
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಶಿವಂ ದುಬೆ ವಿಕೆಟ್ ಪಡೆದ ಬಳಿಕ ರವೀಂದ್ರ ಜಡೇಜಾ ತಮ್ಮ ‘ಗನ್ ಫೈರ್’ ಶೈಲಿಯಲ್ಲಿ ಸಂಭ್ರಮಿಸಿದರು. ಇದು ತಮ್ಮ ಹಳೆಯ ಸಂಭ್ರಮಾಚರಣೆಯಾಗಿದ್ದು, ಹೊಸ ತಂಡವಾದ ರಾಜಸ್ಥಾನ ರಾಯಲ್ಸ್ ಪರ ಅದನ್ನು ಮುಂದುವರಿಸಿದ್ದಾಗಿ ಜಡೇಜಾ ಕಾರಣ ಬಿಚ್ಚಿಟ್ಟಿದ್ದಾರೆ. ಈ ಪಂದ್ಯದಲ್ಲಿ ಜಡೇಜಾ ಎರಡು ವಿಕೆಟ್ ಪಡೆದು ತಂಡದ ಗೆಲುವಿಗೆ ನೆರವಾದರು.
ಗುವಾಹಟಿ: ಐಪಿಎಲ್ 19ನೇ ಸೀಸನ್‌ನ ತಮ್ಮ ಮೊದಲ ಪಂದ್ಯದಲ್ಲಿ, ಚೆನ್ನೈ ಸೂಪರ್ ಕಿಂಗ್ಸ್ ಆಟಗಾರ ಶಿವಂ ದುಬೆ ವಿಕೆಟ್ ಪಡೆದ ಬಳಿಕ ರವೀಂದ್ರ ಜಡೇಜಾ ತಮ್ಮದೇ ಶೈಲಿಯ ‘ಗನ್ ಫೈರಿಂಗ್’ ಸಂಭ್ರಮಾಚರಣೆ ಮಾಡಿದ್ದರು. ಇದರ ಹಿಂದಿನ ಕಾರಣವನ್ನು ಜಡೇಜಾ ಈಗ ಬಿಚ್ಚಿಟ್ಟಿದ್ದಾರೆ. 13 ವರ್ಷಗಳ ಕಾಲ ಚೆನ್ನೈ ತಂಡದ ಭಾಗವಾಗಿದ್ದ ಜಡೇಜಾ, ಈ ಬಾರಿ ತಮ್ಮ ಹಳೆಯ ತಂಡವಾದ ರಾಜಸ್ಥಾನ ರಾಯಲ್ಸ್‌ಗೆ ಮರಳಿದ್ದಾರೆ.
ರವೀಂದ್ರ ಜಡೇಜಾ ಗನ್ ಫೈರ್ ಸೆಲಿಬ್ರೇಷನ್ ಮಾಡಿದ್ದೇಕೆ?
ಚೆನ್ನೈ ಇನ್ನಿಂಗ್ಸ್‌ನ 8ನೇ ಓವರ್‌ನಲ್ಲಿ ಜಡೇಜಾ ಬೌಲಿಂಗ್‌ನಲ್ಲಿ ಶಿವಂ ದುಬೆ, ರವಿ ಬಿಷ್ಣೋಯಿಗೆ ಕ್ಯಾಚ್ ನೀಡಿ ಔಟಾದರು. ವಿಕೆಟ್ ಪಡೆದ ತಕ್ಷಣ ಜಡೇಜಾ ‘ಗನ್ ಫೈರ್’ ಮಾಡಿ ಸಂಭ್ರಮಿಸಿದರು. “ನಾನು ಚೆನ್ನೈ ಪರ ಆಡುವಾಗಲೂ ಇದೇ ರೀತಿ ಸಂಭ್ರಮಿಸುತ್ತಿದ್ದೆ. ಈಗ ರಾಜಸ್ಥಾನ್‌ಗೆ ಬಂದಿದ್ದೇನೆ, ಇಲ್ಲೇಕೆ ಅದನ್ನು ಮುಂದುವರಿಸಬಾರದು ಅಂತ ಯೋಚಿಸಿದೆ,” ಎಂದು ಜಡೇಜಾ ಜಿಯೋ ಹಾಟ್‌ಸ್ಟಾರ್‌ಗೆ ತಿಳಿಸಿದರು.
