Headlines

Interview: ದೆಹಲಿಯಲ್ಲಿ ತೃತೀಯ ಭಾಷೆಯಾಗಿ ಕನ್ನಡ ಕಲಿಸಿದರೆ ನಾವೂ ಹಿಂದಿ ಕಲಿಸ್ತೇವೆ | Three Language Policy | Interview Banavasi Balaga President Anand G On Karnataka S Three Language Policy Rav

Interview: ದೆಹಲಿಯಲ್ಲಿ ತೃತೀಯ ಭಾಷೆಯಾಗಿ ಕನ್ನಡ ಕಲಿಸಿದರೆ ನಾವೂ ಹಿಂದಿ ಕಲಿಸ್ತೇವೆ | Three Language Policy | Interview Banavasi Balaga President Anand G On Karnataka S Three Language Policy Rav



Interview: ದೆಹಲಿಯಲ್ಲಿ ತೃತೀಯ ಭಾಷೆಯಾಗಿ ಕನ್ನಡ ಕಲಿಸಿದರೆ ನಾವೂ ಹಿಂದಿ ಕಲಿಸ್ತೇವೆ | Three Language Policy | Interview Banavasi Balaga President Anand G On Karnataka S Three Language Policy Rav

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತೃತೀಯ ಭಾಷೆಗೆ ಗ್ರೇಡಿಂಗ್ ವ್ಯವಸ್ಥೆ ಜಾರಿಗೆ ತರುವ ಸರ್ಕಾರದ ನಿರ್ಧಾರದ ಕುರಿತು ಬನವಾಸಿ ಬಳಗದ ಅಧ್ಯಕ್ಷ ಆನಂದ್ ಜಿ. ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಈ ಬದಲಾವಣೆ ವಿದ್ಯಾರ್ಥಿಗಳ ಮೇಲಿನ ಹೊರೆ ಕಡಿಮೆ ಮಾಡಿ, ಶಿಕ್ಷಣದಲ್ಲಿ ಸಮಾನತೆ ತರಲಿದೆ ಎಂದಿದ್ದಾರೆ.

ಮುಖಾಮುಖಿ ಸಂದರ್ಶನ: ಆನಂದ್‌ ಜಿ ಅಧ್ಯಕ್ಷರು, ಬನವಾಸಿ ಬಳಗ

ಲಿಂಗರಾಜು ಕೋರಾ

ಎಸ್ಸೆಸ್ಸೆಲ್ಸಿ ಪರೀಕ್ಷೆಯ ತೃತೀಯ ಭಾಷಾ ವಿಷಯಗಳಲ್ಲಿ ಪಾಸ್‌-ಫೇಲ್‌ ಪದ್ಧತಿ ಕೈಬಿಟ್ಟು ಗ್ರೇಡಿಂಗ್‌ ವ್ಯವಸ್ಥೆ ಜಾರಿಗೆ ಸರ್ಕಾರ ಮುಂದಾಗಿರುವುದು ತಜ್ಞರಿಂದ ಪರ-ವಿರೋಧ ಚರ್ಚೆಗೆ ಕಾರಣವಾಗಿದೆ. ಜೊತೆಗೆ ರಾಜಕೀಯ ಕೆಸರೆರಚಾಟಕ್ಕೂ ವೇದಿಕೆಯಾಗಿದೆ. ತೃತೀಯ ಭಾಷೆಯಡಿ ಒಂಬತ್ತು ಭಾಷೆಗಳಿದ್ದರೂ ಶೇ.93ರಷ್ಟು ಮಕ್ಕಳು ಹಿಂದಿಯನ್ನೇ ತಗೆದುಕೊಳ್ಳುವುದರಿಂದ ಇದು ಹಿಂದಿ ವಿರುದ್ಧದ ನಿರ್ಧಾರ ಎಂದೇ ಬಿಂಬಿತವಾಗುತ್ತಿದೆ. ಹಾಗಾದರೆ ಸರ್ಕಾರ ತೆಗೆದುಕೊಂಡ ಈ ನಿರ್ಧಾರದಿಂದ ನಮ್ಮ ರಾಜ್ಯದ ಮಕ್ಕಳಿಗೆ ಅನ್ಯಾಯ ಆಗುತ್ತದೆಯೇ, ಶೈಕ್ಷಣಿಕವಾಗಿ ಸಮಾನತೆ ಕಲ್ಪಿಸಲು ಸಹಕಾರಿಯೇ, ಶಿಕ್ಷಣ ಕ್ಷೇತ್ರದಲ್ಲಿ ದ್ವಿಭಾಷಾ ನೀತಿ ಜಾರಿಗೊಳಿಸುವ ಆರಂಭಿಕ ಹೆಜ್ಜೆಯೇ ಎಂಬಿತ್ಯಾದಿ ವಿಚಾರಗಳ ಬಗ್ಗೆ ಕನ್ನಡ ಭಾಷೆ, ಸಂಸ್ಕೃತಿ ಹಕ್ಕು ಹಾಗೂ ಭಾಷಾ ಸಮಾನತೆಗಾಗಿ ಹೋರಾಡುತ್ತಾ ಬರುತ್ತಿರುವ ಬನವಾಸಿ ಬಳಗದ ಅಧ್ಯಕ್ಷ ಆನಂದ್‌ ಜಿ. ‘ಕನ್ನಡಪ್ರಭ’ದೊಂದಿಗೆ ಈ ವಾರ ‘ಮುಖಾಮುಖಿ’ಯಾಗಿದ್ದಾರೆ.

ಸರ್ಕಾರ ರಾಜ್ಯದಲ್ಲಿ ತೃತೀಯ ಭಾಷಾ ವಿಷಯಗಳನ್ನು ಆಟಕ್ಕುಂಟು ಲೆಕ್ಕಕ್ಕಿಲ್ಲದಂತೆ ಮಾಡುತ್ತಿದೆಯೇ?

ಎರಡು ರೀತಿಯಲ್ಲಿ ಇದು ಒಳ್ಳೆಯ ನಡೆ. ಮೊದಲನೆಯದಾಗಿ ನಮ್ಮ ಮಕ್ಕಳ ಶಿಕ್ಷಣ ವ್ಯವಸ್ಥೆಯಲ್ಲಿ ಆಗುತ್ತಿರುವ ತಾರತಮ್ಯ ತಡೆಯಲು ಇದು ಸಹಕಾರಿ. ಬೇರೆ ರಾಜ್ಯ ಹಾಗೂ ಸಿಬಿಎಸ್‌ಇ, ಐಸಿಎಸ್‌ಇ ಪಠ್ಯಕ್ರಮದ ಮಕ್ಕಳಿಗೆ ಪ್ರಥಮ ಮತ್ತು ದ್ವಿತೀಯ ಭಾಷಾ ವಿಷಯಗಳು ಸೇರಿ ಒಟ್ಟು ಐದು ವಿಷಯಗಳನ್ನು ಮಾತ್ರ ಪರೀಕ್ಷೆ, ಫಲಿತಾಂಶಕ್ಕೆ ಪರಿಗಣಿಲಾಗುತ್ತದೆ. ಆದರೆ, ಕರ್ನಾಟಕದ ಮಕ್ಕಳಿಗೆ ತೃತೀಯ ಭಾಷೆ ಕಲಿತು ಪಾಸ್‌ ಆಗುವುದನ್ನು ಕಡ್ಡಾಯಗೊಳಿಸಲಾಗಿದೆ. ಇದರಿಂದ ಆರು ವಿಷಯಗಳಿಗೆ ಅವರು ಪರೀಕ್ಷೆ ಬರೆಯಬೇಕು ಮತ್ತು ಪಾಸ್‌ ಆಗಬೇಕು. ಸರ್ಕಾರದ ನಿರ್ಧಾರದಿಂದ ಈ ತಾರತಮ್ಯ ನಿವಾರಣೆಯಾಗಿ ನಮ್ಮ ಮಕ್ಕಳೂ ಐದು ವಿಷಯಗಳಲ್ಲಿ ಮಾತ್ರ ಪಾಸಾಗಬೇಕಾದ ಸಮಾನತೆ ಬರುತ್ತದೆ. ಪಿಯುಸಿ ಮತ್ತಿತರ ಪ್ರವೇಶಕ್ಕೆ ಸಮಾನ ಸ್ಪರ್ಧೆ ಇರುತ್ತದೆ. ಎರಡನೆಯದಾಗಿ ಬೇಡವಾದ ಭಾಷೆಯನ್ನು ಬಲವಂತವಾಗಿ ಓದಿ ಫೇಲಾಗುವುದನ್ನು ತಪ್ಪಿಸಲು ನೆರವಾಗಲಿದೆ.

