
ಗುಜರಾತ್‌ನ ಪಲನ್‌ಪುರದಲ್ಲಿ, ತಾನು ನೀಡಿದ್ದ ಸಾಲ ಮತ್ತು ಚಿನ್ನವನ್ನು ವಾಪಸ್ ಕೇಳಿದ ಮಾಜಿ ಮಾಲಕಿಯನ್ನು ಮನೆಗೆಲಸದಾಕೆ ಕೊಲೆ ಮಾಡಿದ್ದಾಳೆ. ನೀಡಿದ ಸಾಲ ವಾಪಸ್ ಕೇಳಿದ್ದೇ ಈಗ ಜೀವಕ್ಕೆ ಎರವಾಗಿದೆ.
ಸಾಲ ವಾಪಸ್ ಕೇಳಿದ್ದೇ ಜೀವಕ್ಕೆ ಎರವಾಯ್ತು:
ನವದೆಹಲಿ: ನೀಡಿದ ಚಿನ್ನ ಹಾಗೂ ಸಾಲವನ್ನು ವಾಪಸ್ ಕೇಳಿದ್ದಕ್ಕೆ ತಾನು ಈ ಹಿಂದೆ ಕೆಲಸ ಮಾಡುತ್ತಿದ್ದ ಮನೆಯ ಮಾಲಕಿಯನ್ನೆ ಮನೆ ಕೆಲಸದಾಕೆ ಕೊಲೆ ಮಾಡಿದಂತಹ ಆಘಾತಕಾರಿ ಘಟನೆ ಗುಜರಾತ್‌ನ ಪಲನ್‌ಪುರದಲ್ಲಿ ನಡೆದಿದೆ. ಕೊಲೆಯಾದ ಮಹಿಳೆಯನ್ನು ಶಾಂತಿ ಬೆನ್ ಅಕೆಡಿವಾಲಾ ಎಂದು ಗುರುತಿಸಲಾಗಿದೆ. ಮಾರ್ಚ್ 22ರಿಂದ ಇವರು ನಾಪತ್ತೆಯಾಗಿದ್ದರು. ರೇಖಾ ರಾಥೋರ್ ಎಂಬಾಕೆಯೇ ಶಾಂತಿ ಅವರನ್ನು ಕೊಲೆ ಮಾಡಿದ ಮನೆ ಕೆಲಸದಾಕೆ. ಆರೋಪಿ ರೇಖಾ ಹಾಗೂ ಮನೆ ಮಾಲಕಿ ಶಾಂತಿ ಸುಮಾರು 15 ವರ್ಷಗಳಿಂದ ಪರಸ್ಪರ ಪರಿಚಿತರಾಗಿದ್ದರು. ಮನೆಗೆ ಕೆಲಸಕ್ಕೆ ಸೇರಿಕೊಂಡ ರೇಖಾ ಮುಂದೆ ಮನೆಯೊಡತಿ ಶಾಂತಿಯ ಆತ್ಮೀಯ ಸ್ನೇಹಿತೆ ಆಗಿದ್ದಳು. ನಂತರ ರೇಖಾ ಮನೆ ಕೆಲಸ ಮಾಡುವುದನ್ನು ಬಿಟ್ಟು ಪೀಠೋಪಕರಣದ ಉದ್ಯಮವನ್ನು ಆರಂಭಿಸಿದ್ದಳು.
