
ಸಚಿವ ಪ್ರಿಯಾಂಕ್ ಖರ್ಗೆಯವರು, ಇತಿಹಾಸವನ್ನು ತಿರುಚಿ ಸಾವಿರಾರು ಕೋಟಿ ರೂಪಾಯಿಗಳ ವ್ಯವಹಾರ ಮಾಡಲಾಗುತ್ತಿದೆ ಎಂದು ಬಿಜೆಪಿ ಮತ್ತು ಸಂಘ ಪರಿವಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸಿನಿಮಾಗಳು ಮತ್ತು ವಾಟ್ಸಾಪ್ ಯುನಿವರ್ಸಿಟಿ ಮೂಲಕ ಸುಳ್ಳುಗಳನ್ನು ಹರಡಲಾಗುತ್ತಿದೆ ಎಂದರು.
ಬೆಂಗಳೂರು (ಮಾ.29): ಇತ್ತೀಚಿನ ದಿನಗಳಲ್ಲಿ ಇತಿಹಾಸವನ್ನು ತಮಗೆ ಬೇಕಾದಂತೆ ತಿರುಚುವುದು ಒಂದು ಫ್ಯಾಷನ್ ಆಗಿಬಿಟ್ಟಿದೆ. ಇದು ಕೇವಲ ಹವ್ಯಾಸವಾಗಿ ಉಳಿದಿಲ್ಲ, ಬದಲಾಗಿ ಸಾವಿರ ಕೋಟಿ ರೂಪಾಯಿಗಳ ಬ್ಯುಸಿನೆಸ್ ಆಗಿ ಬದಲಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರಿನಲ್ಲಿ ನಡೆದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಸಂಘ ಪರಿವಾರ, ಬಿಜೆಪಿ ಮತ್ತು ಪ್ರಚಾರದ ಸಿನಿಮಾಗಳ ವಿರುದ್ಧ ಸಾಲು ಸಾಲು ಚಾಟಿ ಬೀಸಿದ್ದಾರೆ.
ನಾನು ಈಗ ಕಲಿಯುತ್ತಿದ್ದೇನೆ:
ತಮ್ಮ ಭಾಷಣದ ಆರಂಭದಲ್ಲಿ ವಿನಮ್ರತೆ ಮೆರೆದ ಪ್ರಿಯಾಂಕ್ ಖರ್ಗೆ, ‘ನಾನು ಓದುವ ಸಂದರ್ಭದಲ್ಲಿ ಸರಿಯಾಗಿ ಓದಲಿಲ್ವೋ ಏನೋ ಗೊತ್ತಿಲ್ಲ. ಈಗ ಓದುವ ಆಸಕ್ತಿ ಇದೆ, ಆದರೆ ಸಮಯವಿಲ್ಲ. ಹೀಗಾಗಿ ನಿಮ್ಮಂತಹ ಬುದ್ಧಿಜೀವಿಗಳ ಜೊತೆ ಸೇರಿ ಇತಿಹಾಸ ಮತ್ತು ಸತ್ಯಗಳನ್ನು ಕಲಿಯುತ್ತಿದ್ದೇನೆ. ಈ ಹಿಂದೆ ಆರ್ ಎಸ್ ಎಸ್ ಯಾವುದಕ್ಕೂ ಪ್ರತಿಕ್ರಿಯೆ ನೀಡುತ್ತಿರಲಿಲ್ಲ, ಆದರೆ ಈಗ ನಾನು ಮಾತನಾಡಿದರೆ ಸಾಕು, ಅವರು ಹೇಳುವುದೆಲ್ಲ ಸುಳ್ಳು ಅಂತಾದರೂ ಹೇಳಲು ಮುಂದೆ ಬರುತ್ತಿದ್ದಾರೆ. ಕನಿಷ್ಠ ಚರ್ಚೆಗಾದರೂ ಬರುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ಸಿನಿಮಾಗಳ ಮೂಲಕ ಇತಿಹಾಸದ ತಿರುಚುವಿಕೆ:
