
ರಾಜ್ಯದ ಸರ್ಕಾರಿ ಹಾಗೂ ಅನುದಾನಿತ ಶಾಲಾ-ಕಾಲೇಜುಗಳಲ್ಲಿ ಎಐ ಆಧಾರಿತ ಮುಖ ಚಹರೆ ಮೂಲಕ ಹಾಜರಾತಿ ದಾಖಲಿಸುವ ‘ನಿರಂತರ’ ಕಾರ್ಯಕ್ರಮ ಅನುಷ್ಠಾನಕ್ಕೆ ಸರ್ಕಾರ ಅನುಮೋದನೆ ನೀಡಿದೆ. ಈ ಯೋಜನೆಗಾಗಿ SATS ತಂತ್ರಾಂಶದ ಉನ್ನತೀಕರಣ ಸೇರಿದಂತೆ ಒಟ್ಟು ₹2.83 ಕೋಟಿ ಅನುದಾನವನ್ನು ಬಿಡುಗಡೆ ಮಾಡಲಾಗಿದೆ.
ಬೆಂಗಳೂರು (ಮಾ.31) ರಾಜ್ಯದ ಸರ್ಕಾರಿ ಹಾಗೂ ಅನುದಾನಿತ ಶಾಲಾ- ಕಾಲೇಜು ವಿದ್ಯಾರ್ಥಿಗಳ ಹಾಜರಾತಿಯನ್ನು ಎಐ ಆಧಾರಿತ (ಮುಖ ಚಹರೆ) ಮೊಬೈಲ್ ಅಪ್ಲಿಕೇಷನ್ ಮೂಲಕ ದಾಖಲಿಸುವ ‘ನಿರಂತರ’ ಕಾರ್ಯಕ್ರಮ ಅನುಷ್ಠಾನಕ್ಕಾಗಿ ನಿಗದಿತ ₹2.83 ಕೋಟಿ ಅನುದಾನ ಬಿಡುಗಡೆಗೆ ಸರ್ಕಾರ ಅನುಮೋದನೆ ನೀಡಿದೆ.
ಈ ಕಾರ್ಯಕ್ರಮ ಅನುಷ್ಠಾನಕ್ಕಾಗಿ ಎಸ್ಎಟಿಎಸ್ (ವಿದ್ಯಾರ್ಥಿಗಳ ಸಾಧನೆ ನಿರ್ವಹಣಾ ವ್ಯವಸ್ಥೆ) ತಂತ್ರಾಂಶದ ಉನ್ನತೀಕರಣ/ ನವೀಕರಣಕ್ಕಾಗಿ ಒರಾಕಲ್ ಸಾಫ್ಟ್‌ವೇರ್ ಲೈಸೆನ್ಸ್ ಖರೀದಿಸಲು ಹಾಗೂ ಯೋಜನೆಯನ್ನು ನಿರಂತರ ಮುಂದಿನ ಹತ್ತು ವರ್ಷಗಳನ್ನು ಗಮನದಲ್ಲಿಟ್ಟುಕೊಂಡು ಜಾರಿಗೊಳಿಸುವ ಉದ್ದೇಶದಿಂದ ಅಪ್ ಗ್ರೇಡ್ ಮಾಡಲು ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ನೇತೃತ್ವದಲ್ಲಿ ನಡೆದ ಇಲಾಖೆಯ ತಾಂತ್ರಿಕ ಸಲಹಾ ಸಮಿತಿ ಒಪ್ಪಿಗೆ ನೀಡಿತ್ತು.
ಇದನ್ನೂ ಓದಿ: ಲೆಕ್ಕಕ್ಕಿಲ್ಲದ ಹಿಂದಿ ಪರೀಕ್ಷೆ ಇಂದು: ಫಲಿತಾಂಶದಲ್ಲಿ ಇಳಿಕೆ ಆತಂಕ, ವಿದ್ಯಾರ್ಥಿಗಳು ಹೇಳೋದೇನು?
ಈ ಹಿನ್ನೆಲೆಯಲ್ಲಿ ಈ ಯೋಜನೆಗೆ ಸರ್ಕಾರ ನಿಗದಿಪಡಿಸಿರುವ 5 ಕೋಟಿ ರು.ಗಳಲ್ಲಿ 2.83 ಕೋಟಿ ರು. ಬಿಡುಗಡೆ ಮಾಡಲು ಇಲಾಖೆ ಅನುಮೋದನೆ ನೀಡಿದೆ. ಉತ್ತಮ ಗುಣಮಟ್ಟದ ಸೇವೆಯನ್ನು ಸಮಂಜಸ ದರದಲ್ಲಿ ಖರೀದಿಸುವುದರ ಹೊಣೆಯನ್ನು ಶಾಲಾ ಶಿಕ್ಷಣ ಆಯುಕ್ತರಿಗೆ ನೀಡಲಾಗಿದೆ.