
ರಾಜ್ಯ ಪತ್ರಿಕಾ ವಿತರಕರ ಸಂಘದ ಅಧ್ಯಕ್ಷ ಕೆ. ಶಂಭುಲಿಂಗ ಅವರು ಜಿ.ವಿ.ಸಿಂಡ್ರೋಮ್ ಎಂಬ ಅಪರೂಪದ ಕಾಯಿಲೆಯಿಂದ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದು, ಅವರ ತುರ್ತು ಚಿಕಿತ್ಸೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವೈಯಕ್ತಿಕವಾಗಿ ₹5 ಲಕ್ಷ ನೆರವು ನೀಡಿದ್ದಾರೆ.
ಬೆಂಗಳೂರು (ಮಾ.31): ರಾಜ್ಯ ಪತ್ರಿಕಾ ವಿತರಕರ ಸಂಘದ ಅಧ್ಯಕ್ಷ ಕೆ. ಶಂಭುಲಿಂಗ ಅವರ ತುರ್ತು ಚಿಕಿತ್ಸೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೆರವಿನ ಹಸ್ತ ಚಾಚಿದ್ದು, ವೈಯಕ್ತಿಕವಾಗಿ ₹5 ಲಕ್ಷ ನೆರವು ನೀಡಿದ್ದಾರೆ.
ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ಅಧ್ಯಕ್ಷ ಕೆ.ಶಂಭುಲಿಂಗ ಅವರು ತೀವ್ರ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿದ್ದಾರೆ. ಈಗಾಗಲೇ ₹16 ಲಕ್ಷಕ್ಕೂ ಹೆಚ್ಚು ವೆಚ್ಚವಾಗಿದ್ದು, ಇನ್ನೂ ₹20 ಲಕ್ಷ ಅಗತ್ಯವಿದೆ. ಈ ಸಂಕಷ್ಟದ ಹೊತ್ತಿನಲ್ಲಿ ಚಿಕಿತ್ಸಾ ವೆಚ್ಚಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವೈಯಕ್ತಿಕವಾಗಿ ₹5 ಲಕ್ಷ ನೆರವು ನೀಡಿದ್ದು, ಮುಖ್ಯಮಂತ್ರಿ ಅವರ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಅವರು ಆಸ್ಪತ್ರೆಗೆ ತಲುಪಿಸಿದ್ದಾರೆ.
ನೆರವು ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಎಲ್ಲ ರೀತಿಯ ಸಹಕಾರ ನೀಡಿದ ಪ್ರಭಾಕರ್ ಅವರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಧನ್ಯವಾದ ತಿಳಿಸಿದ್ದಾರೆ.
ಜಿ.ವಿ.ಸಿಂಡ್ರೋಮ್ ಎಂಬ ಅಪರೂಪದ ಕಾಯಿಲೆ
ಕಳೆದ 12 ದಿನಗಳಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಂಭುಲಿಂಗ ಅವರು ಕೈ ಕಾಲುಗಳಲ್ಲಿ ಸ್ವಾಧೀನ ಕಳೆದುಕೊಂಡಿದ್ದಾರೆ. ಚಿಕಿತ್ಸೆಯ ವೆಚ್ಚವೂ ದುಬಾರಿಯಾಗಿದೆ. ಅವರಿಗೆ ಇಂಟ್ರಾವೆನಸ್ ಇಮ್ಯುನೊಗ್ಲಾಬ್ಯುಲಿನ್ (ಐವಿಐಜಿ) ಚಿಕಿತ್ಸೆ ನೀಡಲಾಗುತ್ತಿದ್ದು, ದಿನವೊಂದಕ್ಕೆ 1.53 ಲಕ್ಷ ರು. ವೆಚ್ಚವಾಗುತ್ತಿದೆ. ಕಳೆದ 12 ದಿನಗಳಲ್ಲಿ ಈ ಚಿಕಿತ್ಸೆಗೆ ಸುಮಾರು 15.50 ಲಕ್ಷ ರು. ಖರ್ಚಾಗಿದೆ.
ಆರೋಗ್ಯ ಸ್ಥಿತಿ ಗಂಭೀರ
ಶಂಭುಲಿಂಗ ಅವರ ಆರೋಗ್ಯ ಸ್ಥಿತಿ ತುಂಬಾ ಗಂಭೀರವಾಗಿದೆ. ಇನ್ನೂ 2-3 ದಿನಗಳಲ್ಲಿ ಫಿಸಿಯೋಥೆರಪಿಗಾಗಿ ಬೇರೆ ಆಸ್ಪತ್ರೆಗೆ ಶಿಫ್ಟ್ ಮಾಡಬೇಕಿದೆ. ಇದಕ್ಕೆ ಒಂದು ತಿಂಗಳಿಗೆ ಸುಮಾರು 5 ಲಕ್ಷ ರು.ಗಿಂತ ಹೆಚ್ಚು ವೆಚ್ಚವಾಗಬಹುದು ಎಂದು ವೈದ್ಯರು ತಿಳಿಸಿದ್ದಾರೆ. ಶಂಭುಲಿಂಗ ಅವರ ಕುಟುಂಬದ ಆರ್ಥಿಕ ಸ್ಥಿತಿ ತುಂಬಾ ದುರ್ಬಲವಾಗಿರುವ ಕಾರಣ ಆರ್ಥಿಕ ನೆರವನ್ನು ಕುಟುಂಬದವರು ನಿರೀಕ್ಷಿಸುತ್ತಿದ್ದಾರೆ ಎಂದು ಒಕ್ಕೂಟದ ರಾಜ್ಯ ಉಪಾಧ್ಯಕ್ಷ ಪ್ರಶಾಂತ್ ಕುಮಾರ್ ಪ್ರಕಟಣೆ ಮೂಲಕ ತಿಳಿಸಿದ್ದಾರೆ. ನೆರವಾಗಲು ಬಯಸುವವರು 99863 27778 ಅಥವಾ 98444 04563 ಸಂಪರ್ಕಿಸಬಹುದು.