
ಬೆಂಗಳೂರಿನಲ್ಲಿ ‘ಬ್ಯಾಟರ್ ಬಾಕ್ಸ್’ ಎಂಬ ಕಂಪನಿಯು ತನ್ನ ಜಾಹೀರಾತಿನಲ್ಲಿ “Enjoyment in every bite” ಎಂಬುದನ್ನು ‘ಪ್ರತಿ ಕಚ್ಚುವಿಕೆಯಲ್ಲಿ ಆನಂದ’ ಎಂದು ತಪ್ಪಾಗಿ ಭಾಷಾಂತರಿಸಿದೆ. ಈ ಭಾಷಾ ಪ್ರಮಾದವು ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡಿಗರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಬೆಂಗಳೂರು (ಮಾ.31): ಸಿಲಿಕಾನ್ ಸಿಟಿಯಲ್ಲಿ ಮತ್ತೊಮ್ಮೆ ಭಾಷಾ ವಿವಾದವೊಂದು ಮುನ್ನೆಲೆಗೆ ಬಂದಿದೆ. ಈ ಬಾರಿ ಯಾವುದೇ ನಾಮಫಲಕವಲ್ಲ, ಬದಲಾಗಿ ಜನಪ್ರಿಯ ಬ್ರ್ಯಾಂಡ್ ಒಂದರ ಜಾಹೀರಾತು ಫಲಕವು ಕನ್ನಡದ ಅಭಿಮಾನಕ್ಕಿಂತ ಹೆಚ್ಚಾಗಿ ‘ಕನ್ನಡದ ಅಜ್ಞಾನ’ವನ್ನು ಪ್ರದರ್ಶಿಸಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ. ದೋಸೆ ಮತ್ತು ಇಡ್ಲಿ ಹಿಟ್ಟು (Batter) ಮಾರಾಟ ಮಾಡುವ ‘ಬ್ಯಾಟರ್ ಬಾಕ್ಸ್’ (Batter Box) ಎಂಬ ಕಂಪನಿಯು ತನ್ನ ಜಾಹೀರಾತಿನಲ್ಲಿ ಇಂಗ್ಲಿಷ್ನ “Enjoyment in every bite” ಎಂಬ ಸಾಲನ್ನು ಕನ್ನಡಕ್ಕೆ ಭಾಷಾಂತರಿಸಲು ಹೋಗಿ ಎಡವಟ್ಟು ಮಾಡಿಕೊಂಡಿದೆ. ಕಂಪನಿಯು ತನ್ನ ಬೋರ್ಡ್ನಲ್ಲಿ ‘ಪ್ರತಿ ತುತ್ತಿನಲ್ಲಿಯೂ ಆನಂದ’ ಎಂದು ಬರೆಯುವ ಬದಲು “ಪ್ರತಿ ಕಚ್ಚುವಿಕೆಯಲ್ಲಿ ಆನಂದ” ಎಂದು ಬರೆಸಿದ್ದು ಕೆಂಗಣ್ಣಿಗೆ ಗುರಿಯಾಗಿದೆ.
ಇಂಗ್ಲಿಷ್ನಲ್ಲಿ ‘Bite’ ಅಂದರೆ ತಿನ್ನುವಾಗ ತೆಗೆದುಕೊಳ್ಳುವ ‘ತುತ್ತು’ ಅಥವಾ ‘ತುತ್ತಿನ ಸವಿಯ’ನ್ನು ಸೂಚಿಸುತ್ತದೆ. ಆದರೆ ಇದನ್ನು ಗೂಗಲ್ ಟ್ರಾನ್ಸ್ಲೇಟ್ ಮೊರೆ ಹೋದಂತೆ ಅಥವಾ ಕನ್ನಡದ ಕಿಂಚಿತ್ತೂ ಜ್ಞಾನವಿಲ್ಲದವರಿಂದ ಭಾಷಾಂತರಿಸಿದ ಪರಿಣಾಮ ‘ಕಚ್ಚುವಿಕೆ’ (Biting like a dog or teeth biting) ಎಂಬ ಅರ್ಥ ಬಂದಿದೆ.
ನೆಟ್ಟಿಗರ ಆಕ್ರೋಶ: “ಕನ್ನಡಿಗ ಕಾಪಿರೈಟರ್ ಸಿಗಲಿಲ್ವಾ?”