2012 ರಿಂದ 2025ರವರೆಗೆ ಜಡೇಜಾ, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅವಿಭಾಜ್ಯ ಅಂಗವಾಗಿದ್ದರು. 2026ರ ಸೀಸನ್‌ಗೆ ಮುನ್ನ, ಸಂಜು ಸ್ಯಾಮ್ಸನ್‌ರನ್ನು ತಂಡಕ್ಕೆ ಸೇರಿಸಿಕೊಂಡ ಚೆನ್ನೈ, ಜಡೇಜಾ ಮತ್ತು ಸ್ಯಾಮ್ ಕರನ್‌ರನ್ನು ಟ್ರೇಡ್ ಮೂಲಕ ರಾಜಸ್ಥಾನ್‌ಗೆ ಬಿಟ್ಟುಕೊಟ್ಟಿತ್ತು. “12-13 ವರ್ಷ ಆಡಿದ ತಂಡವನ್ನು ಬಿಟ್ಟು ಬರುವುದು ಭಾವನಾತ್ಮಕವಾಗಿ ತುಂಬಾ ಕಷ್ಟವಾಗಿತ್ತು. ಆದರೆ ಇದು ವೃತ್ತಿಪರ ಪಯಣದ ಒಂದು ಭಾಗ ಎಂದು ನಾನು ಅರಿತುಕೊಂಡೆ. ನನ್ನ ಮೊದಲ ಐಪಿಎಲ್ ಟ್ರೋಫಿ ಗೆದ್ದ ತಂಡಕ್ಕೆ ನಾನು ವಾಪಸ್ ಬಂದಿರುವುದು ಖುಷಿಯ ವಿಚಾರ. ಅಂಡರ್-19 ವಿಶ್ವಕಪ್ ನಂತರ ನನ್ನ ಐಪಿಎಲ್ ಪಯಣ ಶುರುವಾಗಿದ್ದೇ ಇಲ್ಲಿಂದ. ಆ ನೆನಪುಗಳು ಯಾವಾಗಲೂ ಸ್ಪೆಷಲ್,” ಎಂದು ಜಡೇಜಾ ಹೇಳಿದರು.
ಚೆನ್ನೈ ಸೂಪರ್ ಕಿಂಗ್ಸ್ ಕಾಲೆಳೆದ ಜಡ್ಡು:
ರಾಜಸ್ಥಾನ ರಾಯಲ್ಸ್ ತಂಡ ಕೂಡಿಕೊಂಡಿದ್ದರ ಕುರಿತಂತೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ರವೀಂದ್ರ ಜಡೇಜಾ, ನನಗೆ ಪಿಂಕ್ ತುಂಬಾನೆ ಚೆನ್ನಾಗಿ ಕಾಣುತ್ತಿದೆ(ರಾಜಸ್ಥಾನ ರಾಯಲ್ಸ್ ಜೆರ್ಸಿ ಪಿಂಕ್). ನನಗೆ ಸಾಕಷ್ಟು ಸಮಯದಿಂದ ಶಿವಂ ದುಬೆ ಗೊತ್ತು. ಅವರಿಗೆ ನಾನು ನೆಟ್ಸ್‌ನಲ್ಲಿ ಸಾಕಷ್ಟು ಬಾರಿ ಬೌಲಿಂಗ್ ಮಾಡಿದ್ದೇನೆ. ಹೀಗಾಗಿ ಸ್ಪಿನ್ನರ್‌ಗಳನ್ನು ಅವರು ಹೇಗೆ ಎದುರಿಸುತ್ತಾರೆ ಎನ್ನುವುದು ಗೊತ್ತಿತ್ತು. ನನ್ನ ಬೌಲಿಂಗ್ ನಾನು ಮಾಡುತ್ತಿದ್ದೇನೆ ಎಂದು ಹೇಳುವ ಮೂಲಕ ಮಾಜಿ ಫ್ರಾಂಚೈಸಿ ಸಿಎಸ್‌ಕೆಯನ್ನು ಜಡ್ಡು ಕಾಲೆಳೆದಿದ್ದಾರೆ.
ಈ ಪಂದ್ಯದಲ್ಲಿ ಬ್ಯಾಟಿಂಗ್ ಅವಕಾಶ ಸಿಗದಿದ್ದರೂ, ಜಡೇಜಾ ಬೌಲಿಂಗ್‌ನಲ್ಲಿ ಮಿಂಚಿದರು. ಮೂರು ಓವರ್‌ಗಳಲ್ಲಿ ಕೇವಲ 18 ರನ್ ನೀಡಿ ಸರ್ಫರಾಜ್ ಖಾನ್ ಮತ್ತು ಶಿವಂ ದುಬೆ ಅವರ ಪ್ರಮುಖ ವಿಕೆಟ್‌ಗಳನ್ನು ಪಡೆದರು. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಚೆನ್ನೈ ತಂಡವನ್ನು 127 ರನ್‌ಗಳಿಗೆ ಕಟ್ಟಿಹಾಕಿದ ರಾಜಸ್ಥಾನ್, 47 ಎಸೆತಗಳು ಬಾಕಿ ಇರುವಂತೆಯೇ ಎಂಟು ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು.