ದೇಶದಲ್ಲಿ ಮೊದಲ ಬಾರಿಗೆ ಮಕ್ಕಳಿಗಾಗಿ 450 ಹಾಸಿಗೆಯ ಅತ್ಯಾಧುನಿಕ ಆಸ್ಪತ್ರೆ ನಿರ್ಮಾಣ: ಸಚಿವ ಶರಣಪ್ರಕಾಶ್‌ ಪಾಟೀಲ್‌ | Bengaluru Indira Gandhi Childrens Hospital 450 Beds Inauguration Gvd

ದೇಶದಲ್ಲಿ ಮೊದಲ ಬಾರಿಗೆ ಮಕ್ಕಳಿಗಾಗಿ 450 ಹಾಸಿಗೆಯ ಅತ್ಯಾಧುನಿಕ ಆಸ್ಪತ್ರೆ ನಿರ್ಮಾಣ: ಸಚಿವ ಶರಣಪ್ರಕಾಶ್‌ ಪಾಟೀಲ್‌ | Bengaluru Indira Gandhi Childrens Hospital 450 Beds Inauguration Gvd


ಮಕ್ಕಳಿಗಾಗಿ 450 ಹಾಸಿಗೆಯುಳ್ಳ ಬೃಹತ್‌, ಅತ್ಯಾಧುನಿಕ ಹಾಗೂ ಸುಸಜ್ಜಿತ ಆಸ್ಪತ್ರೆಯನ್ನು ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯಲ್ಲಿ ನಿರ್ಮಾಣ ಮಾಡಿದೆ ಎಂದು ಸಚಿವ ಡಾ.ಶರಣಪ್ರಕಾಶ್ ಆರ್. ಪಾಟೀಲ್ ತಿಳಿಸಿದ್ದಾರೆ.

ಬೆಂಗಳೂರು (ಮಾ.28): ದೇಶದಲ್ಲಿ ಆರೋಗ್ಯ ಸೇವೆಯಲ್ಲಿ ಕರ್ನಾಟಕ ಸದಾ ಮುಂಚೂಣಿಯಲ್ಲಿದೆ. ಈ ನಿಟ್ಟಿನಲ್ಲಿ ನಮ್ಮ ಕಾಂಗ್ರೆಸ್‌ ಸರ್ಕಾರ ಈಗ ಮಕ್ಕಳಿಗಾಗಿ 450 ಹಾಸಿಗೆಯುಳ್ಳ ಬೃಹತ್‌, ಅತ್ಯಾಧುನಿಕ ಹಾಗೂ ಸುಸಜ್ಜಿತ ಆಸ್ಪತ್ರೆಯನ್ನು ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯಲ್ಲಿ ನಿರ್ಮಾಣ ಮಾಡಿದೆ ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಜೀವನೋಪಾಯ ಮತ್ತು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ್ ಆರ್. ಪಾಟೀಲ್ ತಿಳಿಸಿದ್ದಾರೆ.

ನೂತನ ಆಸ್ಪತ್ರೆ ಲೋಕಾರ್ಪಣೆ ಮಾಡಿದ ನಂತರ ಭಾಷಣ ಮಾಡಿದ ಸಚಿವ ಡಾ. ಪಾಟೀಲ್‌, ಮಕ್ಕಳಿಗೆ ಉತ್ತರ ಆರೈಕೆ, ಚಿಕಿತ್ಸೆ ಒದಗಿಸಲು ಈ ಆಸ್ಪತ್ರೆ ನಿರ್ಮಿಸಲಾಗಿದೆ. ಸರ್ಕಾರದಿಂದಲೇ ಇಷ್ಟೊಂದು ಬೃಹತ್‌ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ, ಇಷ್ಟು ದೊಟ್ಟಮಟ್ಟದ ಕಾರ್ಯ ನಿರ್ವಹಿಸುತ್ತಿರುವುದು ದೇಶದಲ್ಲಿ ಮೊದಲ ಎಂದರು. ಬೇರೇ ಬೇರೆ ರಾಜ್ಯಗಳಿಂದ ಬರುವ ರೋಗಿಗಳಿಗೂ ಇಲ್ಲಿ ಒಂದೇ ತರನಾದ ಚಿಕಿತ್ಸೆ ಒದಗಿಸಲಾಗುತ್ತದೆ.

ಶೇ. 100ರಷ್ಟು ಗುಣಮಟ್ಟದ ಆರೋಗ್ಯ ಚಿಕಿತ್ಸೆ ಕೊಡುವುದು ನಮ್ಮ ಸರ್ಕಾರಿ ಆಸ್ಪತ್ರೆಗಳಲ್ಲಿ ಮಾತ್ರ. ಸಾರ್ವಜನಿಕರು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಚಿವರು ಕರೆ ನೀಡಿದರು. ಪ್ರಸ್ತುತ ಸಂಸ್ಥೆಯು 450 ಹಾಸಿಗೆಗಳನ್ನು ಹೊಂದಿದ್ದು, ವಾರ್ಷಿಕವಾಗಿ ಸುಮಾರು 1,78,000 ಹೊರರೋಗಿಗಳು, 21,000 ಒಳರೋಗಿಗಳಿಗೆ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಅಲ್ಲದೇ, ಸುಮಾರು 5,000 ಶಸ್ತ್ರಚಿಕಿತ್ಸೆಗಳನ್ನು ಜರುಗಿಸಲಾಗುತ್ತಿದೆ ಎಂದು ವಿವರಿಸಿದರು.

