ಆರ್ಸಿಬಿ ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ, ತಮಗೆ ಎಲ್ಲೂ ಅವಕಾಶ ಸಿಗದಿದ್ದರೆ ಸ್ಯಾಂಡಲ್ವುಡ್ಗೆ ಬರುವುದಾಗಿ ತಮಾಷೆಯಾಗಿ ಹೇಳಿದ್ದಾರೆ. ಡ್ಯಾನಿಶ್ ಸೇಠ್ ನಡೆಸಿದ ಸಂದರ್ಶನದಲ್ಲಿ ಆಡಿದ ಈ ಮಾತು, ಕೊಹ್ಲಿ ಬಯೋಪಿಕ್ ಚರ್ಚೆಯ ನಡುವೆ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ.
ಬೆಂಗಳೂರು: ಆರ್ಸಿಬಿ ತಂಡದ ರಣಬೇಟೆಗಾರ ವಿರಾಟ್ ಕೊಹ್ಲಿ ಸ್ಯಾಂಡಲ್ವುಡ್ ಬಗ್ಗೆ ಮಾತನಾಡಿದ್ದಾರೆ. ನನಗೆ ಎಲ್ಲೂ ಅವಕಾಶ ಸಿಗದೇ ಇದ್ರೆ ಸ್ಯಾಂಡಲ್ವುಡ್ಗಾದ್ರು ಬರ್ತೀನಿ ಎಂದಿದ್ದಾರೆ. ಅಂದ್ರೆ ತವರು ಮನೆಯ ಹುಡುಗ ಕೊಹ್ಲಿ ತನ್ನ ಸಿನಿ ಕರಿಯರ್ನ ತವರು ಮನೆಯಿಂದಲೇ ಶುರು ಮಾಡೋ ಸೂಚನೆ ಕೊಟ್ಟಂತಿದೆ. ಹಾಗಾದ್ರೆ ಏನಿದ್ರು ಕೊಹ್ಲಿ ಸ್ಯಾಂಡಲ್ವುಡ್ ಪ್ರೀತಿ ನೋಡೋಣ ಬನ್ನಿ.
ನಟಿ ಅನುಷ್ಕಾ ಶರ್ಮಾ ಪತಿಗೆ ಸ್ಯಾಂಡಲ್ವುಡ್ ಮೇಲೆ ಪ್ರೀತಿ..!
ಕ್ರಿಕೆಟ್ ಜಗತ್ತಿನ ರನ್ ಮಷಿನ್ ಅಂತಲೇ ಕರೆಸಿಕೊಳ್ಳೋ ಸ್ಟಾರ್ ಕ್ರಿಕೆಟರ್ ವಿರಾಟ್ ಕೊಹ್ಲಿ ಸಖತ್ತಾಗಿರೋ ಸುದ್ದಿಯೊಂದನ್ನು ಕೊಟ್ಟಿದ್ದಾರೆ. ಕ್ರಿಕೆಟ್ ಆಡಿಕೊಂಡು ವಿದೇಶದಲ್ಲಿ ಸೆಟಲ್ ಆಗಿರೋ ಬಾಲಿವುಡ್ ನಟಿ ಅನುಷ್ಕಾ ಪತಿ ವಿರಾಟ್ ಕೊಹ್ಲಿ ಸಿನಿಮಾ ನಟ ಆಗೋ ಆಸೆಯೊಂದನ್ನ ಬಿಚ್ಚಿಟ್ಟಿದ್ದಾರೆ. ಅದು ಸ್ಯಾಂಡಲ್ವುಡ್ನಿಂದ.
ಹೌದು, ಇತ್ತೀಚೆಗೆ ಆರ್ಸಿಬಿ ತಂಡದ ‘ಮಿಸ್ಟರ್ ನಾಗ್ಸ್’ ಖ್ಯಾತಿಯ ಡ್ಯಾನಿಶ್ ಸೇಠ್ ನಡೆಸಿದ ಸಂದರ್ಶನದಲ್ಲಿ ಕೊಹ್ಲಿ ಸ್ಯಾಂಡಲ್ವುಡ್ ಪ್ರವೇಶದ ಬಗ್ಗೆ ಮನ ಬಿಚ್ಚಿದ್ದಾರೆ. ಡ್ಯಾನಿಶ್, “ವಿರಾಟ್, ನಿಮಗೆ ಎಲ್ಲಾದರೂ ಅಭದ್ರತೆ ಕಾಡುತ್ತಿದೆಯೇ ಎಂದು ಕೇಳಿದ್ದಾರೆ. ಅದಕ್ಕೆ ವಿರಾಟ್, “ನನಗೆ ಯಾವುದೇ ಅಭದ್ರತೆ ಕಾಡುತ್ತಿಲ್ಲ. ಒಂದು ವೇಳೆ ಎಲ್ಲೂ ಅವಕಾಶ ಸಿಗದಿದ್ದರೆ, ಕೊನೆಗೆ ನಿಮ್ಮ ಪ್ರಭಾವ ಬಳಸಿ ನಾನು ಸ್ಯಾಂಡಲ್ವುಡ್ಗೆ ಎಂಟ್ರಿ ಕೊಡಬಹುದು ಎಂದಿದ್ದಾರೆ. ಈ ವಿಡಿಯೋ ಸಿಕ್ಕಾಪಟ್ಟೆ ಟ್ರೆಂಡ್ ಆಗ್ತಾ ಇದೆ.
