
ವೈದ್ಯರನ್ನು ಅವಧಿಗೂ ಮುನ್ನ ಬದಲಾಯಿಸುವುದರಿಂದ ಆಗುವ ತಕ್ಷಣದ ಪರಿಣಾಮವೆಂದರೆ ‘ರೀಸೆಟ್ ಬಟನ್ ಎಫೆಕ್ಟ್’ (ಮತ್ತೆ ಮೊದಲಿನಿಂದ ಆರಂಭವಾಗುವ ಪ್ರಕ್ರಿಯೆ). ವೈದ್ಯಕೀಯ ವಿಜ್ಞಾನವು ಸಾಕ್ಷ್ಯಾಧಾರಿತವಾಗಿ ನಡೆಯುತ್ತದೆ.
– ಡಾ. ರವೀಂದ್ರ ಸೆಟ್ಟಿ, ಸೀನಿಯರ್ ಕನ್ಸಲ್ಟೆಂಟ್ ಮತ್ತು ಕಾರ್ಡಿಯಾಕ್ ಸರ್ಜನ್, ನಾರಾಯಣ ಹೆಲ್ತ್ ಸಿಟಿ, ಬೆಂಗಳೂರು
ದೆಹಲಿ, ಮುಂಬೈ ಮತ್ತು ಬೆಂಗಳೂರಿನಂತಹ ಮಹಾನಗರಗಳಲ್ಲಿ ಈಗ ಒಂದು ಹೊಸ ಟ್ರೆಂಡ್ ನಡೆಯುತ್ತಿದೆ. ರೋಗಿಯೊಬ್ಬರು ತಮಗಿರುವ ನಿರಂತರ ಕೆಮ್ಮಿನ ಚಿಕಿತ್ಸೆಗಾಗಿ ಒಬ್ಬ ತಜ್ಞ ವೈದ್ಯರನ್ನು ಭೇಟಿ ಮಾಡುತ್ತಾರೆ. ವೈದ್ಯರು ಅವರಿಗೆ ಐದು ದಿನಗಳ ಕಾಲದ ಔಷಧಿಯನ್ನು ನೀಡುತ್ತಾರೆ. ಆದರೆ ಮೂರನೇ ದಿನದ ಬೆಳಿಗ್ಗೆಯ ವೇಳೆಗೆ, ಕೆಮ್ಮು ಇನ್ನೂ ಗುಣವಾಗದ ಕಾರಣ ರೋಗಿಯು ಹತಾಶೆಗೊಳ್ಳುತ್ತಾರೆ. ತಕ್ಷಣವೇ ಅವರು ಅರ್ಧಕ್ಕೆ ನಿಲ್ಲಿಸಿದ ಔಷಧಿ ಚೀಟಿಗಳು ಮತ್ತು ಸ್ಕ್ಯಾನ್ ವರದಿಗಳ ಕಡತವನ್ನು ಹಿಡಿದುಕೊಂಡು ಮತ್ತೊಂದು ಕ್ಲಿನಿಕ್ ಅಥವಾ ಆಸ್ಪತ್ರೆಯ ಕಾಯುವ ಕೋಣೆಯಲ್ಲಿ ಕುಳಿತಿರುತ್ತಾರೆ. ಕೆಲವೇ ಗಂಟೆಗಳಲ್ಲಿ ಕೆಮ್ಮನ್ನು ಗುಣಪಡಿಸುವ ‘ಮಂತ್ರದಂಡ’ ಹೊಂದಿರುವ ಒಬ್ಬ ‘ಉತ್ತಮ’ ವೈದ್ಯರಿಗಾಗಿ ಅವರ ಹುಡುಕಾಟ ಸಾಗಿರುತ್ತದೆ.
