ಖ್ಯಾತ ಕಲಾವಿದೆ ಸೌಮ್ಯ ಶೆಟ್ಟಿ ಅವರ ಪತಿ ಸುದೀಪ್ ಶೆಟ್ಟಿ ಮದುವೆಯಾದ ಒಂದೇ ತಿಂಗಳಲ್ಲಿ ವಿಷ ಸೇವಿಸಿ ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ. ಸುದೀಪ್ ತಂದೆ ತಮ್ಮ ಸೊಸೆಯ ವಿರುದ್ಧವೇ ಗಂಭೀರ ಆರೋಪ ಮಾಡಿದ್ದು, ಸೌಮ್ಯ ಶೆಟ್ಟಿ ಈ ಆರೋಪಗಳನ್ನು ನಿರಾಕರಿಸಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಉಡುಪಿ (ಮಾ.31): ಪ್ರೀತಿಸಿ ಮದುವೆಯಾದ ಕೇವಲ ಒಂದೇ ತಿಂಗಳಲ್ಲಿ ಖ್ಯಾತ ನಾಟಕ ಕಲಾವಿದೆ ಹಾಗೂ ಮೇಕಪ್ ಆರ್ಟಿಸ್ಟ್ ಸೌಮ್ಯ ಶೆಟ್ಟಿಯ ಗಂಡ ಸುದೀಪ್ ಶೆಟ್ಟಿ ವಿಷ ಸೇವಿಸಿ ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ. ಇದೀಗ ಪ್ರಕರಣ ಹಲವು ಸಂಶಯಗಳ ಸುಳಿಗೆ ಸಿಲಿಕಿದ್ದು, ಆರೋಪ-ಪ್ರತ್ಯಾರೋಪಗಳ ಕಣವಾಗಿ ಮಾರ್ಪಟ್ಟಿದೆ.

ದಕ್ಷಿಣ ಕನ್ನಡ ಜಿಲ್ಲೆಯ ನೆಲ್ಯಾಡಿ ನಿವಾಸಿ ಸುದೀಪ್ ಶೆಟ್ಟಿ ಮತ್ತು ಕಾರ್ಕಳದ ಬಂಗ್ಲೆಗುಡ್ಡೆ ನಿವಾಸಿ, ಖ್ಯಾತ ನಾಟಕ ಕಲಾವಿದೆ ಹಾಗೂ ಮೇಕಪ್ ಆರ್ಟಿಸ್ಟ್ ಸೌಮ್ಯ ಶೆಟ್ಟಿ ಕಳೆದ ಫೆಬ್ರವರಿ 17ರಂದು ಪುತ್ತೂರಿನಲ್ಲಿ ರಿಜಿಸ್ಟರ್ ಮದುವೆಯಾಗಿದ್ದರು. ಬಳಿಕ ಮಾರ್ಚ್ 19ರಂದು ಕುಕ್ಕುಂದೂರು ದೇವಸ್ಥಾನದಲ್ಲಿ ವೈದಿಕವಾಗಿ ವಿವಾಹವಾಗಿದ್ದರು. ಆದರೆ, ಮಾರ್ಚ್ 22ರಂದು ಸುದೀಪ್ ವಿಷ ಸೇವಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮಾರ್ಚ್ 29ರಂದು ಮಂಗಳೂರಿನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಸುದೀಪ್ ಶೆಟ್ಟಿ ಅವರ ತಂದೆ ದಾಮೋದರ್ ಅವರು ತಮ್ಮ ಸೊಸೆ ಸೌಮ್ಯ ಶೆಟ್ಟಿ ವಿರುದ್ಧವೇ ಗಂಭೀರ ಆರೋಪ ಮಾಡಿದ್ದಾರೆ. ‘ಸೌಮ್ಯ ನನ್ನ ಮಗನಿಗೆ ವಿಷ ಹಾಕಿ ಕೊಂದಿದ್ದಾಳೆ. ಅವಳು ಈ ಹಿಂದೆಯೂ ಹಲವು ಮಂದಿಗೆ ಹೀಗೆಯೇ ವಂಚಿಸಿದ್ದಾಳೆ. ನನ್ನ ಮಗ ವಿಷ ಸೇವಿಸಿದ ವಿಷಯವನ್ನು 7 ದಿನಗಳ ಕಾಲ ಮುಚ್ಚಿಟ್ಟಿದ್ದಾಳೆ. ಸರಿಯಾದ ಚಿಕಿತ್ಸೆ ಕೊಡಿಸದೆ ಆತನ ಸಾವಿಗೆ ಕಾರಣವಾಗಿದ್ದಾಳೆ’ ಎಂದು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಆತ್ಮ*ಹತ್ಯೆಗೆ ಪ್ರಚೋದನೆ ನೀಡಿದ ದೂರು ದಾಖಲಿಸಿದ್ದಾರೆ. ಅಲ್ಲದೆ, ಸುದೀಪ್ ಮನೆಯವರು ಶ್ರೀಮಂತರಾಗಿದ್ದು, ಈ ಮದುವೆಗೆ ಅವರ ಒಪ್ಪಿಗೆ ಇರಲಿಲ್ಲ ಎನ್ನಲಾಗಿದೆ.