ಆ ಬೇಡವಾದ ಭಾಷೆ ಯಾವುದು?

ಹಿಂದಿ ಕರ್ನಾಟಕದ ಮಕ್ಕಳಿಗೆ ಬೇಡವಾದ ಭಾಷೆ. ಹಿಂದಿ ಮೂರನೇ ಭಾಷೆಯಾಗಿ ಕಲಿಸಲು ನಮ್ಮ ವಿರೋಧವಿದೆ. ಸರ್ಕಾರದ ಅಂಕಿ-ಅಂಶಗಳ ಪ್ರಕಾರ, ಕಳೆದ ವರ್ಷ ತೃತೀಯ ಭಾಷೆ ಪರೀಕ್ಷೆ ಬರೆದ ಮಕ್ಕಳಲ್ಲಿ 1.42 ಲಕ್ಷ ಮಕ್ಕಳು ಹಿಂದಿ ಒಂದರಲ್ಲೇ ಫೇಲಾಗಿದ್ದಾರೆ. ನಮಗ್ಯಾರಿಗೂ ಹಿಂದಿಯ ಅವಶ್ಯಕತೆ ಇಲ್ಲ. ದೆಹಲಿ ಸೇರಿ ಉತ್ತರ ಭಾರತದ ರಾಜ್ಯಗಳಿಗೆ ಶಿಕ್ಷಣ, ಉದ್ಯೋಗಕ್ಕಾಗಿ ಹೋಗುವ ಕನ್ನಡಿಗರ ಸಂಖ್ಯೆ ಬಹಳ ಕಡಿಮೆ. ಆ ರಾಜ್ಯದವರೇ ಹೆಚ್ಚಾಗಿ ಇಲ್ಲಿಗೆ ವಲಸೆ ಬರುತ್ತಿರುವುದು. ಇಲ್ಲಿಗೆ ಬಂದ ಹಿಂದಿಯವರಿಗೆ ತೊಂದರೆ ಆಗಬಾರದು. ನಾವು ಅವರೊಂದಿಗೆ ಸಲೀಸಾಗಿ ಸಂವಹನ ಮಾಡಬೇಕೆಂದು ನಮ್ಮ ರಾಜ್ಯದ ಮಕ್ಕಳಿಗೆ ಹಿಂದಿನಿಂದಲೂ ಹಿಂದಿಯನ್ನು ತೃತೀಯ ಭಾಷೆಯಲ್ಲಿ ಸೇರಿಸಿ ಕಲಿಸುತ್ತಿದ್ದಾರೆ. ಇದು ನಿಲ್ಲಬೇಕು.

ಹಾಗಾದರೆ ತೃತೀಯ ಭಾಷೆ ಕಲಿಕೆ ಬೇಡವೇ? ಹಿಂದಿ ಜೊತೆ ಕನ್ನಡವೂ ಸೇರಿ ಹಲವು ಭಾಷೆಗಳೂ ಇವೆಯಲ್ಲ?