ಈ ಅಭ್ಯಾಸವನ್ನು ವೈದ್ಯಕೀಯ ಭಾಷೆಯಲ್ಲಿ “ಡಾಕ್ಟರ್ ಶಾಪಿಂಗ್” ಎಂದು ಕರೆಯಲಾಗುತ್ತದೆ. ಇದು ಇಂದು ಭಾರತದ ನಗರ ಪ್ರದೇಶಗಳಲ್ಲಿ ಸಾಮಾನ್ಯ ಅನ್ನುವಷ್ಟು ಜಾಸ್ತಿಯಾಗಿದೆ. ಅದಕ್ಕೆ ಕಾರಣ ಆತಂಕ, ಪ್ರಾಥಮಿಕ ಚಿಕಿತ್ಸೆಯ ಬಗ್ಗೆ ಸರಿಯಾದ ಮಾರ್ಗದರ್ಶನ ಇಲ್ಲದಿರುವುದು ಮತ್ತು ಖಾಸಗಿ ವೈದ್ಯರು ಸುಲಭವಾಗಿ ಲಭ್ಯವಿರುವುದು. ಈ ಅಭ್ಯಾಸದಿಂದ ರೋಗಿಗಳು ತಮಗೆ ಅರಿವಿಲ್ಲದೆಯೇ ಗುಣಮುಖರಾಗುವ ಪ್ರಕ್ರಿಯೆಯನ್ನು ವಿಳಂಬಗೊಳಿಸಿಕೊಳ್ಳುತ್ತಿದ್ದಾರೆ. ಇದು ಮೇಲ್ನೋಟಕ್ಕೆ ಆರೋಗ್ಯ ಕಾಪಾಡುವ ಕುರಿತು ತೋರುತ್ತಿರುವ ಜಾಗರೂಕತೆಯಂತೆ ಕಂಡರೂ, ಚಿಕಿತ್ಸಾ ಚಕ್ರ (ಟ್ರೀಟ್ ಮೆಂಟ್ ಸೈಕಲ್) ಪೂರ್ಣಗೊಳ್ಳುವ ಮೊದಲೇ ಒಬ್ಬ ವೈದ್ಯರಿಂದ ಇನ್ನೊಬ್ಬ ವೈದ್ಯರ ಬಳಿಗೆ ಹೋಗುವುದು ವೈದ್ಯಕೀಯ ಅಸ್ತವ್ಯಸ್ತತೆ ಮತ್ತು ಆರ್ಥಿಕ ನಷ್ಟಕ್ಕೆ ಕಾರಣಾಗುತ್ತದೆ.
ಮತ್ತೆ ಮೊದಲಿನಿಂದ ಆರಂಭ ಮತ್ತು ಆರ್ಥಿಕ ನಷ್ಟ
ವೈದ್ಯರನ್ನು ಅವಧಿಗೂ ಮುನ್ನ ಬದಲಾಯಿಸುವುದರಿಂದ ಆಗುವ ತಕ್ಷಣದ ಪರಿಣಾಮವೆಂದರೆ ‘ರೀಸೆಟ್ ಬಟನ್ ಎಫೆಕ್ಟ್’ (ಮತ್ತೆ ಮೊದಲಿನಿಂದ ಆರಂಭವಾಗುವ ಪ್ರಕ್ರಿಯೆ). ವೈದ್ಯಕೀಯ ವಿಜ್ಞಾನವು ಸಾಕ್ಷ್ಯಾಧಾರಿತವಾಗಿ ನಡೆಯುತ್ತದೆ. ಯಾವುದೇ ಜವಾಬ್ದಾರಿಯುತ ವೈದ್ಯರು, ರೋಗಿಯು ಹಿಂದಿನ ವೈದ್ಯರ ಬಗ್ಗೆ ಹೇಳುವ ಮೌಖಿಕ ಮಾತುಗಳನ್ನಷ್ಟೇ ಆಧರಿಸಿ ಚಿಕಿತ್ಸಾ ಕ್ರಮವನ್ನು ಸೂಚಿಸುವುದಿಲ್ಲ. ನೀವು ಹೊಸ ವೈದ್ಯರ ಸಮಾಲೋಚನಾ ಕೊಠಡಿಯನ್ನು ಪ್ರವೇಶಿಸಿದಾಗ, ರೋಗನಿರ್ಣಯದ ಪ್ರಕ್ರಿಯೆಯು ಮೊದಲಿನಿಂದ ಪ್ರಾರಂಭವಾಗುತ್ತದೆ. ನಿಮ್ಮ ಹಿಂದಿನ ದೈಹಿಕ ತಪಾಸಣೆಯ ಸೂಕ್ಷ್ಮತೆಗಳ ಅರಿವಿಲ್ಲದ ಹೊಸ ವೈದ್ಯರು, ಸಹಜವಾಗಿಯೇ ಹೊಸ ಸರಣಿಯ ಪರೀಕ್ಷೆಗಳನ್ನು ಮಾಡಿಸಲು ಸೂಚಿಸುತ್ತಾರೆ. ಇದು ಅನಗತ್ಯವಾದ ಪುನರಾವರ್ತಿತ ಪರೀಕ್ಷೆಗಳ ಚಕ್ರಕ್ಕೆ ರೋಗಿಗಳನ್ನು ದೂಡುತ್ತದೆ.