ಮನೆ ಕೆಲಸದಾಕೆಯನ್ನು ಸ್ನೇಹಿತೆ ಮಾಡ್ಕೊಂಡಿದ್ದೆ ತಪ್ಪಾಯ್ತು
ಇದೇ ಸಮಯದಲ್ಲಿ ಶಾಂತಿ ಬೆನ್ ರೇಖಾಗೆ ಭಾರಿ ಮೊತ್ತದ ಹಣ ಹಾಗೂ ಆಭರಣವನ್ನು ಸಾಲವಾಗಿ ನೀಡಿದ್ದರು. ಆಕೆಯ ಉದ್ಯಮಕ್ಕೆ ಸಹಾಯ ಮಾಡುವುದಕ್ಕಾಗಿ ಶಾಂತಿ ಬೆನ್ ಈ ರೀತಿ ತಮ್ಮಲ್ಲಿದ್ದ ಹಣ ನೀಡಿ ಸಹಾಯ ಮಾಡಿದ್ದರು. ಆದರೆ ಯಾವಾಗ ಶಾಂತಿ ಬೆನ್ ತನ್ನ ಹಣ ಹಾಗೂ ಆಭರಣ ವಾಪಸ್ ನೀಡುವಂತೆ ಕೇಳಿದರೋ ಆಗಲೇ ನೋಡಿ ಶುರುವಾಯ್ತು ಸಂಕಷ್ಟ. ಹೌದು ಕೊಟ್ಟ ಸಾಲವನ್ನು ವಾಪಸ್ ಕೇಳಿದಾಗ ಕ್ರಿಮಿನಲ್ ರೇಖಾ, ತನ್ನ ಗೆಳತಿಯಾದ ಶಾಂತಿ ಬೆನ್ ಅವರನ್ನೇ ಈ ಲೋಕದಿಂದ ಇಲ್ಲವಾಗಿಸುವುದಕ್ಕೆ ಸಂಚು ರೂಪಿಸಿದ್ದಾಳೆ.
ಉದ್ಯಮ ಸ್ಥಾಪಿಸಲು ಸಹಾಯ ಮಾಡಿದವಳಿಗೆ ಮೂಹೂರ್ತ ಇಟ್ಟ ಪಾಪಿ:
ಮಾರ್ಚ್ 22ರಂದು ರೇಖಾ, ಶಾಂತಿ ಬೆನ್ ಅವರನ್ನು ತನ್ನ ಪೀಠೋಪಕರಣಗಳ ಅಂಗಡಿಗೆ ಮಾತುಕತೆಗೆ ಬರುವಂತೆ ಕರೆದಿದ್ದಾಳೆ. ಹೀಗೆ ಆಕೆಯ ಮಾತು ನಂಬಿ ಹೋದ ಶಾಂತಿ ಬೆನ್ ಮರಳಿ ಮನೆ ಸೇರದೇ ಹೆಣವಾಗಿದ್ದಾರೆ. ತನ್ನ ಪೀಠೋಪಕರಣದ ಅಂಗಡಿಗೆ ಬಂದ ಶಾಂತಿಗೆ ಮೊದಲಿಗೆ ಕುಡಿಯುವ ಜ್ಯೂಸ್‌ನಲ್ಲಿ ಅಮಲು ಬರುವ ಪದಾರ್ಥ ನೀಡಿದ್ದಾಳೆ ಬಳಿಕ ಆಕೆ ಪ್ರಜ್ಞೆ ತಪ್ಪುತ್ತಿದ್ದಂತೆ ರೇಖಾ ತನ್ನ ನಾಲ್ವರು ಸಹಚರರ ಜೊತೆ ಸೇರಿ ಆಕೆಯ ಹತ್ಯೆ ಮಾಡಿದ್ದಾಳೆ.
ಕೊಲೆಯ ನಂತರ ಸಾಕ್ಷ್ಯ ನಾಶ ಮಾಡುವುದಕ್ಕೆ ಅರೋಪಿಗಳು ಯತ್ನಿಸಿದ್ದು, ಶಾಂತಿಬೆನ್ ಅವರ ಶವವನ್ನು ಒಂದು ಚೀಲದಲ್ಲಿ ತುಂಬಿಸಿದ್ದಾರೆ. ನಂತರ ಪಾಲನ್‌ಪುರದಲ್ಲಿರುವ ಬಳಕೆಯಲ್ಲಿ ಇಲ್ಲದ ಶೋ ರೂಂನ ನೆಲಮಾಳಿಗೆಯಲ್ಲಿ ಎಸೆದಿದ್ದಾರೆ. ಇತ್ತ ಶಾಂತಿಬೆನ್ ಅವರ ಕುಟುಂಬದವರು ಆಕೆಗಾಗಿ ಹುಡುಕಾಟ ನಡೆಸಿ ನಾಪತ್ತೆ ದೂರು ದಾಖಲಿಸಿದರು. ನಂತರ ತನಿಖೆಗಿಳಿದ ಪೊಲೀಸರು ಕೆಲ ಸುಳಿವುಗಳನ್ನು ಆಧರಿಸಿ ಈ ಕೃತ್ಯ ರೇಖಾಳೇ ಎಸಗಿರುವುದು ಎಂಬುದನ್ನು ಖಚಿತಪಡಿಸಿಕೊಂಡಿದ್ದಾರೆ.
