ಕಾಲ್ತುಳಿತದ ಬಳಿಕ ಮೊದಲ ಅಗ್ನಿಪರೀಕ್ಷೆ ಗೆದ್ದ ಕೆಎಸ್‌ಸಿಎ! ಮೊದಲ ಪಂದ್ಯ ಯಶಸ್ವಿ ಆಯೋಜನೆ | Ipl 2026 Opener In Bengaluru Goes Smoothly After Stampede Scare Tight Security Ensures Safe Rcb Vs Srh Match Kvn

ಕಾಲ್ತುಳಿತದ ಬಳಿಕ ಮೊದಲ ಅಗ್ನಿಪರೀಕ್ಷೆ ಗೆದ್ದ ಕೆಎಸ್‌ಸಿಎ! ಮೊದಲ ಪಂದ್ಯ ಯಶಸ್ವಿ ಆಯೋಜನೆ | Ipl 2026 Opener In Bengaluru Goes Smoothly After Stampede Scare Tight Security Ensures Safe Rcb Vs Srh Match Kvn



ಕಾಲ್ತುಳಿತದ ಬಳಿಕ ಮೊದಲ ಅಗ್ನಿಪರೀಕ್ಷೆ ಗೆದ್ದ ಕೆಎಸ್‌ಸಿಎ! ಮೊದಲ ಪಂದ್ಯ ಯಶಸ್ವಿ ಆಯೋಜನೆ | Ipl 2026 Opener In Bengaluru Goes Smoothly After Stampede Scare Tight Security Ensures Safe Rcb Vs Srh Match Kvn

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿ ಮತ್ತು ಸನ್‌ರೈಸರ್ಸ್‌ ಹೈದರಾಬಾದ್‌ ನಡುವಿನ ಐಪಿಎಲ್ ಪಂದ್ಯವು ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಕಳೆದ ವರ್ಷದ ಕಾಲ್ತುಳಿತದ ಘಟನೆಯಿಂದ ಪಾಠ ಕಲಿತ ಕೆಎಸ್‌ಸಿಎ, ಬೆಂಗಳೂರು ಪೊಲೀಸರು ಮತ್ತು ಇತರ ಇಲಾಖೆಗಳು ಕೈಗೊಂಡ ಕಠಿಣ ಭದ್ರತಾ ಕ್ರಮಗಳು, ಸುಗಮ ಪ್ರವೇಶ ವ್ಯವಸ್ಥೆ ಮತ್ತು ವೈದ್ಯಕೀಯ ಸಿದ್ಧತೆಗಳಿಂದಾಗಿ ಯಾವುದೇ ಅಹಿತಕರ ಘಟನೆ ನಡೆಯಲಿಲ್ಲ.

ಕನ್ನಡಪ್ರಭ ಪ್ರತ್ಯಕ್ಷ ವರದಿ

ಬೆಂಗಳೂರು: ಕಳೆದ ವರ್ಷ ಜೂನ್‌ನಲ್ಲಿ ನಡೆದ ಭೀಕರ ಕಾಲ್ತುಳಿತದಿಂದಾಗಿ ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ಈ ಬಾರಿ ಐಪಿಎಲ್‌ನ ಉದ್ಘಾಟನಾ ಪಂದ್ಯ ಯಶಸ್ವಿಯಾಗಿ ನಡೆದಿದೆ. ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ(ಕೆಎಸ್‌ಸಿಎ), ಬೆಂಗಳೂರು ಪೊಲೀಸರು ಹಾಗೂ ಸರ್ಕಾರದ ವಿವಿಧ ಇಲಾಖೆಗಳ ಕಠಿಣ ಪರಿಶ್ರಮದಿಂದಾಗಿ ಶನಿವಾರ ಆರ್‌ಸಿಬಿ ಹಾಗೂ ಸನ್‌ರೈಸರ್ಸ್‌ ಹೈದರಾಬಾದ್‌ ನಡುವಿನ ಮಹತ್ವದ ಪಂದ್ಯ ಯಾವುದೇ ಗೊಂದಲ, ಸಮಸ್ಯೆಗಳಿಲ್ಲದೆ ಮುಕ್ತಾಯಗೊಂಡಿತು.