ಇದರಿಂದಾಗಿ ಒಂದೇ ರೀತಿಯ ರಕ್ತದ ವರದಿಗಳು, ಲಿವರ್ ಫಂಕ್ಷನ್ ಟೆಸ್ಟ್ ಮತ್ತು ಕಿಡ್ನಿ ಪ್ಯಾನಲ್ ಪರೀಕ್ಷೆಗಳನ್ನು ಮತ್ತೊಮ್ಮೆ ಮಾಡಿಸಬೇಕಾಗುತ್ತದೆ. ಯಾವುದೇ ಹೊಸ ಮಾಹಿತಿಯನ್ನು ನೀಡದಿದ್ದರೂ, ಪದೇ ಪದೇ ಎಕ್ಸ್-ರೇ ಅಥವಾ ಸಿಟಿ ಸ್ಕ್ಯಾನ್ ಮಾಡಿಸುವುದರಿಂದ ನಿಮ್ಮ ದೇಹವು ವಿಕಿರಣಕ್ಕೆ ಹೆಚ್ಚು ಒಡ್ಡಿಕೊಳ್ಳುತ್ತದೆ. ಅಲ್ಲದೇ ಸಮಾಲೋಚನಾ ಶುಲ್ಕವೂ ಜಾಸ್ತಿಯಾಗುತ್ತದೆ. ಪ್ರತೀ ಬಾರಿ ಹೊಸ ವೈದ್ಯರ ಭೇಟಿಗೆ ಹೋದಾಗಲೂ ಆರಂಭಿಕ ಶುಲ್ಕವು ‘ಫಾಲೋ-ಅಪ್’ ಭೇಟಿ ಶುಲ್ಕಕ್ಕಿಂತ ಹೆಚ್ಚಿರುತ್ತದೆ. ಭಾರತದಲ್ಲಿ ಆರೋಗ್ಯ ವೆಚ್ಚದ ಬಹುಪಾಲು ಭಾಗವನ್ನು ಜನರು ತಮ್ಮ ಕೈಯಿಂದಲೇ ಭರಿಸಬೇಕಾಗಿರುವುದರಿಂದ, ಇದು ಕುಟುಂಬದ ಬಜೆಟ್ ಮೇಲೆ ನೇರ ಹೊಡೆತ ನೀಡುತ್ತದೆ. ಇಲ್ಲಿ ನೀವು ಗುಣಮುಖರಾಗಲು ಹಣ ನೀಡುತ್ತಿಲ್ಲ; ಬದಲಾಗಿ, ಒಂದೇ ಸತ್ಯವನ್ನು ಪದೇ ಪದೇ ಸಾಬೀತುಪಡಿಸಲು ಹಣ ಪಾವತಿಸುತ್ತಿರುತ್ತೀರಿ.
ಬಹು-ಔಷಧಿ ಸೇವನೆಯ ಅಪಾಯ
ವೈದ್ಯರನ್ನು ಪದೇ ಪದೇ ಬದಲಾಯಿಸುವುದರಿಂದ ಉಂಟಾಗುವ ಅತ್ಯಂತ ಅಪಾಯಕಾರಿ ಅಡ್ಡಪರಿಣಾಮವೆಂದರೆ ‘ಪಾಲಿಫಾರ್ಮಸಿ’. ಏಕಕಾಲದಲ್ಲಿ ಹಲವಾರು ವಿವಿಧ ಔಷಧಿಗಳನ್ನು ಸೇವಿಸುವ ಸ್ಥಿತಿಯನ್ನು ಪಾಲಿಫಾರ್ಮಸಿ ಎನ್ನಲಾಗುತ್ತದೆ. ಇಡೀ ಚಿಕಿತ್ಸಾ ಪ್ರಕ್ರಿಯೆಯನ್ನು ಮೇಲ್ವಿಚಾರಣೆ ಮಾಡುವ ಒಬ್ಬ ನಿಗದಿತ ವೈದ್ಯರಿಲ್ಲದ ಸಂದರ್ಭದಲ್ಲಿ, ರೋಗಿಗಳು ಹೆಚ್ಚಾಗಿ ಒಂದೇ ಉದ್ದೇಶದ ಹತ್ತಾರು ಔಷಧಿಗಳನ್ನು ತೆಗೆದುಕೊಳ್ಳುವಂತಾಗುತ್ತದೆ. ನೀವು ಪ್ರತಿ ಬಾರಿ ವೈದ್ಯರನ್ನು ಬದಲಾಯಿಸಿದಾಗಲೂ, ಹೊಸ ವೈದ್ಯರು ಅದೇ ಜೆನರಿಕ್ ಔಷಧಿಯ ಬೇರೆ ಬ್ರಾಂಡ್ ನ ಹೆಸರನ್ನು ಸೂಚಿಸಬಹುದು.
