ಬೆಂಗಳೂರು: ಐಪಿಎಲ್ 2026ರ ಬಹುನಿರೀಕ್ಷಿತ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ನಡುವಿನ ಪಂದ್ಯಕ್ಕೂ ಮುನ್ನ, ಟೀಂ ಇಂಡಿಯಾದ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ತಮ್ಮ ಭವಿಷ್ಯ ನುಡಿದಿದ್ದಾರೆ.

ಸೂಪರ್ ಸಂಡೆಯ ಎರಡನೇ ಪಂದ್ಯದಲ್ಲಿಂದು ದಕ್ಷಿಣ ಭಾರತದ ಎರಡು ಬಲಿಷ್ಠ ತಂಡಗಳಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿವೆ. ಇಂದು ಸಂಜೆ 7.30ರಿಂದ ಆರಂಭವಾಗಲಿರುವ ಹೈವೋಲ್ಟೇಜ್ ಮ್ಯಾಚ್ಗೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂ ಆತಿಥ್ಯ ವಹಿಸಿದೆ.

ಈ ಪಂದ್ಯದಲ್ಲಿ ಯಾವ ತಂಡ ಗೆಲ್ಲಲಿದೆ ಎನ್ನುವ ಕುತೂಹಲ ಜೋರಾಗಿದೆ. ಹೀಗಿರುವಾಗಲೇ ರವಿಚಂದ್ರನ್ ಅಶ್ವಿನ್ ಅಚ್ಚರಿಯ ಭವಿಷ್ಯ ನುಡಿದಿದ್ದು, ಸದ್ಯದ ಫಾರ್ಮ್ ನೋಡಿದರೆ ಬೆಂಗಳೂರು ತಂಡಕ್ಕೆ ಗೆಲ್ಲುವ ಅವಕಾಶ ಹೆಚ್ಚಿದೆ, ಆದರೆ ತಮ್ಮ ಮನಸ್ಸು ಮಾತ್ರ ಮಾಜಿ ತಂಡ ಚೆನ್ನೈ ಪರ ಇದೆ ಎಂದು ಹೇಳಿಕೊಂಡಿದ್ದಾರೆ.

"ನಾನು ಯಾರನ್ನೂ ಅತಿಯಾದ ಫೇವರಿಟ್ ಅಂತ ಕರೆಯಲ್ಲ. ನನ್ನ ಹೃದಯ ಯಾವಾಗ್ಲೂ ಹಳದಿ ಬಣ್ಣದ ಜೆರ್ಸಿಗಾಗಿಯೇ ಮಿಡಿಯುತ್ತೆ. ಇದನ್ನ ಹೇಳಿಕೊಳ್ಳೋಕೆ ನನಗೆ ಯಾವುದೇ ಮುಜುಗರ ಇಲ್ಲ. ಈ ಪಂದ್ಯದಲ್ಲಿ ನನ್ನ ಮನಸ್ಸು ಸಿಎಸ್ಕೆ ಗೆಲ್ಲಲಿ ಅಂತ ಹೇಳಿದ್ರೂ, ತಲೆ ಮಾತ್ರ ಆರ್ಸಿಬಿ ಕಡೆಗೇ ಇದೆ.

ರಾಜಸ್ಥಾನ ರಾಯಲ್ಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಕೇವಲ 127 ರನ್ಗಳಿಗೆ ಔಟಾಗಿದ್ದನ್ನು ಒಂದು ಕೆಟ್ಟ ದಿನ ಎಂದು ಪರಿಗಣಿಸಬಹುದು. ಅಂದು ಕೆಟ್ಟ ಹವಾಮಾನ ಮತ್ತು ಪಿಚ್ನ ಸ್ಥಿತಿ ತಂಡಕ್ಕೆ ಹಿನ್ನಡೆಯಾಗಿತ್ತು," ಎಂದು ಅಶ್ವಿನ್ ವಿವರಿಸಿದರು.

ಸತತ ಎರಡು ಸೋಲುಗಳ ನಂತರ ಚೆನ್ನೈ ತಂಡದಲ್ಲಿ ಆಗುತ್ತಿರುವ ಬದಲಾವಣೆಗಳ ಬಗ್ಗೆಯೂ ಅಶ್ವಿನ್ ಪ್ರಶ್ನೆ ಎತ್ತಿದ್ದಾರೆ. ಜೇಮಿ ಓವರ್ಟನ್ ಮತ್ತು ಮ್ಯಾಟ್ ಶಾರ್ಟ್ ಬದಲು ರಾಹುಲ್ ಚಹಾರ್ ಮತ್ತು ಪ್ರಶಾಂತ್ ವೀರ್ ಅವರನ್ನು ತಂಡಕ್ಕೆ ಸೇರಿಸಿದ್ದನ್ನು ಉಲ್ಲೇಖಿಸಿ, ‘ಇನ್ನೂ ಎಷ್ಟು ಬದಲಾವಣೆಗಳನ್ನು ಮಾಡ್ತೀರಾ?’ ಎಂದು ಅಶ್ವಿನ್ ಕೇಳಿದ್ದಾರೆ. ಧೋನಿ ಇಲ್ಲದಿರುವುದು ತಂಡದ ಸಮತೋಲನದ ಮೇಲೆ ಪರಿಣಾಮ ಬೀರಿದೆ ಎಂದೂ ಅವರು ಅಭಿಪ್ರಾಯಪಟ್ಟರು.

ಬೆಂಗಳೂರು ತಂಡ ಉತ್ತಮ ಫಾರ್ಮ್ನಲ್ಲಿದ್ದರೂ, ಆರ್ಸಿಬಿ ಪಾಳಯದಲ್ಲೂ ಚಿಂತೆಗೇನೂ ಕಡಿಮೆ ಇಲ್ಲ. ತಂಡದ ಪ್ರಮುಖ ಬೌಲರ್ಗಳ ಅನುಪಸ್ಥಿತಿ ಅವರನ್ನು ಕಾಡುತ್ತಿದೆ. ಜೋಶ್ ಹೇಜಲ್ವುಡ್ ಗಾಯದ ಕಾರಣ ವಿಶ್ರಾಂತಿಯಲ್ಲಿದ್ದಾರೆ. ನುವಾನ್ ತುಷಾರ ಅವರಿಗೆ ಶ್ರೀಲಂಕಾ ಕ್ರಿಕೆಟ್ ಮಂಡಳಿಯಿಂದ ಇನ್ನೂ ಎನ್ಒಸಿ (ನಿರಾಕ್ಷೇಪಣಾ ಪತ್ರ) ಸಿಕ್ಕಿಲ್ಲ. ಯಶ್ ದಯಾಳ್ ವೈಯಕ್ತಿಕ ಕಾರಣಗಳಿಂದಾಗಿ ತಂಡದಿಂದ ಹೊರಗುಳಿದಿದ್ದಾರೆ. ಜೇಕಬ್ ಡಫಿ ಹಾಗೂ ಭುವನೇಶ್ವರ್ ಕುಮಾರ್ ಮೇಲೆ ಎಲ್ಲರ ಕಣ್ಣಿದೆ.

Source link
ಇಂದಿನ ಆರ್ಸಿಬಿ-ಸಿಎಸ್ಕೆ ನಡುವಿನ ಮ್ಯಾಚ್ ಗೆಲ್ಲೋದು ಯಾರು? ಅಚ್ಚರಿ ಭವಿಷ್ಯ ನುಡಿದ ರವಿಚಂದ್ರನ್ ಅಶ್ವಿನ್