
ಲೋಕಸಭಾ ಕ್ಷೇತ್ರ ಮರುವಿಂಗಡಣೆ ಪ್ರಸ್ತಾವನೆಯು ದಕ್ಷಿಣದ ರಾಜ್ಯಗಳ ಧ್ವನಿಯನ್ನು ದುರ್ಬಲಗೊಳಿಸುವ ರಾಜಕೀಯ ತಂತ್ರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದಾರೆ. ಜನಸಂಖ್ಯೆ ನಿಯಂತ್ರಿಸಿದ ರಾಜ್ಯಗಳಿಗೆ ಇದರಿಂದ ಅನ್ಯಾಯವಾಗಲಿದೆ.
ಬೆಂಗಳೂರು: ‘ಪ್ರಧಾನಿ ಮೋದಿ ಅವರು ಪ್ರಸ್ತಾಪಿತ ಲೋಕಸಭಾ ಕ್ಷೇತ್ರ ಮರುವಿಂಗಡಣೆ ವಿಷಯದಲ್ಲಿ ದಕ್ಷಿಣ ರಾಜ್ಯಗಳ ಬಗ್ಗೆ ಹಠಾತ್ ಕಾಳಜಿ ಪ್ರದರ್ಶಿಸಿದ್ದಾರೆ. ಇದು ಚುನಾವಣಾ ಸಂದೇಶವಾಗಿದ್ದು, ತಮಿಳುನಾಡು ಹಾಗೂ ಕೇರಳ ರಾಜ್ಯಗಳ ಚುನಾವಣೆ ರಾಜಕೀಯ ಲೆಕ್ಕಾಚಾರದಿಂದ ಕೂಡಿದ ಹೇಳಿಕೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದಾರೆ.
ಕ್ಷೇತ್ರ ಪುನರ್‌ವಿಂಗಡಣೆ ಪ್ರಕ್ರಿಯೆಯನ್ನು ಕರ್ನಾಟಕದಂಥ ರಾಜ್ಯಗಳ ಧ್ವನಿ ದುರ್ಬಲಗೊಳಿಸಲೇ ವಿನ್ಯಾಸಗೊಳಿಸಲಾಗಿದೆ. ಕೇಂದ್ರದ ಪ್ರಸ್ತಾವನೆ ಜಾರಿಯಾದರೆ ದಕ್ಷಿಣದ 5 ರಾಜ್ಯಗಳ ಲೋಕಸಭಾ ಸ್ಥಾನಗಳು 63–66 ರಷ್ಟು ಹೆಚ್ಚಾದರೆ, ಬಿಜೆಪಿ ಪ್ರಭಾವ ಇರುವ ಏಳು ರಾಜ್ಯಗಳಲ್ಲಿ 128-131 ಸ್ಥಾನ ಹೆಚ್ಚಾಗಲಿವೆ. ಇದು ದಕ್ಷಿಣ ರಾಜ್ಯಗಳ ಏರಿಕೆ ಪ್ರಮಾಣದ ದುಪ್ಪಟ್ಟಿಗೆ ಸಮಾನ. ಹೀಗಾಗಿ ನಮ್ಮ ಧ್ವನಿಯನ್ನು ದುರ್ಬಲಗೊಳಿಸುವ ಯಾವುದೇ ಪ್ರಯತ್ನವನ್ನು ನಾವು ದೃಢವಾಗಿ ವಿರೋಧಿಸುತ್ತೇವೆ ಎಂದು ಸಿದ್ದರಾಮಯ್ಯ ಅವರು ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದ್ದಾರೆ.
ಅಲ್ಲದೆ, ಯಾವುದೇ ಸಮಾಲೋಚನೆ ಇಲ್ಲದೆ ಅಥವಾ ಸಾರ್ವಜನಿಕ ಚರ್ಚೆ ಇಲ್ಲದೆ ಇಂಥ ಮಹತ್ವದ ಬದಲಾವಣೆಗಳನ್ನು ಮಾಡಲು ಸಾಧ್ಯವಿಲ್ಲ. ಆರ್ಥಿಕ ಮತ್ತು ಜಾಗತಿಕ ಸವಾಲುಗಳ ಸಮಯದಲ್ಲಿ ಕೇಂದ್ರ ಸರ್ಕಾರವು ರಾಜಕೀಯ ಲೆಕ್ಕಾಚಾರಕ್ಕಿಂತ ರಾಷ್ಟ್ರೀಯ ಆದ್ಯತೆಗಳ ಮೇಲೆ ಗಮನಹರಿಸಬೇಕು ಎಂದು ಒತ್ತಾಯ ಮಾಡಿದ್ದಾರೆ.
