
ಚಾಮರಾಜನಗರ, ಮಾರ್ಚ್ 30: ಮಾನವ ಕಾಡು ಪ್ರಾಣಿ ಸಂಘರ್ಷಕ್ಕೆ ಕುಖ್ಯಾತು ಪಡೆದ ಜಿಲ್ಲೆಗಳ ಮೇಲೆ ಚಾಮರಾಜನಗರದಲ್ಲಿ ಕಾಡನೆಗಳ ಉಪಟಳ ಮತ್ತೆ ಹೆಚ್ಚಾಗುತ್ತಿದೆ. ತಡರಾತ್ರಿ ಹನೂರು ತಾಲ್ಲೂಕಿನ ಚಿಕ್ಕರಂಗಶೆಟ್ಟಿ ದೊಡ್ಡಿಗೆ ನುಗ್ಗಿ ಒಂಟಿ ಸಲಗ ದಾಂಧಲೆ ನಡೆಸಿದರೆ, ಮಂಚಹಳ್ಳಿ ಬಳಿ ಕಾಡಾನೆ ಹಿಂಡು ರೈತರು ಕಷ್ಟಪಟ್ಟು ಬೆಳೆದಿದ್ದ ಟೊಮ್ಯಾಟೊ ಬೆಳೆಯನ್ನು ಸರ್ವನಾಶ ಮಾಡಿವೆ. ಮಂಜುನಾಥ್ ಎಂಬುವವರ ಜಮೀನಿನಲ್ಲಿ ಕಟಾವು ಮಾಡಿ ಇಟ್ಟಿದ್ದ ಕ್ವಿಂಟಾಲ್ ಗಟ್ಟಲೆ ಟೊಮ್ಯಾಟೋವನ್ನ ತಿಂದು ತೇಗಿ ಪರಾರಿಯಾಗಿವೆ. ಹೀಗಾಗಿ ಕತ್ತಲಾದರೆ ಸಾಕು ಮನೆಯಿಂದ ಹೊರಬರಲೂ ಈ ಭಾಗದ ಜನರು ಭಯಪಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಬಿಳಿಗಿರಿರಂಗನಬೆಟ್ಟ ಹುಲಿ ಸಂರಕ್ಷಿತಾರಣ್ಯ ಸಿಬ್ಬಂದಿಗೆ ತಿಳಿಸಿದರೂ ಈ ಬಗ್ಗೆ ಕ್ರಮ ಕೈಗೊಂಡಿಲ್ಲ. ಕಾಡಾನೆ ಉಪಟಳದಿಂದ ನಮಗೆ ಮುಕ್ತಿ ಕೊಡಿಸಿ ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಮತ್ತೊಂದೆಡೆ ದಿನ ನಿತ್ಯ ಕತ್ತಲಾದ್ರೆ ಸಾಕು ಹನೂರು ತಾಲ್ಲೂಕಿನ ಚಿಕ್ಕರಂಗಶೆಟ್ಟಿ ದೊಡ್ಡಿ ಗ್ರಾಮಕ್ಕೆ ನುಗ್ಗುವ ಒಂಟಿ ಸಲಗ ಪುಂಡಾಟ ಮೆರೆಯುತ್ತದೆ. ಸಿಕ್ಕ ಸಿಕ್ಕ ಕಡೆ ದಾಂಗುಡಿ ಇಡುವುದು ಸಾಲದು ಎಂದು ಜಮೀನಿನಲ್ಲಿ ಬೆಳೆದಿದ್ದ ಜೋಳ, ಕಬ್ಬುಗಳನ್ನ ತಿಂದು ನಾಶ ಪಡಿಸುತ್ತಿದೆ. ದೂರು ನೀಡಿದರೂ ಅರಣ್ಯ ಇಲಾಖೆ ಅಧಿಕಾರಿಗಳು ಸ್ಪಂದಿಸದೇ ಇರೋದು ಒಂದೆಡೆಯಾದರೆ, ಬ್ಯಾರಿಕೇಡ್‌ಗಳನ್ನು ಹಾಕಿದರೂ ಪ್ರಯೋಜನಕ್ಕೆ ಬರುತ್ತಿಲ್ಲ. ಪರಿಸ್ಥಿತಿ ಹೀಗಿರುವಾಗ ಕೃಷಿಯನ್ನೇ ನಂಬಿ ಬದುಕುತ್ತಿರುವ ಸ್ಥಳೀಯರು, ಕನಿಷ್ಠ ಜಮೀನಿಗೆ ಹೋಗೋದಾದರೂ ಹೇಗೆ? ಬೆಳೆದ ಬೆಳೆಗೆ ನೀರುಣಿಸೋದು ಸಾಧ್ಯವಾ? ಎಂದು ರೈತರು ಅರಣ್ಯ ಸಿಬ್ಬಂದಿ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಪುಸ್ತಕ ತಪ್ಪಿತೆಂದು ಹಿಡಿಯಲು ಹೋದಾಗ ದಿಢೀರ್ ಎದ್ದು ದಾಳಿ ಮಾಡಿದ ಹುಲಿ! ಆಮೇಲಾಗಿದ್ದೇ ಬೇರೆ
ರೈತರಿಂದ ಹೋರಾಟದ ಎಚ್ಚರಿಕೆ
ಕಾಡಾನೆಗಳೂ ಸೇರಿ ಕಾಡು ಪ್ರಾಣಿಗಳ ಉಪಟಳ ದಿನದಿಂದ ದಿನಕ್ಕೆ ಈ ಭಾಗದಲ್ಲಿ ಹೆಚ್ಚಾಗುತ್ತಿರುವ ಕಾರಣ ತುರ್ತಾಗಿ ಸಮಸ್ಯೆ ಇತ್ಯರ್ಥವಾಗದೇ ಇದ್ದಲ್ಲಿ ಹೋರಾಟ ನಡೆಸುವ ಎಚ್ಚರಿಕೆಯನ್ನೂ ರೈತರಿಗೆ ಸೂಚಿಸಲಾಗಿದೆ. ಸಾಲ ಮಾಡಿ ಬೆಳೆದ ಬೆಳೆ ತಮ್ಮ ಕೈಸೇರುವ ಮುನ್ನವೇ ಕಾಡು ಪ್ರಾಣಿಗಳ ಹಾವಳಿಯಿಂದ ನಷ್ಟವಾಗುತ್ತಿರುವ ಕಾರಣ ಅರಣ್ಯ ಇಳಾಖೆ ಈ ಬಗ್ಗೆ ಕ್ರಮ ಕೈಗೊಳ್ಳಲೇ ಬೇಕು ಎಂಬ ಒತ್ತಾಯವೂ ಸ್ಥಳೀಯರಿಂದ ಕೇಳಿಬಂದಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.