
ಬೆಂಗಳೂರಲ್ಲಿ ಯುವಕ ವಿಜಯ್ ಕೊಲೆ ಕೇಸ್‌ನಲ್ಲಿ ಟ್ವಿಸ್ಟ್, ಪ್ರಕರಣದ ಹಿಂದಿನ ಯವತಿ ವಿಷ್ಯ ಬೆಳಕಿಗೆ, ಆರಂಭದಲ್ಲಿ ಕ್ಷುಲಕ್ಕ ಕಾರಣಕ್ಕೆ ಈ ಕೊಲೆ ನಡೆದಿದೆ ಎಂದು ಹೇಳಲಾಗಿತ್ತು. ಆದರೆ ಅಸಲಿ ವಿಚಾರ ಬೇರೇನೆ ಇದೆ.
ಬೆಂಗಳೂರು (ಏ.04) ಬೆಂಗಳೂರಿನ ಜೆಸಿ ರಸ್ತೆಯಲ್ಲಿ ನಡೆದ ಹತ್ಯೆ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ. ಜೆಸಿ ರಸ್ತೆಯ ಪಕ್ಕದಲ್ಲಿ 22ರ ಹರೆಯ ವಿಜಯ್ ಮೇಲೆ ಇಬ್ಬರು ಆರೋಪಿಗಳು ಮನಸ್ಸೋ ಇಚ್ಚೆ ದಾಳಿ ನಡೆಸಿ ಹತ್ಯೆ ಮಾಡಿದ್ದರು. ಆರೋಪಿಗಳಿಂದ ತಪ್ಪಿಸಿಕೊಂಡು ಓಡಿ ಹೋಗುವಾಗ ನೆಲಕ್ಕೆ ಬಿದ್ದ ವಿಜಯ್ ಮೇಲೆ ಚಾಕು ಮೂಲಕ ದಾಳಿ ಮಾಡಿದ್ದರು. ರಾತ್ರಿ ವಾಹನ ಟಚ್ ಆದ ಕಾರಣ ಈ ಜಗಳ ನಡೆದಿದೆ ಎಂದು ವರದಿಯಾಗಿತ್ತು. ಆದರೆ ವಿಜಯ್ ಕೊಲೆ ಹಿಂದೆ ಯುವತಿ ವಿಚಾರವಿದೆ ಅನ್ನೋದು ತನಿಖೆಯಲ್ಲಿ ಬಹಿರಂಗವಾಗಿದೆ.
ವಿಜಯ್ ಕೊಲೆ ಪ್ರಕರಣಕ್ಕೆ ಟ್ವಿಸ್ಟ್
ಇಂದು (ಏ.04) ಮಧ್ಯಾಹ್ನ 12 ಗಂಟೆ ಸುಮಾರಿಗೆ ಈ ಹತ್ಯೆ ನಡೆದಿತ್ತು. ಇಬ್ಬರು ಆರೋಪಿಗಳಾದ ಕಿರಣ್ ಹಾಗೂ ವಿನೋದ್ ದಾಳಿ ನಡೆಸಿ ಹತ್ಯೆ ಮಾಡಿದ್ದರು. ಸಹೋದರರಾಗಿರುವ ಇಬ್ಬರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಾರ್‌ನಲ್ಲಿ ಕುಡಿದು ಬಳಿಕ ಗಲಾಟೆ, ಗಾಡಿ ಟಚ್ ವಿಚಾರಕ್ಕೆ ವಾಗ್ವಾದ ಹೆಚ್ಚಾಗಿ ಕೊಲೆ ಎಂದೇ ಹೇಳಲಾಗಿತ್ತು. ಆದರೆ ಕೊಲೆಯಾದ ವಿಜಯ್ ಪ್ರಕರಣದಲ್ಲಿ ಕೆಲ ತಿರುವು ಸಿಕ್ಕಿದೆ. ಕೊಲೆಯಾದ ವಿಜಯ್‌ಗೆ ಮದುವೆಯಾಗಿದ್ದರೂ ಯುವತಿಯೊಬ್ಬಳಿಗೆ ಕಿರುಕುಳ ನೀಡುತ್ತಿದ್ದ ಅನ್ನೋ ಮಾಹಿತಿಯೂ ಬಯಲಾಗಿದೆ. ಇದೇ ವಿಚಾರವಾಗಿ ಕೊಲೆಯಾಗಿದೆ ಎಂಬ ಮಾಹಿತಿ ಬಯಲಾಗಿದೆ.