ಐಪಿಎಲ್‌ಗಾಗಿ ಹಲವು ದಿನಗಳಿಂದಲೂ ನಡೆಸಲಾಗುತ್ತಿದ್ದ ಸಿದ್ಧತೆಗೆ ಶನಿವಾರ ಫಲ ಸಿಕ್ಕಿತು. ಯಾವುದೇ ಜನದಟ್ಟಣೆ, ಟ್ರಾಫಿಕ್‌, ನೂಕುನುಗ್ಗಲು, ವೈದ್ಯಕೀಯ ಸಮಸ್ಯೆ ಎದುರಾಗಲಿಲ್ಲ. ಮಧ್ಯಾಹ್ನ 3 ಗಂಟೆಗೂ ಮುನ್ನವೇ ಪ್ರೇಕ್ಷಕರು ಕ್ರೀಡಾಂಗಣ ಬಳಿ ಜಮಾಯಿಸುತ್ತಿದ್ದರು. ಆದರೆ ಭಾರೀ ಸಂಖ್ಯೆಯಲ್ಲಿದ್ದ ಪೊಲೀಸರು ಯಾವುದೇ ಗೊಂದಲ ಉಂಟಾಗದಂತೆ ನೋಡಿಕೊಂಡರು.

ಸುಗಮ ಪ್ರವೇಶ: ಕ್ರೀಡಾಂಗಣದಲ್ಲಿ ಹೊಸದಾಗಿ ಅಳವಡಿಸಲಾಗಿದ್ದ ಬೃಹತ್‌ ಗೇಟ್‌ಗಳ ಮೂಲಕ ಪ್ರೇಕ್ಷಕರ ಸುಗಮ ಪ್ರವೇಶಕ್ಕೆ ಅನುವು ಮಾಡಿಕೊಟ್ಟರು. ಬೃಹತ್‌ ಗೇಟ್‌, ಸ್ಕ್ಯಾನಿಂಗ್ ಕೌಂಟರ್‌, ಟಿಕೆಟ್‌ ಸ್ಕ್ಯಾನರ್‌ ಸೇರಿದಂತೆ ಹಲವು ಸುತ್ತಿನ ಪರಿಶೀಲನೆ ಬಳಿಕ ಅಭಿಮಾನಿಗಳನ್ನು ಕ್ರೀಡಾಂಗಣದ ಒಳ ಬಿಡಲಾಯಿತು.

ಕ್ರೀಡಾಂಗಣದ ಸಮೀಪದ ರಸ್ತೆಗಳಲ್ಲಿ ಎಲ್ಲೂ ವಾಹನ ಪಾರ್ಕಿಂಗ್‌ಗೆ ಅವಕಾಶವಿರಲಿಲ್ಲ. ಜನರು ಹೆಚ್ಚು ಕಾಲ ರಸ್ತೆ ಬದಿ ನಿಲ್ಲದಂತೆ ಪೊಲೀಸರು ಎಚ್ಚರ ವಹಿಸಿದರು. ರಸ್ತೆ ಮೇಲೆ ಓಡಾಡದಂತೆಯೂ ನಿರ್ಬಂಧ ವಿಧಿಸಿದ್ದರು. ಸ್ವತಃ ಪೊಲೀಸರೇ ಪ್ರೇಕ್ಷಕರಿಗೆ ಪ್ರವೇಶ ದ್ವಾರ, ಸ್ಟ್ಯಾಂಡ್‌ಗಳ ಮಾಹಿತಿ ನೀಡಿದರು. ಇದಕ್ಕಾಗಿ ಹಲವೆಡೆ ಸೂಚನಾ ಫಲಕ, ಕ್ರೀಡಾಂಗಣದ ನೀಲನಕ್ಷೆಯನ್ನು ಅಳವಡಿಸಲಾಗಿತ್ತು. ಪೊಲೀಸರ ಜೊತೆ ಸಿವಿಲ್‌ ಡಿಫೆನ್ಸ್‌ ಸಿಬ್ಬಂದಿ, ಕ್ರೀಡಾಂಗಣ ಸಿಬ್ಬಂದಿ ಕೂಡಾ ಜನರ ನಿಯಂತ್ರಣಕ್ಕೆ ಕೈಜೋಡಿಸಿದರು.

