ಕೊಡಗಿನ ಕಾಡಲ್ಲಿ ನಾಪತ್ತೆಯಾಗಿದ್ದ ಕೇರಳದ ಶರಣ್ಯ ಆಹಾರವಿಲ್ಲದೇ 4 ದಿನ ಬದುಕಿದ್ದೇಗೆ? ಇಲ್ಲಿದೆ ಫಸ್ಟ್ ರಿಯಾಕ್ಷನ್! | Kodagu Tadiandamol Trekker Kerala Techie Saranya Found Safe Four Days Survival Story First Reaction Sat

ಕೊಡಗಿನ ಕಾಡಲ್ಲಿ ನಾಪತ್ತೆಯಾಗಿದ್ದ ಕೇರಳದ ಶರಣ್ಯ ಆಹಾರವಿಲ್ಲದೇ 4 ದಿನ ಬದುಕಿದ್ದೇಗೆ? ಇಲ್ಲಿದೆ ಫಸ್ಟ್ ರಿಯಾಕ್ಷನ್! | Kodagu Tadiandamol Trekker Kerala Techie Saranya Found Safe Four Days Survival Story First Reaction Sat



ಕೊಡಗಿನ ಕಾಡಲ್ಲಿ ನಾಪತ್ತೆಯಾಗಿದ್ದ ಕೇರಳದ ಶರಣ್ಯ ಆಹಾರವಿಲ್ಲದೇ 4 ದಿನ ಬದುಕಿದ್ದೇಗೆ? ಇಲ್ಲಿದೆ ಫಸ್ಟ್ ರಿಯಾಕ್ಷನ್! | Kodagu Tadiandamol Trekker Kerala Techie Saranya Found Safe Four Days Survival Story First Reaction Sat

ಕೊಡಗಿನ ತಡಿಯಂಡಮೋಳ್ ಬೆಟ್ಟದಲ್ಲಿ ಚಾರಣಕ್ಕೆ ಹೋಗಿ ನಾಪತ್ತೆಯಾಗಿದ್ದ ಕೇರಳದ ಯುವತಿ ಶರಣ್ಯ, ನಾಲ್ಕು ದಿನಗಳ ಬಳಿಕ ಸುರಕ್ಷಿತವಾಗಿ ಪತ್ತೆಯಾಗಿದ್ದಾರೆ. ದಟ್ಟಾರಣ್ಯದಲ್ಲಿ ಕೇವಲ ಒಂದು ಬಾಟಲಿ ನೀರಿನಿಂದ ಬದುಕುಳಿದ ಅವರು, ತಮ್ಮ ಸಮಯಪ್ರಜ್ಞೆಯಿಂದ ಡ್ರೋಣ್ ಕಣ್ಣಿಗೆ ಬೀಳುವಂತೆ ಬಯಲು ಜಾಗದಲ್ಲಿ ಉಳಿದುಕೊಂಡಿದ್ದರು.

ಕೊಡಗು (ಏ.05): ಕೊಡಗು ಜಿಲ್ಲೆಯ ಅತ್ಯಂತ ಎತ್ತರದ ಶಿಖರ ತಡಿಯಂಡಮೋಳ್ ಬೆಟ್ಟದಲ್ಲಿ ಚಾರಣಕ್ಕೆ ಹೋಗಿ ನಾಪತ್ತೆಯಾಗಿದ್ದ ಕೇರಳದ ಯುವತಿ ಶರಣ್ಯ ಕೊನೆಗೂ 4 ದಿನದ ಬಳಿಕ ಸುರಕ್ಷಿತವಾಗಿ ಪತ್ತೆಯಾಗಿದ್ದಾರೆ. ಕಳೆದ ನಾಲ್ಕು ದಿನಗಳಿಂದ ದಟ್ಟಾರಣ್ಯದಲ್ಲಿ ಆಹಾರವಿಲ್ಲದೆ, ಕೇವಲ ಒಂದು ಬಾಟಲಿ ನೀರಿನ ಸಹಾಯದಿಂದ ಬದುಕುಳಿದಿದ್ದ ಈ ಸಾಹಸಿ ಯುವತಿ ಇಂದು ನಗುಮೊಗದಲ್ಲೇ ಕಾಡಿನಿಂದ ಹೊರಬಂದಿದ್ದಾರೆ. ಇದರ ಬೆನ್ನಲ್ಲಿಯೇ ಮಾಧ್ಯಮಗಳಿಗೆ ಮೊದಲ ಪ್ರತಿಕ್ರಿಯೆ ನೀಡಿದ್ದು, ತಾನು ಹೇಗೆ ದಟ್ಟಾರಣ್ಯದಲ್ಲಿ ಬದುಕುಳಿದೆ ಎಂದು ವಿವರಿಸಿದ್ದಾರೆ.

