
ಬೆಂಗಳೂರು, ಮಾರ್ಚ್ 30: ಹೊಸ ಹಣಕಾಸು ವರ್ಷದ ಆರಂಭದ ದಿನವೇ ವಾಹನ ಸವಾರರಿಗೆ ದೊಡ್ಡ ಆಘಾತ ಎದುರಾಗಿದೆ. ಏಪ್ರಿಲ್ 1 ಬುಧವಾರದಿಂದ ಜಾರಿಗೆ ಬರುವಂತೆ ದೇಶಾದ್ಯಂತ ರಾಷ್ಟ್ರೀಯ ಹೆದ್ದಾರಿ ಪ್ರಯಾಣ ಶುಲ್ಕ (ಟೋಲ್ ಬೆಲೆ) ಹೆಚ್ಚಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ತೀರ್ಮಾನಿಸಿದೆ. ಕರ್ನಾಟಕದ ಪ್ರಮುಖ 9 ರಸ್ತೆಗಳಲ್ಲಿ ಸಂಚಾರ ನಡೆಸುವ ಕಾರು, ಬಸ್ ಮತ್ತು ಲಾರಿಗಳ ಟೋಲ್ ದರದಲ್ಲಿ ಶೇ 4 ರಿಂದ 5ರಷ್ಟು ಏರಿಕೆಯಾಗಲಿದೆ.
ಟೋಲ್ ವಾರ್ಷಿಕ ಪಾಸ್ ದರವೂ ಏರಿಕೆ!
ರಾಜ್ಯದ ಜೀವನಾಡಿಗಳಂತಿರುವ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ, ಬೆಂಗಳೂರು-ತುಮಕೂರು, ಬೆಂಗಳೂರು-ಹೈದರಾಬಾದ್ ಮತ್ತು ಬೆಂಗಳೂರು-ಹಾಸನ ಸೇರಿದಂತೆ ಒಟ್ಟು 9 ರಾಷ್ಟ್ರೀಯ ಹೆದ್ದಾರಿಗಳಲ್ಲಿ ಹೊಸ ದರ ಅನ್ವಯವಾಗುತ್ತದೆ. ದ್ವಿಚಕ್ರ ವಾಹನಗಳು ಮತ್ತು ಉಳಿದೆಲ್ಲಾ ವರ್ಗದ ವಾಹನಗಳಿಗೆ ಈ ಹೊರೆ ತಟ್ಟಲಿದೆ. ವಿಶೇಷವಾದ ವಾರ್ಷಿಕ ಪಾಸ್ ದರವೂ ಸಹ ಏರಿಕೆಯಾಗಲಿದೆ, 3,000 ರೂ. ಇದ್ದ ಶುಲ್ಕ ಈಗ 3,075 ರೂ.ಗೆ ಏರಲಿದೆ.
ಯಾವೆಲ್ಲ ರಸ್ತೆಗಳಲ್ಲಿ ಟೋಲ್ ದರ?
- ರಾಷ್ಟ್ರೀಯ ಹೆದ್ದಾರಿ 48: ಬೆಂಗಳೂರು – ತುಮಕೂರು-ಹಾವೇರಿ-ಬೆಳಗಾವಿ-ಮುಂಬೈ
- ರಾಷ್ಟ್ರೀಯ ಹೆದ್ದಾರಿ 275: ಬೆಂಗಳೂರು – ಮೈಸೂರು ಎಕ್ಸ್ ಪ್ರೆಸ್ ವೆ
- ರಾಷ್ಟ್ರೀಯ ಹೆದ್ದಾರಿ 44: ಬೆಂಗಳೂರು – ಹೈದರಾಬಾದ್
- ರಾಷ್ಟ್ರೀಯ ಹೆದ್ದಾರಿ – 75 ಬೆಂಗಳೂರು- ಹಾಸನ- ಮಂಗಳೂರು
- ರಾಷ್ಟ್ರೀಯ ಹೆದ್ದಾರಿ 75: ಬೆಂಗಳೂರು-ಹೊಸಕೋಟೆ-ಕೋಲಾರ
- ರಾಷ್ಟ್ರೀಯ ಹೆದ್ದಾರಿ 66: ಮಂಗಳೂರು-ಉಡುಪಿ-ಕುಂದಾಪುರ
- ರಾಷ್ಟ್ರೀಯ ಹೆದ್ದಾರಿ 50/52: ವಿಜಯಪುರ-ಹೊಸಪೇಟೆ-ಚಿತ್ರದುರ್ಗ
- ರಾಷ್ಟ್ರೀಯ ಹೆದ್ದಾರಿ 150A: ಹಿರಿಯೂರು-ಬಳ್ಳಾರಿ-ಜೇವರ್ಗಿ
- ರಾಷ್ಟ್ರೀಯ ಹೆದ್ದಾರಿ 766 ಮೈಸೂರು ಟು ಗುಂಡ್ಲಪೇಟೆ
ಇದನ್ನೂ ಓದಿ: ಕರ್ನಾಟಕ ವಾಹನ ಸವಾರರಿಗೆ ಶಾಕ್, ಏಪ್ರಿಲ್ 1 ರಿಂದ ಟೋಲ್ ದರ
ಸಾರ್ವಜನಿಕರ ಆಕ್ರೋಶ
ಪ್ರತಿ ವರ್ಷ ನಿರ್ವಹಣೆಯ ಹೆಸರಿನಲ್ಲಿ ಶೇ 5ರಷ್ಟು ಟೋಲ್ ದರ ಏರಿಕೆ ಮಾಡುತ್ತಿರುವುದಕ್ಕೆ ವಾಹನ ಸವಾರರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ನಮ್ಮ ಸಂಬಳ ವರ್ಷಕ್ಕೆ ಶೇ 1 ಅಥವಾ 2ರಷ್ಟು ಮಾತ್ರ ಏರಿಕೆಯಾಗುತ್ತದೆ, ಆದರೆ ಟೋಲ್ ದರ ಮಾತ್ರ ಶೇ. 5ರಷ್ಟು ಹೆಚ್ಚಾಗುತ್ತಿದೆ. ಇದು ಎಷ್ಟು ಸರಿ’ ಎಂದು ವಾಹನವನ್ನು ಪ್ರಶ್ನಿಸುತ್ತಿದ್ದಾರೆ. ಅಗತ್ಯ ವಸ್ತುಗಳ ಬೆಲೆ ಏರಿಕೆ ನಡುವೆ ಟೋಲ್ ದರ ಏರಿಕೆ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಿದೆ.
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