‘ವಾಟ್ಸಾಪ್ ಯುನಿವರ್ಸಿಟಿಯಿಂದ ಹೊರಗೆ ಬಂದು ಈಗ ಸಿನಿಮಾಗಳನ್ನು ಮಾಡಲು ಶುರು ಮಾಡಿದ್ದಾರೆ. ಗುಜರಾತ್ ಫೈಲ್ಸ್, ಕಾಶ್ಮೀರ ಫೈಲ್ಸ್, ಕೇರಳ ಸ್ಟೋರಿ, ಚಾವಾ ಹೀಗೆ ಅನೇಕ ಸಿನಿಮಾಗಳು ಬರುತ್ತಿವೆ. ಸಾಮಾನ್ಯ ಜನರು ಈ ಸಿನಿಮಾಗಳನ್ನು ನೋಡಿ ಪ್ರಶಂಸೆ ಮಾಡಿ 1000 ಕೋಟಿ ಲಾಭ ಮಾಡಿಕೊಟ್ಟರೆ ತೊಂದರೆಯಿಲ್ಲ. ಆದರೆ, ಇತಿಹಾಸದ ಶಿಕ್ಷಕರೇ ಈ ಸಿನಿಮಾ ನೋಡಿ ನನ್ನ ಕಣ್ಣು ತೆರೆಯಿತು, ನಾವು ಮಕ್ಕಳಿಗೆ ತಪ್ಪು ಇತಿಹಾಸ ಕಲಿಸುತ್ತಿದ್ದೆವು ಎಂದು ಹೇಳುತ್ತಿರುವುದು ನಿಜಕ್ಕೂ ಆತಂಕಕಾರಿ’ ಎಂದು ಕಳವಳ ವ್ಯಕ್ತಪಡಿಸಿದರು. ಒಬ್ಬ ಶಿಕ್ಷಕ ನೂರು ಮಕ್ಕಳ ಮೇಲೆ ಪ್ರಭಾವ ಬೀರುತ್ತಾರೆ, ಆ ನೂರು ಮಕ್ಕಳು ಮತ್ತಷ್ಟು ಜನರ ಮೇಲೆ ಪ್ರಭಾವ ಬೀರುತ್ತಾರೆ. ಇದು ಸಮಾಜದ ಸ್ವಾಸ್ಥ್ಯವನ್ನು ಕೆಡಿಸುತ್ತದೆ ಎಂದು ಎಚ್ಚರಿಸಿದರು.
RSSಗೆ ಇತಿಹಾಸವೇ ಇಲ್ಲ!
ಆರ್ ಎಸ್ ಎಸ್ ನೂರು ವರ್ಷದ ಇತಿಹಾಸದ ಬಗ್ಗೆ ಪ್ರಶ್ನೆ ಎತ್ತಿದ ಖರ್ಗೆ, ‘ನಿಮ್ಮ 100 ವರ್ಷದ ಇತಿಹಾಸದಲ್ಲಿ ಮಾಡಿರುವ ಕೇವಲ 10 ಮಹತ್ವದ ಕೆಲಸಗಳನ್ನು ಹೇಳಿ ಎಂದರೆ ನಿಮ್ಮ ಬಳಿ ಉತ್ತರವಿಲ್ಲ. ಕೇರಳದ ಪ್ರವಾಹ ಅಥವಾ ವಯನಾಡ್‌ನಲ್ಲಿ ನೆರವು ನೀಡಿದೆವು ಎಂದು ಹೇಳಿಕೊಳ್ಳುತ್ತೀರಿ. ಅಂತಹ ಕೆಲಸಗಳನ್ನು ರೋಟರಿ ಕ್ಲಬ್‌ನವರೂ ಮಾಡುತ್ತಾರೆ, ನಮ್ಮ ಯೂತ್ ಕಾಂಗ್ರೆಸ್‌ನವರೂ ಮಾಡುತ್ತಾರೆ. ಅದಕ್ಕಾಗಿ ಸಂಘಟನೆಯ ಅಗತ್ಯವಿಲ್ಲ. ನರೇಂದ್ರ ಮೋದಿ ಅವರ ಬಗ್ಗೆ ಮತ್ತು ಆರ್ ಎಸ್ ಎಸ್ ಬಗ್ಗೆ ಬಂದ ಸಿನಿಮಾಗಳು 100 ಕೋಟಿ ಕೂಡ ದಾಟಲಿಲ್ಲ. ಏಕೆಂದರೆ ಅವುಗಳಲ್ಲಿ ಸೃಷ್ಟಿ ಮಾಡಲು ಏನೂ ಇಲ್ಲ, ನೈಜ ಇತಿಹಾಸವಿಲ್ಲ ಎಂದು ಟೀಕಿಸಿದರು .
