
ಚಿತ್ರದುರ್ಗ, ಏಪ್ರಿಲ್ 02: ಪ್ರಾಧ್ಯಾಪಕನ ಜತೆ ಸಂಬಂಧ ಕಲ್ಪಿಸಿ ಅಪಪ್ರಚಾರ ಆರೋಪ ಸಂಬಂಧ ಚಿತ್ರದುರ್ಗದ ಹೊಳಲ್ಕೆರೆಯಲ್ಲಿ BAMS ವಿದ್ಯಾರ್ಥಿನಿ ನಿಖಿತಾ(23) ಆತ್ಮಹತ್ಯೆ ಪ್ರಕರಣ ಸಂಬಂಧ ಮತ್ತಷ್ಟು ವಿಚಾರಗಳು ಬಯಲಾಗಿವೆ. ರಾಜು, ಪತ್ನಿ ನಿಶಾ, ಕೆಲ ವಿದ್ಯಾರ್ಥಿನಿಯರ ಹೆಸರನ್ನು ಬರೆದು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಸಂಬಂಧ ಹೊಳಲ್ಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೆಲವರ ವಿರುದ್ಧ ಕೇಸ್ ಕೂಡ ಆಗಿದೆ. ಈ ನಡುವೆ ಸಾವಿಗೂ ಮುನ್ನ ನಿಖಿತಾ ಬರೆದ ಡೆತ್ ನೋಟ್ ಲಭ್ಯವಾಗಿದ್ದು, ಆಕೆ ಮಾನಸಿಕವಾಗಿ ತೀವ್ರ ನೊಂದಿದ್ದಾಳೆ ಎಂಬುದು ಬಹಿರಂಗವಾಗಿದೆ.
ನಿಖಿತಾ ಡೆತ್ ನೋಟ್ ನಲ್ಲಿ ಏನಿದೆ?
ಉಪನ್ಯಾಸಕ ರಾಜು ಪತ್ನಿ ನಿಶಾ ಹಾಗೂ ನನ್ನ ಸಹಪಾಠಿಗಳಿಂದ ಅವಮಾನ ಆಗಿದ್ದು, ನನಗೂ ರಾಜು ಸರ್ ಅವರಿಗೂ ಯಾವುದೇ ಸಂಬಂಧವಿಲ್ಲ. ಅವರು ನನಗೆ ಪೋಷಕರ ಸಮಾನ. ಹೀಗಿದ್ದರೂ ನನ್ನ ಕೆಟ್ಟ ಸ್ನೇಹಿತರಿಂದ ನನ್ನ ಚಾರಿತ್ರ್ಯಕ್ಕೆ ಧಕ್ಕೆ ಆಗಿದೆ. ಸಹಪಾಠಿಗಳಾದ ಅನುಷಾ, ರಕ್ಷಾ, ಚಿನ್ಮಯಿ, ಗ್ರೀಷ್ಮಾ, ಸಾಗರ್ ಅವಮಾನ ಮಾಡಿದ್ದು, ನನ್ನ ಜೀವನದಲ್ಲಿ ಇಂತಹ ಸಹಪಾಠಿಗಳನ್ನ ನಾನು ನೋಡಿಲ್ಲ. ಡಾ.ರಾಜು ಸರ್ ಬಳಿ ಪರೀಕ್ಷೆ ಹಾಗೂ ಇನ್ನಿತರ ವಿಷಯದ ಮಾರ್ಗದರ್ಶನ ಪಡೆಯುತ್ತಿದ್ದರು. ನಾನು ಯಾವತ್ತೂ ತಪ್ಪು ಮಾಡಿಲ್ಲ. ಆದರೆ ನನ್ನ ಸಹಪಾಠಿಗಳೇ ನನ್ನ ವಿರುದ್ಧ ತಪ್ಪಾಗಿ ಬಿಂಬಿಸಿದ್ದಾರೆ. ನಾನು ದೇವರಲ್ಲಿ ಪ್ರಮಾಣ ಮಾಡಿ ಹೇಳ್ತೀನಿ, ಸರ್ ನನಗೆ ಅಣ್ಣನ ಸಮಾನರು ಎಂದು ನಿಖಿತಾ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ನನ್ನ ಸಾವಿಗೆ ಇವರೇ ಕಾರಣ; ಪ್ರಾಧ್ಯಾಪಕರ ಜತೆ ಸಂಬಂಧ ಕಲ್ಪಿಸಿ ಅಪಪ್ರಚಾರ, ಬಿಎಂಎಸ್ ವಿದ್ಯಾರ್ಥಿನಿ ಆತ್ಮಹತ್ಯೆ!
ಡಾ.ರಾಜು ಸರ್ ತಮ್ಮ ಪತ್ನಿಯ ಜೊತೆ ಜಗಳ ಆಡುತ್ತಿದ್ದರು ಎಂದು ಕೇಳಿದ್ದೆ. ಆದರೆ ಡಾ.ರಾಜು ಪತ್ನಿ ನಿಶಾ ನನ್ನ ಮೇಲೆಯೇ ಈಗ ಅನುಮಾನ ಪಡ್ತಿದ್ದಾರೆ. ನನಗೆ ಬೇರೆ ಯಾರ ಜೊತೆಯೂ ಸಂಬಂಧ ಇದೆ ಎಂದಿದ್ರೆ ಇಷ್ಟು ನೋವಾಗ್ತಿರಲಿಲ್ಲ. ಮದುವೆಯಾದವರ ಜೊತೆ ಸಂಬಂಧ ಕಲ್ಪಿಸ್ತಿರೋದು ತೀವ್ರ ನೋವು ಉಂಟುಮಾಡಿದೆ. ಈ ಅವಮಾನವನ್ನು ತಡೆದುಕೊಳ್ಳಲು ಆಗುತ್ತಿಲ್ಲ. ಇದಕ್ಕೆ ಮುಖ್ಯ ಕಾರಣ ಡಾ.ರಾಜು ಅವರ ಪತ್ನಿ ನಿಶಾ ಹಾಗೂ ನನ್ನ ಸಹಪಾಠಿಗಳು. ನನ್ನನ್ನು ನಾನು ಪರೀಕ್ಷಿಸಿಕೊಳ್ಳಲು ಈ ನಿರ್ಧಾರ ಕೈಗೊಳುತ್ತಿದ್ದೇನೆ ಎಂದು ನಿಖಿತಾ ಹೇಳಿದ್ದಾಳೆ. ಜೊತೆಗೆ ಹೆತ್ತವರ ಕ್ಷಮೆ ಕೇಳಿರುವ ಈಕೆ, ನಿನ್ನ ಜೀವನವನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಯಾರನ್ನೂ ನಂಬಬೇಡ ಎಂದು ತಂಗಿ ನಿಧಿಗೂ ಕಿವಿಮಾತು ಹೇಳಿದ್ದಾಳೆ. ರಾಜು ಸರ್ ನಿಜವಾಗಿಯೂ ಒಳ್ಳೆಯವರು, ಅವರ ಮೇಲೆ ಯಾರೂ ಆರೋಪ ಮಾಡಬೇಡಿ. ನನ್ನ ಸಹಪಾಠಿಗಳಂತಹವರನ್ನು ನಾನು ಎಂದಿಗೂ ಕ್ಷಮಿಸುವುದಿಲ್ಲ ಎಂದು ನಿಖಿತಾ ಡೆತ್ ನೋಟ್‌ನಲ್ಲಿ ಬರೆದಿದ್ದಾಳೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.