ಮುಖ್ಯವಾಗಿ ತೃತೀಯ ಭಾಷಾ ಪರೀಕ್ಷೆಯ ಬದಲಾವಣೆಯನ್ನು ಹಿಂದಿ ವಿರುದ್ಧದ ನಿರ್ಧಾರ ಎಂದು ಭಾವಿಸಬೇಕಿಲ್ಲ. ಶಿಕ್ಷಣದಲ್ಲಿ ಸಮಾನತೆ ತರುವ ವಿಷಯವಾಗಿ ಮಾತ್ರ ನೋಡಬೇಕು. ಬೇರೆ ಭಾಷೆ ಕಲಿಯಬೇಡಿ ಅಂತ ಯಾರೂ ಹೇಳಿಲ್ಲವಲ್ಲ? ಬೋಧನೆ, ಕಲಿಕೆ, ಪರೀಕ್ಷೆ ಇದ್ದೇ ಇರುತ್ತದೆ. ಪಾಸು-ಫೇಲ್‌ ಮಾನದಂಡ ಇರುವುದಿಲ್ಲ. ಗ್ರೇಡಿಂಗ್‌ ಇರುತ್ತದೆ. ಆದರೆ, ತೃತೀಯ ಭಾಷೆ ಅಧ್ಯಯನದ ವಿಚಾರ ವಿದ್ಯಾರ್ಥಿಗಳ ಆಯ್ಕೆಗೆ ಬಿಟ್ಟಿರಬೇಕು. ಬಲವಂತದ ಅಥವಾ ಕಡ್ಡಾಯ ಪಾಸಿಗೆ ಒಳಪಟ್ಟಿರಬಾರದು. ಯಾರಿಗೆ ಯಾವ ಭಾಷೆ ಅಗತ್ಯವಿರುತ್ತದೋ ಅದನ್ನು ಓದುವ ಸ್ವಾತಂತ್ರ್ಯ ಇರಬೇಕು. ಆದರೆ, ಶೇ.98 ಶಾಲೆಗಳಲ್ಲಿ ಹಿಂದಿಯನ್ನೇ ತೃತೀಯ ಭಾಷೆಯಾಗಿ ಓದಬೇಕು. ಕರ್ನಾಟಕದ ಬಹುತೇಕ ಭಾಷೆಯಗಳಲ್ಲಿ ಆಯ್ಕೆ, ಸ್ವಾತಂತ್ರ್ಯಕ್ಕೆ ಅವಕಾಶ ಎಲ್ಲಿದೆ. ಅನಿವಾರ್ಯವಾಗಿ ಶೇ.7.42 ಲಕ್ಷ ಮಕ್ಕಳು ಹಿಂದಿಯನ್ನು ತೃತೀಯ ಭಾಷೆಯಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಕನ್ನಡ ಸೇರಿ ಇತರೆ ಎಂಟು ಭಾಷೆಗಳನ್ನು 60 ಸಾವಿರ ಮಕ್ಕಳು ಆಯ್ಕೆ ಮಾಡಿಕೊಂಡಿದ್ದಾರೆ. ಇದರಲ್ಲಿ ಕನ್ನಡವನ್ನು ತೃತೀಯ ಭಾಷೆಯಾಗಿ ಕಲಿತವರು ಸುಮಾರು 11,500. ಇವರಲ್ಲಿ ಬಹುತೇಕರು ಕರ್ನಾಟಕೇತರ ವಿದ್ಯಾರ್ಥಿಗಳೇ ಆಗಿರುತ್ತಾರೆ. ಅವರಿಗಾಗಿ ನಾವು ಕನ್ನಡವನ್ನು ತೃತೀಯ ಭಾಷೆಯಾಗಿ ಕಲಿಸುವ ಅಗತ್ಯವೂ ಇಲ್ಲ. ಇಲ್ಲಿ ನೆಲೆ ಕಂಡುಕೊಂಡು ಉದ್ಯೋಗ, ಜೀವನ ನಡೆಸಬೇಕಾದರೆ ಹೇಗಾದರೂ ಅವರು ಕನ್ನಡ ಕಲಿತೇ ಕಲಿಯುತ್ತಾರೆ.

ತೃತೀಯ ಭಾಷೆ ಎಂಬುದನ್ನೇ ಸಂಪೂರ್ಣ ತೆಗೆದುಹಾಕಬೇಕೇ?