ಯಾರಿಗೆ ಹೆಚ್ಚು ಲಾಭ ಎಂಬುದೂ ಪ್ರಶ್ನೆ:
ಈ ಬಗ್ಗೆ ಅಧಿಕೃತ ಎಕ್ಸ್ ಖಾತೆಯಲ್ಲಿ ಹೇಳಿಕೆ ನೀಡಿರುವ ಸಿದ್ದರಾಮಯ್ಯ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದಕ್ಷಿಣ ರಾಜ್ಯಗಳ ಲೋಕಸಭೆ ಸ್ಥಾನಗಳ ಸಂಖ್ಯೆ ಹೆಚ್ಚಾಗುತ್ತದೆ ಎಂದು ಹೇಳಿದ್ದಾರೆ. ಇದು ವಿಷಯವೇ ಅಲ್ಲ. ಯಾವ ರಾಜ್ಯಗಳ ಸ್ಥಾನ ಹೇಗೆ ಹೆಚ್ಚಾಗುತ್ತದೆ ಹಾಗೂ ಯಾರಿಗೆ ಹೆಚ್ಚು ಲಾಭ ಸಿಗುತ್ತದೆ ಎಂಬುದು ಪ್ರಶ್ನೆ ಎಂದು ತಿರುಗೇಟು ನೀಡಿದ್ದಾರೆ.
ಪ್ರಸ್ತಾಪಿತ ವಿಸ್ತರಣೆಯಲ್ಲಿ ಪ್ರತಿಯೊಂದು ರಾಜ್ಯಕ್ಕೂ ಸ್ಥಾನಗಳು ಹೆಚ್ಚಾಗುತ್ತವೆ. ಆದರೆ ಹೆಚ್ಚಳದ ಪ್ರಮಾಣದಿಂದ ಬಿಜೆಪಿಯ ಪ್ರಭಾವವಿರುವ ರಾಜ್ಯಗಳಿಗೆ ಸ್ಪಷ್ಟವಾಗಿ ಅನುಕೂಲವಾಗುತ್ತಿದೆ. ಕ್ಷೇತ್ರ ಪುನರ್ ವಿಂಗಡಣೆಯಿಂದ ಲೋಕಸಭೆಯ ಒಟ್ಟು ಸ್ಥಾನಗಳು 816ಕ್ಕೆ ಹೆಚ್ಚಾದರೂ, ದಕ್ಷಿಣ ರಾಜ್ಯಗಳ ಒಟ್ಟಾರೆ ಪಾಲು ಸುಮಾರು ಶೇ.24ರಲ್ಲೇ ಉಳಿಯುತ್ತದೆ. ಹೀಗಾದರೆ ದಕ್ಷಿಣ ರಾಜ್ಯಗಳಿಗೆ ನ್ಯಾಯ ಎಲ್ಲಿ ದೊರೆಯುತ್ತದೆ ಎಂದು ಪ್ರಶ್ನಿಸಿದ್ದಾರೆ.
ಕ್ಷೇತ್ರ ಪುನರ್‌ವಿಂಗಡಣೆಯಿಂದ ಉತ್ತರ ಪ್ರದೇಶದಲ್ಲಿ 80 ರಿಂದ 120ಕ್ಕೆ (+40), ಮಹಾರಾಷ್ಟ್ರ 48ರಿಂದ 72ಕ್ಕೆ (+24), ಬಿಹಾರ 40ರಿಂದ 60ಕ್ಕೆ (+20), ಮಧ್ಯಪ್ರದೇಶ 29ರಿಂದ 43-44ಕ್ಕೆ (+14–15), ರಾಜಸ್ತಾನ 25ರಿಂದ 37-38ಕ್ಕೆ (+12–13), ಮತ್ತು ಗುಜರಾತ್ 26ರಿಂದ 39ಕ್ಕೆ (+13) ಏರಿಕೆಯಾಗುವ ನಿರೀಕ್ಷೆ ಇದೆ.