ರೋಗಿಯು ಅರಿವಿಲ್ಲದೆಯೇ ಒಂದೇ ಗುಂಪಿನ (ಉದಾಹರಣೆಗೆ ಬೀಟಾ-ಬ್ಲಾಕರ್ ಅಥವಾ ಎಸಿಇ ಇನ್ಹಿಬಿಟರ್) ಎರಡು ಬೇರೆ ಬೇರೆ ಬ್ರಾಂಡ್ ನ ಮಾತ್ರೆಗಳನ್ನು ಸೇವಿಸಬಹುದು. ಇದು ರಕ್ತದೊತ್ತಡದಲ್ಲಿ ಅಪಾಯಕಾರಿ ಕುಸಿತಕ್ಕೆ ಕಾರಣವಾಗಬಹುದು. ಅಲ್ಲದೆ, ಸಮಗ್ರ ವೈದ್ಯಕೀಯ ದಾಖಲೆಗಳಿಲ್ಲದಿದ್ದರೆ, ಹೊಸ ವೈದ್ಯರು ನೀಡುವ ಔಷಧಿಯು ನೀವು ಈಗಾಗಲೇ ಬೇರೆ ದೀರ್ಘಕಾಲದ ಕಾಯಿಲೆಗೆ ತೆಗೆದುಕೊಳ್ಳುತ್ತಿರುವ ಔಷಧಿಯೊಂದಿಗೆ ಸೇರಿ ಕೆಟ್ಟ ಪ್ರತಿಕ್ರಿಯೆ ತೋರಬಹುದು. ಇದರ ಫಲಿತಾಂಶ ಗುಣಮುಖವಾಗುವುದಲ್ಲ, ಬದಲಾಗಿ ಔಷಧಿಗಳಿಂದಲೇ ಪ್ರೇರಿತವಾದ ಹೊಸ ವೈದ್ಯಕೀಯ ಸಮಸ್ಯೆಗಳು ಸೃಷ್ಟಿಯಾಗುತ್ತವೆ. ಇವುಗಳನ್ನು ಗುಣಪಡಿಸಲು ಮತ್ತೆ ಹೆಚ್ಚಿನ ಚಿಕಿತ್ಸೆಯ ಅಗತ್ಯ ಬೀಳುತ್ತದೆ.
ರೋಗನಿರ್ಣಯಕ್ಕೆ ಅಡ್ಡಿ
ಅನೇಕ ಜನರು ವೈದ್ಯರು ನೀಡುವ ಪ್ರಿಸ್ಕ್ರಿಪ್ಷನ್ ಅನ್ನು ಅಂತಿಮ ಎಂದು ಭಾವಿಸುತ್ತಾರೆ, ಆದರೆ ಒಬ್ಬ ವೈದ್ಯರಿಗೆ ಅದು ರೋಗನಿರ್ಣಯದ ಆಧಾರದ ಮೇಲೆ ರೂಪಿಸಿದ ಒಂದು ‘ಟೂಲ್ ಕಿಟ್’ ಇದ್ದಂತೆ. ವೈದ್ಯಕೀಯ ಚಿಕಿತ್ಸೆಯು ಹಂತಹಂತವಾಗಿ ರೋಗದ ಮೂಲವನ್ನು ಪತ್ತೆಹಚ್ಚುವ ಪ್ರಕ್ರಿಯೆಯನ್ನು ಒಳಗೊಂಡಿರುತ್ತದೆ. ಒಬ್ಬ ವೈದ್ಯರು ಮೊದಲು ಸಾಮಾನ್ಯ ಅಥವಾ ಪ್ರಾಥಮಿಕ ಹಂತದ ಚಿಕಿತ್ಸೆಯನ್ನು ಪ್ರಾರಂಭಿಸಬಹುದು. ರೋಗಿಯು ಮರಳಿ ಬಂದು ಗುಣಮುಖವಾಗಿಲ್ಲ ಎಂದು ತಿಳಿಸಿದರೆ, ಅದು ವೈದ್ಯರಿಗೆ ಒಂದು ಪ್ರಮುಖ ಮಾಹಿತಿಯಾಗುತ್ತದೆ. ಆ ಮಾಹಿತಿಯ ಆಧಾರದ ಮೇಲೆ ಕೆಮ್ಮು ಅಥವಾ ಸೋಂಕಿನ ಲಕ್ಷಣಗಳನ್ನು ಮತ್ತಷ್ಟು ಆಳವಾಗಿ ತಪಾಸಣೆ ಮಾಡಿ, ಉತ್ತಮ ಚಿಕಿತ್ಸೆ ನೀಡಲು ವೈದ್ಯರಿಗೆ ಸಾಧ್ಯವಾಗುತ್ತದೆ.