4 ಕಡೆ ಮೆಡಿಕಲ್‌ ಕ್ಯಾಂಪ್‌, ಎಲ್ಲೆಡೆಯೂ ಆ್ಯಂಬುಲೆನ್ಸ್‌

ಕಾಲ್ತುಳಿತದಂತಹ ಘಟನೆ ಮರುಕಳಿಸದಂತೆ ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ಭಾರೀ ಕಟ್ಟೆಚ್ಚರ ವಹಿಸಲಾಗಿತ್ತು. ಸ್ಟೇಡಿಯಂ ಒಳಭಾಗದಲ್ಲಿ 4 ಕಡೆ ಮೆಡಿಕಲ್‌ ಕ್ಯಾಂಪ್‌ ವ್ಯವಸ್ಥೆ ಮಾಡಲಾಗಿತ್ತು. ಸಿಪಿಆರ್ ನೀಡುವ ತಜ್ಞ ವೈದ್ಯರ ತಂಡವನ್ನು ನಿಯೋಜಿಸಲಾಗಿತ್ತು. ಹಲವು ಕಡೆಗಳಲ್ಲಿ ಆ್ಯಂಬುಲೆನ್ಸ್‌, ವೈದ್ಯಕೀಯ ಸಿಬ್ಬಂದಿ ಸಿದ್ಧರಿದ್ದರು. ಕ್ರೀಡಾಂಗಣದ ಹೊರಭಾಗದಲ್ಲೂ ಕೆಲವು ಆ್ಯಂಬುಲೆನ್ಸ್‌ಗಳನ್ನು ನಿಲ್ಲಿಸಲಾಗಿತ್ತು.

ಟಿಕೆಟ್‌ ಇಲ್ಲದಿದ್ದರೆ ಸ್ಟೇಡಿಯಂ ಸಮೀಪವೂ ಸುಳಿಯುವಂತಿಲ್ಲ!

ಚಿನ್ನಸ್ವಾಮಿ ಬಳಿ ಹೆಚ್ಚಿನ ಜನದಟ್ಟಣೆ ಉಂಟಾಗದಿರಲು ಪೊಲೀಸರು ಕಠಿಣ ಕ್ರಮ ಕೈಗೊಂಡರು. ಪ್ರಮುಖವಾಗಿ, ಟಿಕೆಟ್‌ ಇಲ್ಲದವರನ್ನು ಕ್ರೀಡಾಂಗಣ ಬಳಿ ಸುಳಿಯಲೂ ಬಿಡಲಿಲ್ಲ. ಕ್ರೀಡಾಂಗಣದ ಸುತ್ತಲೂ ಬ್ಯಾರಿಕೇಡ್‌ ಅಳವಡಿಸಿದ್ದ ಪೊಲೀಸರು, ಅಲ್ಲೇ ಎಲ್ಲರನ್ನೂ ವಿಚಾರಿಸಿ, ಟಿಕೆಟ್‌ ಇದೆ ಎಂಬು ಖಾತರಿಪಡಿಸಿದ ಬಳಿಕವೇ ಅವರನ್ನು ಕ್ರೀಡಾಂಗಣದ ಬಳಿ ತೆರಳಲು ಅನುಮತಿ ನೀಡಿದರು. ಟಿಕೆಟ್‌ ಇಲ್ಲದವರು ಯಾವುದೇ ಕಾರಣಕ್ಕೂ ಕ್ರೀಡಾಂಗಣದ ಗೇಟ್‌ಗಳ ಬಳಿ ತೆರಳದಂತೆ ನೋಡಿಕೊಂಡರು. ಅವರನ್ನು ರಸ್ತೆ ಬದಿ ನಿಲ್ಲದಂತೆಯೂ ಸೂಚನೆ ನೀಡುತ್ತಿದ್ದ ಪೊಲೀಸರು, ಅಲ್ಲಿಂದ ತೆರವುಗೊಳಿಸಿ ಹೆಚ್ಚಿನ ಜನದಟ್ಟಣೆ ಉಂಟಾಗದಂತೆ ಮಾಡಿದರು.