ವಿರಾಟ್ ಕೊಹ್ಲಿ ಬಯೋಪಿಕ್ ಮೇಲೆ ಸಿನಿ ಜಗತ್ತಿನ ಕಣ್ಣು!
ದಿಗ್ಗಜ ಕ್ರಿಕೆಟರ್ಸ್ಗಳ ಜೀವನ ಚರಿತ್ರೆ ಸಿನಿಮಾ ಆಗಿ ಬಂದಿದೆ. ಕಪಿಲ್ ದೇವ್ ಅವರ ಬಯೋಪಿಕ್ ಬಂದಿದೆ. ಎಂ,ಎಸ್ ಧೋನಿಯ ಜೀವನ ಗಾಥೆ ಸಿನಿಮಾ ಆಗಿದೆ. ಈಗ ವಿರಾಟ್ ಕೊಹ್ಲಿಯ ಬಯೋಪಿಕ್ ಸಿನಿಮಾ ಮಾಡೋಕೂ ಪ್ರಯತ್ನಗಳು ನಡೀತಾ ಇದೆ. ಸಾವಿರ ಕೋಟಿ ಬಂಡವಾಳ ಹಾಕಿಯಾದ್ರು ವಿರಾಟ್ ಬಯೋಪಿಕ್ ಮಾಡೋದಕ್ಕೆ ನಿರ್ಮಾಪಕರು ಹಣ ಹಿಡಿದು ರೆಡಿಯಾಗಿದ್ದಾರೆ. ಈ ಟೈಮ್ನಲ್ಲಿ ವಿರಾಟ್ ಸ್ಯಾಂಡಲ್ವುಡ್ ಬಗ್ಗೆ ತಮಾಷೆಯಾಗಿ ಮಾತನಾಡಿರೋದು ಕುತೂಹಲ ಹುಟ್ಟಿಸಿದೆ.
ಹಾಗ್ ನೋಡಿದ್ರೆ, ಯುವರಾಜ್ ಸಿಂಗ್, ಅಜಯ್ ಜಡೇಜಾ, ಕಪಿಲ್ ದೇವ್, ವಿನೋದ್ ಕಾಂಬ್ಳಿ, ಇರ್ಫಾನ್ ಪಠಾಣ್ ಸೇರಿದಂತೆ ಕೆಲ ಕ್ರಿಕೆಟಿಗರು ಸಿನಿಮಾ ರಂಗದಲ್ಲಿ ಬಣ್ಣ ಹಚ್ಚಿದ್ದಾರೆ. ವಿರಾಟ್ ಕೊಹ್ಲಿ ಕೂಡ ಅದ್ಭುತ ನಟ ಅನ್ನೋದ್ರಲ್ಲಿ ನೋ ಡೌಟ್. ಹಲವು ಜಾಹೀರಾತುಗಳಲ್ಲಿ ವಿರಾಟ್ ಅಭಿನಯವನ್ನ ಕಣ್ತುಂಬಿಕೊಂಡಿದ್ದೀರ.
ಇದೆಲ್ಲದಕ್ಕಿಂತ ಮಿಗಿಲಾಗಿ ವಿರಾಟ್ ಮನೆಯಲ್ಲೇ ನಟನೆ ಹೇಳಿಕೊಡೋಕೆ ಟೀಚರಮ್ಮ ಇದ್ದಾರೆ. ವಿರಾಟ್ ಪತ್ನಿ ಅನುಷ್ಕಾ ಶರ್ಮಾ ಅದ್ಭುತ ನಟಿ ಕೂಡ ಹೌದು. ಕ್ರಿಕೆಟ್ನಿಂದ ನಿವೃತ್ತಿ ಹೊಂದಿದ ಮೇಲೆ ಕೊಹ್ಲಿ ಬಣ್ಣ ಹಚ್ಚಿದ್ರು ಆಶ್ಚರ್ಯವೇನಿಲ್ಲ. ಕ್ರಿಕೆಟ್ ಲೋಕದ ಕಿಂಗ್ ಆಗಿರುವ ವಿರಾಟ್, ನಿಜವಾಗಿಯೂ ಕನ್ನಡ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಾರಾ ಎಂಬುದು ಕುತೂಹಲದ ವಿಷಯವಾದರೂ, ಸದ್ಯಕ್ಕೆ ಅವರ ಈ ತಮಾಷೆಯ ಮಾತುಗಳು ಆರ್ಸಿಬಿ ಮತ್ತು ಸ್ಯಾಂಡಲ್ವುಡ್ ಅಭಿಮಾನಿಗಳಿಗೆ ಭರ್ಜರಿ ಮನರಂಜನೆ ನೀಡುತ್ತಿದೆ.