ಕೇವಲ ಮೂರು ದಿನಗಳಲ್ಲಿ ಮೊದಲ ಹಂತದ ಚಿಕಿತ್ಸೆ ಫಲ ನೀಡಲಿಲ್ಲ ಎಂಬ ಕಾರಣಕ್ಕೆ ರೋಗಿಯು ವೈದ್ಯರನ್ನು ಬದಲಾಯಿಸಿದಾಗ, ಈ ತಾರ್ಕಿಕ ಸರಪಳಿಯು ತುಂಡಾಗುತ್ತದೆ. ಎರಡನೇ ವೈದ್ಯರು ಮತ್ತೆ ಮೊದಲ ಹಂತದ ಚಿಕಿತ್ಸೆಯನ್ನೇ (ಅಥವಾ ಅದರಲ್ಲಿ ಸ್ವಲ್ಪ ಬದಲಾವಣೆ ಮಾಡಿ) ಪ್ರಾರಂಭಿಸುತ್ತಾರೆ. ಇದರಿಂದ ರೋಗಿಯು ಕೇವಲ ಪ್ರಾಥಮಿಕ ಹಂತದ ಚಿಕಿತ್ಸಾ ಚಕ್ರದಲ್ಲೇ ಸಿಲುಕಿಕೊಳ್ಳುತ್ತಾರೆ. ಸಾಮಾನ್ಯ ಸೋಂಕುಗಳ ಸಂದರ್ಭದಲ್ಲಿ ಈ ವಿಳಂಬವು ದೊಡ್ಡ ಆತಂಕವನ್ನು ಉಂಟುಮಾಡದಿರಬಹುದು. ಆದರೆ, ಕ್ಯಾನ್ಸರ್ ನಂತಹ ಮಾರಕ ಕಾಯಿಲೆಗಳು ಅಥವಾ ಆಟೋಇಮ್ಯೂನ್ ಕಾಯಿಲೆಗಳ ಸಂದರ್ಭದಲ್ಲಿ ಇಂತಹ ವಿಳಂಬವು ಅಪಾಯಕಾರಿಯಾಗಬಹುದು. ಏಕೆಂದರೆ ಇಂತಹ ಕಾಯಿಲೆಗಳನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚುವುದು ಜೀವನ ಮತ್ತು ಸಾವಿನ ನಡುವಿನ ವ್ಯತ್ಯಾಸವನ್ನು ನಿರ್ಧರಿಸುತ್ತದೆ.