ಈ ಪ್ರಮಾದದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಕನ್ನಡಿಗರು ಕಂಪನಿಯ ವಿರುದ್ಧ ಮುಗಿಬಿದ್ದಿದ್ದಾರೆ. “ಪ್ರತಿಯೊಂದು ತುತ್ತಿನಲ್ಲೂ ಆನಂದ ಎಂದು ಬರೆಯುವ ಬದಲು ಕಚ್ಚುವಿಕೆ ಎನ್ನಲು ನಿಮಗೆ ನಾಚಿಕೆ ಆಗಲ್ವಾ?” ಎಂದು ಯೂಸರ್ಒಬ್ಬರು ಎಕ್ಸ್ (ಟ್ವಿಟರ್) ನಲ್ಲಿ ಕಿಡಿಕಾರಿದ್ದಾರೆ.
“ಕನ್ನಡ ಗೊತ್ತಿರುವ ಒಬ್ಬ ಕಾಪಿರೈಟರ್ ಕೂಡ ನಿಮಗೆ ಸಿಗಲಿಲ್ವಾ? ಕನ್ನಡವನ್ನು ಹೀಗೆ ಕುಲಗೆಡಿಸುವುದನ್ನು ನಿಲ್ಲಿಸಿ” ಎಂದು ಹಲವರು ಛೀಮಾರಿ ಹಾಕಿದ್ದಾರೆ. ಇನ್ನೂ ಕೆಲವರು ವ್ಯಂಗ್ಯವಾಗಿ, “ಒಳ್ಳೆಯದಾಯಿತು ಅವರು ‘ಪ್ರತಿ ಕಡಿತದಲ್ಲೂ ಆನಂದ’ ಎಂದು ಬರೆಯಲಿಲ್ಲ!” ಎಂದು ಕಾಲೆಳೆದಿದ್ದಾರೆ.
ಕಂಪನಿಗಳ ಅಸಡ್ಡೆಗೆ ಸಾಕ್ಷಿ
ಇಂಗ್ಲಿಷ್ನಿಂದ ಕನ್ನಡಕ್ಕೆ ಭಾಷಾಂತರಿಸುವಾಗ ಇಂತಹ ತಪ್ಪುಗಳು ಇತ್ತೀಚಿನ ದಿನಗಳಲ್ಲಿ ಪದೇ ಪದೇ ಮರುಕಳಿಸುತ್ತಿವೆ. ಬಹುರಾಷ್ಟ್ರೀಯ ಕಂಪನಿಗಳು ಅಥವಾ ಹೊಸ ಸ್ಟಾರ್ಟ್ಅಪ್ಗಳು ಸ್ಥಳೀಯ ಮಾರುಕಟ್ಟೆಯಲ್ಲಿ ಹಣ ಮಾಡಲು ಬಯಸುತ್ತವೆಯೇ ಹೊರತು, ಇಲ್ಲಿನ ಭಾಷೆಯನ್ನು ಗೌರವಯುತವಾಗಿ ಬಳಸುವ ಸೌಜನ್ಯ ತೋರುತ್ತಿಲ್ಲ ಎಂಬುದು ಕನ್ನಡಿಗರ ವಾದ. ತುತ್ತು ಎಂಬ ಪದದ ಬದಲು ಕಚ್ಚುವಿಕೆ ಎಂದು ಬಳಸುವುದು ಕೇವಲ ಭಾಷಾ ದೋಷವಲ್ಲ, ಅದು ಆ ಭಾಷೆಯ ಸಂವೇದನೆಯನ್ನೇ ಕೊಂದಂತೆ ಎಂದಿದ್ದಾರೆ.
Scroll to load tweet…
ಕನ್ನಡ ಬಳಕೆಯ ಬಗ್ಗೆ ಎಚ್ಚರಿಕೆ ಇರಲಿ
ಬೆಂಗಳೂರಿನಂತಹ ಮಹಾನಗರಗಳಲ್ಲಿ ವ್ಯವಹಾರ ಮಾಡುವ ಕಂಪನಿಗಳು ಸ್ಥಳೀಯ ಭಾಷೆಯನ್ನು ಬಳಸುವಾಗ ಜಾಗರೂಕತೆಯಿಂದ ಇರಬೇಕು. ಕೇವಲ ಯಾಂತ್ರಿಕ ಭಾಷಾಂತರ (Machine Translation) ನಂಬಿಕೊಳ್ಳದೆ, ಭಾಷೆಯ ಸೊಗಡು ತಿಳಿದಿರುವ ತಜ್ಞರಿಂದ ಪರಿಶೀಲಿಸುವುದು ಅತ್ಯಗತ್ಯ. ಇಲ್ಲವಾದರೆ ಇಂತಹ ‘ಕಚ್ಚುವಿಕೆ’ಯಂಥ ಪ್ರಯೋಗಗಳು ಕಂಪನಿಯ ಬ್ರ್ಯಾಂಡ್ ಮೌಲ್ಯವನ್ನೇ ಕಚ್ಚಿ ತಿನ್ನುವುದರಲ್ಲಿ ಸಂಶಯವಿಲ್ಲ.