ಹೌದು, ಬೇರೆ ರಾಜ್ಯಗಳಲ್ಲಿ ಇಲ್ಲದ ತ್ರಿಭಾಷಾ ಸೂತ್ರ ನಮಗ್ಯಾಕೆ? ದೆಹಲಿ ಸೇರಿ ಉತ್ತರದ ರಾಜ್ಯಗಳಲ್ಲಿ ಹಿಂದಿ ಮತ್ತು ಇಂಗ್ಲಿಷ್‌ ಮಾತ್ರ ಪ್ರಥಮ ಹಾಗೂ ದ್ವಿತೀಯ ಭಾಷೆಗಳಾಗಿ ಕಲಿಸುತ್ತಿದ್ದಾರೆ. ಅವರಿಗೂ ಕನ್ನಡವನ್ನು ಮೂರನೇ ಭಾಷೆಯಾಗಿ ಕಲಿಸಲಿ, ಆಗ ನಾವೂ ಹಿಂದಿಯನ್ನು ಕಲಿಸೋಣ. ಆದರೆ ಅದು ಆಗಲ್ಲ. ಹಾಗಾಗಿ ನಮಗೆ ದ್ವಿಭಾಷಾ ಸೂತ್ರವೇ ಸಾಕು. ಈಗ ಸರ್ಕಾರ ರಾಜ್ಯ ಶಿಕ್ಷಣ ನೀತಿ ಕರಡು ರಚನೆಗೆ ರೂಪಿಸಿರುವ ಡಾ.ಸುಖದೇವ ಥೋರಟ್‌ ಅವರ ಆಯೋಗ ದ್ವಿಭಾಷಾ ನೀತಿಯನ್ನೇ ಶಿಫಾರಸು ಮಾಡಿದೆ. ಅದನ್ನು ಸರ್ಕಾರ ಜಾರಿಗೊಳಿಸಿದರೆ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ರಾಜ್ಯದ ಎಲ್ಲ ಶಾಲೆಗಳಲ್ಲೂ ಎಲ್ಲ ಮಕ್ಕಳೂ ಕಲಿಯಲೇ ಬೇಕಾಗುತ್ತದೆ. ಕನ್ನಡವನ್ನು ಪ್ರಥಮ ಭಾಷೆಯಾಗಿ ತೆಗೆದುಕೊಂಡರೆ ದ್ವಿತೀಯ ಭಾಷೆಯಾಗಿ ಇಂಗ್ಲಿಷ್‌ ಹಾಗೂ ಇತರೆ ಭಾಷೆಗಳನ್ನು ತೆಗೆದುಕೊಳ್ಳಬಹುದು. ಹಾಗೊಂದು ವೇಳೆ ಹಿಂದಿ ಮತ್ತಿತರ ಭಾಷೆಯನ್ನು ಕಲಿಯುವ ಅವಶ್ಯತೆ ಇರುವವರಿಗೆ ತೃತೀಯ ಭಾಷೆಯನ್ನು ಸ್ವತಂತ್ರ ಆಯ್ಕೆಯಾಗಿ ಸಮಿತಿ ಶಿಫಾರಸು ಮಾಡಿದೆ.

ಪಾಸು-ಫೇಲ್‌ ಪದ್ಧತಿ ಕೈಬಿಟ್ಟಾಕ್ಷಣ ಅದು ದ್ವಿಭಾಷಾ ಸೂತ್ರ ಆಗುತ್ತಾ?

