
ರೈಲ್ವೆ ಇಲಾಖೆಯು ಟಿಕೆಟ್ ರದ್ದತಿ ಮತ್ತು ಬೋರ್ಡಿಂಗ್ ಪಾಯಿಂಟ್ ಬದಲಾವಣೆಗೆ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಟಿಕೆಟ್ ರದ್ದತಿ ಇನ್ನುಮುಂದೆ ಸ್ವಲ್ಪ ದುಬಾರಿಯಾಗಲಿದೆ. ಇದರೊಂದಿಗೆ, ದೀರ್ಘಾವಧಿ ಪ್ರಯಾಣಕ್ಕಾಗಿ ವಂದೇ ಭಾರತ್ ಸ್ಲೀಪರ್ ಎಕ್ಸ್‌ಪ್ರೆಸ್ ರೈಲುಗಳನ್ನು ಸಹ ಪರಿಚಯಿಸಲಾಗಿದೆ.
ರೈಲು ಇಲಾಖೆಯು ರೈಲ್ವೆ ಟಿಕೆಟ್ ರದ್ದತಿಯಲ್ಲಿ ಭಾರಿ ಬದಲಾವಣೆ ಮಾಡಿದ್ದು, ಇದು ಏಪ್ರಿಲ್ 1ರಿಂದಲೇ ಜಾರಿಗೆ ಬಂದಿದೆ. ಅದೇ ರೀತಿ ಹತ್ತುವ ಸ್ಥಳದ ಆಯ್ಕೆಯ ಬಗ್ಗೆ ಪ್ರಯಾಣಿಕರಿಗೆ ಗುಡ್ ನ್ಯೂಸ್ ಕೂಡ ಕೊಟ್ಟಿದೆ. ಹತ್ತುವ ಸ್ಥಳದ ಕುರಿತು ಹೇಳುವುದಾದರೆ, ನಿಮ್ಮ ರೈಲು ಹೊರಡುವ 30 ನಿಮಿಷಗಳ ಮೊದಲು ನೀವು ಈಗ ನಿಮ್ಮ ಬೋರ್ಡಿಂಗ್ ಪಾಯಿಂಟ್ ಅನ್ನು ಬದಲಾಯಿಸಲು ಅವಕಾಶ ಕಲ್ಪಿಸಲಾಗಿದೆ. ಕನ್ಫರ್ಮ್ ಮತ್ತು RAC ಟಿಕೆಟ್ ಪ್ರಯಾಣಿಕರಿಗೆ ಮಾತ್ರ ಇದು ಅನ್ವಯ ಆಗಲಿದೆ. ಒಂದೇ ಒಂದು ಸಲಕ್ಕೆ ನೀವು ಸ್ಟೇಷನ್ ಬದಲಾಯಿಸಲು ಅವಕಾಶ ಕಲ್ಪಿಸಲಾಗಿದೆ.
ಇನ್ನು ಟಿಕೆಟ್ ರದ್ದತಿಯ ವಿಷಯಕ್ಕೆ ಬರುವುದಾದರೆ ಅದರ ಫುಲ್ ಡಿಟೇಲ್ಸ್ ಹೀಗಿದೆ:
* ನಿಗದಿತ ಪ್ರಯಾಣಕ್ಕೆ 8 ಗಂಟೆಗಳಿಗಿಂತ ಕಡಿಮೆ ಮೊದಲು ರೈಲು ಟಿಕೆಟ್‌ಗಳನ್ನು ರದ್ದುಗೊಳಿಸಿದರೆ ಪ್ರಯಾಣಿಕರಿಗೆ ಯಾವುದೇ ಮರುಪಾವತಿಯನ್ನು ನೀಡಲಾಗುವುದಿಲ್ಲ.
- ಪ್ರಯಾಣಕ್ಕೆ 72 ಗಂಟೆಗಳಿಗಿಂತಲೂ ಮುಂಚೆ ಟಿಕೆಟ್‌ಗಳನ್ನು ರದ್ದುಗೊಳಿಸಿದರೆ ಮರುಪಾವತಿ ಸಿಗುತ್ತದೆ.
- 72 ರಿಂದ 24 ಗಂಟೆಗಳ ನಡುವೆ ಟಿಕೆಟ್ ರದ್ದುಗೊಳಿಸಿದರೆ ಟಿಕೆಟ್ ಬೆಲೆಯ ಶೇಕಡಾ 25ರಷ್ಟು ಕಡಿತಗೊಳಿಸಲಾಗುತ್ತದೆ. ಉದಾ: ನಿಮ್ಮ ಟಿಕೆಟ್ ದರ 100 ರೂಪಾಯಿ ಇದ್ದರೆ, ನಿಮಗೆ 75 ರೂಪಾಯಿಗಳು ಮಾತ್ರ ಸಿಗುತ್ತದೆ.
