
ಗೋದಾಮಿನಲ್ಲಿ ಸಹೋದ್ಯೋಗಿಯೊಬ್ಬ ಮಹಿಳಾ ಉದ್ಯೋಗಿಯ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ ಆಘಾತಕಾರಿ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಘಟನೆ ಹಿನ್ನೆಲೆಯಲ್ಲಿ, ಕೆಲಸದ ಸ್ಥಳದಲ್ಲಿ ಮಹಿಳೆಯರ ಸುರಕ್ಷತೆಗಾಗಿ ಇರುವ ‘ಪೋಶ್ ಕಾಯ್ದೆ 2013’ರ ಮಹತ್ವ, ನಿಯಮ, ದೂರು ದಾಖಲಿಸುವ ಬಗ್ಗೆ ವಿವರ ತಿಳಿಸಲಾಗಿದೆ.
ನವದೆಹಲಿ/ಕೊಯಮತ್ತೂರು: ಭಾರತದ ಕೆಲಸದ ಸ್ಥಳಗಳಲ್ಲಿ ಮಹಿಳೆಯರ ಸುರಕ್ಷತೆ ಎಂಬುದು ಇಂದಿಗೂ ದೊಡ್ಡ ಪ್ರಶ್ನೆಯಾಗಿಯೇ ಉಳಿದಿದೆ ಎಂಬುದಕ್ಕೆ ಮತ್ತೊಂದು ಆಘಾತಕಾರಿ ಘಟನೆ ಸಾಕ್ಷಿಯಾಗಿದೆ. ಗೋದಾಮಿನ ಆಫೀಸಿನಲ್ಲಿ (Warehouse) ಕೆಲಸ ಮಾಡುತ್ತಿದ್ದ ಮಹಿಳಾ ಉದ್ಯೋಗಿಯನ್ನು ಮೇಲೆ ಆಕೆಯ ಸಹೋದ್ಯೋಗಿಯೇ ಎಳೆದಾಡಿ ತುಟಿ ಕಚ್ಚುತ್ತಾ ಲೈಂಗಿಕ ದೌರ್ಜನ್ಯ ಎಸಗಲು ಯತ್ನಿಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.
ಘಟನೆಯ ವಿವರ:
ಈ ಘಟನೆ ತಮಿಳುನಾಡಿದ ಕೊಯಮತ್ತೂರಿನ ವೇರ್‌ಹೌಸ್‌ನಲ್ಲಿ ನಡೆದಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಇನ್ನು ವೈರಲ್ ಆಗಿರುವ ವಿಡಿಯೋದಲ್ಲಿ, ಗೋದಾಮಿನ ಒಳಗೆ ಮಹಿಳೆಯೊಬ್ಬರು ಕೆಲಸ ಮಾಡುತ್ತಿರುವಾಗ ಅಲ್ಲಿಗೆ ಬರುವ ವ್ಯಕ್ತಿಯೊಬ್ಬ ಕಂಪ್ಯೂಟರ್‌ನಲ್ಲಿ ಏನೋ ತಪ್ಪಾಗಿದೆ ಎಂದು ತೋರಿಸುತ್ತಾ ಮುಂದಕ್ಕೆ ಬಾಗುತ್ತಾನೆ. ಕುರ್ಚಿಯಲ್ಲಿ ಕುಳಿತಿದ್ದ ಮಹಿಳಾ ಉದ್ಯೋಗಿ ಕಂಪ್ಯೂಟರ್‌ನಲ್ಲಿ ನೋಡುತ್ತಿದ್ದಾಗ ಮುಖದ ಹತ್ತಿರದಲ್ಲಿಯೇ ಟೇಬಲ್ ಬಳಿ ಬಗ್ಗಿದ್ದ ಪುರುಷ ಸಹೋದ್ಯೋಗಿ ಏಕಾಏಕಿ ಆಕೆಯ ತುಟಿಗೆ ಚುಂಬಿಸಲು ಮುಂದಾಗುತ್ತಾನೆ. ಇದಕ್ಕೆ ವಿರೋಧಿಸಿ ತಕ್ಷಣವೇ ಗಾಬರಿಬಿದ್ದು ಹಿಂದಕ್ಕೆ ಸರಿದ ಮಹಿಳಾ ಉದ್ಯೋಗಿಯನ್ನ ಹಿಡಿದು ಎಳೆದಾಡಿ, ಬಲವಂತವಾಗಿ ಮುತ್ತಿಡಲು ಪ್ರಯತ್ನಿಸುತ್ತಾನೆ. ಇದ್ಯಾಕೋ ಗಂಭೀರ ಪರಿಸ್ಥಿತಿಗೆ ಹೋಗುತ್ತದೆ ಎಂದು ಎಚ್ಚೆತ್ತ ಮಹಿಳೆ ಆತನಿಂದ ತಪ್ಪಿಸಿಕೊಳ್ಳಲು ಚೇರಿನಿಂದ ಎದ್ದು ಹಿಂದಕ್ಕೆ ಓಡಿ ಹೋಗುತ್ತಾರೆ.