ಇಲ್ಲ, ಪಾಸು-ಫೇಲು ಕೈಬಿಟ್ಟರೂ ಬೋಧನೆ, ಕಲಿಕೆ, ಪರೀಕ್ಷೆ, ಗ್ರೇಡಿಂಗ್‌ ಇದ್ದೇ ಇರುವುದರಿಂದ ಅದು ಪರಿಪೂರ್ಣ ದ್ವಿಭಾಷಾ ಸೂತ್ರ ಆಗುವುದಿಲ್ಲ. ಆದರೆ, ಇದು ದ್ವಿಭಾಷಾ ಸೂತ್ರ ಅಳವಡಿಕೆಯ ಮೊದಲ ಹೆಜ್ಜೆ ಎಂದು ಭಾವಿಸಬಹುದು. ಮುಂದೆ ರಾಜ್ಯ ಶಿಕ್ಷಣ ನೀತಿ(ಎಸ್‌ಇಪಿ) ಜಾರಿಗೊಳಿಸಿ ಸಂಪೂರ್ಣ ಅನುಷ್ಠಾನಗೊಳಿಸಿದಾಗ ದ್ವಿಭಾಷಾ ಸೂತ್ರ ಜಾರಿಗೆ ಬರುತ್ತದೆ. ಮಕ್ಕಳೂ ತಮ್ಮ ಮಾತೃಭಾಷೆ ಪ್ರಥಮ ಭಾಷೆಯಾಗಿ ತೆಗೆದುಕೊಂಡರೆ, ಎರಡನೇ ಭಾಷೆ ಕನ್ನಡ ತೆಗೆದುಕೊಳ್ಳುತ್ತಾರೆ. ಆಗ ತಮಗೆ ಇಷ್ಟವಿದ್ದರೆ ಇಂಗ್ಲಿಷ್‌, ಹಿಂದಿ ಸೇರಿ ಬೇರೆ ಯಾವುದೇ ಭಾಷೆಯನ್ನು ತೃತೀಯ ಭಾಷೆಯಾಗಿ ಕಲಿಯುತ್ತಾರೆ.

ಹಾಗಾದರೆ 6ನೇ ತರಗತಿಯಿಂದಲೇ ತೃತೀಯ ಭಾಷೆ ಕೈಬಿಡಬೇಕು ಅಂತೀರಾ?

ಯಾವ ತರಗತಿಯಲ್ಲೂ ತೃತೀಯ ಭಾಷೆಗೆ ಪಾಸು-ಫೇಲು ಇರಬಾರದು. ಪ್ರಥಮ ಮತ್ತು ದ್ವಿತೀಯ ಭಾಷೆಗೆ ಮಾತ್ರ ಪರೀಕ್ಷೆ ಇರಲಿ. ಮೂರನೇ ಭಾಷೆಯ ಕಲಿಕೆ ಮಕ್ಕಳ ಸ್ವಾತಂತ್ರ್ಯಕ್ಕೆ ಬಿಡಬೇಕು. ಇದರಿಂದ ಬೇರೆ ಭಾಷಾ ಬೋಧಕರಿಗೂ ತೊಂದರೆ ಆಗುವುದಿಲ್ಲ. ಪರೀಕ್ಷೆಯನ್ನೂ ಮಾಡಿ. ಆದರೆ, ಅಂಕದಿಂದ ಅಳೆಯಬೇಡಿ.

ಹಿಂದಿ, ಸಂಸ್ಕೃತದಲ್ಲಿ ಶೇ.100 ಅಂಕ ಪಡೆಯುವುದು ಸುಲಭ, ಇದು ಒಟ್ಟಾರೆ ಫಲಿತಾಂಶ ಹೆಚ್ಚಳಕ್ಕೆ ಸಹಕಾರಿ ಅಂತಾರೆ?

