
ಡೈನೋಸಾರ್ ಚರ್ಮದ ವಿಶ್ವದ ಮೊದಲ ಹ್ಯಾಂಡ್‌ಬ್ಯಾಗ್ ಬಿಡುಗಡೆ, ತಲ್ಲಣಗೊಂಡ ಫ್ಯಾಶನ್ ಕ್ಷೇತ್ರ, ಬರೋಬ್ಬರಿ 6.6 ಕೋಟಿ ವರ್ಷಗಳ ಹಿಂದೆ ಇದ್ದ ಡೈನೋಸಾರ್ ಜೀವಿಗಳ ಚರ್ಮದಿಂದ ಬ್ಯಾಗ್ ತಯಾರಿಸಲಾಗಿದೆ. ಇದು ಹೇಗೆ ಸಾಧ್ಯ?
ಫ್ರಾನ್ಸ್ (ಏ.03) ವಿಜ್ಞಾನ ಹಾಗೂ ತಂತ್ರಜ್ಞಾನ ಜೊತೆಯಾದರೆ ಏನು ಬೇಕಾದರು ಸೃಷ್ಟಿಸಲು ಸಾಧ್ಯ ಅನ್ನೋದಕ್ಕೆ ಇದೊಂದು ಉದಾಹರಣೆ. ಬರೋಬ್ಬರಿ 6.6 ಕೋಟಿ ವರ್ಷಗಳ ಹಿಂದೆ ಜೀವಿಸಿದ್ದ ಡೈನೋಸಾರ್ ಜೀವಿಗಳ ಅಸ್ಥಿಪಂಜರ, ಪಳೆಯುಳಿಕೆಗಳು ಮಾತ್ರ ಲಭ್ಯವಿದೆ. ಇವುಗಳ ಚರ್ಮ ಲಭ್ಯವಿಲ್ಲ. ಆದರೆ ವಿಜ್ಞಾನಿಗಳು,ಸಂಶೋಧಕರು ಹಾಗೂ ತಂತ್ರಜ್ಞರು ಒಂದಾಗಿ ಮಹತ್ತರ ಸಾಧನೆ ಮಾಡಿದ್ದಾರೆ. ಫ್ರೆಂಚ್ ಫ್ಯಾಶನ್ ಬ್ರ್ಯಾಂಡ್ ಡೈನೋಸಾರ್ ಚರ್ಮದಿಂದ ತಯಾರಿಸಿದ ಹ್ಯಾಂಡ್ ಬ್ಯಾಗ್ ಬಿಡುಗಡೆ ಮಾಡಿದೆ.
ಡೈನೋಸಾರ್ ಚರ್ಮ ಈಗ ಲಭ್ಯವಿಲ್ಲ. ಡೋನೋಸಾರ್ ಪಳೆಯುಳಿಕೆ ಬಳಸಿ ಮಾಡಿಲ್ಲ. ಬದಲಾಗಿ, ವಿಜ್ಞಾನಿಗಳು ಕೊಲಾಜೆನ್ (Lab-grown collagen) ಬಳಸಿ ಈ ಚರ್ಮ ಅಭಿವೃದ್ಧಿಪಡಿಸಿದ್ದಾರೆ. ಡೈನೋಸಾರ್ ಡಿಎನ್ಎ ಮಾಹಿತಿ ಬಳಿಸಿ ಲ್ಯಾಬ್‌ನಲ್ಲಿ ಡೈನೋಸಾರ್ ಚರ್ಮ ಅಭಿವೃದ್ಧಿಪಡಿಸಲಾಗಿತ್ತು. ಇದಕ್ಕೆ ತಂತ್ರಜ್ಞಾನವನ್ನು ಬಳಕೆ ಮಾಡಲಾಗಿತ್ತು. ಅಳಿದು ಹೋದ ಪ್ರಾಣಿಯ ಡಿಎನ್ಎ ಸೀಕ್ವೆನ್ಸಿ ಬಳಸಿ ಅದೇ ಮಾದರಿಯ ಪ್ರೊಟಿನ್‌ನ್ನು ಲ್ಯಾಬ್‌ನಲ್ಲಿ ಬೆಳಸಲಾಗಿದೆ.
