
ಬಾಗಲಕೋಟೆ, ಏಪ್ರಿಲ್ 05: ರಾಜ್ಯದಲ್ಲಿ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಕ್ಷೇತ್ರದ ಉಪಚುನಾವಣೆ (ಉಪಚುನಾವಣೆ) ಗೆಲ್ಲೋದಕ್ಕೆ ಬಿಜೆಪಿ ಮತ್ತು ಕಾಂಗ್ರೆಸ್ ತಂತ್ರ ಪ್ರತಿತಂತ್ರ ಹೂಡುತ್ತಿವೆ. ಈ ಮಧ್ಯೆ ನಿನ್ನೆ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ವಿರುದ್ಧ NSUI ಘಟಕದಿಂದ ಕರಪತ್ರ ಹಂಚಿಕೆ ಆರೋಪ ಕೇಳಿಬಂದಿತ್ತು. ದೊಡ್ಡ ಹೈದ್ರಾಮಾವೇ ನಡೆದಿತ್ತು. ಇದೀಗ ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಎತ್ತಂಗಡಿ ಮಾಡಲಾಗಿದೆ.
ಬಾಗಲಕೋಟೆಯಲ್ಲಿ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ವಿರುದ್ಧ NSUI ಸಂಘಟನೆ ಅಪಪ್ರಚಾರ ಮಾಡಿದ ಆರೋಪ ಕೇಳಿಬಂದಿದೆ. ಕುಮಾರೇಶ್ವರ ಕ್ಯಾಂಪಸ್‌ನಲ್ಲಿ ಕರಪತ್ರ ಹಿಡಿದು ಬಂದಿದ್ದ 18 ಎನ್‌ಎಸ್‌ಯುಐ ಕಾರ್ಯಕರ್ತರು ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ ನಡೆದಿತ್ತು. ಬಳಿಕ ಐವರು NSUI ಕಾರ್ಯಕರ್ತರನ್ನು ಪೊಲೀಸ್ ಠಾಣೆಗೆ ಕರೆ ತಂದಿದ್ದರು. ಬಾಗಲಕೋಟೆ ನವನಗರದ ಸಿಪಿಐ ಕಚೇರಿಯಲ್ಲಿ ಗದ್ದಲ ಉಂಟಾಗಿತ್ತು. ಠಾಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಜಮಾವಣೆಗೊಂಡು ಗೊಂದಲಮಯ ವಾತಾವರಣ ನಿರ್ಮಾಣವಾಗಿತ್ತು.
ಇದನ್ನೂ ಓದಿ: ಬಾಗಲಕೋಟೆ ಉಪಚುನಾವಣೆ: ಬಿಜೆಪಿ ಅಭ್ಯರ್ಥಿ ವಿರುದ್ಧ NSUI ಅಪಪ್ರಚಾರ ಆರೋಪ
ಇದೀಗ ಬಾಗಲಕೋಟೆ ಮಹಿಳಾ ಪೊಲೀಸ್ ಠಾಣೆ ಸಿಪಿಐ ವಿಜಯ ಮುರಗುಂಡಿ ಮತ್ತು ನವನಗರ ಪೊಲೀಸ್ ಠಾಣೆ ಪಿಎಸ್ ಐ ಚೌಣ್ ಅವರನ್ನು ಎತ್ತಂಗಡಿ ಮಾಡಿ ಡಿಜಿ ಮತ್ತು ಐಜಿಪಿ ಡಾ.ಎಂ.ಎ.ಸಲೀಂ ಅಶೋಕ ಆದೇಶ ಹೊರಡಿಸಿದ್ದಾರೆ. ಬೆಳಗಾವಿ ಉತ್ತರ ವಲಯ ಐಜಿಪಿ ಕಚೇರಿಗೆ ಪಿಎಸ್‌ಐ ಅಶೋಕ್‌ರನ್ನ ವರ್ಗಾವಣೆ ಮಾಡಲಾಗಿದ್ದು, ವಿಜಯಪುರ ಮಹಿಳಾ ಠಾಣೆ ಸಿಪಿಐ ವಿಜಯ ಮುರಗುಂಡಿ ಅವರನ್ನು ವರ್ಗಾವಣೆ ಮಾಡಲಾಗಿದೆ.
ಬಾಗಲಕೋಟೆ ಡಿಸಿ ಭೇಟಿ ಮಾಡಿದ ಬಿಜೆಪಿ ನಾಯಕರು
ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಗಲಕೋಟೆ ಡಿಸಿ ಕಚೇರಿಗೆ ವಿಪಕ್ಷ ನಾಯಕ ಆರ್.ಅಶೋಕ ನೇತೃತ್ವದಲ್ಲಿ ಬಿಜೆಪಿ ನಾಯಕರು ಡಿಸಿ ಭೇಟಿ ನೀಡಿದ್ದಾರೆ. ಬೆದರಿಕೆ ಹಾಕಿದವರ ವಿರುದ್ಧ ಕ್ರಮಕೈಗೊಳ್ಳಿ ಹಾಗೂ ರಕ್ಷಣೆ ನೀಡುವಂತೆ ಮನವಿ ಪತ್ರವನ್ನು ಕೋರಲಾಗಿದೆ. ವಿಪಕ್ಷ ನಾಯಕ ಅಶೋಕ್, ಸಂಸದ ಗೋವಿಂದ ಕಾರಜೋಳ, ರಾಜ್ಯಸಭಾ ಸದಸ್ಯ ನಾರಾಯಣಸ ಭಾಂಡಗೆ, MLC ಪೂಜಾರ
ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ್, ಅರುಣ ಶಹಾಪುರ ಭಾಗಿ ಆಗಿದ್ದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.