
ಬೀರೂರು ತಾಲೂಕಿನ ಬುಕ್ಕಸಾಗರ ಗ್ರಾಮದ ವಿದ್ಯಾರ್ಥಿ ಭರತ್, ತಂದೆಯ ಅಕಾಲಿಕ ಮರಣದ ದುಃಖದ ನಡುವೆಯೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಬರೆದಿದ್ದಾನೆ. ಶನಿವಾರ ಬೆಳಿಗ್ಗೆ ಗಣಿತ ಪರೀಕ್ಷೆ ಬರೆದು, ಮಧ್ಯಾಹ್ನದ ನಂತರ ತಂದೆಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಕರ್ತವ್ಯ ಪ್ರಜ್ಞೆ ಮೆರೆದಿದ್ದಾನೆ.
ಬೀರೂರು(ಮಾ.29): ತಂದೆಯ ಅಕಾಲಿಕ ಸಾವಿನ ನೋವಿನಲ್ಲೂ ಪುತ್ರ ಭರತ್ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಬರೆದ ಮನಮಿಡಿಯುವ ಘಟನೆ ಶನಿವಾರ ತಾಲ್ಲೂಕಿನ ಬುಕ್ಕಸಾಗರ ಗ್ರಾಮದಲ್ಲಿ ನಡೆದಿದೆ.
ಬುಕ್ಕಸಾಗರ ಗ್ರಾಮದ ಕೂಲಿ ಕಾರ್ಮಿಕ ನವೀನ್ ಅನಾರೋಗ್ಯದಿಂದ ಶುಕ್ರವಾರ ಸಂಜೆ ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ತಂದೆಯ ಸಾವಿನಿಂದ ಕಂಗಾಲಾಗಿದ್ದ ಭರತ್ ಇಡೀ ರಾತ್ರಿ ದುಃಖಿಸಿದ್ದಾನೆ. ಆ ನೋವಿನಲ್ಲೇ ಶನಿವಾರ ಬೆಳಿಗ್ಗೆ ಗಣಿತ ವಿಷಯದ ಪರೀಕ್ಷೆ ಬರೆದು, ಮಧ್ಯಾಹ್ನದ ನಂತರ ತಂದೆಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದಾನೆ.
ಬೀರೂರು ಶೈಕ್ಷಣಿಕ ವಲಯದ ವ್ಯಾಪ್ತಿಗೆ ಒಳಪಡುವ ತಾಲ್ಲೂಕಿನ ಬಿಸಲೇಹಳ್ಳಿ ಗ್ರಾಮದ ಬಾಬು ನರೇಂದ್ರ ಪ್ರೌಢಶಾಲೆಯಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ. ಸಖರಾಯಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಈಗಾಗಲೇ ಮೂರು ವಿಷಯಗಳ ಪರೀಕ್ಷೆಯನ್ನು ಬರೆದಿದ್ದು. ನಾಲ್ಕನೇ ವಿಷಯದ ಪರೀಕ್ಷೆಯನ್ನು ಬರೆಯುವ ಸಿದ್ಧತೆಯಲ್ಲಿದ್ದ ಭರತ್ ಗೆ ತಂದೆಯ ಸಾವು ತೀವ್ರ ಆಘಾತ ಉಂಟು ಮಾಡಿದೆ.ವಿಷಯ ತಿಳಿದ ಶಾಲಾ ಶಿಕ್ಷಕರು, ಶಾಲೆಯ ಎಸ್ಡಿಎಂಸಿ ಸದಸ್ಯರು, ಸ್ಥಳೀಯ ಗ್ರಾಪಂ ಮಾಜಿ ಅಧ್ಯಕ್ಷ ನಾಗರಾಜ್ ಶನಿವಾರ ಬೆಳಿಗ್ಗೆ ವಿದ್ಯಾರ್ಥಿಯ ಮನೆಗೆ ಹೋಗಿ, ವಿದ್ಯಾರ್ಥಿಗೆ ಸಮಾಧಾನ ಹೇಳಿ, ಪರೀಕ್ಷೆ ಬರೆಯಲು ಆತ್ಮಸ್ಥೈರ್ಯ ತುಂಬಿದ್ದರು.