈ ದಾಂಡಿಗರು ಇನಿಂಗ್ಸ್ ಆರಂಭಿಸಲಿದ್ದಾರೆ. ಇಲ್ಲಿ ಆರಂಭಿಕರಾಗಿ ಕಾಣಿಸಿಕೊಂಡಿರುವುದು ಯಂಗ್ ಸೆನ್ಸೇಷನ್ ಯಶಸ್ವಿ ಜೈಸ್ವಾಲ್ ಬಾಸ್ ಬೇಬಿ ಖ್ಯಾತಿಯ ವೈಭವ್ ಸೂರ್ಯವಂಶಿ.
ಮುಂಬೈ ಇಂಡಿಯನ್ಸ್: ಹಿಟ್ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಹಾಗೂ ದಕ್ಷಿಣ ಆಫ್ರಿಕಾದ ಎಡಗೈ ದಾಂಡಿಗ ಕ್ವಿಂಟನ್ ಡಿಕಾಕ್ ಮುಂಬೈ ಇಂಡಿಯನ್ಸ್ ಪರ ಇನಿಂಗ್ಸ್ ಆರಂಭಿಸಲಿದ್ದಾರೆ.
ಪಂಜಾಬ್ ಕಿಂಗ್ಸ್: ಕಳೆದ ಸೀಸನ್ನಲ್ಲಿ ಪಂಜಾಬ್ ಕಿಂಗ್ಸ್ ತಂಡಕ್ಕೆ ಪ್ರಿಯಾಂಶ್ ಆರ್ಯ ಹಾಗೂ ಪ್ರಭಾಸಿಮ್ರಾನ್ ಸಿಂಗ್ ಅತ್ಯುತ್ತಮ ಆರಂಭವನ್ನು ಒದಗಿಸಿದ್ದರು. ಹೀಗಾಗಿ ಈ ಬಾರಿ ಕೂಡ ಪ್ರಭ್ಸಿಮ್ರಾನ್ ಹಾಗೂ ಪ್ರಿಯಾಂಶ್ ಪಂಜಾಬ್ ಪರ ಇನಿಂಗ್ಸ್ ಆರಂಭಿಸುವುದನ್ನು ಎದುರು ನೋಡಬಹುದು.