ಏನಿದು ಘಟನೆ?

ಕೊಚ್ಚಿಯ ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಕೋಯಿಕ್ಕೋಡ್‌ನ ನಾದಾಪುರಂ ಮೂಲದ ಶರಣ್ಯ, ಏಪ್ರಿಲ್ 2 ರಂದು ಕೊಡಗಿಗೆ ಟ್ರೆಕ್ಕಿಂಗ್‌ಗಾಗಿ ಬಂದಿದ್ದರು. ಆನ್‌ಲೈನ್ ಮೂಲಕ ಟ್ರೆಕ್ಕಿಂಗ್ ಬುಕ್ ಮಾಡಿದ್ದ ಅವರು, ಅರಣ್ಯ ಇಲಾಖೆಯ ಅನುಮತಿಯೊಂದಿಗೆ 10 ಜನರ ತಂಡದ ಜೊತೆ ತಡಿಯಂಡಮೋಳ್ ಬೆಟ್ಟ ಹತ್ತಲು ಆರಂಭಿಸಿದ್ದರು. ಆದರೆ, ಬೆಟ್ಟದ ಮೇಲೆ ತಂಡದೊಂದಿಗೆ ಸಾಗುತ್ತಿದ್ದಾಗ ದಾರಿ ಮಧ್ಯೆ ನಾಯಿಯೊಂದರ ಜೊತೆ ಆಟವಾಡುತ್ತಾ ಶರಣ್ಯ ಹಿಂದೆ ಉಳಿದಿದ್ದರು. ಇದೇ ವೇಳೆ ಅವರು ತಂಡದಿಂದ ಬೇರ್ಪಟ್ಟು ದಾರಿ ತಪ್ಪಿದ್ದರು.

ನಾಲ್ಕು ದಿನಗಳ ಕಾಲ ಕಾಡಲ್ಲಿ ಬದುಕುಳಿದಿದ್ದೇಗೆ?

ಕಾಡಿನಿಂದ ಹೊರಬಂದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಶರಣ್ಯ, ತಮಗಾದ ರೋಚಕ ಅನುಭವವನ್ನು ಹಂಚಿಕೊಂಡಿದ್ದಾರೆ. ‘ನಾನು ಆರೋಗ್ಯವಾಗಿದ್ದೇನೆ. ಕಾಡಿನಲ್ಲಿ ದಾರಿ ತಪ್ಪಿದಾಗ ನನ್ನ ಸ್ನೇಹಿತರನ್ನು ಸಂಪರ್ಕಿಸಲು ಪ್ರಯತ್ನಿಸಿದೆ. ಆದರೆ ಫೋನ್ ಸ್ವಿಚ್ ಆಫ್ ಆಗಿತ್ತು. ನನ್ನ ಬಳಿ ಇದ್ದಿದ್ದು ಕೇವಲ ಒಂದು ಬಾಟಲಿ ನೀರು ಮಾತ್ರ. ರಕ್ಷಣಾ ತಂಡವು ನನ್ನನ್ನು ಹುಡುಕಲು ಡ್ರೋಣ್ ಬಳಸಬಹುದು ಎಂದು ನನಗೆ ತಿಳಿದಿತ್ತು. ಹಾಗಾಗಿ ಡ್ರೋಣ್‌ಗೆ ಕಾಣಿಸುವಂತಹ ಬಯಲು ಜಾಗದಲ್ಲೇ ನಾನು ಹೆಚ್ಚಾಗಿ ನಿಂತಿದ್ದೆ’ ಎಂದು ಅವರು ವಿವರಿಸಿದ್ದಾರೆ. ಅವರ ಈ ಸಮಯಪ್ರಜ್ಞೆಯೇ ಅವರ ಪ್ರಾಣ ಉಳಿಸಿದೆ ಎನ್ನಬಹುದು.