ಈ ವಿಡಿಯೋವನ್ನು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ರಮೇಶ್ ತಿವಾರಿ ಎಂಬುವವರು ಹಂಚಿಕೊಂಡಿದ್ದು, ‘ಕೆಲಸದ ಸ್ಥಳದಲ್ಲಿ ಮಹಿಳೆಯರ ಸುರಕ್ಷತೆಯ ಕಹಿ ಸತ್ಯವಿದು’ ಎಂದು ಬರೆದುಕೊಂಡಿದ್ದಾರೆ. ಈ ಘಟನೆಯು ಕೇವಲ ಒಂದು ಅಪರಾಧವಲ್ಲ, ಬದಲಿಗೆ ಮಹಿಳೆಯರಿಗೆ ಕೆಲಸದ ಸ್ಥಳದಲ್ಲಿ ರಕ್ಷಣೆ ನೀಡುವಲ್ಲಿ ವ್ಯವಸ್ಥೆ ಸೋಲುತ್ತಿದೆ ಎಂಬುದನ್ನು ತೋರಿಸುತ್ತದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ನಿಮ್ಮ ರಕ್ಷಣೆಗೆ ಇದೆ ‘ಪೋಶ್’ (POSH) ಕಾಯ್ದೆ:
ಕೆಲಸದ ಸ್ಥಳಗಳಲ್ಲಿ ಇಂತಹ ಘಟನೆಗಳು ನಡೆದಾಗ ಅಥವಾ ಲೈಂಗಿಕ ಕಿರುಕುಳ ಎದುರಾದಾಗ ಮಹಿಳೆಯರನ್ನು ರಕ್ಷಿಸಲು ಭಾರತದಲ್ಲಿ ಅತ್ಯಂತ ಬಲಿಷ್ಠವಾದ ಕಾನೂನು ಇದೆ. ಅದೇ ‘ಪೋಶ್ ಕಾಯ್ದೆ 2013’ (The POSH Act 2013 – Sexual Harassment of Women at Workplace Act). ಪ್ರತಿಯೊಬ್ಬ ಉದ್ಯೋಗಿ ಮಹಿಳೆಯೂ ಈ ಕಾನೂನಿನ ಬಗ್ಗೆ ತಿಳಿದುಕೊಳ್ಳುವುದು ಇಂದಿನ ಕಾಲದಲ್ಲಿ ಅತ್ಯಗತ್ಯ.
ಪೋಶ್ ಕಾಯ್ದೆಯ ಪ್ರಮುಖ ಅಂಶಗಳು:
ಲೈಂಗಿಕ ಕಿರುಕುಳದ ವ್ಯಾಖ್ಯಾನ: ಅನಪೇಕ್ಷಿತ ದೈಹಿಕ ಸಂಪರ್ಕ, ಲೈಂಗಿಕ ಮುನ್ಸೂಚನೆ ಇರುವ ಮಾತುಗಳು, ಲೈಂಗಿಕ ಬಯಕೆಯ ಪ್ರದರ್ಶನ ಅಥವಾ ಅಶ್ಲೀಲ ಸನ್ನೆಗಳನ್ನು ಈ ಕಾಯ್ದೆಯಡಿ ಗಂಭೀರ ಅಪರಾಧ ಎಂದು ಪರಿಗಣಿಸಲಾಗುತ್ತದೆ.