- 24 ರಿಂದ 8 ಗಂಟೆಗಳ ನಡುವೆ ರದ್ದುಗೊಳಿಸಿದರೆ ಶೇಕಡಾ 50 ರಷ್ಟು ಕಡಿತಗೊಳಿಸಲಾಗುತ್ತದೆ. 100 ರೂಪಾಯಿ ಟಿಕೆಟ್ ಬೆಲೆ ಇದ್ದರೆ 50 ರೂಪಾಯಿ ಮಾತ್ರ ನಿಮಗೆ ಸಿಗುತ್ತದೆ.
ಪ್ರಸ್ತುತ, ಪ್ರಯಾಣಿಕರು ತಮ್ಮ ಟಿಕೆಟ್‌ಗಳನ್ನು ಅಂತಿಮ ನಿಲ್ದಾಣದಲ್ಲಿ ರದ್ದುಗೊಳಿಸಬೇಕಾಗಿತ್ತು. ಅದನ್ನೀಗ ದೇಶಾದ್ಯಂತ ಯಾವುದೇ ರೈಲು ನಿಲ್ದಾಣದಿಂದ ತಮ್ಮ ಕೌಂಟರ್ ಟಿಕೆಟ್‌ಗಳನ್ನು ರದ್ದುಗೊಳಿಸಬಹುದು ಎಂದು ಇಲಾಖೆ ತಿಳಿಸಿದೆ.
ವಂದೇ ಭಾರತ್ ಸ್ಲೀಪರ್ ಎಕ್ಸ್‌ಪ್ರೆಸ್ ಉಡಾವಣೆ
ದೀರ್ಘ ಮತ್ತು ಮಧ್ಯಮ ದೂರದ ರಾತ್ರಿ ಪ್ರಯಾಣವನ್ನು ಪೂರೈಸಲು, ರೈಲ್ವೆಯು ಹೌರಾ-ಕಾಮಾಖ್ಯ ಮಾರ್ಗದಲ್ಲಿ ಎರಡು ವಂದೇ ಭಾರತ್ ಸ್ಲೀಪರ್ ರೈಲುಗಳನ್ನು ಪರಿಚಯಿಸಿದ್ದು, ಈ ವರ್ಷ ಇಂತಹ 12 ರೈಲುಗಳನ್ನು ಓಡಿಸಲು ಸಚಿವಾಲಯ ಯೋಜಿಸಿದೆ. ಚೆನ್ನೈ ಮೂಲದ ಇಂಟೆಗ್ರಲ್ ಕೋಚ್ ಫ್ಯಾಕ್ಟರಿ (ICF) ಬಳಸಿಕೊಂಡು BEML ಅಭಿವೃದ್ಧಿಪಡಿಸಿದ ವಂದೇ ಭಾರತ್ ಸರಣಿಯ ಉದ್ದನೆಯ ರೂಪಾಂತರವು 1,000 ರಿಂದ 1,500 ಕಿ.ಮೀ ದೂರವನ್ನು ಕ್ರಮಿಸುತ್ತದೆ. ಇದೇ ವೇಳೆ, ಇಂಡೋ-ರಷ್ಯನ್ ಜೆವಿ ಕೈನೆಟ್ ರೈಲ್ವೆ ಸೊಲ್ಯೂಷನ್ಸ್ ಜೂನ್ 2026 ರ ವೇಳೆಗೆ ಮೊದಲ ಮೂಲಮಾದರಿಯನ್ನು ಅನಾವರಣಗೊಳಿಸಲಿದೆ. ಕಂಪನಿಯು 120 ವಂದೇ ಭಾರತ್ ಸ್ಲೀಪರ್ ರೈಲು ಸೆಟ್‌ಗಳನ್ನು ತಯಾರಿಸುವ ಒಪ್ಪಂದವನ್ನು ಪಡೆದುಕೊಂಡಿದೆ.
16 ಕೋಚ್ ರೈಲು
ಟಿಟಾಘರ್ ರೈಲ್ ಸಿಸ್ಟಮ್ಸ್ 2027 ರಲ್ಲಿ ಮೊದಲ ವಂದೇ ಭಾರತ್ ಸ್ಲೀಪರ್ ರೈಲನ್ನು ಓಡಿಸುವ ಗುರಿಯನ್ನು ಹೊಂದಿದೆ. ಉತ್ತರಪಾರ ಮೂಲದ ಕಂಪನಿಯು ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (BHEL) ಜೊತೆಗಿನ ಒಕ್ಕೂಟದಲ್ಲಿ ಸ್ಲೀಪರ್ ಆವೃತ್ತಿಯನ್ನು ಉತ್ಪಾದಿಸುತ್ತಿದೆ. ಇದು 16 ಕೋಚ್‌ಗಳನ್ನು ಒಳಗೊಂಡಿರುವ 80 ವಂದೇ ಭಾರತ್ ಸ್ಲೀಪರ್ ರೈಲು ಸೆಟ್‌ಗಳನ್ನು ತಯಾರಿಸಲಿದೆ.