ಒಂದೆಡೆ ಎಲ್ಲ ರಾಜ್ಯಗಳಲ್ಲೂ ಹಿಂದಿ ಬಲವಂತದಿಂದ ಅಥವಾ ಅನಿವಾರ್ಯತೆಯಿಂದ ಕಲಿಯುವಂಥ ಪ್ರಮೇಯ ಸೃಷ್ಟಿಸಿದವರಂತೆ, ಸಂಸ್ಕೃತದ ವಿಚಾರದಲ್ಲೂ ಆ ಭಾಷೆಯ ಪ್ರೇಮಿಗಳದ್ದೇ ಒಂದು ವರ್ಗ ಇದೆ. ಭಾರತ ಸರ್ಕಾರದಿಂದ ಹಿಡಿದು ಎಲ್ಲ ಕಡೆಯಲ್ಲೂ ಇದೆ. ಹಾಗಾಗಿ ಸಂಸ್ಕೃತದಲ್ಲಿ ಶೇ.100ಕ್ಕೆ ನೂರು ಅಂಕ ಕೊಡುತ್ತಿದ್ದರು. ಅಲ್ಲದೆ, ಸಂಸ್ಕೃತ ಪಠ್ಯ ಕನ್ನಡ ಹಾಗೂ ಇತರೆ ವಿಷಯಗಳಷ್ಟು ಕಠಿಣವಾಗಿರದಂತೆ ನೋಡಿಕೊಳ್ಳುತ್ತಿದ್ದರು. ಕನ್ನಡ ಹಾಗೂ ಇತರೆ ಭಾಷೆಗಳಷ್ಟೇ ಸಂಸ್ಕೃತದಲ್ಲೂ ಕಠಿಣ ಪಠ್ಯವಿಷಯಗಳನ್ನು ನೀಡಿದರೆ ಆ ರೀತಿ ಫಲಿತಾಂಶ ಬರಲು ಸಾಧ್ಯವಿಲ್ಲ. ಇದೇ ಕಾರಣಕ್ಕೆ ಗೋಕಾಕ್‌ ವರದಿ ಚಳವಳಿ ನಡೆದಿದ್ದು.

ಬಿಜೆಪಿ ನಾಯಕರು ವಿರೋಧಿಸಿದ್ದಾರೆ. ಸಭಾಪತಿ ಬಸವರಾಜ ಹೊರಟ್ಟಿ ಸರ್ಕಾರಕ್ಕೆ ಜ್ಞಾನ ಕಡಿಮೆ ಎಂದಿದ್ದಾರೆ?

ಅವರವರ ಅನಿಸಿಕೆ ಹೇಳಲು ಎಲ್ಲರಿಗೂ ಪ್ರಜಾಪ್ರಭುತ್ವದಲ್ಲಿ ಸ್ವಾತಂತ್ರ್ಯವಿದೆ. ಕನ್ನಡಪರ ಸಂಘಟನೆಗಳು ಇದನ್ನು ಸ್ವಾಗತಿಸುತ್ತಿವೆ. ಬಿಜೆಪಿಯವರು ವಿರೋಧಿಸುತ್ತಾರೆ. ಏಕೆಂದರೆ ಅವರ ಸಿದ್ಧಾಂತವೇ ಬೇರೆ. ಹಾಗಾಗಿ ಟೀಕೆ ಮಾಡುತ್ತಾರೆ. ಬಿಜೆಪಿಯವರ ಸಿದ್ಧಾಂತದ ಪ್ರಕಾರ ಸಂಸ್ಕೃತ, ಹಿಂದಿ ದೇಶದ ಭಾಷೆಗಳಾಗಬೇಕು. ಮುಂಬರುವ ಚುನಾವಣೆಯಲ್ಲಿ ನಾವು ಹಿಂದಿ ಕಡ್ಡಾಯ ಮಾಡುತ್ತೇವೆ. ತೃತೀಯ ಭಾಷೆ ಕಲಿಕೆ ಕಡ್ಡಾಯ ಮಾಡುತ್ತೇವೆ ಅಂತ ಹೇಳಿ ಚುನಾವಣೆ ಎದುರಿಸಲಿ ನೋಡೋಣ. ಇನ್ನು, ಸಭಾಪತಿ ಅವರು ಶಿಕ್ಷಣ ಕ್ಷೇತ್ರದಿಂದ ಆಯ್ಕೆಯಾಗಿ ಬಂದವರು. ಅವರು ತಮ್ಮ ಅಭಿಪ್ರಾಯ ತಿಳಿಸಲು ಸ್ವತಂತ್ರರು. ಅದಕ್ಕೆ ಉತ್ತರ ಕೊಡುವವರು ಕೊಟ್ಟರೆ ಸರಿ ಎನಿಸುತ್ತದೆ.



Source link

Leave a Reply

Your email address will not be published. Required fields are marked *