ಲ್ಯಾಬ್‌ನಲ್ಲಿ ಅಭಿವೃದ್ಧಿಪಡಿಸಿದ ಈ ಚರ್ಮ ನೋಡಲು ಹಾಗೂ ಮುಟ್ಟಲು ಚರ್ಮದಂತೆ ಇರುತ್ತದೆ. ಈ ಚರ್ಮವನ್ನು ಅಭಿವೃದ್ಧಿಪಡಿಸಿ ಇದೀಗ ಅದನ್ನು ಹ್ಯಾಂಡ್‌ಬ್ಯಾಗ್ ಆಗಿ ತಯಾರಿಸಲಾಗಿದೆ. ಫ್ರಾನ್ಸ್‌ನಲ್ಲಿ ಅತ್ಯಂತ ಜನಪ್ರಿಯ ಫ್ಯಾಶನ್ ಬ್ರ್ಯಾಂಡ್ ಕ್ಲೋಯ್ ಈ ಬ್ಯಾಗ್ ಸಿದ್ಧಪಡಿಸಿದೆ. ಸದ್ಯ ಪ್ರದರ್ಶನದ ಬ್ಯಾಗ್ ಸಿದ್ದಪಡಿಸಲಾಗಿದೆ. ಒಂದೇ ಬ್ಯಾಗ್ ತಯಾರಿಸಿ ಪ್ರದರ್ಶನಕ್ಕೆ ಇಡಲಾಗಿದೆ. ಆದರೆ ಭವಿಷ್ಯದಲ್ಲಿ ಈ ಪ್ರಯೋಗಕ್ಕೆ ನಾಂದಿ ಹಾಡಿದೆ.
ಡೈನೋಸಾರ್ ಚರ್ಮದ ಬ್ಯಾಗ್ ಉದ್ದೇಶವೇನು
ಚರ್ಮದ ಚೀಲ, ಪರ್ಸ್, ಬೆಲ್ಟ್ ಸೇರಿದಂತೆ ಉತ್ಪನ್ನಗಳಿಗೆ ಭಾರಿ ಬೇಡಿಕೆ ಇದೆ. ಇಷ್ಟೇ ಅಲ್ಲ ದುಬಾರಿ ಕೂಡ. ಚರ್ಮದ ಚೀಲ ಸೇರಿದಂತೆ ಉತ್ಪನ್ನಗಳಿಗಾಗಿ ಪ್ರಾಣಿಗಳನ್ನು ಕೊಲ್ಲಲಾಗುತ್ತದೆ. ಆದರೆ ಪ್ರಾಣಿಗಳಿಗೆ ಹಿಂಸೆ ನೀಡದೆ, ಪರಿಸರಕ್ಕೆ ಪೂರಕವಾದ ಚರ್ಮ ಅಭಿವೃದ್ಧಿಪಡಿಸಿ ಉತ್ಪನ್ನ ತಯಾರಿಸಲು ಸಾಧ್ಯವಿದೆ ಎಂದು ಕ್ಲೋಯ್ ಫ್ಯಾಶನ್ ಬ್ರ್ಯಾಂಡ್ ತೋರಿಸಿಕೊಟ್ಟಿದೆ. ಈ ತಂತ್ರಜ್ಞಾನ ಬಳಿಸಿ ಮುಂದಿನ ದಿನಗಳಲ್ಲಿ ಹೆಚ್ಚಿನ ಉತ್ಪನ್ನ ತಯಾರಿಸಲು ಸಾಧ್ಯ. ಇದು ಹಾನಿಕಾರಕವಲ್ಲದ ಹಾಗೂ ಸುಸ್ಥಿರ ಫ್ಯಾಶನ್ ಲೋಕದ ಹೊಸ ಅಧ್ಯಾಯವಾಗಲಿದೆ ಎಂದಿದೆ.