ಆಂಟಿಬಯೋಟಿಕ್ ಪ್ರತಿರೋಧದ ಸಮಸ್ಯೆ
ಆಂಟಿಮೈಕ್ರೊಬಿಯಲ್ ರೆಸಿಸ್ಟೆನ್ಸ್, ಸಾಮಾನ್ಯವಾಗಿ ಇದನ್ನು ಎಎಂಆರ್ ಎಂದು ಕರೆಯಲಾಗುತ್ತದೆ. ಇದು ಭಾರತೀಯ ಆರೋಗ್ಯ ಸೇವಾ ಕ್ಷೇತ್ರದಲ್ಲಿ ತುರ್ತಾಗಿ ಗಮನಹರಿಸಬೇಕಾದ ವಿಷಯವಾಗಿದೆ ಮತ್ತು ಈ ಸಮಸ್ಯೆಗೆ ‘ಡಾಕ್ಟರ್ ಶಾಪಿಂಗ್’ ಒಂದು ಪ್ರಮುಖ ಕಾರಣವಾಗಿದೆ. ಇಲ್ಲಿ ರೋಗಿಗಳು ತಾವು ಬೇಗನೆ ಗುಣಮುಖರಾಗುತ್ತಿಲ್ಲ ಎಂದು ಭಾವಿಸಿ, ಚಿಕಿತ್ಸೆಯ ಮಧ್ಯದಲ್ಲೇ ವೈದ್ಯರನ್ನು ಬದಲಾಯಿಸಿದಾಗ, ಅವರು ಸಾಮಾನ್ಯವಾಗಿ ಪ್ರಸ್ತುತ ತೆಗೆದುಕೊಳ್ಳುತ್ತಿರುವ ಆಂಟಿಬಯೋಟಿಕ್ ಗಳನ್ನು ಅರ್ಧಕ್ಕೆ ಕೈಬಿಟ್ಟು ಹೊಸ ಚಿಕಿತ್ಸಾ ಕ್ರಮವನ್ನು ಪ್ರಾರಂಭಿಸುತ್ತಾರೆ. ಹೀಗೆ ಔಷಧಿಯನ್ನು ಅಪೂರ್ಣವಾಗಿ ಸೇವಿಸುವುದರಿಂದ ಬ್ಯಾಕ್ಟೀರಿಯಾಗಳು ಸಂಪೂರ್ಣವಾಗಿ ನಾಶವಾಗುವುದಿಲ್ಲ.
ಬದಲಾಗಿ, ಬದುಕುಳಿದ ರೋಗಕಾರಕಗಳಿಗೆ ಪರಿಸ್ಥಿತಿಗೆ ತಕ್ಕಂತೆ ಹೊಂದಿಕೊಳ್ಳಲು, ರೂಪಾಂತರಗೊಳ್ಳಲು ಮತ್ತು ಆ ಔಷಧಿಯ ವಿರುದ್ಧವೇ ಹೋರಾಡಲು ತಳಿ ಸಂವರ್ಧನೆ ಮಾಡಿಕೊಳ್ಳಲು ಅವಕಾಶ ಮಾಡಿಕೊಟ್ಟಂತಾಗುತ್ತದೆ. ಈ ರೂಪಾಂತರಗೊಂಡ ಬ್ಯಾಕ್ಟೀರಿಯಾಗಳು ಸಾಮಾನ್ಯ ಚಿಕಿತ್ಸೆಗಳಿಗೆ ಮಣಿಯುವುದಿಲ್ಲ, ಇದು ‘ಸೂಪರ್ ಬಗ್ ಗಳ’ ಸೃಷ್ಟಿಗೆ ಕಾರಣವಾಗುತ್ತದೆ. ಭಾರತದಂತಹ ಅತಿ ಹೆಚ್ಚು ಜನಸಂಖ್ಯೆ ಇರುವ ಮತ್ತು ವಿವಿಧ ಔಷಧಿಗಳು ಸುಲಭವಾಗಿ ಲಭ್ಯವಿರುವ ದೇಶದಲ್ಲಿ ಈ ಸಮಸ್ಯೆ ಹೆಚ್ಚುತ್ತಾ ಹೋಗುತ್ತದೆ. ನೀವು ಅಗತ್ಯವಿಲ್ಲದಿದ್ದರೂ ಚಿಕಿತ್ಸೆಯನ್ನು ಅರ್ಧಕ್ಕೆ ನಿಲ್ಲಿಸಿದಾಗ ಅಥವಾ ಔಷಧಿಗಳನ್ನು ಬದಲಾಯಿಸಿದಾಗ, ಭವಿಷ್ಯದಲ್ಲಿ ಸಾಮಾನ್ಯ ಶಸ್ತ್ರಚಿಕಿತ್ಸೆಗಳು ಮತ್ತು ಸಣ್ಣಪುಟ್ಟ ಗಾಯಗಳು ಸಹ ಗುಣಪಡಿಸಲಾಗದ ಸೋಂಕುಗಳಾಗಿ ಜೀವಕ್ಕೆ ಕುತ್ತು ತರುವ ಪರಿಸ್ಥಿತಿಯನ್ನು ಅರಿವಿಲ್ಲದೆಯೇ ಸೃಷ್ಟಿಸುತ್ತಿರುತ್ತೀರಿ.