ಆಂತರಿಕ ದೂರು ಸಮಿತಿ (ICC): 10 ಅಥವಾ ಅದಕ್ಕಿಂತ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಪ್ರತಿಯೊಂದು ಸಂಸ್ಥೆಯೂ ಕಡ್ಡಾಯವಾಗಿ ‘ಆಂತರಿಕ ದೂರು ಸಮಿತಿ’ಯನ್ನು (Internal Complaints Committee – ICC) ರಚಿಸಬೇಕು. ಇದರ ಮುಖ್ಯಸ್ಥರು ಮಹಿಳೆಯೇ ಆಗಿರಬೇಕು.
ಶೂನ್ಯ ಸಹನೆ (Zero Tolerance): ಲೈಂಗಿಕ ಕಿರುಕುಳದ ದೂರು ಬಂದಾಗ ಸಂಸ್ಥೆಯು ಕಟ್ಟುನಿಟ್ಟಿನ ತನಿಖೆ ನಡೆಸಬೇಕು ಮತ್ತು ದೂರು ನೀಡಿದ ಮಹಿಳೆಯ ಗೌಪ್ಯತೆಯನ್ನು ಕಾಪಾಡಬೇಕು.
ದೂರು ದಾಖಲಿಸುವುದು ಹೇಗೆ?: ಕಿರುಕುಳ ಎದುರಿಸಿದ ಮಹಿಳೆ ಘಟನೆ ನಡೆದ ಮೂರು ತಿಂಗಳ ಒಳಗಾಗಿ ಐಸಿಸಿ (ICC) ಸಮಿತಿಗೆ ಲಿಖಿತ ದೂರು ನೀಡಬಹುದು. ಒಂದು ವೇಳೆ ಸಂಸ್ಥೆಯಲ್ಲಿ ಸಮಿತಿ ಇಲ್ಲದಿದ್ದರೆ, ಜಿಲ್ಲಾ ಮಟ್ಟದ ಸ್ಥಳೀಯ ದೂರು ಸಮಿತಿಗೆ (LCC) ದೂರು ನೀಡಬಹುದು.
Scroll to load tweet…
ಸಂಸ್ಥೆಗಳ ಜವಾಬ್ದಾರಿ:
ಕೆಲಸದ ಸ್ಥಳದಲ್ಲಿ ಸುರಕ್ಷಿತ ವಾತಾವರಣ ನಿರ್ಮಿಸುವುದು ಪ್ರತಿಯೊಂದು ಕಂಪನಿಯ ಆದ್ಯ ಕರ್ತವ್ಯ. ಕೇವಲ ಸಿಸಿಟಿವಿ ಅಳವಡಿಸಿದರೆ ಸಾಲದು, ಬದಲಿಗೆ ಉದ್ಯೋಗಿಗಳಲ್ಲಿ ಜಾಗೃತಿ ಮೂಡಿಸಬೇಕು. ಲೈಂಗಿಕ ಕಿರುಕುಳ ನೀಡುವವರ ವಿರುದ್ಧ ತಕ್ಷಣದ ಮತ್ತು ಕಠಿಣ ಕ್ರಮ ಕೈಗೊಳ್ಳುವ ಮೂಲಕ ಇತರರಿಗೆ ಎಚ್ಚರಿಕೆ ನೀಡಬೇಕಿದೆ. ಸುರಕ್ಷಿತ ವಾತಾವರಣದಲ್ಲಿ ಕೆಲಸ ಮಾಡುವುದು ನಿಮ್ಮ ಹಕ್ಕು. ಯಾವುದೇ ರೀತಿಯ ಕಿರುಕುಳವನ್ನು ಸಹಿಸಬೇಡಿ, ಧ್ವನಿ ಎತ್ತಿ ಮತ್ತು ಕಾನೂನಿನ ನೆರವು ಪಡೆಯಿರಿ ಎಂದು ಟ್ವೀಟ್ ಮೂಲಕ ತಮ್ಮ ಕಾಳಜಿ ಮತ್ತು ರಕ್ಷಣಾ ಅಂಶಗಳ ಬಗ್ಗೆ ಇಲ್ಲಿ ತಿಳಿಸಿದ್ದಾರೆ.