ಇದಕ್ಕೆ ವಿರುದ್ಧವಾಗಿ ದಕ್ಷಿಣ ರಾಜ್ಯಗಳಿಗೆ ಕಡಿಮೆ ಪ್ರಮಾಣದ ಹೆಚ್ಚಳ ಸಿಗುತ್ತಿದೆ. ಕರ್ನಾಟಕದಲ್ಲಿ 28 ರಿಂದ 42ಕ್ಕೆ (+14), ತಮಿಳುನಾಡು 39ರಿಂದ 58-59ಕ್ಕೆ (+20), ಆಂಧ್ರಪ್ರದೇಶ 25ರಿಂದ 37-38ಕ್ಕೆ (+12-13), ತೆಲಂಗಾಣ 17ರಿಂದ 25-26ಕ್ಕೆ (+8-9), ಮತ್ತು ಕೇರಳ 20ರಿಂದ 30ಕ್ಕೆ (+10) ಏರಿಕೆಯಾಗುತ್ತದೆ ಎಂದಿದ್ದಾರೆ.
ಸಾಧಕ ರಾಜ್ಯಗಳಿಗೆ ಶಿಕ್ಷೆ:
ಕೇಂದ್ರದ ಈ ನಡೆ ಜನಸಂಖ್ಯೆ ನಿಯಂತ್ರಣ ಮತ್ತು ಆಡಳಿತದಲ್ಲಿ ಉತ್ತಮ ಸಾಧನೆ ಮಾಡಿದ ದಕ್ಷಿಣ ರಾಜ್ಯಗಳನ್ನು ಶಿಕ್ಷಿಸುವಂತಿದೆ. ರಾಷ್ಟ್ರದ ಆರ್ಥಿಕ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸಿರುವ ಕರ್ನಾಟಕವನ್ನು ಉದ್ದೇಶಪೂರ್ವಕವಾಗಿ ಪಕ್ಕಕ್ಕಿಡುವ ಅಪಾಯ ಇದೆ. ನಮ್ಮ ಲೋಕಸಭೆ ಸ್ಥಾನಗಳ ಪಾಲು ಹೆಚ್ಚಳವಾಗದೇ, ದೊಡ್ಡ ರಾಜ್ಯಗಳ ಪ್ರಾಬಲ್ಯ ಹೆಚ್ಚಾದರೆ ಕರ್ನಾಟಕಕ್ಕೆ ಯಾವುದೇ ಲಾಭವಿಲ್ಲ. ಬದಲಿಗೆ ಇದರಿಂದ ಅಸಮತೋಲನ ಹೆಚ್ಚಾಗುತ್ತದೆ. ಈಗಲೇ ಉತ್ತರ ಪ್ರದೇಶದಲ್ಲಿ (80) ಕರ್ನಾಟಕಕ್ಕಿಂತ 52 ಸ್ಥಾನ ಹೆಚ್ಚಿದೆ. ಈ ಅಂತರ 78ಕ್ಕೆ ಏರಲಿದೆ. ಮಹಾರಾಷ್ಟ್ರ ಸ್ಥಿತಿಯೂ ಇದೇ ರೀತಿ ಆಗಲಿದೆ. ಇದರಿಂದ ಅಧಿಕಾರ ಕೇಂದ್ರೀಕರಣದ ಅಪಾಯವಿದ್ದು, ಒಕ್ಕೂಟ ವ್ಯವಸ್ಥೆಯ ಮೇಲೆ ದಾಳಿ ಆಗಲಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ವಿಶ್ವಾಸ ಗಳಿಸದೆ ಧ್ವನಿ ಕುಗ್ಗಿಸುವ ಪ್ರಯತ್ನ:
ಕ್ಷೇತ್ರ ಮರುವಿಂಗಡಣೆ ಎಂಬುದು ಕರ್ನಾಟಕದಂತಹ ರಾಜ್ಯಗಳ ಧ್ವನಿಯನ್ನು ದುರ್ಬಲಗೊಳಿಸಲು ವಿನ್ಯಾಸಗೊಳಿಸಲಾದ ಕ್ರಮ. ದಕ್ಷಿಣ ಭಾರತದ ಜನರ ವಿಶ್ವಾಸವನ್ನು ಗಳಿಸಲು ಬಿಜೆಪಿ ವಿಫಲವಾಗಿದೆ. ಹೀಗಾಗಿ ಮೋದಿ ಸರ್ಕಾರವು ದಕ್ಷಿಣ ರಾಜ್ಯಗಳ ಪ್ರಾತಿನಿಧ್ಯತೆಯನ್ನೇ ಕಡಿಮೆ ಮಾಡಿ ನಮ್ಮ ಧ್ವನಿ ಕುಗ್ಗಿಸಲು ಪ್ರಯತ್ನಿಸುತ್ತಿದೆ ಎಂದು ದೂರಿದ್ದಾರೆ.