ಶಾಂತಿ ಬೆನ್ ಕುಟುಂಬದವರಿಂದ ತೀವ್ರ ಆಕ್ರೋಶ
ಪೊಲೀಸರ ವಿಚಾರಣೆ ವೇಳೆ ಆಕೆಯೇ ಶಾಂತಿ ಬೆನ್ ಕತೆ ಮುಗಿಸಿದಾಳೆ ಎಂದು ಒಪ್ಪಿಕೊಂಡಿದ್ದಾಳೆ. ಇದಾದ ನಂತರ ಶಾಂತಿ ಬೆನ್ ಅವರ ಮಗಳು ನ್ಯಾನ್ಸಿ ಮತ್ತು ಸಹೋದರಿ ಕೈಲಾಶ್ ಬೆನ್ ಸೇರಿದಂತೆ ಅವರ ಕುಟುಂಬ ಸದಸ್ಯರು ಪೊಲೀಸ್ ಠಾಣೆಯಲ್ಲಿ ಪ್ರತಿಭಟನೆ ನಡೆಸಿದ್ದು, ರೇಖಾಗೆ ಸಾಧ್ಯವಾದಷ್ಟು ಕಠಿಣ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿದ್ದಾರೆ. ಆರಂಭದಲ್ಲಿ ಅವರು ಆಕೆಯ ದೇಹವನ್ನು ಪಡೆಯಲು ನಿರಾಕರಿಸಿದರು, ದ್ರೋಹಕ್ಕೆ ಪ್ರತಿಯಾಗಿ ಆರೋಪಿಯನ್ನು ಸಾರ್ವಜನಿಕವಾಗಿ ಮೆರವಣಿಗೆ ಮಾಡಬೇಕೆಂದು ಒತ್ತಾಯಿಸಿದರು. ಘಟನೆಗೆ ಸಂಬಂಧಿಸಿದಂತೆ ರೇಖಾ ರಾಥೋಡ್‌ನ ಸಹಾಯಕನನ್ನು ಬಂಧಿಸಲಾಗಿದ್ದು, ಪ್ರಕರಣದಲ್ಲಿ ಭಾಗಿಯಾದ ಉಳಿದ ಮೂವರು ಪರಾರಿಯಾಗಿದ್ದಾರೆ.
ಇದನ್ನೂ ಓದಿ: ಐಸ್ ಕ್ರೀಂ ಮಾರಿ ಜೀವನ ಮಾಡ್ತಿದ್ದವನ ಭೀಕರ ಹತ್ಯೆ : ತಲೆ ಕಡಿದು ಮನೆಗೊಯ್ದು ಅಡುಗೆ ಮಾಡಿದ ಕ್ರೂರಿ
ಒಟ್ಟಿನಲ್ಲಿ ಗೆಳತಿ ಮೇಲೆ ಬರಲಿ ಎಂದು ಒಳ್ಳೆದು ಮಾಡುವುದಕ್ಕೆ ಹೋಗಿ ಮಹಿಳೆಯೊಬ್ಬರು ಜೀವವನ್ನೇ ಕಳೆದುಕೊಂಡಿದ್ದು, ಒಳ್ಳೆಯವರಿಗೆ ಇದು ಕಾಲವಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.
ಇದನ್ನೂ ಓದಿ: ಪ್ರೇಮ ವೈಫಲ್ಯದಿಂದ ಸಾವಿಗೀಡಾದ ಮಗನಿಗೆ ಪ್ರೇಯಸಿ ಜೊತೆ ಪ್ರತಿವರ್ಷವೂ ಮದುವೆ ಮಾಡ್ತಿದ್ದಾರೆ ಪೋಷಕರು