ಎಲ್ಲಾ ಜಿಲ್ಲೆಗಳಲ್ಲಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ

ನಮ್ಮ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಎಲ್ಲ ಜಿಲ್ಲೆಗಳಲ್ಲೂ ಮೆಡಿಕಲ್‌ ಕಾಲೇಜು ಸ್ಥಾಪನೆ ಮಾಡುತ್ತಿದೆ. ಈಗಾಗಲೇ ಶೇಕಡ 90ರಷ್ಟು ಗುರಿ ಮುಟ್ಟಿದ್ದೇವೆ. ಇನ್ನು ನಾಲ್ಕೈದು ಜಿಲ್ಲೆಗಳಲ್ಲಿ ಮಾತ್ರ ಬಾಕಿ ಉಳಿದಿದೆ. ಅತಿ ಶೀಘ್ರದಲ್ಲೇ ಎಲ್ಲೆಡೆ ಪೂರ್ಣಗೊಳ್ಳಲಿದೆ ಎಂದು ಸ್ಪಷ್ಟಪಡಿಸಿದರು.

ಎಲ್ಲ ಜಿಲ್ಲೆಗಳಲ್ಲೂ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ, ಕ್ಯಾನ್ಸರ್‌ ಆಸ್ಪತ್ರೆ ಮತ್ತು ಟ್ರಾಮಾ ಕೇರ್‌ ಸೆಂಟರ್‌ ನಿರ್ಮಾಣ ಮಾಡಲು ಮುಂದಾಗುವ ಮೂಲಕ ಸರ್ವರಿಗೂ ಉತ್ತಮ ಆರೋಗ್ಯ ಸೇವೆ ಒದಗಿಸಲು ನಾವು ಬದ್ಧರಾಗಿದ್ದೇವೆ ಎಂದು ಡಾ. ಪಾಟೀಲ್‌ ಸ್ಪಷ್ಟಪಡಿಸಿದರು. ಜಯದೇವ ಹೃದ್ರೋಗ ಸಂಸ್ಥೆಯಂತೆ ಈಗ ಮೈಸೂರು, ಕಲಬುರಗಿಯಲ್ಲಿ ನಿಮ್ಹಾನ್ಸ್‌ ಮಾದರಿ ಹಾಗೂ ಎಂಡ್ರೊಕ್ರೈನಾಲಜಿ ಸೆಂಟರ್‌ ಸ್ಥಾಪಿಸಲಾಗುತ್ತದೆ. ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆ ರೀತಿಯಲ್ಲಿ 100 ಕೋಟಿ ರೂ. ವೆಚ್ಚದಲ್ಲಿ ಕಲಬುರಗಿಯಲ್ಲಿ ಮಕ್ಕಳ ಆಸ್ಪತ್ರೆ ನಿರ್ಮಾಣ ಮಾಡಲಾಗುತ್ತದೆ ಎಂದು ಸಚಿವರು ವಿವರಿಸಿದರು.

ಯೂನಿವರ್ಸಲ್‌ ಹೆಲ್ತ್‌ ಕೇರ್‌ ಫಾರ್‌ ಆಲ್‌

ಟೆರಿಷರಿ ಕೇರ್‌ ಚಿಕಿತ್ಸೆ (ತೃತೀಯ ಹಂತದ ಚಿಕಿತ್ಸೆ) ಸರ್ಕಾರಿ ಆಸ್ಪತ್ರೆಯಲ್ಲಿ ಮಾತ್ರ ಸಿಗುತ್ತಿದೆ, ಬೇರೆ ಕಡೆ ಸಿಗಲ್ಲ, ಯೂನಿವರ್ಸಲ್‌ ಹೆಲ್ತ್‌ ಕೇರ್‌ ಫಾರ್‌ ಆಲ್‌ ಎಂಬುದು ನಮ್ಮ ಧ್ಯೇಯ ಎಂದು ಡಾ.‌ ಪಾಟೀಲ್‌ ತಿಳಿಸಿದರು. ನಮ್ಮಲ್ಲಿ ಅತಿ ಹೆಚ್ಚು ಮೆಡಿಕಲ್‌ ಸೀಟು ಮತ್ತು ಕಾಲೇಜು ಇವೆ. ಜೊತೆಗೆ 800 ನರ್ಸಿಂಗ್‌ ಕಾಲೇಜುಗಳು ನಮ್ಮ ಕರ್ನಾಟಕದಲ್ಲಿವೆ ಎಂದು ವಿವರಿಸಿದರು.

ಅಪಾರ ಸೇವೆ ಒದಗಿಸಿ ಇದೇ ಮಾಸಾಂತ್ಯದಲ್ಲಿ ನಿವೃತ್ತರಾಗುತ್ತಿರುವ ನಿರ್ದೇಶಕರಾದ ಡಾ. ಕೆ.ಎಸ್‌. ಸಂಜಯ್‌ಗೆ ಅವರನ್ನು ಸಚಿವ ಡಾ. ಪಾಟೀಲರು ವೇದಿಕೆ ಮೇಲೆ ಸನ್ಮಾನಿಸಿದರು. ಸಮಾರಂಭದಲ್ಲಿ ಶಾಸಕರಾದ ಉದಯ್‌ ಗರುಡಾಚಾರ್‌, ಟಿ.ಎ. ಸರವಣ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮೊಹಮ್ಮದ್‌ ಮೊಹ್ಸಿನ್‌, ನಿರ್ದೇಶಕಿ ಡಾ ಬಿ.ಎಲ್‌. ಸುಜಾತಾ ರಾಠೋಡ್‌, ಇಂದಿರಾ ಗಾಂಧಿ ಸಂಸ್ಥೆ ನಿರ್ದೇಶಕರಾದ ಡಾ. ಕೆ.ಎಸ್‌. ಸಂಜಯ್‌ ಸೇರಿದಂತೆ ಹಲವಾರು ಅಧಿಕಾರಿಗಳು ಹಾಜರಿದ್ದರು.



Source link

Leave a Reply

Your email address will not be published. Required fields are marked *