ವಾಟ್ಸಾಪ್ ಯುನಿವರ್ಸಿಟಿ ಮತ್ತು ಬಾಡಿಗೆ ಭಾಷಣಕಾರರು:
‘ಇಂದು ನಿಜವಾದ ಇತಿಹಾಸಕ್ಕೆ ಎರಡು ದೊಡ್ಡ ಅಪಾಯಗಳಿವೆ. ಒಂದು ವಾಟ್ಸಾಪ್ ಯುನಿವರ್ಸಿಟಿ, ಇನ್ನೊಂದು ಸೋಶಿಯಲ್ ಮೀಡಿಯಾ. ನೋಟ್ ಬ್ಯಾನ್ ಆದಾಗ ಆರ್ಥಿಕ ತಜ್ಞರಾಗುವವರು, ಯುದ್ಧ ಬಂದಾಗ ಮಿಲಿಟರಿ ತಜ್ಞರಾಗುತ್ತಾರೆ, ಕರೋನಾ ಬಂದರೆ ಹೆಲ್ತ್ ಸ್ಪೆಷಲಿಸ್ಟ್ ಆಗುತ್ತಾರೆ. ಇವರ ಮುಂದೆ ಬೇರೆ ಓದಿದವರೆಲ್ಲ ವೇಸ್ಟ್ ಎಂಬಂತಾಗಿದೆ. ಇಂತಹ ಬಾಡಿಗೆ ಭಾಷಣಕಾರರನ್ನು ಕೋಟ್ ಮಾಡಿ ಬಿಜೆಪಿ ಮತ್ತು ಆರ್ ಎಸ್ ಎಸ್ ನಾಯಕರು ಮಾತನಾಡುತ್ತಿದ್ದಾರೆ’ ಎಂದು ಕಿಡಿಕಾರಿದ್ದಾರೆ.
ನೂರು ಬರಹಗಾರರ ಸೃಷ್ಟಿ:
ಕೇವಲ ಭಾಷಣ ಮಾಡುವುದರಿಂದ ಬದಲಾವಣೆ ಸಾಧ್ಯವಿಲ್ಲ ಎಂದು ಅರಿತಿರುವ ಪ್ರಿಯಾಂಕ್ ಖರ್ಗೆ, ‘ನಾನು ಇತ್ತೀಚೆಗೆ ಕೇವಲ ಭಾಷಣಕ್ಕೆ ಸೀಮಿತವಾಗಿಲ್ಲ. ಇತಿಹಾಸದ ಸತ್ಯಗಳನ್ನು ಜನರಿಗೆ ಮುಟ್ಟಿಸಲು ನೂರು ಹೊಸ ಬರಹಗಾರರನ್ನು ಸೃಷ್ಟಿಸುವ ಕೆಲಸ ಮಾಡುತ್ತಿದ್ದೇನೆ. ನಾವು ಎಚ್ಚೆತ್ತುಕೊಳ್ಳುವುದು ಈಗ ಅನಿವಾರ್ಯವಾಗಿದೆ’ ಎಂದು ಸಭೆಯಲ್ಲಿ ಕರೆ ನೀಡಿದರು. ಈ ಮೂಲಕ ಇತಿಹಾಸದ ತಿರುಚುವಿಕೆ ಮತ್ತು ಸಮಾಜದ ಒಗ್ಗಟ್ಟಿನ ಅನಿವಾರ್ಯತೆಯ ಬಗ್ಗೆ ಪ್ರಿಯಾಂಕ್ ಖರ್ಗೆ ಈ ಮಾತುಗಳು ಈಗ ರಾಜಕೀಯ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ನಾಂದಿ ಹಾಡಿವೆ.