
ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ಕ್ಷೇತ್ರಗಳ ಉಪ ಚುನಾವಣಾ ಫಲಿತಾಂಶ ಇಡೀ ರಾಜ್ಯದ ರಾಜಕೀಯದ ದಿಕ್ಕನ್ನೇ ಬದಲಿಸಲಿದೆ. ಎರಡೂ ಕ್ಷೇತ್ರಗಳ ಫಲಿತಾಂಶ ಬಿಜೆಪಿಗೆ ಶಕ್ತಿ ತುಂಬಲಿದೆ ಎಂದು ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ದಾವಣಗೆರೆ (ಮಾ.30): ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ಕ್ಷೇತ್ರಗಳ ಉಪ ಚುನಾವಣಾ ಫಲಿತಾಂಶ ಇಡೀ ರಾಜ್ಯದ ರಾಜಕೀಯದ ದಿಕ್ಕನ್ನೇ ಬದಲಿಸಲಿದೆ. ಎರಡೂ ಕ್ಷೇತ್ರಗಳ ಫಲಿತಾಂಶ ಬಿಜೆಪಿಗೆ ಶಕ್ತಿ ತುಂಬಲಿದೆ ಎಂದು ಸ್ವತಃ ರಾಜ್ಯದ ಜನತೆ ಮಾತನಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ. ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಬದಲಾವಣೆ ಬಯಸಿರುವ ಜನತೆ ಶ್ರೀನಿವಾಸ ಟಿ.ದಾಸಕರಿಯಪ್ಪ ಅವರನ್ನು ಗೆಲ್ಲಿಸುವ ಮೂಲಕ ಬಿಜೆಪಿಗೆ ಐತಿಹಾಸಿಕ ಗೆಲುವನ್ನು ತಂದು ಕೊಡಲಿದ್ದಾರೆ ಎಂದರು.
ಉಭಯ ಕ್ಷೇತ್ರಗಳ ಫಲಿತಾಂಶ ಇಡೀ ರಾಜ್ಯದ ಜನತೆಗೆ ನೂತನ ಸಂದೇಶ ನೀಡಲಿದೆ. ಕಾಂಗ್ರೆಸ್ ಈವರೆಗೆ ಅಲ್ಪಸಂಖ್ಯಾತರನ್ನು ಕೇವಲ ಮತದಾರರನ್ನಾಗಿ ಬಳಕೆ ಮಾಡಿಕೊಳ್ಳುತ್ತಿತ್ತು. ಈಗ ಅಲ್ಪಸಂಖ್ಯಾತರಿಗೆ ಕಾಂಗ್ರೆಸ್ ಪಕ್ಷ ಏನೆಂಬ ಸತ್ಯದ ಅರಿವಾಗಿದೆ. ಈ ಹಿನ್ನೆಲೆಯಲ್ಲಿ ಅಲ್ಪಸಂಖ್ಯಾತರೂ ಸೇರಿ ಎಲ್ಲ ವರ್ಗಗಳ ಜನರು ಬಾಗಲಕೋಟೆ, ದಾವಣಗೆರೆ ದಕ್ಷಿಣ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನೇ ಅತ್ಯಧಿಕ ಮತಗಳ ಅಂತರದಿಂದ ಆಯ್ಕೆ ಮಾಡಲಿದ್ದಾರೆ ಎಂದು ತಿಳಿಸಿದರು.
ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ಟಿ.ದಾಸಕರಿಯಪ್ಪ ಪರವಾಗಿ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಸೇರಿದಂತೆ ಘಟಾನುಘಟಿ ನಾಯಕರು ಪ್ರಚಾರಕ್ಕೆ ಇಳಿದಿದ್ದಾರೆ. ಇದರಿಂದಾಗಿ ಬಿಜೆಪಿ ಕಾರ್ಯಕರ್ತರಲ್ಲಿ ಉತ್ಸಾಹ, ಬಲ ಮತ್ತಷ್ಟು ಹೆಚ್ಚಾಗಿದೆ. ದಾವಣಗೆರೆಯಲ್ಲಿ ಬಿಜೆಪಿ ಅಭ್ಯರ್ಥಿಯ ಗೆಲುವು ನಿಶ್ಚಿತ ಎಂದರು.
ಹೈಕಮಾಂಡ್ ಹೇಳಿದಂತೆ ಕೇಳುವ ಸ್ಥಿತಿಗೆ ಸಿಎಂ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈಗ ಹೈಕಮಾಂಡ್ ಹೇಳಿದಂತೆ ಕೇಳುವ ಪರಿಸ್ಥಿತಿ ಬಂದಿದೆ. ಸ್ವಂತ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯವನ್ನು ಅವರು ಕಳೆದುಕೊಂಡಿದ್ದಾರೆ. ಅಧಿವೇಶನದಲ್ಲಿ ಸಿದ್ದರಾಮಯ್ಯನವರು ಮಾಡಿದ ಭಾಷಣ, ಹೇಳಿಕೆಗಳನ್ನು ಗಮನಿಸಿದರೆ, ಹೈಕಮಾಂಡ್ ಹೇಳಿದಂತೆ ಕೇಳುವ ಪರಿಸ್ಥಿತಿಗೆ ಅವರು ಬಂದಿದ್ದಾರೆಂಬುದು ಸ್ಪಷ್ಟವಾಗುತ್ತದೆ ಎಂದರು. ಯಡಿಯೂರಪ್ಪನವರು ಸಿಎಂ ಆಗಿದ್ದಾಗ ಮುಸ್ಲಿಮರಿಗೆ ಸಾಕಷ್ಟು ಅನುದಾನ ನೀಡಿದ್ದರು. ದಾವಣಗೆರೆಯಲ್ಲಿ ಹಿಂದಿನ ಬಿಜೆಪಿ ಆಡಳಿತದಲ್ಲಿ ಆಗಿದ್ದ ಅಭಿವೃದ್ಧಿ ಕಾರ್ಯಗಳನ್ನು ಬಿಟ್ಟರೆ, ಈಗಿನ ಕಾಂಗ್ರೆಸ್ ಸರ್ಕಾರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ಆಗಿಲ್ಲ ಎಂದು ಅವರು ದೂರಿದರು.