ರಕ್ಷಣಾ ಕಾರ್ಯಾಚರಣೆಯ ಯಶಸ್ಸು:

ಶರಣ್ಯ ನಾಪತ್ತೆಯಾದ ದಿನದಿಂದಲೂ ಕೊಡಗು ಜಿಲ್ಲಾ ಪೊಲೀಸರು, ಅರಣ್ಯ ಇಲಾಖೆ ಸಿಬ್ಬಂದಿ, ಎಎನ್‌ಎಫ್ (ನಕ್ಸಲ್ ನಿಗ್ರಹ ಪಡೆ) ಮತ್ತು ಸ್ಥಳೀಯ ನಿವಾಸಿಗಳು ಹಗಲಿರುಳು ಶೋಧ ನಡೆಸಿದ್ದರು. ಡ್ರೋಣ್, ಥರ್ಮಲ್ ಡ್ರೋಣ್ ಮತ್ತು ಶ್ವಾನ ದಳವನ್ನು ಬಳಸಲಾಗಿತ್ತು. ಕೊನೆಗೆ ಸ್ಥಳೀಯ ನಿವಾಸಿಗಳು ಕಾಡಿನ ಒಂದು ಭಾಗದಲ್ಲಿ ವಿಚಿತ್ರ ಶಬ್ದ ಕೇಳಿ ಅಲ್ಲಿಗೆ ಹೋಗಿ ನೋಡಿದಾಗ ಶರಣ್ಯ ಪತ್ತೆಯಾಗಿದ್ದಾರೆ. “ನಾವು ಶಬ್ದ ಕೇಳಿದ ಜಾಗಕ್ಕೆ ಹೋದಾಗ ಶರಣ್ಯ ಅಲ್ಲಿ ಕುಳಿತಿದ್ದರು,” ಎಂದು ಅವರನ್ನು ಪತ್ತೆ ಮಾಡಿದ ಸ್ಥಳೀಯರು ಸಂತಸ ವ್ಯಕ್ತಪಡಿಸಿದ್ದಾರೆ.

ಹೋಂಸ್ಟೇ ಸಿಬ್ಬಂದಿಗೆ ಕಳಿಸಿದ್ದರು ಮೆಸೇಜ್:

ಶರಣ್ಯ ದಾರಿ ತಪ್ಪಿದ ಕೂಡಲೇ ತಾವು ತಂಗಿದ್ದ ಕಕ್ಕಬ್ಬೆ ಸಮೀಪದ ಯಾವಕಪಾಡಿಯ ಹೋಂಸ್ಟೇ ಸಿಬ್ಬಂದಿಗೆ ಮಧ್ಯಾಹ್ನ 2 ಗಂಟೆ ಸುಮಾರಿಗೆ ಮೆಸೇಜ್ ಕಳುಹಿಸಿದ್ದರು. ಆದರೆ ಅದರ ಬೆನ್ನಲ್ಲೇ ಅವರ ಫೋನ್ ಬ್ಯಾಟರಿ ಖಾಲಿಯಾಗಿ ಸ್ವಿಚ್ ಆಫ್ ಆಗಿತ್ತು. ಅವರ ಜೊತೆಗಿದ್ದ ತಂಡದವರು ಸಂಜೆ ವಾಪಸ್ ಬಂದಾಗ ಶರಣ್ಯ ಅವರ ಬಗ್ಗೆ ವಿಚಾರಿಸಿದಾಗ, ಅವರು ನಾಯಿಯೊಂದಿಗೆ ಆಟವಾಡುತ್ತಾ ಬೆಟ್ಟದ ಮೇಲೆಯೇ ನಿಂತಿದ್ದರು ಎಂದು ತಿಳಿಸಿದ್ದರು.

ಸದ್ಯದ ಪರಿಸ್ಥಿತಿ:

ಕಾಡಿನಿಂದ ಸುರಕ್ಷಿತವಾಗಿ ಕರೆತರಲಾದ ಶರಣ್ಯ ಅವರನ್ನು ಸಮೀಪದ ಕಾಕಬೆ ಗ್ರಾಮಕ್ಕೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ತೀವ್ರ ಹಸಿವು ಮತ್ತು ಸುಸ್ತಿನಿಂದ ಬಳಲಿದ್ದರೂ ಅವರ ಮಾನಸಿಕ ಸ್ಥಿತಿ ದೃಢವಾಗಿದೆ. ಮುಂಜಾಗ್ರತಾ ಕ್ರಮವಾಗಿ ಅವರನ್ನು ಮಡಿಕೇರಿ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಿ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ವೈದ್ಯರು ಗ್ರೀನ್ ಸಿಗ್ನಲ್ ನೀಡಿದ ನಂತರ ಅವರನ್ನು ಕುಟುಂಬಸ್ಥರೊಂದಿಗೆ ಕೇರಳಕ್ಕೆ ಕಳುಹಿಸಿಕೊಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.



Source link

Leave a Reply

Your email address will not be published. Required fields are marked *