2000 ಪೊಲೀಸ್‌, 400 ಸಿವಿಲ್‌ ಡಿಫೆನ್ಸ್‌ ಸಿಬ್ಬಂದಿ

ಶನಿವಾರದ ಪಂದ್ಯಕ್ಕಾಗಿ 2000 ಪೊಲೀಸರು, 400 ಸಿವಿಲ್‌ ಡಿಫೆನ್ಸ್‌ ಸಿಬ್ಬಂದಿಯನ್ನು ನೇಮಿಸಲಾಗಿತ್ತು. ಕ್ರೀಡಾಂಗಣ ಬಳಿ ಮಾತ್ರವಲ್ಲದೇ ಸಮೀಪದ ರಸ್ತೆಗಳಲ್ಲೂ ಪೊಲೀಸರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಪೊಲೀಸರಿಗಾಗಿ ಅಲ್ಲಲ್ಲಿ ಟೆಂಟ್‌ ಕೂಡಾ ಹಾಕಲಾಗಿತ್ತು. ಸಂಚಾರ ದಟ್ಟಣೆ ಉಂಟಾಗದಂತೆಯೂ ಪೊಲೀಸರು ನೋಡಿಕೊಂಡರು. ಅಲ್ಲಲ್ಲಿ ಮೈಕ್‌ಗಳಲ್ಲಿ ಸೂಚನೆ ನೀಡುವ, ಪ್ರೇಕ್ಷಕರಿಗೆ ದಾರಿ ತಿಳಿಸುತ್ತಿದ್ದ ದೃಶ್ಯಗಳು ಕಂಡುಬಂದವು. ಇನ್ನು, ಕ್ರೀಡಾಂಗಣದ ಒಳಗೆ ಹಾಗೂ ಹೊರಗೆ ಸೇರಿ 400ರಷ್ಟು ಎಐ ಕ್ಯಾಮರಾಗಳನ್ನೂ ಅಳವಡಿಸಲಾಗಿದೆ. ಮೊಬೈಲ್ ಕಮ್ಯಾಂಡ್ ಮತ್ತು ಕಂಟ್ರೋಲ್ ಸೆಂಟರ್ ಮೂಲಕ ಸಿಸಿ ಕ್ಯಾಮರಾ ಪರಿಶೀಲನೆ ಕೂಡಾ ನಡೆಯುತ್ತಿತ್ತು.

ಹೇಗಿತ್ತು ಪೊಲೀಸ್ ಕಣ್ಗಾವಲು?

1. ಕ್ರೀಡಾಂಗಣ ಸಮೀಪದ ರಸ್ತೆಗಳಲ್ಲಿ ಪಾರ್ಕಿಂಗ್ ನಿಷೇಧ.

2. ಎಲ್ಲಿಯೂ ⁠ಜನ ಗುಂಪು ಸೇರದಂತೆ ನಿಗಾ.

3. ಪ್ರೇಕ್ಷಕರು ⁠ರಸ್ತೆಗಳಲ್ಲಿ ಓಡಾಡದಂತೆ ಎಚ್ಚರಿಕೆ ಕ್ರಮ.

4. ಟಿಕೆಟ್‌ ಇದ್ದರೆ ಮಾತ್ರ ಪ್ರೇಕ್ಷಕರಿಗೆ ಕ್ರೀಡಾಂಗಣ ಬಳಿ ಪ್ರವೇಶ.

5. ⁠ಮೊಬೈಲ್ ಕಮ್ಯಾಂಡ್ ಮತ್ತು ಕಂಟ್ರೋಲ್ ಸೆಂಟರ್ ಮೂಲಕ ಸಿಸಿ ಕ್ಯಾಮರಾ ಪರಿಶೀಲನೆ.

6. ⁠ಪ್ರವೇಶ ಗೇಟ್, ಸ್ಟ್ಯಾಂಡ್ ಬಗ್ಗೆ ಪ್ರೇಕ್ಷಕರಿಗೆ ಪೋಲೀಸರಿಂದಲೇ ಮಾಹಿತಿ.



Source link

Leave a Reply

Your email address will not be published. Required fields are marked *