‘ಜೊತೆ ಜೊತೆಯಲಿ’ ಖ್ಯಾತಿಯ ನಟಿ ಮಾನಸ ಮನೋಹರ್ ಮತ್ತು ಅವರ ಪತಿ, ಫುಟ್‌ಬಾಲ್ ಆಟಗಾರ ಪ್ರೀತಂ ಚಂದ್ರ ಅವರು ತಮ್ಮ ಮೊದಲ ಮಗುವನ್ನು ಬರಮಾಡಿಕೊಂಡಿದ್ದಾರೆ. ಮಾರ್ಚ್ 20, 2026 ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ ಈ ಸಿಹಿ ಸುದ್ದಿಯನ್ನು ನಟಿ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಬೆಂಗಳೂರು (ಏ.2): ಕಿರುತೆರೆಯ ಜನಪ್ರಿಯ ನಟಿ ಮಾನಸ ಮನೋಹರ್ ಅವರು ತಮ್ಮ ಜೀವನದ ಅತ್ಯಂತ ಸುಂದರ ಘಟ್ಟವನ್ನು ತಲುಪಿದ್ದಾರೆ. ಹೌದು, ನಟಿ ಮಾನಸ ಮನೋಹರ್ ಮತ್ತು ಅವರ ಪತಿ ಫುಟ್‌ಬಾಲ್ ಆಟಗಾರ ಪ್ರೀತಂ ಚಂದ್ರ ದಂಪತಿ ಮೊದಲ ಮಗುವನ್ನು ಬರಮಾಡಿಕೊಂಡಿದ್ದಾರೆ. ಈ ಸಿಹಿ ಸುದ್ದಿಯನ್ನು ಸ್ವತಃ ನಟಿಯೇ ತಮ್ಮ ಇನ್‌ಸ್ಟಾಗ್ರಾಂ ಖಾತೆಯ ಮೂಲಕ ಹಂಚಿಕೊಂಡಿದ್ದಾರೆ. “ನಮ್ಮ ಪುಟ್ಟ ದೇವತೆ ಮಾರ್ಚ್ 20, 2026ರಂದು ಜನಿಸಿದಳು. ಅವಳು ನಮ್ಮ ಕುಟುಂಬಕ್ಕೆ ಅಪಾರ ಸಂತೋಷವನ್ನು ತಂದಿದ್ದಾಳೆ, ನಿಜಕ್ಕೂ ಅವಳು ನಮ್ಮ ಪಾಲಿನ ದೇವತೆ” ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ. ಈ ಪೋಸ್ಟ್ ನೋಡಿದ ಅಭಿಮಾನಿಗಳು ಕಾಮೆಂಟ್ ಬಾಕ್ಸ್‌ನಲ್ಲಿ ಅಭಿನಂದನೆಗಳ ಸುರಿಮಳೆಗೈಯುತ್ತಿದ್ದಾರೆ.
‘ಜೊತೆ ಜೊತೆಯಲಿ’ ಧಾರಾವಾಹಿಯ ‘ಮೀರಾ’ ಪಾತ್ರದ ಮೂಲಕ ಮನೆಮಾತಾಗಿದ್ದ ಮಾನಸ, ಇತ್ತೀಚೆಗೆ ಜೀ ಕನ್ನಡದ ಜನಪ್ರಿಯ ಧಾರಾವಾಹಿ ‘ಲಕ್ಷ್ಮೀ ನಿವಾಸ’ದಲ್ಲಿ ‘ನೀಲು’ ಎಂಬ ಖಳನಾಯಕಿಯ ಪಾತ್ರವನ್ನು ಅದ್ಭುತವಾಗಿ ನಿರ್ವಹಿಸಿದ್ದರು. ಗರ್ಭಿಣಿಯಾದ ಕಾರಣ, ಮಗುವಿನ ಆರೈಕೆಗಾಗಿ ಮತ್ತು ಆರೋಗ್ಯದ ದೃಷ್ಟಿಯಿಂದ ಅವರು ಈ ಧಾರಾವಾಹಿಯಿಂದ ಹೊರಬಂದಿದ್ದರು. ಶೂಟಿಂಗ್‌ನ ಕೊನೆಯ ದಿನದ ನೆನಪುಗಳನ್ನು ಅವರು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು.
ಪ್ರೀತಂ ಚಂದ್ರ ಜೊತೆಗಿನ ದಾಂಪತ್ಯ
ನಟಿ ಮಾನಸ ಮನೋಹರ್ ಅವರು 2024ರಲ್ಲಿ ಉದ್ಯಮಿ ಮತ್ತು ಫುಟ್‌ಬಾಲ್ ಆಟಗಾರ ಪ್ರೀತಂ ಚಂದ್ರ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ದಂಪತಿ ತಮ್ಮ ಮೊದಲ ಮಗುವನ್ನು ಸ್ವಾಗತಿಸುವ ಮೂಲಕ ಹೊಸ ಜೀವನದ ಇನ್ನೊಂದು ಮೈಲಿಗಲ್ಲನ್ನು ದಾಟಿದ್ದಾರೆ. ಅಭಿಮಾನಿಗಳು ಮತ್ತು ಕಿರುತೆರೆ ಲೋಕದ ಸಹನಟರು ನಟಿ ಮಾನಸ ಮತ್ತು ಅವರ ಪುಟ್ಟ ಕಂದಮ್ಮನಿಗೆ ಶುಭ ಹಾರೈಸುತ್ತಿದ್ದಾರೆ.
