ವಾಷಿಂಗ್ಟನ್ (ಏ.1): ಇರಾನ್ ವಿರುದ್ಧ ಭೀಕರ ಯುದ್ಧಕ್ಕೆ ಇಳಿದಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗ ಅನಿವಾರ್ಯವಾಗಿ ಯುದ್ಧ ನಿಲ್ಲಿಸುವ ಸುಳಿವು ನೀಡಿದ್ದಾರೆ. ಇರಾನ್‌ನಲ್ಲಿ ಆಡಳಿತ ಬದಲಾವಣೆ ನನ್ನ ಗುರಿಯಲ್ಲ ಎಂದು ಘೋಷಿಸಿರುವ ಟ್ರಂಪ್, ಮುಂಬರುವ 2-3 ವಾರಗಳಲ್ಲಿ ಯುದ್ಧ ಕೊನೆಗೊಳ್ಳಬಹುದು ಎಂದು ತಿಳಿಸಿದ್ದಾರೆ.
ಇರಾನ್ ಮೇಲಿನ ಯುದ್ಧ ನಿಲ್ಲಿಸಲು ಟ್ರಂಪ್ ನಿರ್ಧಾರ? ಹೋರ್ಮುಜ್ ಜಲಸಂಧಿ ಮುಚ್ಚಿದ್ರೂ ಸದ್ಯ ಯುದ್ಧಕ್ಕೆ ಬ್ರೇಕ್ ಹಾಕಿದ್ದೇಕೆ ಟ್ರಂಪ್?
ಯುದ್ಧ ನಿಲ್ಲಿಸಲು ಕಾರಣಗಳೇನು?: ಮುಖ್ಯವಾಗಿ ಅಮೆರಿಕದ ಮೇಲೆ ಹೆಚ್ಚುತ್ತಿರುವ ಆರ್ಥಿಕ ಹೊರೆ ಈ ನಿರ್ಧಾರಕ್ಕೆ ಕಾರಣ ಎನ್ನಲಾಗುತ್ತಿದೆ. ಈವರೆಗಿನ ಯುದ್ಧಕ್ಕೆ ಅಮೆರಿಕ ಈಗಾಗಲೇ ಸುಮಾರು 35 ಬಿಲಿಯನ್ ಡಾಲರ್ ಖರ್ಚು ಮಾಡಿದೆ. ದಿನಕ್ಕೆ ಸರಾಸರಿ 1 ಬಿಲಿಯನ್ ಡಾಲರ್ ವೆಚ್ಚವಾಗುತ್ತಿದ್ದು, 16 ಫೈಟರ್ ಜೆಟ್‌ಗಳನ್ನು ಅಮೆರಿಕ ಕಳೆದುಕೊಂಡಿದೆ. ಅಮೆರಿಕದ ಒಟ್ಟು ಸಾಲ 38 ಟ್ರಿಲಿಯನ್ ಡಾಲರ್‌ಗೆ ಏರಿಕೆಯಾಗಿದ್ದು, ಇದು ಜಿಡಿಪಿಯ ಶೇ.122ರಷ್ಟಿದೆ.
ಜಾಗತಿಕ ತೈಲ ಬಿಕ್ಕಟ್ಟಿನ ಆತಂಕ: ಹೋರ್ಮುಜ್ ಜಲಸಂಧಿಯ ಮೇಲೆ ಇರಾನ್ ಹಿಡಿತ ಸಾಧಿಸಿದರೆ ಜಾಗತಿಕ ತೈಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿ ಬೆಲೆ ಏರಿಕೆಯಾಗುವ ಭೀತಿ ಇದೆ. ಇಸ್ರೇಲ್ ಪ್ರಧಾನಿ ನೆತನ್ಯಾಹು ಕೂಡ ಇರಾನ್ ಶಕ್ತಿಯನ್ನು ಧ್ವಂಸಗೊಳಿಸಿದ್ದೇವೆ ಎನ್ನುತ್ತಿದ್ದಾರಾದರೂ, ಇರಾನ್ ಮಣಿಯದೇ ನೀಡುತ್ತಿರುವ ಪ್ರತಿರೋಧ ಅಮೆರಿಕವನ್ನು ಚಿಂತೆಗೀಡು ಮಾಡಿದೆ. ಈ ಎಲ್ಲಾ ಕಾರಣಗಳಿಂದಾಗಿ ನಾಳೆ ಟ್ರಂಪ್ ನಡೆಸಲಿರುವ ಸುದ್ದಿಗೋಷ್ಠಿಯ ಮೇಲೆ ಇಡೀ ವಿಶ್ವದ ಕುತೂಹಲ ನೆಟ್ಟಿದೆ.