ತನ್ನ ಮೇಲೆ ಕೇಳಿ ಬಂದಿರುವ ಎಲ್ಲಾ ಆರೋಪಗಳನ್ನು ಸೌಮ್ಯ ಶೆಟ್ಟಿ ನಿರಾಕರಿಸಿದ್ದಾರೆ. ಈ ಕುರಿತು ಸುದೀರ್ಘ ಹೇಳಿಕೆ ನೀಡಿರುವ ಅವರು, ‘ಸುದೀಪ್ ಸಾವಿಗೆ ನಾನು ಕಾರಣವಲ್ಲ. ಅವರು ತಮ್ಮ ಮನೆಯವರ ವಿರೋಧ ಮತ್ತು ಮಾನಸಿಕ ಒತ್ತಡದಿಂದ ವಿಷ ಸೇವಿಸಿರಬಹುದು. ಅವರು ನೆಲ್ಯಾಡಿಯ ತಮ್ಮ ಮನೆಗೆ ಹೋಗಿದ್ದಾಗಲೇ ವಿಷ ಸೇವಿಸಿ ಬಂದಿದ್ದರು. ಈ ವಿಚಾರ ನನಗೆ ತಡವಾಗಿ ತಿಳಿಯಿತು. ವಿಷ ಸೇವಿಸಿದ ನಂತರವೂ ಅವರು ಆರಾಮವಾಗಿಯೇ ಇದ್ದರು, ನಾವು ವಾಟರ್ ಪಾರ್ಕ್ಗೆ ಕೂಡ ಹೋಗಿದ್ದೆವು. ಆದರೆ ನಂತರ ಅವರ ಆರೋಗ್ಯ ಕ್ಷೀಣಿಸಿತು’ ಎಂದಿದ್ದಾರೆ.

ಸೌಮ್ಯ ಅವರ ಪ್ರಕಾರ, ಸುದೀಪ್ ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡಿದ್ದರು. ಈ ವಿಷಯ ತಿಳಿದಿದ್ದರೂ ತಾನು ಅವರನ್ನು ಪ್ರೀತಿಸಿ ಮದುವೆಯಾಗಿದ್ದೆ. ‘ನಾನು ಹಣಕ್ಕಾಗಿ ಅವರನ್ನು ಮದುವೆಯಾಗಿಲ್ಲ. ಅವರ ಮನೆಯವರೇ ಸುದೀಪ್ನನ್ನು ಮನೆಯಿಂದ ದೂರವಿಟ್ಟಿದ್ದರು. ಮದುವೆಗೆ ಮೊದಲು ಒಪ್ಪಿದ್ದವರು ನಂತರ ನಿರಾಕರಿಸಿದ್ದರಿಂದ ಸುದೀಪ್ ಮನನೊಂದಿದ್ದರು’ ಎಂದು ಹೇಳಿದ್ದಾರೆ.

ತಾನು ನಾಲ್ಕೈದು ಮದುವೆಯಾಗಿದ್ದೇನೆ ಎಂಬ ಆರೋಪಕ್ಕೆ ಉತ್ತರಿಸಿದ ಸೌಮ್ಯ, ‘ನಾನು 9 ವರ್ಷಗಳ ಹಿಂದೆ ಮೊದಲ ಮದುವೆಯಾಗಿದ್ದು ನಿಜ. ಆದರೆ ಪತಿಯ ನಡವಳಿಕೆಯಿಂದಾಗಿ ನಾನೇ ವಿಚ್ಛೇದನ ಪಡೆದಿದ್ದೆ. ಅದಾದ ನಂತರ ಕಲಾವಿದೆಯಾಗಿ ಕೆಲಸ ಮಾಡುತ್ತಿರುವಾಗ ಸುದೀಪ್ ಅವರೇ ಫೇಸ್ಬುಕ್ ಮೂಲಕ ನನ್ನನ್ನು ಸಂಪರ್ಕಿಸಿ ಮದುವೆಯ ಪ್ರಸ್ತಾಪ ಇಟ್ಟಿದ್ದರು. ನನ್ನ ಹಳೆಯ ಜೀವನದ ಬಗ್ಗೆ ಅವರಿಗೆ ಎಲ್ಲವೂ ತಿಳಿದಿತ್ತು’ ಎಂದು ಸ್ಪಷ್ಟಪಡಿಸಿದ್ದಾರೆ.

ಸದ್ಯ ಕಾರ್ಕಳ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮಂಗಳೂರಿನ ಎನಪೋಯ ಆಸ್ಪತ್ರೆಯಲ್ಲಿ ಸುದೀಪ್ ಅವರ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ‘ಪೋಸ್ಟ್ ಮಾರ್ಟಂ ವರದಿ ಬಂದ ನಂತರ ಸುದೀಪ್ ಯಾವ ವಿಷ ಸೇವಿಸಿದ್ದರು ಮತ್ತು ಸಾವು ಸಂಭವಿಸಲು ನಿಖರ ಕಾರಣವೇನು ಎಂಬುದು ತಿಳಿಯಲಿದೆ. ಅದರ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಪೊಲೀಸರು ತಿಳಿಸಿದ್ದಾರೆ.

Source link
ಕನ್ನಡದ ನಟಿ ಸೌಮ್ಯ ಶೆಟ್ಟಿ ಮದುವೆಯಾದ ಒಂದೇ ತಿಂಗಳಿಗೆ ಗಂಡ ಆತ್ಮ*ಹತ್ಯೆ! ಸೊಸೆ ವಿರುದ್ಧ ತಿರುಗಿಬಿದ್ದ ಮಾವ!