ಒಬ್ಬ ಉತ್ತಮ ರೋಗಿಯಾಗುವುದು ಹೇಗೆ: ಚಿಕಿತ್ಸೆ ಪಡೆಯಲು ಒಂದು ಮಾರ್ಗದರ್ಶಿ
ನಿಮ್ಮ ವೈದ್ಯರನ್ನು ಬದಲಾಯಿಸುವುದು ಎಲ್ಲಾ ಕಾಲದಲ್ಲೂ ತಪ್ಪಲ್ಲ; ವೈದ್ಯರಲ್ಲಿ ಸಹಾನುಭೂತಿಯ ಕೊರತೆ ಇದ್ದರೆ ಅಥವಾ ಸ್ಪಷ್ಟವಾಗಿ ತಪ್ಪು ರೋಗನಿರ್ಣಯ ಮಾಡಿದ್ದರೆ ಬದಲಾವಣೆ ಕೆಲವೊಮ್ಮೆ ಅಗತ್ಯವಿರುತ್ತದೆ. ಆದರೆ, ಆ ನಿರ್ಧಾರವು ಮಾಹಿತಿಯುಕ್ತವಾಗಿರಬೇಕೇ ಹೊರತು ಆತುರದ್ದಾಗಿರಬಾರದು. ಪ್ರಾಥಮಿಕ ಹಂತದ ಚಿಕಿತ್ಸೆಗಳೇ ಪದೇ ಪದೇ ಪುನರಾವರ್ತನೆಯಾಗುವುದನ್ನು ತಪ್ಪಿಸಲು, ನೀವು ಅನುಸರಿಸಬಹುದಾದ ಸರಳ ಮಾರ್ಗದರ್ಶಿ ಇಲ್ಲಿದೆ:
ಸಮಯ ಮಿತಿಯ ಬಗ್ಗೆ ಕೇಳಿ: ಸಮಾಲೋಚನೆಯ ಕೊನೆಯಲ್ಲಿ, ನಿಮ್ಮ ಸ್ಥಿತಿಯಲ್ಲಿ ಗಮನಾರ್ಹ ಬದಲಾವಣೆ ಕಾಣಲು ಎಷ್ಟು ದಿನಗಳು ಬೇಕಾಗಬಹುದು ಮತ್ತು ಒಂದು ವೇಳೆ ಗುಣಮುಖವಾಗದಿದ್ದರೆ ಮುಂದೆ ಏನು ಮಾಡಬೇಕು ಎಂದು ನಿಮ್ಮ ವೈದ್ಯರನ್ನು ಸ್ಪಷ್ಟವಾಗಿ ಕೇಳಿ.
ನಿಮ್ಮ ದಾಖಲೆಗಳನ್ನು ಒಗ್ಗೂಡಿಸಿ: ನೀವು ಸಂಪರ್ಕಿಸಿದ ಪ್ರತಿಯೊಬ್ಬ ವೈದ್ಯರ ಪ್ರಿಸ್ಕ್ರಿಪ್ಷನ್ ಮತ್ತು ವರದಿಗಳ ಒಂದು ಫೈಲ್ ಅಥವಾ ಡಿಜಿಟಲ್ ಫೋಲ್ಡರ್ ಅನ್ನು ಸಿದ್ಧವಿಟ್ಟುಕೊಳ್ಳಿ. ಎಂದಿಗೂ ನೆನಪಿನ ಶಕ್ತಿಯ ಮೇಲೆ ಮಾತ್ರ ಅವಲಂಬಿತರಾಗಬೇಡಿ.
ಎರಡನೇ ಅಭಿಪ್ರಾಯಕ್ಕೆ ಅನುಮತಿ ಕೇಳಿ: ನಿಮಗೆ ಆತಂಕವಿದ್ದರೆ, ನೀವು ಮತ್ತೊಬ್ಬ ವೈದ್ಯರ ಎರಡನೇ ಅಭಿಪ್ರಾಯವನ್ನು ಪಡೆಯಲು ಇಚ್ಛಿಸುತ್ತೀರಿ ಎಂದು ನಿಮ್ಮ ಪ್ರಸ್ತುತ ವೈದ್ಯರಿಗೆ ತಿಳಿಸಿ. ಒಬ್ಬ ವೃತ್ತಿಪರ ವೈದ್ಯರು ಸಾಮಾನ್ಯವಾಗಿ ಇದನ್ನು ಪ್ರೋತ್ಸಾಹಿಸುತ್ತಾರೆ ಮತ್ತು ಇತರ ತಜ್ಞರಿಗೆ ನೀಡಲು ಪೂರಕವಾದ ಸಾರಾಂಶವನ್ನು ಒದಗಿಸುತ್ತಾರೆ.