ಕೊಲೆಯಾದ ವಿಜಯ್ ಯುವತಿಗೆ ಕಾಲ್, ಮೆಸೇಜ್ ಮಾಡಿ ಕಿರುಕುಳ ನೀಡುತ್ತಿದ್ದ. ಪದೇ ಪದೇ ಈ ರೀತಿ ಮಾಡಿದ ಕಾರಣ ಯುವತಿ ನೊಂದಿದ್ದಳು. ಯುವತಿಗೆ ಕಿರುಕುಳ ನೀಡುತ್ತಿದ್ದ ವಿಜಯ್‌ಗೆ ತಕ್ಕ ಪಾಠ ಕಲಿಸಲು ಕಿರಣ್ ಹಾಗೂ ವಿನೋದ್ ಸಹೋದರರು ನಿರ್ಧರಿಸಿದ್ದರು. ಹೀಗಾಗಿ ಇದೇ ವಿಚಾರ ಮಾತನಾಡಲು ಜ್ಯೋತಿ ಬಾರ್‌ಗೆ ವಿಜಯ್‌ನನ್ನು ಆರೋಪಿಗಳು ಕರೆಯಿಸಿದ್ದರು.
ಜ್ಯೋತಿ ಬಾರ್‌ನಲ್ಲೇ ಗಲಾಟೆ
ಯುವತಿ ವಿಚಾರ ಮಾತನಾಡಲು ಜ್ಯೋತಿ ಬಾರ್‌ಗೆ ಆಗಮಿಸಿದ ವಿಜಯ್ ಮತ್ತೆ ತನ್ನ ಮೊಂಡುವಾದ ಮುಂದಿಟ್ಟಿದ್ದ. ಇದರಿಂದ ವಾಗ್ವಾದ ಹೆಚ್ಚಾಗಿದೆ. ಬಾರ್‌ನಲ್ಲೇ ಜಗಳ ಶುರುವಾಗಿದೆ. ಬಾರ್‌ನಲ್ಲಿ ಗಲಾಟೆ ಜೋರಾಗುತ್ತಿದ್ದಂತೆ ವಿಜಯ್‌ಗೆ ಪರಿಸ್ಥಿತಿ ಅರಿವಾಗಿದೆ. ಹೀಗಾಗಿ ತಕ್ಷಣವೇ ಅಲ್ಲಿಂದ ತಪ್ಪಿಸಿಕೊಂಡು ಓಡಿ ಹೋಗಲು ಯತ್ನಿಸಿದ್ದಾನೆ. ಬಾರ್‌ನಿಂದ ಹೊರಬಂದ ವಿಜಯ್‌ನ್ನು ಆರೋಪಿಗಳು ಅಟ್ಟಾಡಿಸಿಕೊಂಡು ಬಂದಿದ್ದಾರೆ. ಜೆಸಿ ನಗರ ಮುಖ್ಯರಸ್ತೆ ಪಕ್ಕದ ಮುನಿರೆಡ್ಡಿ ಪಾಳ್ಯದ ರಸ್ತೆಗೆ ಆಗಮಿಸಿದ್ದಾರೆ. ಆರೋಪಿಗಳಿಂದ ತಪ್ಪಿಸಿಕೊಂಡು ವೇಗವಾಗಿ ಓಡುತ್ತಿದ್ದ ವಿಜಯ್ ರಸ್ತೆ ಮೇಲೆ ಬಿದ್ದಿದ್ದಾನೆ. ಆತ ಏದ್ದು ಮತ್ತೆ ಓಡುವ ಮುನ್ನವೇ ಇಬ್ಬರು ಆರೋಪಿಗಳು ಹರಿತ ಚಾಕು ಮೂಲಕ ದಾಳಿ ಮಾಡಿದ್ದಾರೆ.
ತೀವ್ರವಾಗಿ ದಾಳಿ ಮಾಡಿದ ಆರೋಪಿಗಳು ಬಳಿಕ ಸ್ಥಳದಿಂದ ಪರಾರಿಯಾಗಿದ್ದಾರೆ. ಇತ್ತ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ವಿಜಯ್‌ನ ಆಸ್ಪತ್ರೆ ದಾಖಲಿಸಿದ್ದಾರೆ. ಆದಕ್ಕೂ ಮೊದಲೇ ವಿಜಯ್ ಮೃತಪಟ್ಟಿದ್ದ. ಇದೀಗ ಆರೋಪಿಗಳ ವಿಚಾರಣೆ ನಡೆಯುತ್ತಿದ್ದು ಮತ್ತಷ್ಟು ಸ್ಫೋಟಕ ಮಾಹಿತಿ ಹೊರಬೀಳುವ ಸಾಧ್ಯತೆ ಇದೆ.