
ಹೋರ್ಮುಜ್ ಜಲಸಂಧಿ ಸಂಪೂರ್ಣವಾಗಿ ಮುಕ್ತವಾಗದಿದ್ದರೂ ಇರಾನ್ ಮೇಲಿನ ಸಂಘರ್ಷವನ್ನು ಅಂತ್ಯಗೊಳಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚಿಂತನೆ ನಡೆಸಿದ್ದಾರೆ. ಆರು ವಾರಗಳ ಯುದ್ಧದ ಯೋಜನೆ ಹಾಕಿಕೊಂಡಿದ್ದ ಅಮೆರಿಕ, ರಾಜತಾಂತ್ರಿಕ ಒತ್ತಡ ಹೇರುವ ಹೊಸ ಕಾರ್ಯತಂತ್ರ ರೂಪಿಸಿದೆ.
- – ಆರು ವಾರಗಳ ಯುದ್ಧದ ಗಡುವು ಹಾಕಿಕೊಂಡಿದ್ದ ಯುಎಸ್
- – ಈ ಅವಧಿ ಮೀರಿ ಯುದ್ಧ ಮುಂದುವರಿಸದಿರಲು ತೀರ್ಮಾನ
- – ಹೋರ್ಮುಜ್ ಜಲಸಂಧಿ ಮುಚ್ಚಿದ್ದರೂ ಯುದ್ಧಕ್ಕೆ ಸದ್ಯ ಬ್ರೇಕ್?
- – ಬಳಿಕ ರಾಜತಾಂತ್ರಿಕ ಮಾರ್ಗ ಮೂಲಕ ಇರಾನ್ ಮೇಲೆ ಒತ್ತಡ
- – ಇರಾನ್ ಬಗ್ಗದಿದ್ದರೆ ಮಿತ್ರ ರಾಷ್ಟ್ರಗಳಿಗೆ ಜಲಸಂಧಿ ತೆರೆಸುವ ಹೊಣೆ
ನವದೆಹಲಿ (ಏ.1): ಹೋರ್ಮುಜ್ ಜಲಸಂಧಿಯು ವಾಣಿಜ್ಯ ಹಡಗುಗಳ ಸಂಚಾರಕ್ಕೆ ಸಂಪೂರ್ಣ ಮುಕ್ತಗೊಳ್ಳದಿದ್ದರೂ ಇರಾನ್ ಮೇಲಿನ ಸಂಘರ್ಷಕ್ಕೆ ಅಂತ್ಯ ಹಾಡಲು ಸಿದ್ಧವಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮ ಆತ್ಮೀಯರ ಮುಂದೆ ತಿಳಿಸಿದ್ದಾರೆ ಎಂದು ‘ವಾಲ್‌ಸ್ಟ್ರೀಟ್ ಜರ್ನಲ್’ ವರದಿ ಮಾಡಿದೆ.
ಹೋರ್ಮುಜ್ ಜಲಾಶಯವನ್ನು ವಾಣಿಜ್ಯ ಹಡಗುಗಳ ಸಂಚಾರಕ್ಕೆ ಸಂಪೂರ್ಣವಾಗಿ ತೆರೆಯದಿದ್ದರೆ ಇರಾನ್‌ನ ವಿದ್ಯುತ್ ಘಟಕಗಳ ಮೇಲೆ ಭಾರೀ ದಾಳಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ ಹೊರತಾಗಿಯೂ ಟ್ರಂಪ್ ಇಂಥದ್ದೊಂದು ನಿರ್ಧಾರಕ್ಕೆ ಬಂದಿದ್ದಾರೆ ಎಂದು ಅಧಿಕಾರಿಗಳ ಹೇಳಿಕೆಯನ್ನು ಆಧರಿಸಿ ಪತ್ರಿಕೆ ವರದಿ ಮಾಡಿದೆ.
ಹೋರ್ಮುಜ್ ಜಲಸಂಧಿಯನ್ನು ತೆರೆಯುವ ಸಂಕೀರ್ಣ ಕಾರ್ಯಾಚರಣೆಯನ್ನು ಮುಂದುವರಿಸಿದರೆ ಯುದ್ಧ ಇನ್ನಷ್ಟು ದಿನ ಮುಂದುವರಿಯಬಹುದು. ಸದ್ಯ ಅಮೆರಿಕ ಮತ್ತು ಅದರ ಮಿತ್ರರಾಷ್ಟ್ರಗಳು ನಾಲ್ಕುರಿಂದ ಆರು ವಾರಗಳ ಯುದ್ಧದ ಯೋಜನೆ ಹಾಕಿಕೊಂಡಿವೆ. ಇದೇ ರೀತಿ ಸಂಘರ್ಷ ಮುಂದುವರಿದರೆ ವಿಶ್ವ ಆರ್ಥಿಕತೆ ಮೇಲೆ ಭಾರೀ ಪರಿಣಾಮ ಬೀರುವ ಸಾಧ್ಯತೆ ಇದೆ. ಹೀಗಾಗಿ ಇರಾನ್ ನೌಕಾಪಡೆ ಮತ್ತು ಕ್ಷಿಪಣಿ ಸಾಮರ್ಥ್ಯವನ್ನು ನಾಶಪಡಿಸಿ, ಆ ಬಳಿಕ ರಾಜತಾಂತ್ರಿಕ ಒತ್ತಡದ ಮೂಲಕ ಹೊರ್ಮುಜ್ ಜಲಸಂಧಿಯನ್ನು ಎಲ್ಲರಿಗೂ ಮುಕ್ತಗೊಳಿಸಲು ಪ್ರಯತ್ನಿಸುವ ಉದ್ದೇಶ ಅಮೆರಿಕಕ್ಕಿದೆ.
ಒಂದು ವೇಳೆ ಈ ಪ್ರಯತ್ನ ಫಲ ನೀಡಿದದಿದ್ದರೆ ಹೋರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸುವ ಅಧಿಕಾರ ಯುರೋಪ್, ಕೊಲ್ಲಿ ರಾಷ್ಟ್ರಗಳಿಗೆ ವಹಿಸುವ ಉದ್ದೇಶ ಟ್ರಂಪ್ ಅವರಿಗಿದೆ ಎಂದು ಹೇಳಲಾಗಿದೆ.