ಫಲಿತಾಂಶ ದೊರೆಯದಿದ್ದಾಗ ತಿಳಿಸಿ: ನಿಮ್ಮ ವೈದ್ಯರನ್ನು ಸಂಪೂರ್ಣವಾಗಿ ಕಡೆಗಣಿಸುವ ಬದಲು, ‘ಫಾಲೋ-ಅಪ್’ ಭೇಟಿಗೆ ಹೋಗಿ ಮತ್ತು ಹಿಂದಿನ ಔಷಧಿಯಿಂದ ನಿಮಗೆ ಗುಣವಾಗಿಲ್ಲ ಎಂದು ಅವರಿಗೆ ತಿಳಿಸಿ. ರೋಗದ ಬಗ್ಗೆ ಹೆಚ್ಚು ನಿರ್ದಿಷ್ಟವಾದ ರೋಗನಿರ್ಣಯ ಕಾರ್ಯಗಳು ಪ್ರಾರಂಭವಾಗುವ ಕ್ಷಣವೇ ಇದು.
ಕೊನೆಯ ಮಾತು
ಉತ್ತಮ ವೈದ್ಯರನ್ನು ಹುಡುಕುವ ತವಕವು ನಮಗಿರುವ ಅಸಹನೆಯ ಲಕ್ಷಣವಾಗಿದೆ. ಔಷಧಿಗಳು ಮೊದಲ ಬಾರಿಗೆ ಕೆಲಸ ಮಾಡದಿದ್ದಾಗ ವೈದ್ಯರನ್ನು ಬದಲಾಯಿಸುವ ಕೆಲಸವನ್ನು ನಮ್ಮಲ್ಲಿ ಹೆಚ್ಚಿನವರು ಕನಿಷ್ಠ ಒಂದು ಬಾರಿಯಾದರೂ ಮಾಡಿರುತ್ತೇವೆ. ಆದರೆ, ಈ ಅಭ್ಯಾಸವು ಅನೇಕ ಆರೋಗ್ಯ ಸಮಸ್ಯೆಗಳಿಗೆ ದಾರಿ ಮಾಡಿಕೊಡಬಹುದು. ನಿಮ್ಮ ಅಸಹನೆಗಾಗಿ ವೈದ್ಯರನ್ನು ದೂಷಿಸುವುದು ಚಿಕಿತ್ಸೆಯನ್ನು ಪಡೆಯುವ ಸರಿಯಾದ ಕ್ರಮವಲ್ಲ. ‘ಡಾಕ್ಟರ್ ಶಾಪಿಂಗ್’ ಮಾಡುವ ಪ್ರಲೋಭನೆಯನ್ನು ತಡೆಗಟ್ಟುವ ಮೂಲಕ, ನೀವು ನಿಮ್ಮ ಹಣವನ್ನು ಉಳಿಸಬಹುದು, ಅನಗತ್ಯ ಔಷಧಿಗಳಿಂದ ನಿಮ್ಮ ಆಂತರಿಕ ಅಂಗಗಳನ್ನು ರಕ್ಷಿಸಬಹುದು ಮತ್ತು ಮುಖ್ಯವಾಗಿ, ನಿಮ್ಮ ದೇಹವು ಗುಣಮುಖವಾಗಲು ಬೇಕಾದ ಅಗತ್ಯ ಸಮಯವನ್ನು ನೀಡಬಹುದು. ನೆನಪಿರಲಿ, ನಿಮಗೆ ವೈದ್ಯರ ಪ್ರಿಸ್ಕ್ರಿಪ್ಷನ್ ಎಷ್ಟು ಅಗತ್ಯವೋ, ನಿಮ್ಮ ವೈದ್ಯರಿಗೆ ನಿಮ್ಮ ಅಸಹನೆಯ ಬದಲು ತಾಳ್ಮೆಯೂ ಅಷ್ಟೇ ಅಗತ್ಯ.