ಕೊಂಕು ಮಾತಿಗೆ ಕೊರಗುವುದೇಕೆ?: ಪಕ್ಷದ ರಾಜ್ಯಾಧ್ಯಕ್ಷನಾಗಿ ನನಗೆ ಸಾಕಷ್ಟು ಕೆಲಸಗಳು ಇವೆ. ಯಾರದೋ ಕೊಂಕು ಮಾತಿಗೆ ಕೊರಗುವುದೇಕೆ ಎಂಬ ಮಾತನ್ನು ನಂಬಿದವನು ನಾನು. ಯಾರ ಮಾತಿಗೂ ಉತ್ತರ ಕೊಡುವ ಅವಶ್ಯಕತೆ ನನಗೆ ಇಲ್ಲ. ಯಾವುದೇ ಬೇಜವಾಬ್ದಾರಿ ಹೇಳಿಕೆಗಳಿಗೆ ನಾನು ಉತ್ತರ ನೀಡುವುದೂ ಇಲ್ಲ. ದಾವಣಗೆರೆ ದಕ್ಷಿಣದಲ್ಲಿ ಶ್ರೀನಿವಾಸ ದಾಸಕರಿಯಪ್ಪ ಅವರನ್ನು ಭಾರೀ ಮತಗಳ ಅಂತರದಲ್ಲಿ ಗೆಲ್ಲಿಸುವ ಕೆಲಸ ಮಾಡುತ್ತೇವೆ ಎಂದರು. ಆ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಹೊಂದಾಣಿಕೆಯಿಂದ ದಾವಣಗೆರೆಗೆ ಸೋಲುವ ಅಭ್ಯರ್ಥಿಗೆ ಟಿಕೆಟ್ ನೀಡಿದ್ದಾರೆ ಎಂಬ ಯತ್ನಾಳ ಆರೋಪಕ್ಕೆ ಪರೋಕ್ಷ ಪ್ರತಿಕ್ರಿಯೆ ನೀಡಿದರು.
ದಾವಣಗೆರೆಯಲ್ಲಿ ಪ್ರಚಾರಕ್ಕೆ ಜಮೀರ್‌ಗೆ ಸ್ವಾಭಿಮಾನ ಅಡ್ಡಿ?
ದಾವಣಗೆರೆಗೆ ಬಾರದಂತೆ ಗಣಿ ಸಚಿವ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಅವರೇ ಹೇಳಿರುವ ಹಿನ್ನೆಲೆಯಲ್ಲಿ ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆ ಪ್ರಚಾರದಲ್ಲಿ ಭಾಗವಹಿಸಬೇಕೇ ಅಥವಾ ಬೇಡವೇ ಎಂಬ ಬಗ್ಗೆ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರೊಂದಿಗೆ ಚರ್ಚಿಸಲಿದ್ದು, ಪಕ್ಷದ ಸೂಚನೆಯಂತೆ ನಡೆದುಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.
ಕೇರಳ ಚುನಾವಣಾ ಪ್ರಚಾರದಲ್ಲಿರುವ ಜಮೀರ್ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕರೆ ಮಾಡಿ ಅಭಿಪ್ರಾಯ ಕೇಳಿದ್ದಾರೆ. ಎಸ್.ಎಸ್.ಮಲ್ಲಿಕಾರ್ಜುನ ಅವರೇ ನಾನು ಬರಬಾರದು ಎಂದಿರುವ ಹಿನ್ನೆಲೆಯಲ್ಲಿ ನನಗೆ ಸ್ವಾಭಿಮಾನ ಅಡ್ಡ ಬರುತ್ತಿದೆ ಏನು ಮಾಡಬೇಕು ಎಂದು ಕೇಳಿದ್ದಾರೆ ಎನ್ನಲಾಗಿದೆ. ಪ್ರಸ್ತುತ ಜಮೀರ್ ಅಹಮದ್ ಕೇರಳದಲ್ಲಿದ್ದು ಏ.4ರವರೆಗೆ ಚುನಾವಣಾ ಪ್ರಚಾರದಲ್ಲಿ ಬ್ಯುಸಿ ಇರಲಿದ್ದಾರೆ. ಬಳಿಕ ದಾವಣಗೆರೆಯಲ್ಲಿ ಪ್ರಚಾರ ಮಾಡುವ ಕುರಿತು ವೇಣುಗೋಪಾಲ್ ಅವರೊಂದಿಗೆ ಚರ್ಚಿಸಲಿದ್ದು, ಪಕ್ಷ ಸೂಚಿಸಿದಂತೆ ನಡೆದುಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.